History

ತುಂಬಿದ ಸಭೆಯಲ್ಲಿ ಗವರ್ನರ್ ಜಾಕ್ಸನ್ ಮೇಲೆ ಗುಂಡು ಹಾರಿಸಿದ ಬೀನಾದಾಸ್!

“ನನ್ನ ತಂದೆ ದೇಶದ್ರೋಹಿಗಳನ್ನು ನನ್ನ ಮನೆಯಲ್ಲಿ ಬೆಳೆಸಲಿಲ್ಲ’ ಎಂದು‌ ಬ್ರಿಟೀಷರಿಗೆ, ಮುಖ ಮುರಿಯುವಂತೆ ಖಡಕ್ಕಾಗಿ ಉತ್ತರ ನೀಡಿದವಳು ಬೀನಾದಾಸ್. ಹೌದು, ಬೀನಾದಾಸ್‌ರನ್ನು ಗವರ್ನರ್ ಜ್ಯಾಕ್ಸನ್‌ನನ್ನು ಕೊಲ್ಲಲು ಮುಂದಾದ ಆರೋಪದ ಮೇಲೆ ಬಂಧಿಸಲಾಗಿತ್ತು. ತಂದೆಯನ್ನು ಮುಂದೆ ಕೂರಿಸಿಕೊಂಡು ಆಕೆಗೆ ಕ್ರಾಂತಿಕಾರ್ಯದ ಕುರಿತು ಮಾಹಿತಿ ಕೊಡುವಂತೆ ಪುಸಲಾಯಿಸಿದಾಗ ಬೀನಾದಾಸ್ ಬಾಯಿಂದ ಬಂದ ನುಡಿಗಳಿವು. 


ಬೀನಾದಾಸ್ ಚಿತ್ತಗಾಂಗ್‌ನ ಹೆಣ್ಣುಮಗಳು. ಆಗಸ್ಟ್ 4, 1911ರಂದು ಜನಿಸಿದ ಈಕೆಯ ತಂದೆ ಸುಭಾಷರಿಗೆ ಚಿಕ್ಕಂದಿನಲ್ಲೇ ರಾಷ್ಟ್ರೀಯ ವಿಚಾರಧಾರೆಗಳಿಂದ ಪ್ರಭಾವಿಸಿದ್ದ ಬೇಣಿ ಮಾಧವ್ ದಾಸರು. ಚಿಕ್ಕಂದಿನಿಂದಲೂ ರಾಷ್ಟ್ರೀಯತೆಯ ವಾತಾವರಣದಲ್ಲಿ ಬೆಳೆದ ಬೀನಾ ಸಹಜವಾಗಿಯೇ ತಾಯ್ನಾಡಿನ ಮುಕ್ತಿಗಾಗಿ ಕಾರ್ಯ ನಿರ್ವಹಿಸುವ ಸಂಕಲ್ಪ ತೊಟ್ಟಿದ್ದಳು. ಕಲ್ಕತ್ತಾದ ಡಯೊಸೆಸನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಮೆಟ್ರಿಕ್ಯುಲೇಷನ್ ಪರೀಕ್ಷೆಗಾಗಿ ತಮ್ಮಿಷ್ಟದ ಕಾದಂಬರಿಯ ಕುರಿತು ಬರೆಯುವಂತೆ ಕೇಳಲಾಗಿತ್ತು. ಆಗ ಬೀನಾ ಶರತ್‌ಚಂದ್ರ ಚಟ್ಟೋಪಾಧ್ಯಾಯರ ‘ಪಥೇರ್ ದಾಬಿ’ ಎಂಬ ಕಾದಂಬರಿಯ ಮೇಲೆ ಬರೆದಿದ್ದಳಂತೆ. ಪಥೇರ್ ದಾಬಿ ಬ್ರಿಟೀಷರನ್ನು ಭಾರತದಿಂದ ಓಡಿಸಲು ಕಾರ್ಯ ನಿರ್ವಹಿಸುವ ಗುಪ್ತ ಕ್ರಾಂತಿಕಾರಿ ಸಂಘಟನೆಯ ಕುರಿತು ಚರ್ಚಿಸುವ ಕಾದಂಬರಿ. ಈ ಕಾದಂಬರಿಯನ್ನು ಬ್ರಿಟೀಷರು ನಿಷೇಧಿಸಿದ್ದರು. ಕಾಲೇಜಿನಿಂದ ಛೀಮಾರಿ ಹಾಕಿಸಿಕೊಂಡದ್ದಷ್ಟೇ ಅಲ್ಲದೇ, ಆಕೆಯ ಅಂಕಗಳೂ ಕಡಿತಗೊಂಡಿದ್ದವು!


ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಂಗಾಳದ ಕ್ರಾಂತಿಕಾರಿಗಳ ಗುಂಪನ್ನು ಸೇರಿಕೊಂಡಳು. ಇದೇ ಸಮಯದಲ್ಲಿ ಚಾರ್ಲ್ಸ್ ಟೆಗಾರ್ಟ್‌ನನ್ನು ಕೊಲ್ಲಲು‌ಹೋಗಿ ಕೆಲವು ಕ್ರಾಂತಿಕಾರಿಗಳು ಸಿಕ್ಕಿಬಿದ್ದಿದ್ದರು. ಇಡಿಯ ತಂಡವನ್ನು ವಿಸರ್ಜಿಸಬೇಕಾಗಿ ಬಂತು. ಆದರೆ ಬೀನಾದಾಸ್ ಸುಮ್ಮನಿರಲು ಒಪ್ಪಲಿಲ್ಲ. ಈಕೆಗೆ ಇದ್ದ ಇಚ್ಛೆ ಏನು ಗೊತ್ತೇ? ಬಂಗಾಳದ ಗವರ್ನರ್‌ನನ್ನು ಕೊಲ್ಲಬೇಕೆಂಬುದು! ಇದಕ್ಕಾಗಿ ತಯಾರಿ ನಡೆಸಿದಳು. ಜುಗಾಂತರ ಪಾರ್ಟಿಯ ಕಮಲಾದಾಸ್ ಗುಪ್ತರನ್ನು ಭೇಟಿಯಾಗಿ 280 ರೂಪಾಯಿಗೆ ಬಂದೂಕನ್ನೂ ಕೊಂಡುಕೊಂಡಳು ಬೀನಾದಾಸ್. 
‘ಬಂದೂಕು ಚಲಾಯಿಸಲು ಅಭ್ಯಾಸ ಬೇಕಲ್ಲ’ ಎಂಬ ಬೀನಾಳ ಪ್ರಶ್ನೆಗೆ, ‘ಬ್ರಿಟೀಷರನ್ನು ಕೊಂದವರೆಲ್ಲ ತರಬೇತಿ ಪಡೆದ ನಂತರವೇ ಈ ಕೆಲಸ ಮಾಡಿದವರಲ್ಲ. ಬಂದೂಕಿನ ಟ್ರಿಗರ್ ಒತ್ತಿದರಾಯ್ತು ಅಷ್ಟೇ. ಎದುರಿಗಿದ್ದ ಅಧಿಕಾರಿ ಸತ್ತು‌ ಹೋಗುತ್ತಾನೆ’ ಎಂಬ ಸಲಹೆ ಕೇಳಿಬಂತು. ಬೀನಾ ಒಂದಿನಿತೂ ತಡಮಾಡಲಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದಳು.


ಅಂದು ಫೆಬ್ರವರಿ 6, 1932. ಕಲ್ಕತ್ತಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ಸೇರಿದ್ದರು. ಬ್ರಿಟೀಷ್ ಗವರ್ನರ್ ಸ್ಟ್ಯಾನ್ಲೆ ಜಾಕ್ಸನ್ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ. ಬೀನಾ ತಡಮಾಡದೇ ತನ್ನ ಗೌನ್‌ನೊಳಗೆ ಬಚ್ಚಿಟ್ಟುಕೊಂಡಿದ್ದ ಬಂದೂಕನ್ನು ಎಳೆದು ವೇದಿಕೆ ಬಳಿ ಸಾಗಿ, ಆತನ ಪಕ್ಕದಲ್ಲೇ ನಿಂತು ಗುಂಡು ಹಾರಿಸಿದಳು. ಗುಂಡು ಆತನ ಕಿವಿಯ ಬದಿಯಲ್ಲಿ ಹಾದುಹೋಯ್ತು. ಹತ್ತಿರದಲ್ಲಿಯೇ ಇದ್ದ ಲೆಫ್ಟಿನೆಂಟ್ ಕರ್ನಲ್ ಹಸನ್ ಸುಹ್ರವರ್ದಿ ಆಕೆಯನ್ನು ಹಿಡಿಯಲು ಮುಂದಾದಾಗಲೂ ಬೀನಾ ತನ್ನ ಕೈಯ್ಯಲ್ಲಿದ್ದ ಬಂದೂಕಿನಿಂದ ಅಷ್ಟೂ ಗುಂಡುಗಳನ್ನು‌ ಹಾರಿಸಿ ಜಾಕ್ಸನ್‌ನನ್ನು ಕೊಲ್ಲುವ ಪ್ರಯತ್ನ ಮಾಡಿದಳು. ಆದರೆ ಗವರ್ನರ್ ಬಚಾವಾಗಿಬಿಟ್ಟ. 21 ವರ್ಷದ ಬೀನಾದಾಸ್ ಬಂಧನಕ್ಕೊಳಗಾದಳು.


