Tech

ಜಗತ್ತನ್ನೇ ಬೆರಗುಗೊಳಿಸಿದೆ ಭಾರತದ ವಿಜ್ಞಾನಿಗಳ ಈ ಸಾಧನೆ..

ಭಾರತ ತಾಂತ್ರಿಕ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವುದು ಇತ್ತೀಚೆಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಯುದ್ಧ ಸಂಬಂಧಿ ತಾಂತ್ರಿಕತೆಯಲ್ಲಿ ಭಾರತ ಅಗ್ರಣಿಯಾಗಿ ನಿಲ್ಲುತ್ತಿರುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಕಳೆದ ಕೆಲವಾರು ತಿಂಗಳುಗಳಿಂದಲೂ ಭಾರತದ ಸಿಎಸ್ಐಒ-ಕೇಂದ್ರೀಯ ವೈಜ್ಞಾನಿಕ ಉಪಕರಣ ಸಂಘಟನೆ ಯುದ್ಧ ವಿಮಾನಗಳಿಗೆ ಸಂಬಂಧ ಪಟ್ಟ ಒಂದು ವಿಶೇಷ ತಂತ್ರಜ್ಞಾನದ ಅಭಿವೃದ್ಧಿಗೆ ತೊಡಗಿತ್ತು. ಯುಕೆ, ಅಮೆರಿಕಾ, ಫ್ರಾನ್ಸ್ ಮತ್ತು ಇಸ್ರೇಲುಗಳು ಈ ತಂತ್ರಜ್ಞಾನವನ್ನು ಭಾರತಕ್ಕೆ ಕೊಡುವುದನ್ನು ನಿರಾಕರಿಸಿದ್ದವು. ಆದರೆ ಈ ತಾಂತ್ರಿಕ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಆಸಕ್ತಿ ತೋರಿಸಿದ್ದವು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿಎಸ್ಐಒ ಯಾವ ತಂತ್ರಜ್ಞಾನವನ್ನು ಈ ರಾಷ್ಟ್ರಗಳು ನಮಗೆ ಕೊಡುವುದಿಲ್ಲವೆಂದು ಹೇಳಿದ್ದವೋ ಆ ತಂತ್ರಜ್ಞಾನವನ್ನು ತಾನೇ ಅಭಿವೃದ್ಧಿಪಡಿಸುವ ಮೂಲಕ ಹೊಸ ವಿಕ್ರಮವನ್ನು ಮೆರೆದಿದೆ!

ಸಿಎಸ್ಐಒ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವನ್ನು ‘ಹೆಡ್-ಅಪ್ ಡಿಸ್‌ಪ್ಲೇ’ ಎಂದು ಕರೆಯುತ್ತಾರೆ. ವಾಸ್ತವವಾಗಿ ಸೂಪರ್ ಸೋನಿಕ್ ವಿಮಾನಗಳನ್ನು ಚಲಾಯಿಸುವುದು ಸುಲಭದ ಸಂಗತಿಯಲ್ಲ. ಈ ವಿಮಾನಗಳು ಅತ್ಯಂತ ವೇಗವಾಗಿ ಮುನ್ನುಗ್ಗುವಾಗ ವಿಮಾನಕ್ಕೆ ಸಂಬಂಧಪಟ್ಟಂಥ ಅನೇಕ ಸೂಕ್ಷ್ಮ ಸಂಗತಿಗಳು ಅನಲಾಗ್ ಸಿಗ್ನಲ್ ಗಳಾಗಿ ಕಾಕ್ ಪಿಟ್ ಎದುರಿಗೆ ಕಾಣಿಸುತ್ತಿರುತ್ತವೆ. ಪ್ರತಿ ಬಾರಿ ವಿಮಾನದ ಪೈಲಟ್ ತಾನು ತನ್ನ ಕಣ್ಣನ್ನು ವಿಂಡ್ ಶೀಲ್ಡ್ ನಿಂದ ಪಕ್ಕಕ್ಕೆ, ಸರಿಸಿ ಈ ಅನಲಾಗ್ ಸಿಗ್ನಲ್ ಗಳನ್ನು ನೋಡಿ, ಮತ್ತೊಮ್ಮೆ ವಿಮಾನದ ಹಿಡಿತವನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಮಾಡುತ್ತಿರಬೇಕು. ಆದರೆ, ಈ ಹೊಸ ಹೆಡ್-ಅಪ್ ಡಿಸ್‌ಪ್ಲೇ ತಂತ್ರಜ್ಞಾನದಿಂದಾಗಿ ಕಣ್ಣಿನ ಎದುರಿಗೆ ಡಿಜಿಟಲ್ ಸಿಗ್ನಲ್ ಗಳ ರೂಪದಲ್ಲಿ ವಿಂಡ್ ಶೀಲ್ಡ್ ನ ಮೇಲೆ ಈ ಎಲ್ಲ ಮಾಹಿತಿಗಳೂ ಗೋಚರವಾಗುತ್ತವೆ. ಈ ಕಾರಣದಿಂದ ಸೂಪರ್ ಸೋನಿಕ್ ವಿಮಾನಗಳನ್ನು ಚಲಾಯಿಸುವುದು ಚಾಲಕನಿಗೆ ಅತೀವ ಸುಲಭವೆನಿಸುತ್ತದೆ.

ಸದ್ಯದಲ್ಲೇ ಭಾರತ ಈ ತಂತ್ರಜ್ಞಾನವನ್ನು ತನ್ನ ಯುದ್ಧ ವಿಮಾನಗಳಲ್ಲಿ ಅಳವಡಿಸಲಿದೆ. ಆಪ್ಟಿಕಲ್ ಸಾಧನಗಳು ಮತ್ತು ವ್ಯವಸ್ಥೆ ವಿಭಾಗದ ಮುಖ್ಯ ವಿಜ್ಞಾನಿ ಡಾ. ವಿನೋದ್ ಕರಾರ್ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂಥ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ರೂಪಿಸಿದ ಈ ಯಂತ್ರ ಭಿನ್ನ ಭಿನ್ನ ಮೋಡ್ ಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಇತರೆ ಯಂತ್ರಗಳು ಕೈ ಕೊಟ್ಟಾಗಲೂ ಅದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಂತಿದೆ.‌ ಈ ಯಂತ್ರದ ನಿಖರತೆ, ವಿಸ್ತಾರವಾಗಿ ಮತ್ತು ಸ್ಫುಟವಾಗಿರುವ ಡಿಸ್ಪ್ಲೇಗಳು ಭಾರತದ ಯಂತ್ರವನ್ನು ಜಾಗತಿಕ ಮಟ್ಟದಲ್ಲಿ ಅತಿ ವಿಶಿಷ್ಟವಾಗಿಸಿವೆ.
ಭಾರತ ಈ ಬಗೆಯ 68 ಯಂತ್ರಗಳನ್ನು ನಿರ್ಮಿಸಿದ್ದು ಪಂಚಕುಲಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇದಕ್ಕೆ ಕೈ ಜೋಡಿಸಿದೆ. ಭಾರತ ನಿರ್ಮಿಸಿದ ಈ ಯಂತ್ರ ಇತರೆ ರಾಷ್ಟ್ರಗಳ ಇದೇ ಬಗೆಯ ಯಂತ್ರಕ್ಕಿಂತ 40 ಲಕ್ಷ ರೂಪಾಯಿ ಕಡಿಮೆ ಬೆಲೆ ಹೊಂದಿದೆ.

ಭಾರತವೀಗ ಇಂತಹ ಕ್ಲಿಷ್ಟಕರ, ಆಧುನಿಕ ತಂತ್ರಜ್ಞಾನದ ರಚನೆ ಮತ್ತು ನಿರ್ಮಾಣ ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ ಎಂದು ಸಿಎಸ್ಐಒನ ನಿರ್ದೇಶಕ ಆರ್.ಕೆ ಸಿನ್ಹಾ ಅವರು ತಿಳಿಸಿದ್ದಾರೆ. ಭಾರತ ತಾನು ಅಭಿವೃದ್ಧಿಪಡಿಸಿರುವಂತಹ ಈ ತಂತ್ರಜ್ಞಾನ ಜಗತ್ತಿನ ಇತರೆ ಎಲ್ಲಾ ಈ ಮಾದರಿಯ ತಂತ್ರಜ್ಞಾನಗಳಿಗಿಂತಲೂ ವಿಶೇಷವಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.
ಹೆಡ್-ಅಪ್ ಡಿಸ್ ಪ್ಲೇ ರೀತಿಯದ್ದೇ ಪ್ಲಾಟ್ ಡಿಸ್ ಪ್ಲೇ ಯುನಿಟ್ ಗಳನ್ನು ತಯಾರಿಸಲಾಗುತ್ತಿದೆ.
ಯುದ್ಧ ವಿಮಾನಗಳಿಗೆ ಹೆಲ್ಮೆಟ್ ಮೌಂಟೆಡ್ ಡಿಸ್ ಪ್ಲೇ ಮತ್ತು ಸರಿಯಾಗಿ ಗುರಿಯಿಡಲು ಸಹಾಯ ಮಾಡುವ ಗನ್ ಸೈಟ್ ಗಳನ್ನು ತಯಾರು ಮಾಡುವ ಯೋಜನೆಯೂ ಸಿಎಸ್ಐಒ ನ‌ ಮುಂದಿದೆ.

-ಬಂಗಾರ

2 Comments

2 Comments

Leave a Reply

Your email address will not be published. Required fields are marked *

Most Popular

To Top