Vishwaguru

ಕ್ವಿಟ್ ಇಂಡಿಯಾದಂತೆಯೇ ಈಗ ‘ಮಂದಿರ ಬಿಡಿ’ ಚಳವಳಿ!


ದೇವಸ್ಥಾನಗಳು ವಿಗ್ರಹಪೂಜೆಯ ತಾಣಗಳಲ್ಲ. ಹಿಂದೂಗಳು ವಿಗ್ರಹವನ್ನು ಪೂಜಿಸುವುದೂ ಇಲ್ಲ. ಪ್ರತೀ ವಿಗ್ರಹಕ್ಕೂ ಪ್ರಾಣಪ್ರತಿಷ್ಠೆಯನ್ನು ಮಾಡಿಯೋ ಅಥವಾ ಮಾನಸಿಕವಾಗಿ ಆ ವಿಗ್ರಹದೊಳಗೆ ಭಗವಂತನ ಇರುವಿಕೆಯನ್ನು ಗುರುತಿಸಿಯೋ ಆತ ಭಕ್ತಿಯಿಂದ ನಮಿಸುತ್ತಾನೆ. ಹೀಗಾಗಿ ಆ ವಿಗ್ರಹಗಳು ಜಡವಾಗಿರದೇ ಚೈತನ್ಯದ ಮೂತರ್ಿಯೇ ಆಗಿರುತ್ತದೆ. ಇದನ್ನೇ ಸ್ವಾಮಿ ವಿವೇಕಾನಂದರು ಖೇತ್ರಿಯ ರಾಜ ಮಂಗಳಸಿಂಗನಿಗೆ ತಿಳಿಸಲು ಯತ್ನಿಸಿದ್ದು. ದುರದೃಷ್ಟವೆಂದರೆ ಇದನ್ನು ಅರ್ಥಮಾಡಿಕೊಳ್ಳಲಾಗದ ಜನರು ಇಂದಿಗೂ ಇದ್ದಾರೆ. ಹಿಂದೂಗಳ ಮೂತರ್ಿಪೂಜೆಯನ್ನು ಆಡಿಕೊಳ್ಳುವ ಕೆಲವು ಮಂದಿ ತಮಗರಿವಿಲ್ಲದೆಯೇ ಕುತ್ತಿಗೆಗೆ ಚಿಹ್ನೆಯನ್ನು ತೂಗುಹಾಕಿಕೊಳ್ಳುವ ಮತ್ತು ಯಾವುದೋ ಒಂದು ದಿಕ್ಕಿನೆಡೆಗೆ ತಿರುಗಿ ನಿಂತು ಪ್ರಾರ್ಥನೆ ಸಲ್ಲಿಸುವ ಪ್ರಯತ್ನ ಮಾಡುತ್ತಾರೆ. ಇವೆಲ್ಲವೂ ವಿಗ್ರಹಾರಾಧನೆಯೇ. ಒಂದು ಹೆಜ್ಜೆ ಮುಂದೆಹೋಗಿ ಹೇಳಬೇಕಾದರೆ ಹಿಂದುವಿನ ಸಂಸ್ಕೃತಿ ದೇವಸ್ಥಾನದ ಸುತ್ತಲೂ ನಿಮರ್ಿಸಲ್ಪಟ್ಟಿರುವುದು ನಿಜವಾದರೂ ವೇದಕಾಲದಲ್ಲಿ ಈ ರೀತಿಯ ಮಂದಿರಗಳ ಕಲ್ಪನೆಯೇ ಇರಲಿಲ್ಲ. ಕಾಲಕ್ರಮದಲ್ಲಿ ಸಾಂಸ್ಕೃತಿಕವಾಗಿ ರಾಷ್ಟ್ರವೊಂದನ್ನು ರೂಪುಗೊಳಿಸುವಾಗ ಮಂದಿರಗಳು ತಲೆ ಎತ್ತಿದವು. ‘ದೇವರು ಮಂದಿರದಲ್ಲೇ ಇರುತ್ತಾನೇನು?’ ಎಂದು ಕೆಲವರು ಪ್ರಶ್ನೆ ಕೇಳುತ್ತಾರೆ. ‘ಎಲ್ಲೆಡೆಯೂ ಇರಬಲ್ಲ ಭಗವಂತ ಮಂದಿರದಲ್ಲೇಕೆ ಇರಲಾರ?’ ಎಂದು ಕೇಳಿದರೆ ಉತ್ತರಿಸಲಾಗದೇ ಚಡಪಡಿಸುತ್ತಾರೆ. ಅಲ್ಲಿನ ವಾತಾವರಣಕ್ಕೆ ಮನಸ್ಸನ್ನು ತಕ್ಷಣಕ್ಕೆ ಏರಿಸಿಕೊಂಡು ಹೊರಗಿನ ಜಂಜಡಗಳಿಂದ ದೂರಾಗುವ ಪ್ರಯತ್ನ ಮಂದಿರವಷ್ಟೇ. ತೀರಾ ಮಂದಿರಕ್ಕೆ ಹೋಗುವ ವಿಚಾರದಲ್ಲಿ ವಿಜ್ಞಾನವನ್ನು ಅರಸುವ ಸಾಹಸ ಬಿಟ್ಟು ಮಂದಿರದ ವಿನ್ಯಾಸ, ರೂಪುರೇಷೆ, ಜಾಗದ ಆಯ್ಕೆ ಇವುಗಳಲ್ಲಿರುವ ವಿಜ್ಞಾನವನ್ನು ಗುರುತಿಸಿಕೊಂಡರೆ ಸಾಕಷ್ಟಾಯ್ತು. ಮಂದಿರವೆನ್ನುವುದು ಶುದ್ಧ ಭಾವನೆಗಳ ಜಾಗೃತಿಯ ಕೇಂದ್ರ. ಅದು ತನಗಿಂತ ಶಕ್ತನೊಬ್ಬನೊಂದಿಗೆ ಅನುಸಂಧಾನ ನಡೆಯುವ ಜಾಗ. ಕೆಲವರು ಅಂಥದ್ದೊಂದು ಜಾಗವನ್ನು ಅರಸಿ ಬೆಟ್ಟವನ್ನೇರಿ ಕೂರುತ್ತಾರೆ. ಮತ್ತೂ ಕೆಲವರಿಗೆ ಮಂದಿರವೇ ಸಾಕಾಗುತ್ತದೆ.

ಅನೇಕ ಬಾರಿ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಂದಿರದ ಪಾತ್ರ ಬಲುದೊಡ್ಡದ್ದು. ತನಗಾದ ದುಃಖವನ್ನು, ಸಂಕಷ್ಟವನ್ನು ವ್ಯಕ್ತಿಯೊಬ್ಬ ನಿವೇದಿಸಿಕೊಳ್ಳುವುದು ಭಗವಂತನ ಬಳಿ. ಪ್ರತಿ ಬಾರಿಯೂ ತನಗೊಂದು ಸೂಚನೆ ಬಂದಿದೆ ಎಂದೇ ಆತ ಭಾವಿಸುತ್ತಾನೆ. ತನ್ನ ಮಾತನ್ನು ಭಗವಂತ ಕೇಳುತ್ತಾನೆ ಎಂಬುದೇ ಅವನಿಗೆ ಖುಷಿಕೊಡುವ ಸಂಗತಿ. ತನ್ನ ಸಂಕಟಕ್ಕೆ ಸೂಕ್ತ ಪರಿಹಾರ ಕೊಡುತ್ತಾನೆಂಬ ಭರವಸೆ ಕೂಡ. ಇದು ನಿಸ್ಸಂಶಯವಾಗಿ ಅವನ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿಯೇ ರಾಜ-ಮಹಾರಾಜರುಗಳು ಮಂದಿರವನ್ನು ವಿಶೇಷವಾಗಿ ನೋಡಿಕೊಂಡರು. ಅಗತ್ಯಬಿದ್ದಾಗ ಹೆಚ್ಚು ಜನ ಸಂತೃಪ್ತಿಯನ್ನು ಕಾಣುವ ಮಂದಿರಗಳಿಗೆ ಜಮೀನನ್ನು ದಾನವಾಗಿ ಕೊಟ್ಟರು, ಹಳ್ಳಿಗಳನ್ನು ಉಂಬಳಿಯಾಗಿ ನೀಡಿದರು. ಆ ಮೂಲಕ ಮಂದಿರದ ವ್ಯವಸ್ಥೆ ನಿರಾತಂಕವಾಗಿ ನಡೆಯಲಿ ಎಂಬ ಆಶಯ. ಇನ್ನೂ ಕೆಲವು ಬಾರಿಯಂತೂ ಮಂದಿರಗಳು ಸಾವಿರಾರು ಜನರಿಗೆ ಉದ್ಯೋಗ ಕೊಡಬಲ್ಲ ಕೇಂದ್ರಗಳಾಗಿ ಮಾರ್ಪಡುತ್ತಿದ್ದವು. ಹೊಯ್ಸಳರ ಕಾಲದ ಮಂದಿರಗಳನ್ನು ಕಣ್ಣಾಡಿಸಿ ನೋಡಿ. ಪ್ರತಿಯೊಂದು ಮಂದಿರವೂ ಭಿನ್ನ-ಭಿನ್ನ ಸ್ತರದ ನಾಲ್ಕಾರು ಸಾವಿರ ಜನ ನೂರಾರು ದಿನಗಳ ಕಾಲ ಕೆಲಸ ಮಾಡಿದ ನಂತರವೇ ನಿಮರ್ಾಣವಾಗಿರುವಂಥದ್ದು. ಸ್ಥಪತಿಗಳು, ಶಿಲ್ಪಿಗಳು, ಕಲ್ಲು ಹೊರುವವರು, ಅಡುಗೆ ಮಾಡುವವರು, ಲೆಕ್ಕಾಚಾರದವರು ಎಷ್ಟು ವಿಭಿನ್ನ ಸ್ತರದವರಿಗೆ ಒಂದು ಮಂದಿರ ಕೆಲಸ ಕೊಟ್ಟಿತು. ಅಷ್ಟೇ ಅಲ್ಲ, ಮಂದಿರದ ಕೆಲಸ ಮುಗಿದಮೇಲೆ ಅಲ್ಲಿ ಪಾಠಶಾಲೆ ನಡೆಸುವ, ಗೋಶಾಲೆ ನೋಡಿಕೊಳ್ಳುವ, ವೈದ್ಯವೃತ್ತಿ ಮಾಡುವ, ನ್ಯಾಯದಾನ ಮಾಡುವ, ಮಂದಿರದ ಪೂಜೆ-ಪುರಸ್ಕಾರಗಳನ್ನು ನಿರಂತರ ನಡೆಸುವ ಎಷ್ಟೊಂದು ಜನಕ್ಕೆ ಉದ್ಯೋಗ! ಮಂದಿರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಿದ್ದುದು ಹೀಗೆ. ಅದಕ್ಕೆ ಭಗವಂತನ ಸೇವೆ ಮಾಡಬೇಕೆನಿಸಿದವರೆಲ್ಲ ಮಂದಿರಕ್ಕೆ ಧಾವಿಸುತ್ತಿದ್ದರು, ಹಣ ಸುರಿಯುತ್ತಿದ್ದರು. ಅದು ಮಂದಿರದ ಮೂಲಕ ಸಮಾಜಕ್ಕೆ ಬಳಕೆಯಾಗಲಿ ಅಂತ. ಇದರಿಂದಾಗಿಯೇ ನಮ್ಮ ಮಂದಿರಗಳು ಸಂಪತ್ತಿನ ಕೇಂದ್ರಗಳಾಗಿದ್ದು.

