Vishwaguru

ಏರಿದಾಗ ಎಡವಿದರೆ ಸಾಮ್ರಾಜ್ಯನಷ್ಟ!


ರಾಜೀವ್ ದೀಕ್ಷಿತರೊಂದಿಗೆ ಕಾರ್ಯಕರ್ತರೆಲ್ಲ ಮಾತನಾಡುತ್ತಾ ಕುಳಿತಿದ್ದರು. ಯಾವುದೋ ಓಘವೊಂದರಲ್ಲಿ ಅವರು ‘ಮುಂದೆ ಮುಂದೆ ಹೋಗುತ್ತಾ ನನ್ನ ಸುತ್ತಲೂ ಬೇರೆ-ಬೇರೆಯ ಜನ ಬರುತ್ತಾರೆ. ನಿರಂತರವಾಗಿ ಕೆಲಸ ಮಾಡಿದ್ದ ನಿಮ್ಮನ್ನು ಬದಿಗೆ ಸರಿಸಿ ಅವರು ಹತ್ತಿರವಾಗಿಬಿಡುತ್ತಾರೆ. ಆಗಲೂ ದಾರಿ ಮಾಡಿಕೊಂಡು ನನ್ನ ಬಳಿ ಬರುವುದು ನಿಮ್ಮದ್ದೇ ಜವಾಬ್ದಾರಿ’ ಎಂದಿದ್ದರು. ವ್ಯಕ್ತಿಯೊಬ್ಬನಿಗಷ್ಟೇ ಅಲ್ಲ. ಸಂಘಟನೆಯಲ್ಲೂ ಈ ಸಮಸ್ಯೆ ಇದ್ದದ್ದೇ. ಒಂದು ಸಂಘಟನೆ ವ್ಯಾಪಕವಾಗಿ ಬೆಳೆಯುತ್ತಾ ಹೋದಂತೆ, ಅಧಿಕಾರಕ್ಕೆ, ಕೀತರ್ಿಗೆ ಹತ್ತಿರವಾಗುತ್ತಾ ಹೋದಂತೆ ಅದರ ಸುತ್ತ ಸುಳಿದಾಡುವ ಜನರೇ ಬೇರೆ. ಮುಖವಾಡ ಹಾಕಿಕೊಂಡು, ಬೂಟಾಟಿಕೆ ಮಾಡುತ್ತಾ ತಮ್ಮ ಬದುಕೇ ಈ ಸಿದ್ಧಾಂತಕ್ಕಾಗಿ ಸಮಪರ್ಿಸಿದೆಯೇನೋ ಎಂಬಂತೆ ನಡೆದುಕೊಳ್ಳುವ ಮಂದಿ ನಾಯಕರುಗಳ ಸುತ್ತಮುತ್ತ ತಿರುಗಾಡುತ್ತಿರುತ್ತಾರೆ. ಆಗಲೇ ನಿಷ್ಠಾವಂತ ಕಾರ್ಯಕರ್ತ ಬೇಸರಿಸಿಕೊಳ್ಳೋದು; ಉಪಯೋಗವಿಲ್ಲದಿದ್ದರೂ ಮುನಿಸಿಕೊಳ್ಳೋದು. ವ್ಯಕ್ತಿಯೊಬ್ಬ ತಾನೇ ಸಂಘಟನೆಯಾಗುವುದಕ್ಕೂ ಸಂಘಟನೆಯ ಮೂಲಕ ಕೆಲಸ ಮಾಡುವುದಕ್ಕೂ ಲಾಭಗಳು ಮತ್ತು ನಷ್ಟಗಳು ಇದ್ದದ್ದೇ. ದೊಡ್ಡ ನಾವೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ನೂರಾರು ಪ್ರಯಾಣಿಕರನ್ನು ದಡ ಸೇರಿಸುವ ಪ್ರಕ್ರಿಯೆಯಲ್ಲಿ ಎದುರಿಸಬೇಕಾದ ಸವಾಲುಗಳು