International

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!

ಪ್ರತಿ ಹಬ್ಬದ ಹೊತ್ತಲ್ಲೂ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಗಡಿಭಾಗದಲ್ಲಿ ಭಯಾನಕವಾದ ದಾಳಿ ನಡೆಸುವುದು ಹೊಸತಲ್ಲ. ಅದಕ್ಕೊಂದು ಕಾರಣವಿದೆ. ವಿಶೇಷವಾಗಿ ದೀಪಾವಳಿಯ ಹೊತ್ತಲ್ಲಿ ಚಳಿಗಾಲ ಆರಂಭವಾಗಿಬಿಡುವುದರಿಂದ ತರಬೇತುಗೊಳಿಸಿರುವ ಭಯೋತ್ಪಾದಕರನ್ನು ವ್ಯವಸ್ಥಿತವಾಗಿ ಒಳಗೆ ನುಗ್ಗಿಸಲು ಇದು ಸೂಕ್ತವಾದ ಸಮಯ. ಹಾಗೆಂದೇ ಸೈನಿಕರು ಈ ಭಯೋತ್ಪಾದಕರಿಗೆ ಕವರಿಂಗ್ ಫೈರ್ ಕೊಟ್ಟು ಭಾರತೀಯ ಸೈನಿಕರ ದೃಷ್ಟಿಯನ್ನು ಬೇರೆಡೆಗೆ ಸೆಳೆದು ಒಳನುಗ್ಗಲು ಅನುವು ಮಾಡಿಕೊಡುತ್ತಾರೆ. ಈ ರೀತಿಯ ಕದನ ವಿರಾಮ ಉಲ್ಲಂಘನೆ ಅದೆಷ್ಟು ಜೋರಾದ ಸದ್ದುಳ್ಳದ್ದಾಗಿರುತ್ತದೆಂದರೆ ಒಂದು ಸಣ್ಣ ಪ್ರಮಾಣದ ಯುದ್ಧವೇ ನಡೆದಂತೆ. ಭಾರತೀಯ ಸೈನಿಕರಿಗೂ ಇದು ಗೊತ್ತಿಲ್ಲವೆಂದಲ್ಲ. ಗಡಿಯಾಚೆ ಆರೇಳು ತಿಂಗಳುಗಳಿಂದ ಶಸ್ತ್ರ ನಿರ್ವಹಣೆಯ ಕೊಲೆಗಡುಕತನದ ಸಾಕಷ್ಟು ತರಬೇತಿ ಪಡೆದಿರುವ ಕನಿಷ್ಠ ಇನ್ನೂರು ಮಂದಿಯಾದರೂ ಒಳನುಸುಳಲು ಲಾಂಚ್ಪ್ಯಾಡುಗಳಲ್ಲಿ ಕಾದಿರುತ್ತಾರೆ. ಗಡಿಯನ್ನು ದಾಟಿ ನಿಶ್ಶಬ್ಧವಾಗಿ ಬರುವ ಇವರಲ್ಲಿ ಅರ್ಧದಷ್ಟು ಜನ ನಮ್ಮ ಸೈನಿಕರ ದಾಳಿಗೆ ಆಹುತಿಯಾಗುತ್ತಾರೆ. ಇನ್ನೂ ಕೆಲವರು ಪರಿಸರದ ಹೊಡೆತವನ್ನು ತಾಳಲಾರದೇ ಪ್ರಾಣ ಕಳೆದುಕೊಂಡರೆ ಕೆಲವರು ಮಾತ್ರ ಎಲ್ಲವನ್ನೂ ಮೀರಿ ಬಂದು ಭಯಾನಕವಾದ ಆತಂಕಕ್ಕೆ ಕಾರಣವಾಗುತ್ತಾರೆ! ಈ ಬಾರಿಯೂ ಗಡಿಯಲ್ಲಿ ಈ ಚಲನವಲನ ಗಮನಿಸಿದ ಭಾರತೀಯ ಸೈನಿಕರು ಭಯೋತ್ಪಾದಕರು ಒಳನುಸುಳದಂತೆ ತಡೆದರು. ಈ ಸಂದರ್ಭವನ್ನು ಬಳಸಿಕೊಂಡ ಪಾಕೀ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿ ಭಯಾನಕವಾಗಿತ್ತು. ಅನೇಕ ನಾಗರಿಕರು ಈ ದಾಳಿಯಲ್ಲಿ ಗಾಯಾಳುಗಳಾದರು. ಪ್ರತ್ಯಕ್ಷ ಮೂರು ಸೈನಿಕರು ಮತ್ತು ಆಸ್ಪತ್ರೆಯಲ್ಲಿ ಮತ್ತೊಬ್ಬ ಸೈನಿಕನನ್ನು ಸೇರಿಸಿಕೊಂಡರೆ ಹುತಾತ್ಮರಾದ ಭಾರತೀಯ ಸೈನಿಕರ ಸಂಖ್ಯೆ ನಾಲ್ಕು. ಆದರೆ, ಈ ಬಾರಿ ಪ್ರತಿದಾಳಿ ನಡೆಸಿದ ಭಾರತ ಎಷ್ಟು ತೀವ್ರ ಪ್ರಮಾಣದ ದಾಳಿಯನ್ನು ಸಂಘಟಿಸಿತೆಂದರೆ ಪಾಕಿಸ್ತಾನ ಮುಟ್ಟಿಕೊಂಡು ನೋಡಬೇಕಾದ ಸ್ಥಿತಿ ಬಂತು. ಅನೇಕ ಬಂಕರ್ಗಳು ಧ್ವಂಸವಾಗಿ ಹೋದವು. ಕನಿಷ್ಠಪಕ್ಷ ಎಂಟು ಸೈನಿಕರು ಪ್ರಾಣ ಕಳೆದುಕೊಂಡರು. ಒಂದು ಬಂಕರ್ನ ಮೇಲೆ ಆದ ಮಿಸೈಲ್ ದಾಳಿಯ ವಿಡಿಯೊವನ್ನು ಸೈನ್ಯವೇ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಮುಖಭಂಗ ಉಂಟುಮಾಡಿತು. ಗಡಿ ಭದ್ರತಾ ಪಡೆಯ ಇನ್ಸ್ಪೆಕ್ಟರ್ ಜನರಲ್ ರಾಜೇಶ್ ಮಿಶ್ರಾ ಹೇಳುವ ಪ್ರಕಾರ ಕನಿಷ್ಠಪಕ್ಷ 300 ಭಯೋತ್ಪಾದಕರು ಒಳ ನುಸುಳದಂತೆ ಈ ಬಾರಿ ತಡೆಯಲಾಗಿದೆ. ಅಚ್ಚರಿಯೇನು ಗೊತ್ತೇ? ಪಾಕ್ ಆಕ್ರಮಿತ ಕಾಶ್ಮಿರದ ಜನ ಭಾರತದ ಈ ಪ್ರತಿದಾಳಿಯನ್ನು ಪಾಕಿಸ್ತಾನವನ್ನು ಆಡಿಕೊಳ್ಳಲು ಬಳಸಿಕೊಂಡಿದ್ದಾರೆ. ಪಾಕಿಸ್ತಾನದ ಸೇನೆಯ ಸಾಮಥ್ರ್ಯ ಏನು ಎಂಬುದು ಈಗ ಮುಲಾಜಿಲ್ಲದೇ ಅರಿವಾಗುತ್ತಿದೆ ಎಂದಿದ್ದಾರೆ. ಎಲ್ಲವೂ ಒಳ್ಳೆಯ ಬೆಳವಣಿಗೆಯೇ!


ಆದರೆ ಗಮನಿಸಬೇಕಾದ ಮಹತ್ವದ ಸಂಗತಿ ಒಂದಿದೆ. ಅದು ಚೀನಾದೊಡನೆ ಕಣ್ಣಿಗೆ ಕಣ್ಣು ಕೊಟ್ಟು ಯುದ್ಧ ಸಿದ್ಧತೆಯನ್ನು ನಡೆಸುತ್ತಿರುವ ಭಾರತ ಮತ್ತೊಂದು ದಿಕ್ಕಿನಿಂದ ಪಾಕಿಸ್ತಾನವನ್ನೂ ಎದುರಿಸಲು ಕೆಚ್ಚೆದೆ ತೋರುತ್ತಿರುವುದು ಅಚ್ಚರಿ ಮತ್ತು ನರನಾಡಿಗಳೊಳಗೆ ಹರಿಯುತ್ತಿರುವ ಆತ್ಮವಿಶ್ವಾಸದ ಪ್ರತೀಕ. ಟ್ರಂಪ್ ಸೋತು ಬೈಡನ್ ಗೆಲ್ಲುವುದರೊಂದಿಗೆ ಭಾರತದ ಸಾಮಥ್ರ್ಯ ಕ್ಷೀಣಿಸುವುದು ಎಂದೇ ಎಲ್ಲರೂ ಭಾವಿಸಿದ್ದರು. ಬಹುಶಃ ಬೈಡನ್ ಪೂರ್ಣಪ್ರಮಾಣದ ಅಧಿಕಾರ ಸ್ವೀಕರಿಸಿದ ನಂತರ ಹಾಗೆ ಆದರೂ ಆದೀತೇನೋ. ಸದ್ಯಕ್ಕಂತೂ ಭಾರತದ ಕೈ ಬಲವಾಗಿದೆ. ಹೀಗಾಗಿಯೇ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಡಲು ಸಾಧ್ಯವಾಗಿದ್ದು. ಅತ್ತ ಗಡಿಯಲ್ಲಿ ನಿಂತಂತಹ ಭಾರತೀಯ ಸೇನೆ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡು ಮರಳಲು ಸಿದ್ಧವಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕಗೊಂಡಿತ್ತು. ಅನೇಕ ಭಾರತೀಯ ಪತ್ರಕರ್ತರು ಇದನ್ನು ಪ್ರಕಟಿಸಿ ಆನಂತರ ಚೀನಾ ಅದನ್ನು ನಿರಾಕರಿಸಬೇಕಾಗಿ ಬಂತು. ಅಂದರೆ ಎಲುಬುಗಳು ಕೊರೆದು ಹೋಗುವ ಈ ಚಳಿಯಲ್ಲೂ ಭಾರತೀಯ ಸೈನಿಕರು ದೌಲತ್-ಬೇಗ್-ಓಲ್ಡಿ, ದೆಪ್ಸಾಂಗ್ ಮತ್ತು ಚುಶೂಲ್ ಕಣಿವೆಯನ್ನು ಬಿಟ್ಟುಬರುವುದಿಲ್ಲವೆಂದಾಯ್ತು! ಅಲ್ಲಿಗೆ ಈ ಚಳಿಗಾಲ ಭಾರತೀಯ ಸೈನಿಕರ ಪಾಲಿಗೆ ಅತ್ಯಂತ ಸವಾಲಿನದ್ದು. ಚುಶೂಲ್ ಕಣಿವೆಯಲ್ಲಿ ನಾವು ಗಳಿಸಿರುವ ಮೇಲ್ಗೈಯನ್ನು ಉಳಿಸಿಕೊಂಡು ಚಳಿಗಾಲವನ್ನು ಕಳೆಯುವುದು ನಮ್ಮಿಂದ ಸಾಧ್ಯವಾಗಿಬಿಟ್ಟರೆ ಚೀನಾಕ್ಕೆ ದೊಡ್ಡ ಹೊಡೆತ.