ಇವೆಲ್ಲವೂ ಕ್ರೌರ್ಯವನ್ನೇ ಉಸಿರಾಡಿದ ಆಕ್ರಮಣಕಾರಿ ಮುಸಲ್ಮಾನರಿಗೆ ಹೇಗೆ ಗೊತ್ತಾಗಬೇಕು? ಸಂಪತ್ತನ್ನು ಕಂಡು ಕೇಳರಿಯದಿದ್ದ ಆ ಮಂದಿ ಮಂದಿರದಲ್ಲಿರುವ ರಾಶಿಯನ್ನು ಕಂಡು ಆಕ್ರಮಿಸಿದರು, ಧ್ವಂಸಗೊಳಿಸಿದರು. ಸಂಪತ್ತಿಗಾಗಿ ಅಲ್ಲಿನ ಭೂಮಿಯನ್ನು ಅಗೆದರು. ಮೂತರ್ಿಯ ಕೆಳಗೆ ಪ್ರತಿಷ್ಠಾಪನೆಯ ವೇಳೆ ಹುದುಗಿಸಿಡುವ ಚಿನ್ನವನ್ನು ಪಾಪಿಗಳು ಬಿಡಲಿಲ್ಲ. ಸಾವಿರಾರು ಮಂದಿರಗಳು ನೆಲಸಮವಾದವು. ಮೂತರ್ಿಗಳು ಅವರ ಕಾಲಡಿಯ ನೆಲಹಾಸಾಯ್ತು. ಕೆಲವರಂತೂ ತಮ್ಮನ್ನು ತಾವು ಬುತ್ಶಿಕನ್-ಮೂತರ್ಿಭಂಜಕರು- ಎಂದು ಕರೆದುಕೊಂಡು ತಾವು ಸಿಂಹಾಸನವೇರುವಾಗ ಈ ಮೂತರ್ಿಗಳನ್ನೇ ಮೆಟ್ಟಿಲು ಮಾಡಿಕೊಂಡಿದ್ದರು. ಇವುಗಳ ಮೂಲಕ ಹಿಂದೂಧರ್ಮವನ್ನು ನಾಶಮಾಡಿಬಿಡಬಹುದೆಂಬ ಕಲ್ಪನೆ ಅವರಿಗಿತ್ತು. ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ’ ಎಂದು ಹೇಳಿದ ನಾಡಿನವರು ನಾವು. ಸ್ಥಾವರ ನಾಶವಾಗುವಂಥದ್ದು, ಜಂಗಮ ಉಳಿಯುವಂಥದ್ದು ಎಂಬುದು ನಮಗೆ ಅರಿವಾಗದ ಸಂಗತಿಯೇನೂ ಅಲ್ಲ. ದೇಹವನ್ನೇ ದೇಗುಲ ಮಾಡಿಕೊಂಡು ಹೃದಯದಲ್ಲೇ ಭಗವಂತನನ್ನು ಪ್ರತಿಷ್ಠಾಪಿಸಿಕೊಂಡು ಹಿಂದೂಧರ್ಮವನ್ನು ಉಳಿಸಿಕೊಂಡುಬಿಟ್ಟೆವು. ತಿಪ್ಪರಲಾಗ ಹೊಡೆದರೂ ಹಿಂದೂಧರ್ಮದ ನಾಶ ಮುಸಲ್ಮಾನರಿಗೆ ಸಾಧ್ಯವಾಗಲೇ ಇಲ್ಲ. ಪಾಕಿಸ್ತಾನಕ್ಕೆ ತೃಪ್ತಿ ಪಟ್ಟುಕೊಂಡು ಅಲ್ಲಿ ಮಂದಿರಗಳನ್ನು ಧ್ವಂಸಗೊಳಿಸಿ ಪಟ್ಟ ಆನಂದವೇ ದೊಡ್ಡದ್ದು.


