State

ಕನ್ನಡದ ಕಂಪು ಪಸರಿಸಲಿ!

ಕನ್ನಡ ಭಾಷೆಯ ಕುರಿತಂತೆ ಸಾಕಷ್ಟು ಚಚರ್ೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಅನೇಕರು ಸುತ್ತಲಿನ ಭಾಷೆಗಳ ಆಕ್ರಮಣಕ್ಕೆ ಕನ್ನಡ ನಲುಗುತ್ತಿದೆ ಎಂದು ಹೇಳಿದರೆ, ಇನ್ನೂ ಕೆಲವರು ಕನ್ನಡ ತನ್ನವರದ್ದೇ ತಾತ್ಸಾರಕ್ಕೆ ಒಳಗಾಗುತ್ತಿದೆ ಎನ್ನುತ್ತಾರೆ. ಈ ನಡುವೆ ಕೆಲವರು ಕನ್ನಡವನ್ನುಳಿಸುವುದು ಎಂದರೆ ಹೋರಾಟದ ಹಾದಿಯನ್ನು ತನ್ನದಾಗಿಸಿಕೊಳ್ಳುವುದು ಎಂದರೆ, ಮತ್ತೂ ಕೆಲವರು ಭಾಷೆಯ ಉಗಮ, ಬೆಳವಣಿಗೆ, ವಿಸ್ತಾರ ಇವೆಲ್ಲವೂ ತನ್ನದ್ದೇ ಪಥವನ್ನು ಹೊಂದಿರುವುದರಿಂದ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದೂ ಹೇಳುತ್ತಾರೆ. ಒಟ್ಟಾರೆ ಈ ಎಲ್ಲ ವಾದಗಳ ನಡುವೆ ಕನ್ನಡವನ್ನು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಸುವ ಪ್ರಯತ್ನಗಳು ಮಾತ್ರ ಬಲು ಕಡಿಮೆಯಾಗುತ್ತಿದೆ. ಯಾವುದೇ ಭಾಷೆಯಾದರೂ ಅದು ಮೊದಲು ಆಡುಭಾಷೆಯಾಗಬೇಕು. ಜನರು ಅದನ್ನು ಬಳಸುವುದಲ್ಲದೇ ಹೊರಗಿನಿಂದ ಬಂದವರು ಅದನ್ನು ಬಳಸಲೇಬೇಕಾದ ಅನಿವಾರ್ಯತೆಗೆ ಸಿಲುಕುವಷ್ಟು ಅದು ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ನಾವು ನಿಸ್ಸಂಶಯವಾಗಿ ಸೋತಿದ್ದೇವೆ. ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿದ್ದರೂ ಕನ್ನಡ ಕಲಿಯದ ಇತರೆ ರಾಜ್ಯದವರಿದ್ದಾರೆ. ತಪ್ಪು ಅವರದ್ದಲ್ಲ, ನಮ್ಮದ್ದೇ. ಅದನ್ನು ಆಡುಭಾಷೆಯಾಗಿ ಅನಿವಾರ್ಯವಾಗಿಸುವಲ್ಲಿ ನಾವೇ ಸೋತಿರೋದು!


ಹಾಗೆಯೇ ಭಾಷೆಯೊಂದು ಅನ್ನದ ಭಾಷೆಯೂ ಆಗಬೇಕು. ಈ ಭಾಷೆಯಿಂದ ಉದ್ಯೋಗಗಳು ದೊರೆಯುತ್ತವೆ ಎಂದಾದರೆ ಅಂತಹ ಭಾಷೆ ವ್ಯಾಪಕವಾಗಿ ಬಳಕೆಯಾಗುತ್ತದೆ. ಇಂಗ್ಲೀಷ್ ಈಗ ಹಾಗೆಯೇ ಆಗಿದೆ. ಅದನ್ನು ಕಲಿಯಲಿಲ್ಲವೆಂದರೆ ಕೆಲಸ ಸಿಗುವುದಿಲ್ಲ ಎನ್ನುವಷ್ಟರಮಟ್ಟಿಗೆ ವ್ಯಾಪಕಗೊಳಿಸಲಾಗಿದೆ. ಹಿಂದಿಯನ್ನು ವಿರೋಧಿಸುವವರು ಇಂಗ್ಲೀಷಿನ ಬಗ್ಗೆ ಯಾವ ವಿರೋಧದ ದನಿಯೂ ಇಲ್ಲದಂತೆ ಸುಮ್ಮನಾಗಿರುವುದು ಈ ಕಾರಣಕ್ಕೇ. ಹಿಂದಿ ಭಾಷೆಯನ್ನು ಉದ್ಯೋಗದ ಭಾಷೆಯಾಗಿ ಮಾರ್ಪಡಿಸುವಲ್ಲಿ ಕೇಂದ್ರವನ್ನಾಳುವ ಎಲ್ಲ ಸಕರ್ಾರಗಳು ಯಶಸ್ವಿಯಾಗುತ್ತಿವೆ. ಆದರೆ ಈ ನಿಟ್ಟಿನಲ್ಲಿ ಕನ್ನಡವನ್ನು ರೂಪಿಸುವಲ್ಲಿ ಮಾತ್ರ ನಾವು ಸೋತು ಹೋಗುತ್ತಿದ್ದೇವೆ.

ಇಷ್ಟಾದರೆ ಸಾಲದು. ಭಾಷೆಯೊಂದು ಅರಿವಿನ ಭಾಷೆಯೂ ಆಗಬೇಕು. ಜಗತ್ತಿನ ಅತ್ಯುತ್ಕೃಷ್ಟ ಕೃತಿಗಳು ಈ ಭಾಷೆಯಲ್ಲಿ ಸಿಗುವಂತಾದರೆ, ಶ್ರೇಷ್ಠ ಸಿನಿಮಾಗಳು ಈ ಭಾಷೆಗೆ ಅನುವಾದಿಸಿ ಬರುವಂತಾದರೆ, ಅಂತಹ ಭಾಷೆ ಸಹಜವಾಗಿಯೇ ವಿಸ್ತಾರಗೊಳ್ಳುತ್ತದೆ. ಅಷ್ಟೇ ಅಲ್ಲದೇ, ತನ್ನ ಭಾಷೆಯ ಜನರ ಓದನ್ನು ವಿಸ್ತಾರಗೊಳಿಸುವ ಪ್ರಯತ್ನ ಮಾಡದೇ ಹೋದರೆ ಅಂಥದ್ದೊಂದು ಭಾಷೆ ಕಾಲಕ್ರಮದಲ್ಲಿ ಬೌದ್ಧಿಕ ವರ್ಗದಿಂದ ದೂರವಾಗಿಬಿಡುತ್ತದೆ. ಹೀಗೆಂದೇ ಇತ್ತೀಚೆಗೆ ಒಂದು ಪ್ರಯತ್ನ ಕಂಪುವಿನ ಮೂಲಕ ನಡೆದಿದೆ. ಕಂಪು ಎಂದರೆ ಕನ್ನಡ ಆಂಪ್ಲಿಫೈಸ್ ಯು ಅಂತ. ಕನ್ನಡದ ಓದು ನಿಶ್ಚಯವಾಗಿ ನಮ್ಮ ಅರಿವಿನ ಆಗಸವನ್ನು ವಿಸ್ತಾರಗೊಳಿಸಲಿದೆ. ದೇಶ-ಭಾಷೆಗಳಲ್ಲೇ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡದ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಲೇ ಸಾಗುತ್ತಿದೆ. ಹೀಗಾಗಿ ತಿಳಿದುಕೊಳ್ಳುವ ಹಂಬಲವಿದ್ದೂ ಓದಲಾಗುತ್ತಿಲ್ಲ ಎನ್ನುವವರಿಗಾಗಿ ಕನ್ನಡ ಪುಸ್ತಕಗಳನ್ನು ಕೇಳುವ ವ್ಯವಸ್ಥೆ ಇರುವ ಅಪ್ಲಿಕೇಶನ್ ಇದು. ಒಂದಿಡೀ ತರುಣ ತಂಡ ಇದರ ಹಿಂದೆ ನಿರಂತರವಾಗಿ ದುಡಿಯುತ್ತಿದೆ. ಲೇಖಕರು, ಪ್ರಕಾಶಕರನ್ನು ಮಾತನಾಡಿಸಿ, ಪುಸ್ತಕಗಳನ್ನು ಆಡಿಯೊ ರೂಪದಲ್ಲಿ ಹೊರತರಲು ಅವರನ್ನು ಒಪ್ಪಿಸಿ ಸಮರ್ಥವಾಗಿ ಕನ್ನಡವನ್ನು ಓದಬಲ್ಲ, ಒಳ್ಳೆಯ ದನಿಯುಳ್ಳ ವ್ಯಕ್ತಿಗಳಿಂದ ಓದಿಸಿ, ಅದಕ್ಕೆ ಸೂಕ್ತವಾದ ಹಿನ್ನಲೆ ಸಂಗೀತವನ್ನು ಜೋಡಿಸಿ, ಕೇಳುವಂತೆ ಅದನ್ನು ರೂಪಿಸುವ ಹೊಣೆ ಹೊತ್ತಿದೆ. ಇಷ್ಟೆಲ್ಲ ಪ್ರಯತ್ನಗಳ ನಂತರವೂ ಸದ್ಯಕ್ಕಂತೂ ಆ್ಯಪ್ ಉಚಿತವಾಗಿ ಇದನ್ನು ಸಮಾಜಕ್ಕೆ ಮುಟ್ಟಿಸುತ್ತಿದೆ.


ಓದುವುದು ನಿಜಕ್ಕೂ ಅದ್ಭುತವಾದ ಪ್ರಕ್ರಿಯೆ. ಅದು ನಮ್ಮೊಳಗೆ ಕಲ್ಪನೆಗಳನ್ನು ಜಾಗೃತಗೊಳಿಸಬಲ್ಲದು. ಬರಹಗಾರನ ಆಲೋಚನೆ ಮತ್ತು ಓದುಗನ ಆಲೋಚನೆ ಭಿನ್ನವಾಗಿರುವ ಸಾಧ್ಯತೆಗಳೂ ಇವೆ. ಹೀಗಾಗಿ ಅರಿವಿನ ಆಗಸದ ವಿಸ್ತಾರ ಬಲು ಸಹಜ. ಇದೇ ರೀತಿಯ ಸಾಮಥ್ರ್ಯ ಕೇಳುವುದಕ್ಕೂ ಇದೆ. ಆದರೆ ಕೇಳುವುದಕ್ಕೆ ಇಂಥದ್ದೇ ಸಮಯ ಆಗಬೇಕೆಂದೇನಿಲ್ಲ. ಈಗಲಂತೂ ಮೊಬೈಲ್ ಮತ್ತು ಇಯರ್ ಫೋನುಗಳು ಕೇಳುವಿಕೆಯನ್ನು ಎಷ್ಟು ಸುಲಭಗೊಳಿಸಿವೆ ಎಂದರೆ ಬೆಳಿಗ್ಗೆ ವಾಕಿಂಗ್ ಮಾಡುವಾಗ, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ, ದೂರದ ಸ್ಥಳಗಳಿಗೆ ಕಾರಿನಲ್ಲಿ ಹೋಗುತ್ತಿರುವಾಗ ಸಹಜವಾಗಿಯೇ ಇವುಗಳನ್ನು ಪುಟಪುಟವಾಗಿ ಕೇಳುತ್ತಾ ಹೋಗಬಹುದು. ಒಂದೊಂದು ಅಧ್ಯಾಯ ಮುಗಿದಂತೆಯೂ ಅದರೊಟ್ಟಿಗೆ ಇರುವ ಸಾಹಿತ್ಯ ಮತ್ತು ಸಂಗೀತ ಕೇಳುಗನನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದು ನಿಶ್ಚಿತ. ಹೀಗಾಗಿಯೇ ಕಂಪು ಎನ್ನುವ ಈ ಪ್ರಯತ್ನ. ಈ ಪ್ರಯತ್ನದಿಂದ ಒಂದಷ್ಟು ಒಳ್ಳೆಯ ಪುಸ್ತಕಗಳು ಜನಮಾನಸವನ್ನು