ಅಚ್ಚರಿಯ ಸಂಗತಿ ಎಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ಈ ಪರಿಯ ದಾಳಿ ನಡೆಸಿದಾಗಲೂ ಚೀನಾ ಸುಮ್ಮನೆ ಕುಳಿತಿದೆ. ತನ್ನ ಸರ್ವಋತು ಮಿತ್ರ ಪಾಕಿಸ್ತಾನದ ಸಹಕಾರಕ್ಕೆ ಅದು ಧಾವಿಸಿಲ್ಲ. ಇನ್ನು ವಿಶೇಷವಾದ ಸಂಗತಿಯೆಂದರೆ ಪಾಕಿಸ್ತಾನದ ಆ ಭಾಗದಲ್ಲಿ ಎಕನಾಮಿಕ್ ಕಾರಿಡಾರ್ ನಿಮರ್ಿಸುತ್ತಿದ್ದ ಚೀನಾ ಕಳೆದ ಕೆಲವು ವಾರಗಳಿಂದ ತನ್ನ ಕೆಲಸವನ್ನೇ ನಿಲ್ಲಿಸಿಬಿಟ್ಟಿದೆಯಂತೆ. ಚೀನಾದ ಮಹತ್ವಾಕಾಂಕ್ಷಿ ಅಭಿಯಾನವೊಂದು ಹೀಗೆ ಅಂತ್ಯ ಕಾಣುತ್ತಿದೆಯೇ ಅನ್ನೋದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ! ಇತ್ತ ಚೀನಾದ ಉಯ್ಘುರ್ ಮುಸ್ಲೀಮರು ತಮ್ಮ ವಿರೋಧದ ದನಿಯನ್ನು ಎಷ್ಟು ಎತ್ತರಕ್ಕೇರಿಸಿದ್ದಾರೆಂದರೆ ಪಾಕಿಸ್ತಾನ ತನ್ನ ತಾನು ಮುಸಲ್ಮಾನರ ಮಸೀಹಾ ಎಂದು ಹೇಳಿಕೊಳ್ಳುತ್ತಿದ್ದುದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ 70 ವರ್ಷಗಳಲ್ಲಿ ಪಾಕಿಸ್ತಾನ ಎಂದಿಗೂ ಇಷ್ಟು ಗೊಂದಲದ ಗೂಡಾಗಿರಲಿಲ್ಲ. ಸಿಂಧ್, ಬಲೂಚಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ, ಪಂಜಾಬ್ ಭಾಗಗಳಲ್ಲೆಲ್ಲಾ ಅದಾಗಲೇ ಜನ ದಂಗೆ ಎದ್ದಿದ್ದಾರೆ. ಹೀಗಾಗಿ ಮುಂದಿನ ದಿನಗಳು ಪಾಕಿಸ್ತಾನಕ್ಕೆ ಬಲುಕಷ್ಟ. ಭಾರತದ ಸ್ಥಾನ ಹಿಂದೆಂದಿಗಿಂತಲೂ ಈಗ ಭದ್ರವಾಗಿದೆ.

ಆತ್ಮವಿಶ್ವಾಸವೆನ್ನುವುದು ಎತ್ತರದಲ್ಲಿದ್ದಾಗ ಈ ರೀತಿಯ ಶಕ್ತಿ ಸಿದ್ಧಿಸುತ್ತದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿದ ನಂತರವೂ ಕೊರೋನಾವನ್ನು ಭಾರತ ಎದುರಿಸಿದ ರೀತಿ ಅಂಥದ್ದೊಂದು ಆತ್ಮವಿಶ್ವಾಸವನ್ನು ಭಾರತದ ನರನಾಡಿಗಳಲ್ಲಿ ತುಂಬಿಬಿಟ್ಟಿದೆ. ಅದನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕಿದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top