State

ಗೆಲುವು ಅಸಾಧ್ಯವಲ್ಲ, ಆದರೆ ಶ್ರಮ ಹಾಕಬೇಕಲ್ಲ!

ಕೊರೋನಾ ಎಲ್ಲಕ್ಕಿಂತ ಹೆಚ್ಚು ಬಾಗಿಸಿರುವುದು ವ್ಯಾಪಾರ-ಉದ್ದಿಮೆಗಳನ್ನೇ. ಕಳೆದ ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ ಗಾಬರಿ ಹುಟ್ಟಿಸುವಂತಿತ್ತು. ಈಗ ಸ್ವಲ್ಪ ಸಮಾಧಾನಕರವಾದ ಸ್ಥಿತಿಗೆ ಬಂದಿದ್ದೇವೆ. ಅಂಕಿ-ಅಂಶಗಳಲ್ಲಿ ವ್ಯಾಪಾರ-ಉದ್ದಿಮೆಗಳು ಸಾಮಾನ್ಯ ಸ್ಥಿತಿಯತ್ತ ಮರಳುತ್ತಿವೆ ಎಂಬುದು ಕಾಣುತ್ತಿದೆಯಾದರೂ ವಾಸ್ತವ ಸ್ಥಿತಿ ಅದಕ್ಕಿಂತಲೂ ಇನ್ನೂ ದೂರವಾಗಿಯೇ ಇದೆ. ಯಾವುದೋ ಒಂದು ಉದ್ದಿಮೆ ಸಂಕಟದಲ್ಲಿದೆ ಎಂದರೆ ಅದಕ್ಕೆ ಪೂರಕವಾದ ಅನೇಕ ಉದ್ದಿಮೆಗಳು ಕಣ್ಣೀರಿಡುತ್ತಿವೆ ಎಂದೇ ಅರ್ಥ. ಹೊಟೆಲ್ ಉದ್ದಿಮೆಯೊಂದು ನೆಲಕಚ್ಚಿತೆಂದರೆ ಅದನ್ನೇ ನಂಬಿಕೊಂಡ ಲಕ್ಷಾಂತರ ಉದ್ಯೋಗಿಗಳು ಬೀದಿಗೆ ಬರುತ್ತಾರೆ. ಅವರ ಕೊಳ್ಳುವಿಕೆಯ ಸಾಮಥ್ರ್ಯ ಕಡಿಮೆಯಾದರೆ ಮಾರುಕಟ್ಟೆಯಲ್ಲಿ ಅದು ಪ್ರತಿಫಲನವಾಗುತ್ತದೆ. ಸಿನಿಮಾ ಥಿಯೇಟರ್ಗಳು ಭಿಕೊ ಎನ್ನುತ್ತವೆ, ಸಾಮಾನ್ಯವರ್ಗದವರ ಮಾಲುಗಳು ಖಾಲಿ ಹೊಡೆಯುತ್ತವೆ, ಬಟ್ಟೆ ಕೊಳ್ಳುವವರಿರುವುದಿಲ್ಲ, ತರಕಾರಿ, ದಿನಸಿಗಳಿಗೆ ಬೇಡಿಕೆ ಇರುವುದಿಲ್ಲ. ಅವುಗಳಿಂದಾಗಿ ಮತ್ತೊಂದಷ್ಟು ಉದ್ಯೋಗಗಳಿಗೆ ಹೊಡೆತ. ಹೀಗೇ ಒಂದಕ್ಕೊಂದು ಸೇರಿಕೊಂಡಂತಾಗುವ ಸಮಸ್ಯೆಗಳು ಅನೇಕ ದಿನಗಳವರೆಗೆ ಬಾಗಿಸುತ್ತದೆ! ಈ ಹೊತ್ತಲ್ಲಿ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವವರ, ಹೊಸ ಉದ್ದಿಮೆಗಳನ್ನು ಆರಂಭಿಸುವವರ ಮನೋಸ್ಥೈರ್ಯ ಹೆಚ್ಚು-ಕಡಿಮೆ ಶೂನ್ಯವೇ ಆಗಿರುತ್ತದೆ. ಹೀಗಾಗಿಯೇ ಒಂದೆಡೆ ಸಕರ್ಾರಗಳು ಹಣಕಾಸಿನ ಸೌಲಭ್ಯವನ್ನು ವಿಸ್ತರಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದರೆ ಮತ್ತೊಂದೆಡೆ ತಳಮಟ್ಟದಲ್ಲಿ ಪ್ರೇರಣೆ ಕೊಟ್ಟು ಸಮಾಜಕ್ಕೆ ಶಕ್ತಿ ತುಂಬುವ ಮತ್ತು ಸವಾಲುಗಳನ್ನು ಸ್ವೀಕರಿಸುವ ಧೈರ್ಯ ನೀಡುವ ಕೆಲಸವೂ ಆಗಬೇಕಿದೆ. ಹೀಗೆಂದೇ ಬೆಂಗಳೂರಿನಲ್ಲೊಂದು ವಿಶೇಷವಾದ ಫಿಫ್ತ್ಪಿಲ್ಲರ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕೊರೋನಾ ಸಮಯದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ನಿಮ್ಮ ಐಡಿಯಾಗಳಿಗಲ್ಲ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿಯೇ ಇದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಒಬ್ಬೊಬ್ಬರದೂ ಒಂದೊಂದು ‘ಜರೂರು ಮಾತು’ ಅಂಕಣವೇ!


ಏಳನೇ ಕ್ಲಾಸು ಪಾಸು ಮಾಡಿಕೊಂಡ ಗೋವಿಂದ ಪೂಜಾರಿ ಎಲ್ಲ ದಕ್ಷಿಣ ಕನ್ನಡದ ತರುಣರಂತೆ ಮುಂಬೈಗೆ ಹೋಗಿ ಕೆಲಸ ಮಾಡಬೇಕು ಎಂದು ಕನಸು ಕಟ್ಟಿದವರೇ. ಆದರೆ ಮುಂಬೈಗೆ ಒಯ್ಯುವವರಾದರೂ ಬೇಕಲ್ಲ. ಸಂಬಂಧಿಕರೊಬ್ಬರ ಸಹಕಾರದಿಂದ ಹರಸಾಹಸ ಮಾಡಿ, ಮುಂಬೈ ಸೇರಿಕೊಂಡು, ಅಲ್ಲೊಂದು ಹೊಟೆಲಿನಲ್ಲಿ ತಟ್ಟೆ ತೊಳೆಯುವ ಕೆಲಸದಿಂದಾರಂಭಿಸಿ ಆನಂತರ ಸಪ್ಲೈಯರ್ ಆಗಿ, ಕೊನೆಗೆ ಅಡುಗೆಮನೆಯ ಜವಾಬ್ದಾರಿಯನ್ನು ತರುಣ ಹೊತ್ತ. ಸ್ವಲ್ಪ ದಿನಗಳಲ್ಲೇ ಸ್ವಂತ ಉದ್ದಿಮೆಯ ಆಸೆ ಚಿಗುರಿತು. ಕೂಡಿಟ್ಟಿದ್ದ ಹಣವನ್ನೆಲ್ಲ ಸೇರಿಸಿ ಕಿರಾಣಿ ಅಂಗಡಿಯೊಂದನ್ನು ಮುಂಬೈನಲ್ಲೇ ಆರಂಭಿಸಿದ. ಊಹಿಸಲಾಗದಷ್ಟು ನಷ್ಟವನ್ನು ಮೈಮೇಲೆಳೆದುಕೊಂಡ. ಮುಂದೇನು? ಮತ್ತದೇ ಅಡುಗೆಮನೆ, ಮತ್ತದೇ ಸೌಟು. ಒಳಗಿದ್ದ ಸ್ವಂತ ಉದ್ದಿಮೆಯ ತುಡಿತ ಮಾತ್ರ ಇಂಗಿರಲಿಲ್ಲ. ಈ ಬಾರಿ ಸಣ್ಣಪುಟ್ಟ ಹೊಟೆಲ್ಗಳಲ್ಲಲ್ಲದೇ ಗೋವಿಂದ ಪೂಜಾರಿ ಲಿ-ಮೆರಿಡಿಯನ್ನಂತಹ ದೊಡ್ಡ ಹೊಟೆಲ್ಗಳ ಅಡುಗೆಮನೆಗೆ ಕಣ್ಣು ಹಾಕಿದರು. ಅವರ ಕೈಗಳಲ್ಲಿದ್ದ ಜಾದು ಗಮನಿಸಿದ ಅಲ್ಲಿನ ಶೆಫ್ಗಳು ಅಡುಗೆಮನೆಯನ್ನು ಬಿಟ್ಟುಕೊಟ್ಟರು. ಏಳನೇ ತರಗತಿ ದಾಟಿರದಿದ್ದ ಬೈಂದೂರಿನ ಹುಡುಗ ಈಗ ಜಗತ್ತಿನ ಸಿರಿವಂತರಿಗೆ ಉಣಬಡಿಸುವ ಬಾಣಸಿಗನಾಗಿಬಿಟ್ಟಿದ್ದ! ಬದುಕು ಚೆನ್ನಾಗಿಯೇ ಇತ್ತು. ಆದರೆ ಸ್ವಂತ ಉದ್ದಿಮೆಯ ತುಡಿತವಿತ್ತಲ್ಲ, ಅದು ಹೀಗೆ ಬದುಕಲು ಬಿಡಲಿಲ್ಲ. ಮತ್ತೆ ಗಳಿಸಿದ ಹಣವನ್ನೆಲ್ಲ ಒಟ್ಟುಮಾಡಿ ಕಂಪೆನಿಯೊಂದಕ್ಕೆ ಅಡುಗೆ ಮಾಡಿಕೊಡುವ ‘ಶೆಫ್ಟಾಕ್’ ಎಂಬ ಕ್ಯಾಂಟೀನ್ ಆರಂಭಿಸಿದರು. ಒಂದು ಕಂಪೆನಿ ನಾಲ್ಕಾಯ್ತು, ಮುಂಬೈನಿಂದ ಹೈದರಾಬಾದಿಗೆ ಆಹ್ವಾನ ಬಂತು. ಅಲ್ಲಿನ ಕಂಪೆನಿಗಳಲ್ಲಿ ಕೆಲಸ ಆರಂಭವಾಯ್ತು, ಪೂಣಾಕ್ಕೆ ಬುಲಾವ್ ಬಂತು. ನೋಡುನೋಡುತ್ತಾ ಸಾವಿರಾರು ಮಂದಿ ತರುಣರಿಗೆ ಉದ್ಯೋಗ ಕೊಟ್ಟ ವೇದಿಕೆಯಾಯ್ತು ಶೆಫ್ಟಾಕ್. ಬದುಕು ಆಗಲೂ ಚೆನ್ನಾಗಿಯೇ ಇತ್ತು. ಸ್ವಂತ ಉದ್ಯಮವೂ ಆರಂಭವಾಗಿದ್ದರಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಉದ್ದಿಮೆಯನ್ನು ಮುಂದಿನ ಹಂತಕ್ಕೊಯ್ಯುವ ಮಹತ್ವಾಕಾಂಕ್ಷೆಯ ಬೀಜ ಮೊಳಕೆಯೊಡೆದುಬಿಟ್ಟಿತ್ತಲ್ಲ, ಗೋವಿಂದ ಪೂಜಾರಿ ಬೆಂಗಳೂರಿನತ್ತಲೂ ಮುಖ ಮಾಡಿದರು. ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೇಂದ್ರೀಕೃತ ಅಡುಗೆಮನೆಯ ಕಲ್ಪನೆಯನ್ನು ಕಟ್ಟಿಕೊಂಡು ಅನೇಕ ಕಂಪೆನಿಗಳಿಗೆ ಜೊತೆಯಾದರು. ಶೆಫ್ ಟಾಕ್ ಮನೆಮಾತಾಯ್ತು. ಈ ವೇಳೆಗೆ ಇಂದಿರಾ ಕ್ಯಾಂಟಿನ್ ಕಲ್ಪನೆ ಬಂದಾಗ ಟೆಂಡರ್ನಲ್ಲಿ ಭಾಗವಹಿಸಿದ್ದ ಎಲ್ಲರಲ್ಲೂ ಅತ್ಯಾಕರ್ಷಕವಾಗಿದ್ದವರು ಗೋವಿಂದ ಪೂಜಾರಿಯೇ. ಅದು ಅವರ ಬಾಹ್ಯರೂಪದಿಂದಲ್ಲ, ಬದಲಿಗೆ ಅವರ ಅಡುಗೆಮನೆಯನ್ನು ನಿಭಾಯಿಸುವ ರೀತಿಯಿಂದ. ಜೊತೆಗೆ ಅತ್ಯುತ್ಕೃಷ್ಟವಾದ ಊಟ-ತಿಂಡಿಯನ್ನು ಅತಿ ಕಡಿಮೆ ಬೆಲೆಗೆ ಕೊಡುವ ಅವರ ಸಾಮಥ್ರ್ಯದಿಂದ. ಮುಂಬೈನ ಅವರ ಅಡುಗೆಮನೆಗಳಿಗೆ ಭೇಟಿಕೊಟ್ಟ ಸಕರ್ಾರದ ಪರವಾದ ಅಧಿಕಾರಿಗಳು ಕ್ಯಾಂಟೀನ್ ನಡೆಸಲು ಯೋಗ್ಯವ್ಯಕ್ತಿ ಇವರೇ ಎಂಬುದನ್ನು ನಿರ್ಧರಿಸಿದ್ದರಲ್ಲದೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದರು. ನಿಸ್ಸಂಶಯವಾಗಿ ಗೋವಿಂದ್ ಪೂಜಾರಿಯವರ ಬದುಕಿನಲ್ಲಿ ಇದು ಮಹತ್ವದ ಅಂಗ. ಈ ವೇಳೆಗಾಗಲೇ 5000 ಜನರಿಗೆ ಉದ್ಯೋಗ ಕೊಟ್ಟಿದ್ದ ಪೂಜಾರಿಯವರು ನಾವೆ ಚೆನ್ನಾಗಿ ನಡೆಯುತ್ತಿದೆ ಎಂದಾಗಲೇ ಕೊರೋನಾದ ಸುನಾಮಿಗೆ ಸಿಕ್ಕಿಕೊಂಡರು! ಬೇರೆಯವರೆಲ್ಲ ಈ ಹೊತ್ತಲ್ಲಿ ಕೈಚೆಲ್ಲಿ ಕುಳಿತಿದ್ದಾಗ ದಶಕಗಳ ಕಾಲ ಜೊತೆಗಿದ್ದ ನೌಕರರನ್ನು ಬಿಡಲೊಪ್ಪದ ಗೋವಿಂದ ಪೂಜಾರಿಯವರು ತಿಂಗಳಿಗೆ 40 ರಿಂದ 50 ಲಕ್ಷ ರೂಪಾಯಿ ಹೊರೆಯನ್ನು ಹೊತ್ತುಕೊಂಡು ಅವರಿಗೆ ಬೆನ್ನೆಲುಬಾಗಿ ನಿಂತರು. ಸುಮ್ಮನಿರುವ ಜೀವವಲ್ಲವಲ್ಲ, ಹೀಗಾಗಿ ಈ ಹೊತ್ತಿನಲ್ಲೇ ಮೀನಿನ ಚಿಪ್ಸುಗಳನ್ನು ಮಾಡುವ ಆವಿಷ್ಕಾರ ಮಾಡಿದರು. ತಮ್ಮ ನೌಕರರನ್ನು ಕೆಲಸಕ್ಕೆ ಹಚ್ಚಿ ಈ ಚಿಪ್ಸ್ಗಳನ್ನು ತಯಾರಿಸಿ, ಪ್ಯಾಕೆಟ್ ಮಾಡಿಸಿ, ಮಾರುಕಟ್ಟೆಗಿಳಿಸುವ ಪ್ರಯತ್ನವನ್ನು ಈ ಹೊತ್ತಿನಲ್ಲಿಯೇ ಆರಂಭಿಸಿದ್ದು. ಕೊರೋನಾ ಸಂದರ್ಭದಲ್ಲಿ ಬದುಕು ಕಷ್ಟ ಎನ್ನುತ್ತಿದ್ದವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಹೊಸ ಕಲ್ಪನೆಯೊಂದಿಗೇ ಬಂದಿದ್ದಾರೆ ಗೋವಿಂದ ಪೂಜಾರಿ. ಹಾಗಂತ ಇಷ್ಟೇ ಆಗಿದ್ದರೆ ಬಲುವಿಶೇಷವೇನಿಲ್ಲ. ಅವರು ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಬಿಡುವಿಲ್ಲದ ಕಾರ್ಯದಲ್ಲಿ ಮಗ್ನವಾಗಿರುತ್ತಾರೆ. ಕೊರೋನಾ ಸಮಯದಲ್ಲಿ ಸಾವಿರಾರು ಕಿಟ್ಗಳನ್ನು ಮಾಡಿ ಅಗತ್ಯವಿರುವವರಿಗೆ ಹಂಚುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದಾರೆ. ಈಗಲೂ ಉದ್ದಿಮೆಯ ವಿಸ್ತಾರವನ್ನು ಬಯಸಿ ಬರುವ ತರುಣರಿಗೆ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತು ಅವರನ್ನು ಯಶಸ್ವಿ ಉದ್ದಿಮೆದಾರರನ್ನಾಗಿ ರೂಪಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ.