ಕ್ರಿಶ್ಚಿಯನ್ನರು ಗೋವೆಯಲ್ಲಿ ಮಂದಿರಗಳನ್ನು ಹೊಡೆದುರುಳಿಸಿದ, ಹಿಂದೂಗಳನ್ನು ಚಿತ್ರಹಿಂಸೆಗೆ ಗುರಿಪಡಿಸಿದ ಉದಾಹರಣೆಗಳಿವೆಯಾದರೂ ಒಟ್ಟಾರೆ ದೇಶದಲ್ಲಿ ಅವರು ಮಂದಿರಗಳ ನಾಶಮಾಡಿದ್ದು ಕಡಿಮೆಯೇ. ಅಲ್ಲಿದ್ದ ಸಂಪತ್ತನ್ನು ತಮ್ಮದಾಗಿಸಿಕೊಳ್ಳಬೇಕೆಂದೇ 1817ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಮಂದಿರಗಳನ್ನು ನಿಯಂತ್ರಿಸುವ ಕಾನೂನನ್ನು ಜಾರಿಗೆ ತೆಗೆದುಕೊಂಡು ಬಂತು. ಆ ಮೂಲಕ ಮಂದಿರದ ಹುಂಡಿಯ ಹಣದ ಮೇಲೆ, ಅಲ್ಲಿ ನಡೆಯುವ ಧಾಮರ್ಿಕ ವಿಧಿ-ವಿಧಾನದ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿತು. 23 ವರ್ಷಗಳ ಕಾಲ ನಿರಂತರ ಲೂಟಿ ಮಾಡಿದ ಮೇಲೆ ಲಂಡನ್ನಿನ ಹೌಸ್ ಆಫ್ ಕಾಮೆನ್ಸ್ನಲ್ಲಿ ಈ ಕುರಿತಂತೆ ಚಚರ್ೆಯಾಯ್ತು. ಮಿಷನರಿಗಳು ವಿಗ್ರಹಾರಾಧಕರ ಮಂದಿರವನ್ನು ಕ್ರಿಶ್ಚಿಯನ್ನರು ನಿರ್ವಹಿಸುವುದು ಧರ್ಮವಿರೋಧಿ ಎಂದರು. ಇದರ ಆಧಾರದ ಮೇಲೆ 1863ರಲ್ಲಿ ಮತ್ತೊಂದು ಕಾನೂನು ಜಾರಿಗೆ ತಂದು ಹಂತ-ಹಂತವಾಗಿ ಮಂದಿರಗಳನ್ನು ಅಲ್ಲಿನ ವಿಶ್ವಸ್ತ ಮಂಡಳಿಗೇ ಬಿಟ್ಟುಕೊಡಲಾಯ್ತು. ಹಾಗಂತ ಅವರ ಬಯಕೆ ಇಂಗಿಹೋಗಿತ್ತೆಂದೇನೂ ಅಲ್ಲ. 1925ರಲ್ಲಿ ಮತ್ತೆ ಇದೇ ಬಗೆಯ ಕಾನೂನನ್ನು ಜಾರಿಗೆ ತಂದು ಸಕರ್ಾರ ಹಿಂದೂ, ಮುಸ್ಲೀಂ ಮತ್ತು ಕ್ರಿಶ್ಚಿಯನ್ನರ ಪೂಜಾ ಸ್ಥಳಗಳನ್ನು ನಿಯಂತ್ರಿಸುವ ಆಲೋಚನೆ ಮಾಡಿತು. ಮುಸಲ್ಮಾನರು, ಕ್ರಿಶ್ಚಿಯನ್ನರ ಗಲಾಟೆಗೆ ಮಣಿದು ತಣ್ಣಗಾಯ್ತಾದರೂ ಹಿಂದೂ ಮಂದಿರಗಳ ನಿಯಂತ್ರಣಕ್ಕೆ ಮನಸ್ಸು ಮಾಡಿತು. ಈಗಿನಂತೇ ಆಗಲೂ ಜಾತಿ ವೈಷಮ್ಯ ಬೆಟ್ಟದಷ್ಟಿದ್ದುದರಿಂದ ಹಿಂದೂಗಳು ಒಟ್ಟಾಗಿ ಹೋರಾಟಕ್ಕೆ ಜಿಗಿಯಲೇ ಇಲ್ಲ. ಪರಿಣಾಮ ಮಂದಿರಕ್ಕೆ ಹೋಗುವುದು ಹಿಂದೂಗಳು, ಹುಂಡಿಗೆ ಹಣ ಹಾಕುವುದು ಹಿಂದೂಗಳು, ಮಂದಿರದಲ್ಲಿರುವ ಭಗವಂತನಿಗೆ ಶ್ರದ್ಧೆಯಿಂದ ನಡೆದುಕೊಳ್ಳುವುದು ಹಿಂದೂಗಳು ಆದರೆ ನಿಯಂತ್ರಣ ಮಾತ್ರ ಸಕರ್ಾರದಲ್ಲಿರುವ ಕ್ರಿಶ್ಚಿಯನ್ನರದ್ದು!