ಕಡಿಮೆ. ನಾವೆಯ ಕ್ಯಾಪ್ಟನ್ ತೋರಿದ ದಿಕ್ಕಿನಲ್ಲಿ ನಡೆದುಬಿಟ್ಟರಾಯ್ತು. ಕೆಲಸ ಸುಲಭ. ಆದರೆ ಮೈ ಮರೆಯುವ ಇಡಿಯ ನಾವೆ ತನ್ನಿಂದಲೇ ಸಾಗುತ್ತಿದೆ ಎಂಬ ದುರಹಂಕಾರ ತಲೆಗೇರುವ ಸಾಧ್ಯತೆಗಳೇ ಹೆಚ್ಚು. ಇದಕ್ಕೆ ವಿರುದ್ಧವಾಗಿ ಏಕಾಂಗಿಯಾಗಿ ನಾವೆ ನಡೆಸುವವ ಹೆಚ್ಚು ಶ್ರಮ ಪಡಬೇಕು. ಅಲೆಗಳ ಏಳು-ಬೀಳುಗಳ ಹೊಡೆತವನ್ನು ತಡೆದುಕೊಳ್ಳುತ್ತಾ ದಡ ಮುಟ್ಟುವವರೆಗೂ ದೋಣಿ ಮುಗುಚಿ ಬೀಳಬಹುದಾದ ಸಾಧ್ಯತೆಯನ್ನು ಜೊತೆಗಿರಿಸಿಕೊಂಡೇ ಸಾಗಬೇಕು. ಈ ಪ್ರಕ್ರಿಯೆಯಲ್ಲಿ ಆತ ದೋಣಿ ದಡ ಸೇರಿಸುವಲ್ಲಿ ಪೂರ್ಣ ಜವಾಬ್ದಾರ. ಎಡವಟ್ಟಾದರೆ ಬದುಕೇ ಮುಗಿಯಿತು. ಆದರೆ ದಡ ಸೇರಿದಾಗ ಒಮ್ಮೆ ತೋಳುಗಳನ್ನು ನೋಡಿಕೊಂಡರೆ ಅದು ಕಬ್ಬಿಣದ ತೊಲೆಯಷ್ಟು ಬಲವಾಗಿರುತ್ತದೆ. ಆದರೆ ಪ್ರತೀ ಬಾರಿಯೂ ಗಮನವಿಡಬೇಕಾದ ಒಂದು ಸಂಗತಿ ಎಂದರೆ ಸೋಲುಗಳನ್ನು ಎದುರಿಸುತ್ತಾ ಬಂದವನು ಎಚ್ಚರಿಕೆಯಿಂದಿರುತ್ತಾನೆ. ತಾನು ಸಾಗುವ ಹಾದಿಯ ಕುರಿತಂತೆ ಎಡವದಂತೆ ತನ್ನ ತಾನು ಕಾಪಾಡಿಕೊಳ್ಳುತ್ತಾನೆ. ಗೆಲುವುಗಳು ಸಿದ್ಧಿಸಲಾರಂಭಿಸಿದಂತೆ, ಅದರಲ್ಲೂ ಒಂದಾದ ಮೇಲೊಂದು ಗೆಲುವು ದಕ್ಕಿಬಿಟ್ಟರಂತೂ ಆತ ಮೈ ಮರೆಯುತ್ತಾನೆ, ಗೆಲುವಿನ ಅಮಲನ್ನು ತಲೆಗೇರಿಸಿಕೊಂಡು ಸಿದ್ಧಾಂತವನ್ನೇ ಬದಿಗೆ ತಳ್ಳಿಬಿಡುತ್ತಾನೆ. ಆಗಲೇ ಇಡಿಯ ಸೌಧ ಕುಸಿದು ಬೀಳೋದು ಮತ್ತು ಈ ಸ್ವೇಚ್ಛಾವೃತ್ತಿಯ ಬಗ್ಗೆ ಎಚ್ಚರಿಕೆ ಇಡದ ಪ್ರತಿ ಸಂಸ್ಥೆಯೂ ಶೀಘ್ರದಲ್ಲೇ ಕುಸಿದು ಬೀಳುವುದು ನಿಶ್ಚಿತ!