ಹಾಗಂತ ಇವರೊಬ್ಬರೇ ಅಲ್ಲ. ಈ ಕಾರ್ಯಕ್ರಮದಲ್ಲಿ ಬಂದಿದ್ದ ಎಸ್ಆರ್ಕೆ ಲ್ಯಾಡರ್ನ ಮಾಲಿಕರಾದ ಕೇಶವ್ ಅಮಾಯಿ ಕಂಪೆನಿಯನ್ನು ಆರಂಭಿಸುವಾಗ ಮಂದ ದೃಷ್ಟಿಯನ್ನು ಹೊಂದಿದ್ದರು. ಇಂದು ಅವರಿಗೆ ಪೂರಾ ಕಣ್ಣು ಕಾಣುವುದೇ ಇಲ್ಲ. ಆದರೆ ಕೃಷಿಕರಿಗೆ ಬೇಕಾಗುವ ಉತ್ಪನ್ನಗಳನ್ನು ತಯಾರಿಸಿ, ತಲುಪಿಸುವಲ್ಲಿ ಮಾರುಕಟ್ಟೆಯಲ್ಲೇ ಅವರು ಅಗ್ರಣಿಗಳು. ಅವರ ದೂರದೃಷ್ಟಿ ಮತ್ತು ನಿಖರ ಚಿಂತನೆ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಶ್ರಮ ಮತ್ತು ಅದೃಷ್ಟ ಇವೆರಡರಲ್ಲಿ ಗೆಲುವು ತಂದುಕೊಡುವುದು ಯಾವುದು ಎಂದದ್ದಕ್ಕೆ ಮುಲಾಜಿಲ್ಲದೇ ಶ್ರಮ ಎಂದಿದ್ದರು ಅವರು. ಉದ್ಯೋಗವನ್ನು ಬಿಟ್ಟು ಈ ರೀತಿ ಸ್ವಂತ ಉದ್ದಿಮೆಗೆ ಪ್ರೇರಣೆ ಕೊಟ್ಟಿದ್ದು ಯಾವ ಶಕ್ತಿ ಎಂಬುದಕ್ಕೆ ‘ಅನಿವಾರ್ಯತೆ’ ಎಂದರು. ಉದ್ದಿಮೆಯೊಂದನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೇರಿಸಲು ಏನು ಮಾಡಬೇಕು ಎಂದಿದ್ದಕ್ಕೆ ‘ಅಪಡೇಟ್ ಆಗುತ್ತಿರಿ’ ಎಂದರು. ಯಾವುದೂ ಒಂದು ಪದವನ್ನು ಮೀರದ ಉತ್ತರ. ಆದರೆ ಪುಟಗಟ್ಟಲೆ ವಿವರಿಸಬಲ್ಲಷ್ಟು ಅಂತಃಸತ್ವವನ್ನು ಹೊಂದಿರುವಂಥದ್ದು! ಹೊರಗಿನ ಕಂಗಳನ್ನು ಅವರು ಕಳೆದುಕೊಂಡಿರಬಹುದು, ಆದರೆ ಬದುಕಿನ ಹಾದಿಯಲ್ಲಿ ಅಂತರ್ದೃಷ್ಟಿಯನ್ನು ಸಾಕಷ್ಟು ಬೆಳೆಸಿಕೊಂಡುಬಿಟ್ಟಿದ್ದಾರೆ. ಈಗಲೂ ಕೃಷಿ ಉಪಕರಣಗಳ ವಿನ್ಯಾಸಗಳನ್ನು ತಾವೇ ಮುಟ್ಟಿನೋಡಿ ನಿರ್ಧರಿಸುವಂತವರು ಕೇಶವ್ಜಿ!