ಸ್ವಾತಂತ್ರ್ಯ ಬಂದ ಮೇಲಾದರೂ ಇದು ಬದಲಾಗಬಹುದೆಂದು ಅನೇಕರು ಭಾವಿಸಿದ್ದರು. ಹಿಂದೂ ದೇವರು ದೇವಾಲಯಗಳ ಕುರಿತಂತೆ ಅಸಡ್ಡೆ ತೋರುತ್ತಾ ದ್ರವಿಡ ಚಿಂತನೆಗಳಿಗೆ ನೀರೆರೆದು ಪೋಷಿಸುತ್ತಿದ್ದ ತಮಿಳುನಾಡು 1951ರಲ್ಲಿ ಅಲ್ಲಿನ ಮಂದಿರಗಳ ನಿಯಂತ್ರಣಕ್ಕೆ ಮನಸ್ಸು ಮಾಡಿತು. ಬ್ರಿಟೀಷರಾಗಲೀ ಆನಂತರದ ಭಾರತೀಯರಾಗಲೀ ಅತ್ಯಂತ ಹೆಚ್ಚು ಮಂದಿರಗಳನ್ನು ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದು ದಕ್ಷಿಣ ಭಾರತದ ಮಂದಿರಗಳನ್ನೇ. ಏಕೆ ಗೊತ್ತೇ? ಉತ್ತರ ಭಾರತದ ಮಂದಿರಗಳು ಅನೇಕ ಬಾರಿ ಆಕ್ರಮಣಕ್ಕೊಳಗಾಗಿ ಸಂಪತ್ತು ಸೂರೆಗೊಳ್ಳಲ್ಪಟ್ಟ ನಂತರ ಅಲ್ಲಿನ ಜನ ಮಂದಿರಗಳಲ್ಲಿ ನಿಧಿಸಂಗ್ರಹ ಮಾಡುವುದನ್ನೇ ಬಿಟ್ಟಿದ್ದಾರೆ. ದಕ್ಷಿಣ ಭಾರತಕ್ಕೆ ಆ ಸಮಸ್ಯೆ ಇರಲಿಲ್ಲ. ಹೀಗಾಗಿ ಇಂದಿಗೂ ಅತ್ಯಂತ ಹೆಚ್ಚಿನ ಸಂಪತ್ತಿನ ಕ್ರೋಢೀಕರಣವಾಗುವುದು ದಕ್ಷಿಣ ಭಾರತದಲ್ಲೇ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕನರ್ಾಟಕದ ದೊಡ್ಡ-ದೊಡ್ಡ ಮಂದಿರಗಳು ಸಕರ್ಾರದ ತೆಕ್ಕೆಗೆ ಹೋದವು. ಸುಪ್ರೀಂಕೋಟರ್ಿನಲ್ಲಿ ಈ ಕುರಿತಂತೆ ಅನೇಕ ಬಾರಿ ಚಚರ್ೆಯಾದಾಗಲೂ ನಿರ್ಣಯ ಸ್ಪಷ್ಟವಾಗಿಯೇ ಬಂದಿತ್ತು. ಯಾವುದಾದರೂ ಮಂದಿರದಲ್ಲಿ ಸಂಗ್ರಹಿತ ಹಣದ ಅವ್ಯವಹಾರ ಕಂಡುಬಂದರೆ ಸಕರ್ಾರ ಮಧ್ಯೆ ನುಗ್ಗಿ ಅದನ್ನು ಸರಿಪಡಿಸಿ ಕೆಲವು ತಿಂಗಳುಗಳ ನಂತರ ಮತ್ತೆ ಸ್ಥಳೀಯರಿಗೆ ಬಿಟ್ಟುಕೊಡಬೇಕು ಅಂತ. ಆದರೇನು? ಒಮ್ಮೆ ಇಲ್ಲಿನ ಹಣದ ರುಚಿ ನೋಡಿದ ಮೇಲೆ ಸಕರ್ಾರಗಳು ಬಿಟ್ಟುಹೋಗುವ ಮಾತೇ ಇಲ್ಲ. ತಮಿಳುನಾಡಿನ ದಂಡಯೂಥಪಾಣಿ ದೇವಸ್ಥಾನದ ವರದಿಯೊಂದು ತುಂಬ ಹರಿದಾಡುತ್ತಿತ್ತು. ಮಂದಿರದ ಆದಾಯದ ಶೇಕಡಾ 14ರಷ್ಟು