ಬಹುಶಃ ಪ್ರತಿಯೊಂದು ಕಾಲಘಟ್ಟವನ್ನು ಅಂದಿನ ಜನಾಂಗ ಹಿಂದಿಗಿಂತಲೂ ಕೆಟ್ಟದ್ದು ಎಂದೇ ಹೇಳುತ್ತದೆ. ಅಥವಾ ತಮ್ಮ ಕಾಲವೇ ಚೆನ್ನಾಗಿತ್ತು ಎನ್ನುವ ಸಹಜ ಮನುಷ್ಯ ಸ್ವಭಾವ. ಆದರೆ ಇದಕ್ಕೆ ವಿಪರೀತವಾಗಿ ಇವತ್ತಿನ ದಿನಮಾನಗಳು ಹಣ, ಅಧಿಕಾರಗಳಿಗಾಗಿ ಪ್ರತಿಯೊಬ್ಬರೂ ಹಾತೊರೆಯುವಂತಹ ಹೊಸ ಉನ್ಮಾದವನ್ನು ಸೃಷ್ಟಿಸಿಬಿಟ್ಟಿದೆ. ಇವೆರಡೇ ಭೂಮಂಡಲವನ್ನು ಆಳುತ್ತಿವೆಯೇನೋ ಎನಿಸುವಷ್ಟರಮಟ್ಟಿಗೆ ಅವುಗಳ ರುದ್ರನರ್ತನವಿದೆ. ಹಾಗೆ ಸುಮ್ಮನೆ ಇದಕ್ಕೆ ಪುರಾವೆ ಒದಗಿಸಬೇಕೆಂದರೆ ಪ್ರತಿಯೊಬ್ಬ ರಾಜನೂ ತ್ಯಾಗಿಯಾಗಬೇಕೆಂದು ಭಾವಿಸುವ ಕಾಲವಿತ್ತು. ಜನಕ ಮಹಾರಾಜ ಈ ದೃಷ್ಟಿಯಿಂದ ರಾಜನೂ ಋಷಿಯೂ ಆಗಿದ್ದನು. ತೀರ ಕೈಗೆ ನಿಲುಕುವ ಇತಿಹಾಸದ ಕಾಲಘಟ್ಟವನ್ನೇ ನೋಡುವುದಾದರೆ ಯಶಸ್ವೀ ರಾಜನೆನಿಸಿದ ಚಂದ್ರಗುಪ್ತನೂ ಕೂಡ ರಾಜ್ಯತ್ಯಾಗ ಮಾಡಿ ತಪಸ್ಸಿಗೆ ನಿಂತಿದ್ದ. ಭರತನನ್ನು ಯುದ್ಧದಲ್ಲಿ ಸೋಲಿಸಿದ ನಂತರವೂ ಬಾಹುಬಲಿ ನಿವರ್ಾಣಕ್ಕೆ ಮನಸ್ಸುಮಾಡಿದ್ದ. ಸ್ವತಃ ಸಿದ್ಧಾರ್ಥ ರಾಜ್ಯದ ರೇಜಿಗೆಯಿಂದ ತ್ಯಾಗಿಯಾಗಿ ಬುದ್ಧನೇ ಆಗಿಬಿಟ್ಟ. ಇದು ಕೆಲವು ಉದಾಹರಣೆಗಳಷ್ಟೇ. ಹೆಚ್ಚು-ಕಡಿಮೆ ಪ್ರತಿಯೊಬ್ಬ ರಾಜನ ಬದುಕು ಈ ಬಗೆಯ ತುಡಿತದಿಂದೇ ಕೂಡಿರುತ್ತಿತ್ತು. ಅವರಿಗೆ ಆದರ್ಶಪ್ರಾಯರಾಗಿ ಸಮಾಜದಲ್ಲಿ ತ್ಯಾಗಿಗಳೂ ಇರುತ್ತಿದ್ದರು. ಚಂದ್ರಗುಪ್ತನನ್ನು ಅಧಿಕಾರದ ಸ್ಥಾನದಲ್ಲಿ ಕೂರಿಸಿದ ಚಾಣಕ್ಯ ಬಯಸಿದ್ದರೆ ಅರಮನೆಯಲ್ಲಿರಬಹುದಿತ್ತು. ಬೇಡವೆಂದನಲ್ಲದೇ ನದಿತೀರದಲ್ಲಿ ಕುಟೀರ ಕಟ್ಟಿಕೊಂಡು ಅಗತ್ಯಬಿದ್ದಾಗ ರಾಜನನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಇದು ರಾಜನ ತಲೆಗೇರಬಹುದಾದ ದುರಹಂಕಾರವನ್ನು ಧ್ವಂಸಗೊಳಿಸುತ್ತಿತ್ತು. ಹಾಗಂತ ಇದು ಸುಲಭಸಾಧ್ಯವಾದ್ದಲ್ಲ. ರಾಜನೆದುರು ಆ ಪರಿಯ ದರ್ಪವನ್ನಿಟ್ಟುಕೊಳ್ಳಬೇಕೆಂದರೆ ಆ ವ್ಯಕ್ತಿಯ ನೈತಿಕತೆ ಯಾವ ಮಟ್ಟದ್ದಿರಬಹುದು ಯೋಚಿಸಿ. ಎದುರಿಗೆ ಕಾಲು ಮುರಕೊಂಡು ಬಿದ್ದಿರುವ ಲಕ್ಷ್ಮಿಯನ್ನು ಧಿಕ್ಕರಿಸಿ ರಾಜ್ಯದ ವಾಂಛೆಯನ್ನು ಇಲ್ಲವಾಗಿಸಿಕೊಂಡು ಕಟ್ಟುನಿಟ್ಟಿನ ಬದುಕನ್ನು ನಡೆಸುವುದು ಸುಲಭದ ಸಂಗತಿಯಲ್ಲ. ಕೈಗೆಟುಕದ ದ್ರಾಕ್ಷಿ ಹುಳಿಯೆಂದು ತಿರಸ್ಕರಿಸಿಬಿಡುವುದು ಸುಲಭ. ಆದರೆ ತೋಟದ ಮಾಲೀಕನಾಗುವ ಅವಕಾಶ ಬಂದಾಗ ಒಂದು ಹಣ್ಣೂ ತಿನ್ನುವುದಿಲ್ಲವೆಂದು ನಿಶ್ಚಿತಮತಿಯಾಗುವುದಿದೆಯಲ್ಲ ಅದಕ್ಕೆ ಛಾತಿ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ರಾಜನೇ ತನ್ನ ದಾಸನೆಂದು ಗೊತ್ತಾದಾಗಲೂ ಅನವಶ್ಯಕವಾಗಿ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವ ಅಥವಾ ರಾಜನ ಮೂಲಕ ತನಗೆ ಬೇಕಾದವರ ಕೆಲಸ ಮಾಡಿಸಿಕೊಳ್ಳುವ ಪ್ರಭಾವವನ್ನಂತೂ ಆತ ಬೀರಲೇಬಾರದು. ಈ ದಿಕ್ಕಿನಲ್ಲಿ ಸ್ವಲ್ಪ ಎಡವಟ್ಟಾದರೂ ಕಷ್ಟಪಟ್ಟು ಕಟ್ಟಿದ ಸೌಧವೆಲ್ಲವೂ ಕುಸಿದೇ ಬೀಳುತ್ತದೆ.


