Politics

ಕೊನೆಯ ಚುನಾವಣೆ ಎಂದು ಪದೇ ಪದೇ ಹೇಳಿದವರ ನಡುವೆ, ರಾಜಕಾರಣಕ್ಕೆ ಗುಡ್ ಬೈ ಹೇಳಿದ ಮಹನೀಯ!

-ಶ್ರೀ ನಾಥ್ ಮಾನೆ

ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯದ ಈಡಿಗ ಸಮುದಾಯದ ಪ್ರಬಲ ನಾಯಕ ಹಾಗೂ ಸಮಾಜವಾದಿ ಚಿಂತಕ ಕಾಗೋಡು ತಿಮ್ಮಪ್ಪನವರು ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ
ಇದರೊಂದಿಗೆ ರಾಜ್ಯ ರಾಜಕೀಯದ ಹಿರಿಯ ತಲೆಮಾರೊಂದು ನೇಪಥ್ಯಕ್ಕೆ ಸರಿದಂತಾಗಿದೆ. ರಾಜಕೀಯದಲ್ಲಿ ಶಾಸಕ, ಮಂತ್ರಿ, ಸ್ಪೀಕರ್, ಸ್ಥಾನಗಳನ್ನು ಅಲಂಕರಿಸಿದ್ದ ಅನುಭವಿ ರಾಜಕಾರಣಿ ಇವರು.

ರಾಜಕೀಯ ಪ್ರವೇಶಕ್ಕೂ ಮುನ್ನ ಇವರು ವಕೀಲಿ ವೃತ್ತಿಯಲ್ಲಿದ್ದರು. ತಮ್ಮ ಊರಿನ ರೈತರ ಸಮಸ್ಯೆಗಳೇ ಇವರಿಗೆ ಹೆಚ್ಚು ಬರುತ್ತಿದ್ದವು. ಯಾವೊಬ್ಬ ರೈತನಿಗೂ ಹಣಕ್ಕಾಗಿ ಪೀಡಿಸದೇ ರೈತ ಮಿತ್ರ ಎನಿಸಿಕೊಂಡಿದ್ದರು.
ಹಳ್ಳಿ ಹಳ್ಳಿಗೆ ಸೈಕಲ್ ಮೂಲಕವೇ ಸಂಚರಿಸಿ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ಸಂದರ್ಭದಲ್ಲಿ ಗೇಣಿದಾರರ, ಕೃಷಿಕರ, ಕಾರ್ಮಿಕರ, ಶೋಷಿತರ, ಬಡವರ, ಬುಡಕಟ್ಟು ಜನಾಂಗದ ಧ್ವನಿಯಾಗಿ ಚಳುವಳಿಯ ಮುಂದಾಳತ್ವ ಕೂಡ ವಹಿಸಿದ್ದರು.

ಹೀಗೆ ಚಳುವಳಿಗಳ ಮೂಲಕವೇ ಸಾಮಾಜಿಕ ಜೀವನಕ್ಕೆ ಬಂದು ಬದುಕಿನಲ್ಲಿ ಶಿಸ್ತು ರೂಪಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ತಿಮ್ಮಪ್ಪನವರದ್ದು.
ಸಮಾಜವಾದಿಗಳೆಲ್ಲಾ ಮಜಾವಾದಿಗಳಾಗಿ ಬದಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕಾಗೋಡು ತಿಮ್ಮಪ್ಪನವರು ರಾಜಕೀಯದ ಆರಂಭದಿಂದ ಹಿಡಿದು ಕೊನೆಯವರೆಗೂ ತಮ್ಮ ತತ್ವ ಸಿದ್ಧಾಂತವನ್ನು ಬಿಟ್ಟು ಕೊಡದೇ ಸರಳವಾಗಿ, ನಿಷ್ಠುರವಾಗಿ ಬದುಕಿದ್ದಾರೆ.

ಅವರ ನಿಷ್ಠುರತೆ ಹೇಗಿತ್ತೆಂದರೆ, ರಾಜ್ಯದ ಸ್ಪೀಕರ್ ಆಗಿದ್ದಾಗ ತಮ್ಮದೇ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮುಲಾಜಿಲ್ಲದೇ ಜಾಡಿಸಿತ್ತಿದ್ದರು. ರಾಜ್ಯ ಕಾಂಗ್ರೆಸ್ ವರಿಷ್ಠರು ಬಿಡಿ, ಹೈಕಮಾಂಡ್ ಕೂಡಾ ಇವರಿಗೆ ದೂಸ್ರಾ ಮಾತಾಡದೇ ತಬ್ಬಿಬ್ಬರಾಗಿ ಬಿಡುತ್ತಿದ್ದರು.

ಈ ಬಾರಿಯ ಚುನಾವಣೆಗೂ ಮುನ್ನ ಸೋತರೂ, ಗೆದ್ದರೂ, ಇದೇ ನನ್ನ ಕೊನೇಯ ಚುನಾವಣೆ ಎಂದಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಫಲವಾಗಿ ತಿಮ್ಮಪ್ಪನವರು ಚುನಾವಣೆಯಲ್ಲಿ ಸೋತರು. ಕೊಟ್ಟ ಮಾತಿನಂತೆ ಇನ್ನೆಂದೂ ರಾಜಕೀಯದ ಪಡಸಾಲೆಯಲ್ಲಿ ನಾನಿಲ್ಲ, ನನ್ನ ಹೋರಾಟ ಇಲ್ಲಿಗೆ ಮುಗಿದಿದೆ. ಮುಂದಿನವರು ಸಮಾಜವಾದದ ಹೋರಾಟ ಮುಂದುವರಿಸಲಿ ಎಂದು ರಾಜಕೀಯಕ್ಕೆ ವಿದಾಯ ಹೇಳಿ ಭಾವನಾತ್ಮಕವಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ.