ಆಡಳಿತ ವೆಚ್ಚವಾಗಿ ಖಚರ್ಾದರೆ, ಶೇಕಡಾ 4ರಷ್ಟು ಆಡಿಟ್ಗೆ ವ್ಯಯವಾಗುತ್ತಿತ್ತು, ಶೇಕಡಾ 40ರಷ್ಟು ಸಂಬಳಕ್ಕೆಂದು ಖಚರ್ಾದರೆ, ಶೇಕಡಾ 2ರಷ್ಟು ಮಾತ್ರ ದೇವರ ಪೂಜೆ, ಜಾತ್ರೆ, ಉತ್ಸವಗಳಿಗೆಂದು ಮೀಸಲಾಗಿರುತ್ತಿತ್ತು. ಶೇಕಡಾ 10ರಷ್ಟು ಹಣ ಕಮೀಷನರ್ ಕಾಮನ್ ಫಂಡ್ಗೆ ಹೋಗುತ್ತಿತ್ತು. ಈ ಕಾಮನ್ ಫಂಡ್ಗೆ ಇತರೆಲ್ಲ ದೇವಸ್ಥಾನಗಳಿಂದ ಬಂದ ಹಣದಿಂದ ಉಚಿತ ಅಕ್ಕಿ ಕೊಡುವ, ಸಾಮೂಹಿಕ ಮದುವೆ ಮಾಡಿಸುವ, ಮೌಲ್ವಿಗಳಿಗೆ ಸಂಬಳ ಕೊಡುವ ಪ್ರಸಿದ್ಧ ಯೋಜನೆಗಳನ್ನು ಸಕರ್ಾರ ಕೈಗೊಳ್ಳುತ್ತಿತ್ತು. ಅಂದರೆ ಕಷ್ಟಪಟ್ಟು ದುಡಿದ ಹಣವನ್ನು ಭಗವಂತನ ಹುಂಡಿಗೆ ಹಾಕೋದು ನಾವು, ಅದರ ಮಜಾ ಉಡಾಯಿಸೋದು ಮಾತ್ರ ಈ ಮಂದಿ! ಹೇಗೆ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಇರುವುದು ಎರಡೇ ಮಾರ್ಗ. ಒಂದೋ ನಾವು ಹುಂಡಿಗೆ ಹಣ ಬಿಡಬೇಕು, ಅಥವಾ ಸಕರ್ಾರದ ತೆಕ್ಕೆಯಿಂದ ಈ ಮಂದಿರಗಳನ್ನು ಬಿಡಿಸಿಕೊಳ್ಳಬೇಕು. ಇತ್ತೀಚೆಗಂತೂ ಮಂದಿರದ ಟ್ರಸ್ಟ್ಗಳು ಇತರೆಲ್ಲ ಟ್ರಸ್ಟ್ಗಳಂತೆ ಶೇಕಡಾ 85ರಷ್ಟು ಹಣ ಖಚರ್ು ಮಾಡಲಾಗದಿದ್ದರೆ ಸಕರ್ಾರಕ್ಕೆ ತೆರಿಗೆಯನ್ನೂ ಕಟ್ಟಬೇಕಾಗಿದೆ. ಹೀಗೆ ಖಚರ್ು ಮಾಡಲಾಗದಿದ್ದಾಗಲೇ ಸ್ಥಳೀಯ ಪುಢಾರಿಗಳು ಒತ್ತಡ ಹೇರಿ ಮಂದಿರಗಳ ಹಣವನ್ನು ತಮಗೆ ಬೇಕಾದವರಿಗೆ ಕೊಡಿಸಿಬಿಡುತ್ತಾರೆ. ಮುಂಬೈನ ಪ್ರಖ್ಯಾತ ಸಿದ್ಧಿವಿನಾಯಕ ಟ್ರಸ್ಟ್ನ ದೊಡ್ಡ ಮೊತ್ತದ ಹಣ ಮುಸ್ಲೀಂ ಟ್ರಸ್ಟ್ಗಳಿಗೆ, ಕ್ರಿಶ್ಚಿಯನ್ ಕಾನ್ವೆಂಟ್ಗಳಿಗೆ ಬಳಕೆಯಾಗಿದ್ದು ದೊಡ್ಡ ಗಲಾಟೆಯನ್ನೇ ಹುಟ್ಟುಹಾಕಿತ್ತು. ಹೌದಲ್ಲವೇ ಮತ್ತೇ? ನಮ್ಮ ದೇವಸ್ಥಾನಗಳ ಹಣವನ್ನು ಬಳಸಿ ಹಿಂದೂಗಳನ್ನೇ ಮತಾಂತರಗೊಳಿಸುವ ಜನರಿಗೆ ನಿಧಿ ಸಮರ್ಪಣೆ ಮಾಡುವುದೆಂದರೆ ಅನ್ಯಾಯವಲ್ಲವೇ? ಸಕರ್ಾರದ ಹಸ್ತಕ್ಷೇಪ ಎಲ್ಲಿಯವರೆಗೂ ಇದೆಯೆಂದರೆ ತಿರುಪತಿಯಂತಹ ದೊಡ್ಡ ದೇವಸ್ಥಾನಗಳಿಗೆ ಆಡಳಿತ ಮಂಡಳಿಯಲ್ಲಿ ಕ್ರಿಶ್ಚಿಯನ್ನರನ್ನು ನೇಮಕ ಮಾಡುವಷ್ಟು. ಸಹಿಸಿಕೊಳ್ಳೋದಕ್ಕೆ ಮಿತಿ ಬೇಕಲ್ಲ? ಹಾಗೆಂದೇ ಈಗ ಜನ ರೊಚ್ಚಿಗೆದ್ದಿರೋದು. ಎಂದಿನಂತೆ ಮುಸಲ್ಮಾನರು ದಲಿತರ ಹೆಗಲ ಮೇಲೆ ಬಂದೂಕಿಟ್ಟಿದ್ದಾರೆ. ದೇವಸ್ಥಾನಗಳನ್ನು ಮುಕ್ತಗೊಳಿಸುವ ಈ ಹೋರಾಟ ದಲಿತರನ್ನು ವಂಚಿಸುವ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಇಂದು ದಲಿತರು ಹಿಂದೂಗಳಲ್ಲಿ ಏಕರಸವಾಗಿ ಬೆರೆತುಬಿಟ್ಟಿದ್ದಾರೆ. ಅವರು ಸಾಕಷ್ಟು ಅಧ್ಯಯನ ಮಾಡಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಂತೂ ಆಗಮಶಾಸ್ತ್ರಗಳನ್ನೆಲ್ಲಾ ಓದಿಕೊಂಡು ಸಮರ್ಥ ಅರ್ಚಕರಾಗಿ ರೂಪುಗೊಂಡಿದ್ದಾರೆ. ಮುಸಲ್ಮಾನರಿಗೆ, ಕ್ರಿಶ್ಚಿಯನ್ನರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಇರೋದು ಇದೇ. ಅವರನ್ನು ಅಜ್ಞಾನಿಗಳಾಗಿ ಉಳಿಸಿ, ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ಇಷ್ಟೂ ವರ್ಷ ಮಾಡಿ ಸೋಲಿನ ಕೊನೆಯಹಂತಕ್ಕೆ ಬಂದು ನಿಂತಿದ್ದಾರೆ.

ದೇಶವ್ಯಾಪಿ ಕೂಗು ಈಗ ಮಂದಿರಗಳನ್ನು ಮುಕ್ತಗೊಳಿಸುವ ವಿಚಾರಕ್ಕೆ. ಸಕರ್ಾರ ರೈಲ್ವೇ, ವಿಮಾನ ಇವೆಲ್ಲವುಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವಾಗ, ವ್ಯಾಪಾರ ನಡೆಸುವುದು ಸಕರ್ಾರದ ಹೊಣೆಗಾರಿಕೆಯಲ್ಲಿಲ್ಲ ಎಂದು ಹೇಳುತ್ತಿರುವಾಗ ಮಂದಿರಗಳ ನಿರ್ವಹಣೆಯೂ ಅದರ ಹೊಣೆಯಲ್ಲ ಎಂದು ನೆನಪಿಸಬೇಕಲ್ಲವೇ? ಇದೇ ಸಕಾಲ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top