ಬಂಗಾಳದಲ್ಲಿ ಕಮ್ಯುನಿಸ್ಟರ ಆಡಳಿತ ನಡೆಯುತ್ತಿದ್ದುದು ನೆನಪಿದೆಯಲ್ಲ. ಪದೇ ಪದೇ ಅವರೇ ಗೆಲ್ಲುತ್ತಾ ಅಧಿಕಾರ ಮನೆ ಬಾಗಿಲಿನ ನಾಯಿಯಂತಾಗಿಬಿಟ್ಟಾಗ ಎಲ್ಲ ಸಿದ್ಧಾಂತಗಳೂ ಸಡಿಲಗೊಂಡುಬಿಟ್ಟವು. ರಾಜ ಮತ್ತು ತ್ಯಾಗಿ ಇವರಿಬ್ಬರ ನಡುವಿನ ವ್ಯತ್ಯಾಸ ಮಾಯವಾಗಿಹೋಯ್ತು. ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ತನ್ನನ್ನು ತಾನು ಅಧಿಕಾರಸ್ಥ ಎಂಬ ದರ್ಪದಿಂದ ಮೆರೆದಾಡತೊಡಗಿದ. ಅಧಿಕಾರ ಇದ್ದುದರಿಂದ ವಿರೋಧಿಸುವವರಿಲ್ಲವಲ್ಲ, ಹೀಗಾಗಿಯೇ ತಾನೇ ಎಲ್ಲರ ಮೇಲೆ ಏರಿಹೋದ. ಸಿದ್ಧಾಂತದ ಬುಡ ಕಳಚಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಒಮ್ಮೆ ಬುಡ ಅಲುಗಾಡಿದರೆ ಸೌಧ ಕುಸಿಯಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ. ನೋಡ-ನೋಡುತ್ತಲೇ ಕಮ್ಯುನಿಸ್ಟರು ಬಂಗಾಳದಲ್ಲೇ ಎಡವಿಬಿದ್ದರು. ಯಾರ ಧೈರ್ಯದ ಮೇಲೆ ಅಧಿಕಾರವನ್ನು ನಡೆಸಿದ್ದರೋ ಅದೇ ಜನ ಬಂಗಾಳದಲ್ಲಿ ದೀದಿಯ ಪರವಾಗಿ ನಿಂತಿದ್ದರು. ಆಕೆಯನ್ನು ಗೆಲ್ಲಿಸಿಕೊಂಡು ಮೆರೆದಾಡಿದರು. ಮೇಲ್ನೋಟಕ್ಕೆ ಅದ್ಭುತವಾದ ಬದಲಾವಣೆ ಎನಿಸಿದರೂ ಸುದೀರ್ಘಕಾಲ ಮೆರೆದು ಅಭ್ಯಾಸವಾಗಿದ್ದ ಕಾರ್ಯಕರ್ತರೇ ಒಂದು ಪಾಳಯದಿಂದ ಮತ್ತೊಂದು ಪಾಳಯಕ್ಕೆ ಜಿಗಿದಿದ್ದುದರಿಂದ ಅಧಿಕಾರಸ್ಥರ ಬದಲಾವಣೆಯಾಯಿತಷ್ಟೇ. ಮೂಲದಲ್ಲಿ ವ್ಯತ್ಯಾಸ ಕಂಡುಬರಲಿಲ್ಲ. ಈಗ ಅದೇ ಕಾರ್ಯಕರ್ತರು ದೀದಿಯ ವಿರುದ್ಧ ತಿರುಗಿಬಿದ್ದಿದ್ದಾರೆ ಮತ್ತು ಬಿಜೆಪಿಯನ್ನು ಬೆಂಬಲಿಸಲು ಸಜ್ಜಾಗಿ ನಿಂತಿದ್ದಾರೆ. ವಾತಾವರಣವನ್ನು ನೋಡಿದರೆ ದೀದಿಯ ಸೋಲು, ಬಿಜಪಿಯ ಗೆಲುವು ಅಸಾಧ್ಯವೇನೂ ಅಲ್ಲ. ಆದರೆ ನಿಜಕ್ಕೂ ಬಂಗಾಳ ಸರಿಯಾಗಿ ಸಾಗಬೇಕೆಂದರೆ ಸಿದ್ಧಾಂತದ ಅಡಿಪಾಯ ಬಲವಾಗುವಂತೆ ನೋಡಿಕೊಳ್ಳಬೇಕಿದೆ. ಕೊನೆಯಪಕ್ಷ ಚುನಾವಣೆಯನ್ನು ಗೆದ್ದ ಮೇಲಾದರೂ!