ಎಲ್ಲಕ್ಕಿಂತಲೂ ಅಚ್ಚರಿ ಎನಿಸುವ ಬದುಕು ರುಕ್ಮಾಂಗದ ಜಯತೀಥರ್ಾಚಾರ್ ಅವರದ್ದು. ಕಾಂಡಿಮೆಂಟ್ಸ್ ಉದ್ಯಮವನ್ನು ಆರಂಭಿಸಿದ ಇವರು ಚೆನ್ನಾಗಿಯೇ ಕೈಸುಟ್ಟುಕೊಂಡರು. ಹಠ ಬಿಡಲಿಲ್ಲ. ಮತ್ತೊಂದು ಉದ್ದಿಮೆಗೆ ಕೈ ಹಾಕಿದರು. ಅಲ್ಲಿ ವಿಧಿ ಬಿಡಲಿಲ್ಲ, ಮತ್ತೆ ಕೈಸುಟ್ಟುಕೊಂಡರು. ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಂದು ಉದ್ದಿಮೆಯನ್ನು ಆರಂಭಿಸಿದರು. ಅಲ್ಲೂ ಸೋಲು ಆವರಿಸಿಕೊಂಡಿತು. ಇನ್ನು ಉದ್ಯಮವೆನ್ನುವುದು ತನ್ನ ಪಾಲಿಗೆ ಹೊಂದುವುದಿಲ್ಲ ಎಂದು ನಿರ್ಧರಿಸಿ ಒಂದೆಡೆ ಕೆಲಸಕ್ಕೆ ಸೇರಿಕೊಂಡರು. ಅದು ಚೆನ್ನಾಗಿಯೆ ನಡೆದಿತ್ತು. ಆದರೆ ಸ್ವಂತ ಉದ್ಯಮದ ಹುಚ್ಚು ಮಾತ್ರ ಬಿಟ್ಟು ಹೋಗಿರಲಿಲ್ಲ. ರುಕ್ಮಾಂಗದರು ಬೇಕರಿಯೊಂದನ್ನು ಬೆಂಗಳೂರಿನ ಜಯನಗರದಲ್ಲಿ ಆರಂಭಿಸಿದರು. ಕೆಲವೇ ದಿನಗಳಲ್ಲಿ ಕೊರೊನಾ ಮಾರಿ ಆವರಿಸಿಕೊಂಡುಬಿಟ್ಟಿತು. ವಿಧಿ ಇಲ್ಲೂ ಅಟ್ಟಹಾಸ ಮೆರೆದಿದ್ದ. ಆದರೆ ರುಕ್ಮಾಂಗದರ ಇಚ್ಛಾಶಕ್ತಿಯ ಮುಂದೆ ವಿಧಿಯೂ ತಲೆಬಾಗಬೇಕಾಯ್ತು. ಪೊಲೀಸರನ್ನು ಭೇಟಿಮಾಡಿದ ಇವರು ‘ಈಗತಾನೇ ಆರಂಭಿಸಿರುವ ಈ ಅಂಗಡಿಗೆ ಸ್ವಲ್ಪ ಕಾಲಾವಕಾಶ ಕೊಡಿ’ ಎಂದು ಕೇಳಿಕೊಂಡು ದಿನಕ್ಕೆ ಎರಡು-ಮೂರು ಗಂಟೆ ಅಂಗಡಿಯನ್ನು ತೆರೆಯುತ್ತಿದ್ದರು, ಕ್ರಮೇಣ ನಾಲ್ಕು ಗಂಟೆ, ಆರು ಗಂಟೆಗೆ ಸಮಯ ವಿಸ್ತಾರಮಾಡಲ್ಪಟ್ಟಿತು. ಪೊಲೀಸರಿಗೂ ತಿಂಡಿ-ತೀರ್ಥಕ್ಕೆ ಏನಾದರೂ ವ್ಯವಸ್ಥೆ ಬೇಕಿದ್ದರಿಂದ ಈ ಅಂಗಡಿಯನ್ನು ಅವರು