ಒಂದೇ ದಿನದ ವಿಚಾರಣೆ. ಆಕೆಗೆ ಒಂಭತ್ತು‌  ವರ್ಷಗಳ ಜೈಲುಶಿಕ್ಷೆ ಘೋಷಣೆಯಾಯ್ತು. 1939ರಲ್ಲಿಯೇ, ಅಂದರೆ ಎರಡು ವರ್ಷಗಳ ಮುನ್ನವೇ ಆಕೆಯ ಬಿಡುಗಡೆಯಾಯ್ತು. ಜೈಲಿನಿಂದ ಹೊರಬಂದ ಬೀನಾ ಸುಮ್ಮನೆ ಕೂರಲಿಲ್ಲ. ಕಾಂಗ್ರೆಸ್ ಸೇರಿಕೊಂಡು, ಗಾಂಧೀಜಿಯವರು ಕರೆಕೊಟ್ಟ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ್ತೂ ಮೂರು ವರ್ಷ ಶಿಕ್ಷೆ ಅನುಭವಿಸಿದಳು. 1947ರಲ್ಲಿ ಜುಗಾಂತರ್‌ ಸಂಸ್ಥೆಯ ಜತೀಶ್ ಚಂದ್ರ ಭೌಮಿಕ್‌ರನ್ನು ವಿವಾಹವಾದಳು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸಿನ ವಿರುದ್ಧ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದಳು. ಗಂಡ ತೀರಿಕೊಂಡ ನಂತರ ಏಕಾಂತದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆಯುತ್ತಿದ್ದ ಬೀನಾ, ಹೃಷಿಕೇಶಕ್ಕೆ ಹೋಗಿ ಸಾಧನೆಯಲ್ಲಿ ತೊಡಗಿದಳು. 


ಹೃಷಿಕೇಶದಲ್ಲಿಯೇ ವಾಹನ ಅಪಘಾತವೊಂದರಲ್ಲಿ ತೀರಿಕೊಂಡರು ಬೀನಾದಾಸ್. ಆಕೆಯ ದೇಹ ರಸ್ತೆಯ ಬದಿಯಲ್ಲಿ ಅನಾಥವಾಗಿ ಸಿಕ್ಕಿತ್ತು. ಅರ್ಧ ಕೊಳೆತಿದ್ದ ಶವದ ಅಂತ್ಯಸಂಸ್ಕಾರವನ್ನು ಅಲ್ಲಿಯೇ ಮಾಡಲಾಗಿತ್ತು. ಆದರೆ ಅದು ಬೇನಾರದ್ದೇ ಶವ ಎಂದು ಗೊತ್ತಾದದ್ದು ಮಾತ್ರ ಬರೋಬ್ಬರಿ ಒಂದು ತಿಂಗಳ ನಂತರವೇ! ತಾಯ್ನಾಡಿನ ಮುಕ್ತಿಗಾಗಿ ತನ್ನ ಯೌವ್ವನದ ದಿನಗಳನ್ನು ಜೈಲಿನಲ್ಲಿಯೇ ಸವೆಸಿದ ಬೀನಾದಾಸ್‌‌ಗೆ ಸ್ವತಂತ್ರ ಭಾರತ ನೀಡಿದ ಗೌರವವಿದು ಎಂಬುದನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಮೇಲೆ ನಮಗೇ ಅಸಹ್ಯಬರದಿರುವುದಿಲ್ಲ.


ಬೀನಾದಾಸ್, ನಮ್ಮೆಲ್ಲರ ಹೃದಯ ಸಾಮ್ರಾಜ್ಞಿಯಾಗಲಿ.

Click to comment

Leave a Reply

Your email address will not be published. Required fields are marked *

Most Popular

To Top