ಮುಟ್ಟುವಂತಾದರೆ ತರುಣ ತಂಡದ ಪ್ರಯತ್ನ ಸಾರ್ಥಕ. ಕನ್ನಡದ ಈ ಅಪ್ಲಿಕೇಶನ್ ಇತರೆಲ್ಲ ಶ್ರೇಷ್ಠ ಅಪ್ಲಿಕೇಶನ್ಗೆ ಕಡಿಮೆಯೇನೂ ಇಲ್ಲ. ಅದರ ವಿನ್ಯಾಸ, ಬಳಕೆಯ ರೀತಿ ನಿಜಕ್ಕೂ ಮನಮುಟ್ಟುವಂತಿದೆ. ಮೊದಲ ನೋಟಕ್ಕೆ ಮನಸೂರೆಗೊಳ್ಳುವಂತಿದೆ. ಇದರಲ್ಲಿ ನೀವು ಅಧ್ಯಾಯಗಳನ್ನು ಆಯ್ಕೆ ಮಾಡಿಕೊಂಡು ಕೇಳಬಹುದಲ್ಲದೇ ಎಲ್ಲಿ ನಿಲ್ಲಿಸಿದ್ದೀರೋ ಅಲ್ಲಿಂದಲೇ ಮತ್ತೆ ಆರಂಭಿಸಬಹುದಾದ ಅವಕಾಶವೂ ಇದೆ. ನೀವು ಬೇರೆ ಆಪ್ನ ಮೂಲಕ ಯಾವುದೋ ಕೆಲಸ ಮಾಡುತ್ತಿದ್ದಾಗಲೂ ಹಿಂಭಾಗದಲ್ಲಿ ಕಂಪು ನಿಮಗೆ ಪುಸ್ತಕಗಳನ್ನು ಕೇಳಿಸುತ್ತಲೇ ಇರುತ್ತದೆ. ಅದು ಇದರ ವೈಶಿಷ್ಟ್ಯ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಾಯೋಗಿಕವಾಗಿ ಕೊಟ್ಟಿರುವ ಕಂಪು ತಂಡ ಬರಲಿರುವ ದಿನಗಳಲ್ಲಿ ವಾರಕ್ಕೊಂದಾದರೂ ಪುಸ್ತಕವನ್ನು ಸೇರಿಸುವ ಸಂಕಲ್ಪ ಮಾಡಿದೆ. ಖ್ಯಾತ ಸಂಗೀತ ತಜ್ಞ ಮನೋಜ್ ವಸಿಷ್ಠ ಬಹುತೇಕ ಪುಸ್ತಕಗಳಿಗೆ ಸಂಗೀತ ನೀಡುತ್ತಿದ್ದಾರೆ. ಒಟ್ಟಾರೆ ಕನ್ನಡವನ್ನು ಉಳಿಸುವ, ಬೆಳೆಸುವ ಕುರಿತಂತೆ ಎಲ್ಲರೂ ಮಾತನಾಡುತ್ತಿರುವಾಗ ಯುವಾಲ್ಯಾಬ್ಸ್ನ ಅಡಿಯಲ್ಲಿರುವ ಕಂಪು ಒಂದು ಹೆಜ್ಜೆ ಮುಂದಿಟ್ಟು ಕನ್ನಡದ ಓದನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ!

ಗೂಗಲ್ ಆಪ್ಸ್ಟೋರ್ನಲ್ಲಿ ಕಂಪು ಆಡಿಯೊ ಬುಕ್ ಎಂದು ಹುಡುಕಿದೊಡನೆ ನೀವು ಈ ಅಪ್ಲಿಕೇಶನ್ ಎದುರಿಗೆ ಬಂದು ನಿಲ್ಲುತ್ತೀರಿ. ಒಮ್ಮೆ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರಾಯ್ತು. ಹತ್ತಾರು ಪುಸ್ತಕಗಳಿಗೆ ನೀವು ತೆರೆದುಕೊಳ್ಳುತ್ತೀರಿ. ಇಡಿಯ ತಂಡಕ್ಕೆ ಶುಭವಾಗಲಿ ಎಂದಷ್ಟೇ ನಾವು ಹೇಳಬಹುದು..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top