ಇಟಲಿಯ ಕ್ರಾಂತಿಕಾರಿ ಮ್ಯಾಟ್ಜಿನಿ ಒಂದು ಮಾತು ಹೇಳುತ್ತಾನೆ ‘ಯುದ್ಧ ಗೆಲ್ಲೋದು ಶಸ್ತ್ರಗಳಿಂದಲ್ಲ. ಸಿದ್ಧಾಂತಗಳಿಂದಲೇ. ಮೊದಲು ಬೌದ್ಧಿಕ ವಲಯ ಯುದ್ಧ ನಡೆಸುತ್ತದೆ. ಆನಂತರ ಕಣ್ಣಿಗೆ ಕಾಣುವ ಶಸ್ತ್ರಗಳು ಕೆಲಸ ಮಾಡಲಾರಂಭಿಸುತ್ತವೆ’. ಆದರೆ ಒಂದು ದುರಂತವೇನು ಗೊತ್ತೇ? ಅಧಿಕಾರ ಬಂದೊಡನೆ ಬುದ್ಧಿಗೆ ಮಂಕು ಕವಿದುಬಿಡುತ್ತದೆ. ಆನಂತರ ಬೌದ್ಧಿಕ ಕ್ರಾಂತಿಯೂ ಇಲ್ಲ. ಕಣ್ಣಿಗೆ ಕಾಣುವ ಸಶಸ್ತ್ರ ಕ್ರಾಂತಿಯೂ ಇಲ್ಲ.


ಸ್ವಸ್ಥ ಸಮಾಜ ನಿಮರ್ಾಣಕ್ಕೆ ಕಿವಿ ಹಿಂಡಿ ಬುದ್ಧಿಹೇಳಬಲ್ಲ ತ್ಯಾಗಿಗಳ ಅವಶ್ಯಕತೆ ಬಹಳವಾಗಿದೆ. ಮೊದಲೆಲ್ಲ ರಾಜರು ಗುರುಗಳಿಗೆ ಆ ಗೌರವಸ್ಥಾನ ಕೊಡುತ್ತಿದ್ದರು. ಅತ್ಯಂತ ಶ್ರೇಷ್ಠ ಬದುಕನ್ನು ನಡೆಸಿದ ಈ ಋಷಿಸದೃಶ ವ್ಯಕ್ತಿಗಳು ರಾಜನ ತಪ್ಪನ್ನು ಮುಲಾಜಿಲ್ಲದೇ ಎತ್ತಿ ತೋರಿಸುವವರಾಗಿದ್ದರಲ್ಲದೇ ಧರ್ಮದ ಆಧಾರದ ಮೇಲೆ ಆತ ನಡೆಯಬೇಕಾದ ಹಾದಿಯನ್ನು ನಿದರ್ೇಶನ ಮಾಡುತ್ತಿದ್ದರು. ಅನೇಕ ಬಾರಿ ಇವರುಗಳು ಎಡವಿದಾಗ ರಾಜ್ಯ ದಿಕ್ಕು ತಪ್ಪಿದ ಉದಾಹರಣೆ ಚೆನ್ನಾಗಿಯೇ ಗೋಚರವಾಗುತ್ತದೆ. ಔರಂಗಜೇಬ ರಾಜ್ಯಕ್ಕಾಗಿ ತನ್ನ ತಂದೆಯನ್ನು ಗೃಹಬಂಧನದಲ್ಲಿರಿಸಿದಾಗ ಬುದ್ಧಿ ಹೇಳಬೇಕಾದ ಮೌಲ್ವಿಗಳು ಬಾಯ್ಮುಚ್ಚಿ ಕುಳಿತಿದ್ದರು. ಅಷ್ಟೇ ಅಲ್ಲ, ಔರಂಗಜೇಬನ ಪರವಾಗಿಯೂ ವಾದಿಸಿಬಿಟ್ಟಿದ್ದರು. ಏಕೆಂದರೆ ಔರಂಗಜೇಬ ಅವರುಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲು, ಇಸ್ಲಾಮಿನ ವಿಸ್ತಾರಕ್ಕೆ ಬೇಕಾದ ಸಹಕಾರವನ್ನು ನೀಡಲೂ ಒಪ್ಪಿಕೊಂಡುಬಿಟ್ಟಿದ್ದ. ಸ್ವಂತ ಸೋದರ ಧಾರಾಶಿಖೋನ ಹತ್ಯೆ ಮಾಡಿಸಿದನಲ್ಲ ಆತ, ಆಗಲೂ ತಿಳಿಹೇಳಬೇಕಾದವರ ಬಾಯಿಮುಚ್ಚಿ ಹೋಗಿತ್ತು. ಏಕೆಂದರೆ ಔರಂಗಜೇಬ ತೋರಿದ ಆಮಿಷಗಳಿಗೆ ಅವರು ಬಲಿಯಾಗಿಬಿಟ್ಟಿದ್ದರು. ಪರಿಣಾಮ ಇಡಿಯ ಸಮಾಜದ ಮೇಲೆ ಇಂದಿಗೂ ಅದೊಂದು ಕಳಂಕವಾಗಿಯೇ ಉಳಿದಿದೆ. ಹಾಗೆಯೇ ಇಂದೂ ಕೂಡ. ರಾಜಕಾರಣಿಗಳ ತಪ್ಪು ತಿದ್ದಿ ಹೇಳಬೇಕಾದವರೇ ತಮ್ಮ ಕೆಲಸಗಳಿಗಾಗಿ ಅವರೆದುರು ಕೈಚಾಚಿ ನಿಲ್ಲುವುದು, ಸ್ವಹಿತಾಸಕ್ತಿಯಿಂದ ಚಟುವಟಿಕೆಗಳನ್ನು ನಡೆಸುವುದು, ಕೊನೆಗೆ ಧಾವಂತಕ್ಕೆ ಬಿದ್ದು ವಿಸ್ತಾರವನ್ನೋ ಪರರ ನಾಶವನ್ನೋ ಬಯಸುವುದು ಇವೆಲ್ಲವೂ ಆತಂಕಕಾರಿಯೇ. ಅಧಿಕಾರ ಇದ್ದಷ್ಟು ದಿನ ಇವೆಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಅಧಿಕಾರ ಕಳಕೊಂಡ ಮೇಲೆ ಈ ಹಿಂದಿನ ಪ್ರತಿಯೊಂದು ಕ್ರಿಯೆಯೂ ಬೆನ್ನಿಗೆ ಚೂರಿ ಇರಿಯುತ್ತಲೇ ಇರುತ್ತವೆ. ಇದರ ಪಾಠವನ್ನು ಬಂಗಾಳದ ಕಮ್ಯುನಿಸ್ಟರಿಗಿಂತ ಚೆನ್ನಾಗಿ ಅರಿತಿರುವವರು ಮತ್ತೊಬ್ಬರಿಲ್ಲ. ಅಲ್ಲಿ ಕಳಕೊಂಡ ನೆಲೆಯನ್ನು ಅವರು ಬೇರೆಡೆ ಗುರುತಿಸಿಕೊಳ್ಳುತ್ತಿದ್ದಾರಾದರೂ ಬಂಗಾಳದಲ್ಲಿ ಮಾತ್ರ ಅವರ ಪರಿಸ್ಥಿತಿ ದಯನೀಯವಾಗಿಬಿಟ್ಟಿದೆ. ಅದು ಇದ್ದಾಗ ಸಂಯಮವನ್ನು ಕಠಿಣವಾಗಿ ಆಚರಿಸದೇ ಇದ್ದುದರ ಫಲ.

ಭಾರತ ಈಗ ಪರ್ವಕಾಲದಲ್ಲಿದೆ. ಯಾವ ಆಶಯದಿಂದ ಈ ದೇಶದ ಸ್ವಾತಂತ್ರ್ಯ ಹೋರಾಟಗಾರರು ಬದುಕನ್ನೇ ಸಮಪರ್ಿಸಿಬಿಟ್ಟಿದ್ದರೋ, ರಕ್ತವನ್ನು ನೀರಿನತೆ ಹರಿಸಿಬಿಟ್ಟಿದ್ದರೋ ಅವರೆಲ್ಲರ ಕನಸುಗಳು ಈಡೇರುವ ಹೊತ್ತು. ವಿಜಯನಗರದ ನಂತರ, ಶಿವಾಜಿ ಮಹಾರಾಜರ ಆಶಯದ ನಂತರ ಇಷ್ಟು ಬಲಿಷ್ಠವಾದ ಹಿಂದು ಅಲೆ ಕಂಡುಬರುತ್ತಿರುವುದು ಈಗಲೇ. ಅದರೊಟ್ಟಿಗೆ ಅಸಹನೆಯೂ ವ್ಯಾಪಕವಾಗುತ್ತಿದೆ. ಸಿದ್ಧಾಂತದ ತಳಹದಿಯಿಂದ ದೂರ ಸರಿಯುವುದು ನಿಧಾನವಾಗಿ ಕಾಣುತ್ತಿದೆ. ಅದು ತಕ್ಷಣಕ್ಕೆ ಗೋಚರವಾಗುವುದಿಲ್ಲ ನಿಜ. ರಾಮಕೃಷ್ಣರು ಹೇಳುತ್ತಾರಲ್ಲ, ಚೆಂಡು ಮೊದಲ ಮೆಟ್ಟಿಲ ಮೇಲೆ ಬೀಳುವಾಗ ನಿಧಾನವಾಗಿಯೇ ಬೀಳುತ್ತದೆ. ಆದರೆ, ಒಂದೊಂದು ಮೆಟ್ಟಿಲ್ಲನ್ನು ದಾಟಿದಂತೆಯೂ ಅದರ ವೇಗ ತೀವ್ರಗೊಳ್ಳುತ್ತಾ ಸಾಗುತ್ತದೆ. ಹಾಗೆಯೇ ಇದೂ ಕೂಡ. ಮೇಲ್ನೋಟಕ್ಕೆ ಪತನ ಗೋಚರವಾಗುವುದಿಲ್ಲ. ಆದರೆ ದೂರ ನಿಂತು ನೋಡುವವ ಅಂದಾಜಿಸಬಲ್ಲ. ಬಲಹೀನನಾದವ ಹೆಚ್ಚು ಸಂಯಮವಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಶಕ್ತನಾದವ ತನಗೆ ತಾನು ಚೌಕಟ್ಟು ಹಾಕಿಕೊಳ್ಳಲೇಬೇಕು. ಹೆಚ್ಚು ಚೌಕಟ್ಟುಗಳನ್ನು ಹಾಕಿಕೊಂಡಷ್ಟೂ ಹೆಚ್ಚು ಸುಂದರವಾದ ಬದುಕು. ಹಾಗಂತ ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಈಗ ಈ ಬಗೆಯ ಚೌಕಟ್ಟುಗಳನ್ನು ಹಾಕಿಕೊಳ್ಳುತ್ತಾ ಭಾರತ ಏರಿರುವ ಈ ಎತ್ತರವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನು ತೋರದಿದ್ದರೆ ಎಲ್ಲಾ ಹಿಂದುಸಾಮ್ರಾಜ್ಯಕ್ಕಾದ ಗತಿಯೇ ಈಗಲೂ ಆಗಲಿದೆ. ವಿಜಯನಗರ ಧೂಳೀಪಟವಾಯ್ತು. ಕಾರಣ ನಮ್ಮ ಮೈಮರೆವು. ಮರಾಠರ ಅಂತ್ಯ ಬಲು ಕೆಟ್ಟದ್ದೆನಿಸಿತು ಕಾರಣ ನಾವೇ. ವೈಭವವಾಗಿ ಮೆರೆದಿದ್ದ ಸಿಖ್ಖರು ಕೊನೆಗೊಮ್ಮೆ ಸೋತು ಸುಣ್ಣವಾದರು, ಕಾರಣವೂ ಹೊರಗಿನವರಲ್ಲ. ಈಗ ಕಷ್ಟಪಟ್ಟು ಗಳಿಸಿದ್ದನ್ನು ತ್ಯಾಗದಿಂದ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಏಕೆಂದರೆ ಕರ್ಮದಿಂದಲಾಗಲೀ ಹಣದಿಂದಾಗಲೀ, ಹೆಚ್ಚು ಜನರ ಸೃಷ್ಟಿಯಿಂದಾಗಲೀ ಅಮೃತತ್ವ ಸಿಗುವುದಿಲ್ಲ. ಅದು ಸಿಗುವುದು ತ್ಯಾಗದಿಂದ ಮಾತ್ರ.


ಮತ್ತೆ ರಾಜೀವ್ ದೀಕ್ಷಿತರು ನೆನಪಾಗುತ್ತಿದ್ದಾರೆ. ಎತ್ತರಕ್ಕೇರಿದೊಡನೆ ಸುತ್ತಲೂ ಎಂಥೆಂಥವರು ಬಂದು ಬಿಡುತ್ತಾರಲ್ಲವೇ?!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top