ಹಾಗೆ ನೋಡಿದರೆ ಇದೇ ನನ್ನ ಕೊನೇಯ ಚುನಾವಣೆ ಅಂತ ಹೇಳಿದವರೆಲ್ಲಾ ರಾಜಕೀಯ ತೊರೆದಿಲ್ಲ. ಇದಕ್ಕೆ ತಾಜಾ ಉದಾಹರಣೆ ಮಾಜಿ ಸಿ.ಎಂ.ಸಿದ್ಧರಾಮಯ್ಯ ನವರು. 2013ರ ವಿಧಾನಸಭಾ ಚುನಾವಣೆಯಲ್ಲಿ ಇದೇ ನನ್ನ ಕೊನೇಯ ಚುನಾವಣೆ, ಇನ್ನೆಂದೂ ಸ್ಪರ್ಧಿಸಲ್ಲ, ಈಗಲೇ ಗೆಲ್ಲಿಸಿ ಬಿಡಿ ಎಂದಿದ್ದರು. ಆದರೆ ಅಧಿಕಾರದ ರುಚಿ ಕಂಡಿದ್ದೇ ಕಂಡಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಒಂದಲ್ಲ, ಎರಡು ಕಡೆ ಸ್ಪರ್ಧಿಸಿದರು. ಒಂದು ಕಡೆ ಸೋತು ಸುಣ್ಣವಾದರೆ, ಇನ್ನೊಂದು ಕಡೆ ಕೂದಲೆಳೆ ಅಂತರದಲ್ಲಿ ಗೆದ್ದು ಮುಖ್ಯಮಂತ್ರಿ ಆಗಿ ಮೆರೆದಿದ್ದವರು ಮಾಜಿ ಮುಖ್ಯಮಂತ್ರಿ ಅಥವಾ ಹಾಲಿ ಶಾಸಕರಾಗಿ ತಣ್ಣಗೆ ಕೂತಿದ್ದಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರ ಕಥೆಯನ್ನಂತೂ ಕೇಳೋದೇ ಬೇಡ. ಇವರೇನಾದರೂ ಇದೇ ನನ್ನ ಕೊನೇಯ ಚುನಾವಣೆ ಎಂದು ಹೇಳಿದರೆ ಜನಸಾಮಾನ್ಯರು ಬಿಡಿ, ಅವರದೇ ಪಕ್ಷದ ಕಾರ್ಯಕರ್ತರೂ ಸಹ ನಕ್ಕು ಸುಮ್ಮನಾಗುತ್ತಾರೆ. ಇಂತಹವರ ನಡುವೆ ತಿಮ್ಮಪ್ಪನವರ ಮೇಲೆ ಪಕ್ಷಾತೀತವಾಗಿ ಗೌರವ ಮೂಡುತ್ತದೆ.

ಅಂದು ಕಾಂಗ್ರೆಸ್ ಪಕ್ಷವನ್ನು ವಿಶಾಲ ಆಲದ ಮರಕ್ಕೆ ಹೋಲಿಸಿಕೊಂಡು ಮೆರೆದಾಡಿದ್ದ ಕಾಂಗ್ರೆಸ್ ನಾಯಕರು ಇಂದು ತಮ್ಮ ಪಕ್ಷದ ಬೇರುಗಳು ಕೊಳೆಯಲಾರಂಭಿಸಿರುವುದನ್ನು ಹತಾಶೆಯಿಂದ ನೋಡುತ್ತಿದ್ದಾರೆ. ಹೊಸ ಚಿಗುರಿಗಂತೂ ಅವಕಾಶವೇ ಇಲ್ಲ. ಪಕ್ಷದಲ್ಲಿ ದೇಶಾದ್ಯಂತ ಯುವ ಪಡೆಯನ್ನು ಕಟ್ಟುತ್ತೇನೆ, ಪ್ರಧಾನಿ ಆಗುತ್ತೇನೆ ಎಂದು ಓಡಾಡುತ್ತಿರುವ ರಾಹುಲ್ ಗಾಂಧಿಗೆ ಇದೀಗ ಹಳೇ ಬೇರುಗಳು ಕೈ ಕೊಡುತ್ತಿರುವುದು ತಲೆ ನೋವಿನ ಸಂಗತಿಯೇ ಸರಿ.

ಜೀವನದ ಅರ್ಧ ಭಾಗ ಅಂದರೆ ಸುಮಾರು 50 ವರ್ಷಗಳನ್ನು ಹೋರಾಟ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಕಳೆದ ತಿಮ್ಮಪ್ಪನವರು ಇದೀಗ ನಾನೀಗ ಬದುಕಿನ ಮುಸ್ಸಂಜೆಯಲ್ಲಿದ್ದೇನೆ, ಸುಸ್ತಾಗಿದೆ, ವಿಶ್ರಾಂತಿ ಬೇಕು ಎಂದು ಈ ಮುತ್ಸದ್ಧಿ ರಾಜಕಾರಣಿ ಭಾರವಾದ ಮನಸ್ಸಿನಿಂದ ವಿಧಾನಸೌಧದ ಕಾರಿಡಾರ್ ನಿಂದ ಇಳಿದು ಹೋಗಿದ್ದಾರೆ. ಅವರ ಬದುಕು ನೆಮ್ಮದಿಯಾಗಿರಲಿ ಎಂದು ಹಾರೈಸೋಣ

Click to comment

Leave a Reply

Your email address will not be published. Required fields are marked *

Most Popular

To Top