ಉಳಿಯಗೊಟ್ಟರು. ವಿಧಿ ಕೊರೋನಾ ಮೂಲಕ ಎರಗಿದ್ದರೂ ಆ ಹೊತ್ತಲ್ಲಿ ಇವರಿಗೆ ಪ್ರತಿಸ್ಪಧರ್ಿಗಳೇ ಇಲ್ಲದಿದ್ದುದರಿಂದ ಜನ ಇವರೆಡೆಗೆ ಧಾವಿಸಿ ಬಂದರು. ಇವರ ಕೈ ರುಚಿಯನ್ನು ಕಂಡು ಬೆರಗಾದರು, ಲಾಕ್ಡೌನ್ ನಿಯಮಗಳು ಪೂರ್ಣ ಸಡಿಲಗೊಳ್ಳುವ ವೇಳೆಗೆ ರುಕ್ಮಾಂಗದರ ಬೇಕರಿ ಜನರ ಆಕರ್ಷಣೆಯ ಕೇಂದ್ರವಾಗಿಬಿಟ್ಟಿತ್ತು. ಅಷ್ಟೂ ವರ್ಷಗಳ ಅನುಭವವನ್ನು ಇಂದು ಅವರು ಉಪಯೋಗಿಸಿಕೊಂಡು ಜನರಿಗೆ ಬೇಕಾದ ತಿಂಡಿ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎಷ್ಟು ಬಾರಿ ಸೋತರೂ ಒಳಗಿರುವ ಛಲ ಮತ್ತು ತುಡಿತಗಳು ಒಂದು ದಿನ ಗೆದ್ದೇ ಗೆಲ್ಲಿಸುತ್ತದೆ ಎಂಬುದಕ್ಕೆ ಇವರಿಗಿಂತ ಉದಾಹರಣೆ ಮತ್ತೊಂದಿಲ್ಲ.


ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೀಡಿಯಾ ಮಾಸ್ಟರ್ನ ಮೂಲಕ ಮನೆ ಮಾತಾದ ಎಂ.ಎಸ್ ರಾಘವೇಂದ್ರ, ಕುಂದಾಪುರದಿಂದ ಬಂದು ಬೆಂಗಳೂರಿನ ಹೊಟೆಲ್ನಲ್ಲಿ ಕೆಲಸ ಮಾಡುತ್ತ ಕೊನೆಗೊಂದು ದಿನ ಫ್ಯಾಬ್ರಿಕೇಶನ್ ಉದ್ದಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಇಂದು 25 ಕೋಟಿಯ ವಹಿವಾಟು ನಡೆಸುತ್ತಿರುವ ರವಿ ಕುಲಾಲ್, ದ್ವಿತೀಯ ಪಿಯುಸಿಯನ್ನು ಮನೆಯ ಚೌಕಟ್ಟುಗಳ ಕಾರಣದಿಂದ ದಾಟಲಾಗದೇ ಜೇನು ಮಾರಾಟದ ಮೂಲಕ ಸ್ವಂತ ಉದ್ದಿಮೆ ಆರಂಭಿಸಿ ಇಂದು ಜಾಗತಿಕ ಮಟ್ಟಕ್ಕೆ ಬೆಳೆದಿರುವ ಕೊಡಗಿನ ಹೆಣ್ಣುಮಗಳು ಛಾಯಾ ನಂಜಪ್ಪ, ಇವರೆಲ್ಲರೂ ಪ್ರೇರಣೆಯ ಕೇಂದ್ರವೇ ಆಗಿದ್ದರು.


ಪೆಯರಿಯನ್ ಸವರ್ಿಸಸ್ನ ಮೂಲಕ ಐದು ರಾಷ್ಟ್ರಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಆಥರ್ಿಕ ವಹಿವಾಟನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಗುರುನಾಥರದ್ದು ರೋಚಕವಾದ ಕಥೆಯೇ. ಸಿಎ ಮುಗಿಸಿಕೊಂಡರೂ ಭ್ರಷ್ಟ ವ್ಯವಸ್ಥೆಯಲ್ಲಿ ಬಲವಾಗಿ ಕಾಲೂರಲಾಗದೇ, ದುಬೈಗೆ ಹೋಗಿ ಹನ್ನೊಂದೇ ದಿನಗಳಲ್ಲಿ ಅಲ್ಲಿನ ಕೆಲಸದ ಶೈಲಿಗೆ ಹೊಂದಿಕೊಳ್ಳಲಾಗದೇ, ಮೊಟೊರೊಲಾ ಕಂಪೆನಿಯಲ್ಲಿ ಕೆಲಸ ಮಾಡುತ್ತ ತನ್ನ ಖಡಕ್ಕುತನದಿಂದಾಗಿ ಅಲ್ಲಿಯೂ ಕೆಲಸ ಬಿಟ್ಟು ಕೊನೆಗೆ ಆರಂಭಿಸಿದ್ದು ಈ ಸಂಸ್ಥೆ. ಇಂದು ಕಂಪೆನಿಯೊಂದು ನಿಮರ್ಾಣವಾಗಬೇಕಿದ್ದರೂ ಅಥವಾ ಬಾಗಿಲು ಮುಚ್ಚಿ ಹೋಗಬೇಕೆಂದಿದ್ದರೂ ಗುರುನಾಯಕರ ಸಹಾಯ ಬೇಕೇಬೇಕು. ತಮ್ಮ ಕಂಪೆನಿಯನ್ನು ಕಟ್ಟಿರುವ ರೀತಿ, ಅದಕ್ಕೆ ಅವರು ಬಳಸಿಕೊಂಡ ಮಾರ್ಗ, ಆಯ್ದುಕೊಂಡ ಜೊತೆಗಾರರು, ಇವೆಲ್ಲವೂ ರೋಚಕವಾದ ಕಥನ. ಇಡಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಉದ್ದಿಮೆದಾರರು ಈ ಕಥೆಗಳನ್ನೆಲ್ಲ ಕೇಳುತ್ತ ಹೊಸದೊಂದು ಲೋಕಕ್ಕೆ ಪ್ರವೇಶಿಸಿದ ಅನುಭವ ಪಡೆದುಕೊಂಡರು. ಯಾವುದನ್ನೂ ಕೈಚೆಲ್ಲಬೇಕಾದ ಅವಶ್ಯಕತೆ ಇಲ್ಲ ಎಂಬುದು ಎಲ್ಲರ ಕಣ್ಣಿಗೂ ರಾಚುವಂತಿತ್ತು. ಕೆಲವರಂತೂ ಹೊಸ ಉದ್ದಿಮೆ ಆರಂಭಿಸುವ ತಮ್ಮ ಉದ್ದಿಮೆಯನ್ನು ಮುಂದಿನ ಹಂತಕ್ಕೊಯ್ಯುವ ಆಕಾಂಕ್ಷಿಗಳಿಗೆ ಪೂರ್ಣ ಬೆಂಬಲ ಕೊಡುವುದಾಗಿ ಭರವಸೆಯನ್ನು ಕೊಟ್ಟರು. ಕೊರೋನಾ ಕಾಲದಲ್ಲಿ ಇಂಥದ್ದೊಂದು ಕಾರ್ಯಕ್ರಮ ಭರವಸೆಗಳನ್ನು ಕಳೆದುಕೊಂಡಿದ್ದವರಿಗೆ ನಿರೀಕ್ಷೆ ಹುಟ್ಟಿಸಬಲ್ಲಂಥದ್ದಾಗಿತ್ತು. ಅತಿಥಿಗಳಲ್ಲೂ ಭಾಗವಹಿಸಿದವರಲ್ಲೂ ತೃಪ್ತಿ ತಂದ ಕಾರ್ಯಕ್ರಮವಾಗಿತ್ತು ಇದು.

ಅಂದಹಾಗೆ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದವರು ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನಗಳು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top