Vishwaguru

ದಕ್ಷಿಣದ ಸುಲ್ತಾನೀಶಾಹಿಗೆ ಕಂಪನ ತಂದಿತ್ತ ಕಂಪಣ!

-ಕಿರಣ್ ಹೆಗ್ಗದ್ದೆ

ಭಾರತವನ್ನು ದುರಾಡಳಿತ ಮುಕ್ತ ರಾಷ್ಟ್ರವನ್ನಾಗಿಸುವ ಪ್ರಯತ್ನ ಅಂದೂ ನಡೆದಿತ್ತು. ಇಂದೂ ನಡೆದಿದೆ. ಆದರೆ ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳಲ್ಲ; ಸಾವಿರಾರು ವಿಘ್ನಗಳು. ಅಂತಹ ವಿಘ್ನ ನಿವಾರಣೆಗೆ ಮೊದಲು ಕೈ ಹಚ್ಚುವವನು ಯಾವನೋ ಒಬ್ಬ. ಅವನ ಕೈ ಬಲವಾಗಿದ್ದರೆ ಮಾತ್ರ ಅವನೊಂದಿಗೆ ಕೈ ಜೋಡಿಸುವವರ ಸಂಖ್ಯೆಯೂ ಹೆಚ್ಚುತ್ತದೆ. ಅಂದು ವಿಜಯನಗರದ ಅರಸರಿಗೆದುರಾಗಿದ್ದು ಅದೇ ಸವಾಲು. ಉತ್ತರ ಮತ್ತು ದಕ್ಷಿಣದ ಅನೇಕ ಹಿಂದೂ ರಾಜರುಗಳು ಆಕ್ರಮಕ ವಿದೇಶೀ ಸುಲ್ತಾನರಿಗೆ ಮುಜುರೆಯೊತ್ತುತ್ತಾ ತಮ್ಮ ಕಿರೀಟವುಳಿಸಿಕೊಳ್ಳುವುದರಲ್ಲಿಯೇ ಧನ್ಯತೆ ಕಾಣುತ್ತಿದ್ದರೇ ಹೊರತು, ಕಿರೀಟದಡಿಯ ತಲೆಯನ್ನು, ರಾಷ್ಟ್ರಕ್ಕೆ ಧಕ್ಕೆ ತರುವ ಶತ್ರುಗಳ ದಮನ ಮಾಡುವಲ್ಲಿ ವಿನಿಯೋಗಿಸಲು ಹಿಂದೆಬಿದ್ದಿದ್ದರು. ಕಂಚಿಯ ರಾಜ ಸಾಂಬವರಾಯ ಅಂಥವರಲ್ಲೊಬ್ಬ. ಆತ ಮಧುರೈನ ಸುಲ್ತಾನನ ಜೊತೆಗೆ, ಕಲ್ಬುರ್ಗಿಯ ಮಹಮ್ಮದ್ ಷಾಹ್ ನ ಜೊತೆಗೆ ಗೆಳೆತನ ಬೆಳೆಸಿದ್ದ. ಅವರ ಸಹಕಾರದ ಮೂಲಕ ಕೊಬ್ಬಿ ಸ್ಥಳೀಯ ಹಿಂದೂರಾಜರುಗಳ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಿದ್ದ. ಆದ್ದರಿಂದಲೇ ಬುಕ್ಕರಾಯನಿಗೆ ಮೊದಲು ಕಂಚಿಯ ಸಾಂಬವರಾಯನನ್ನು ಸರಿ ದಾರಿಗೆ ತರಬೇಕೆನಿಸಿದ್ದು. ತಂದೆಯ ಆಜ್ಞೆಯ ಮೇರೆಗೆ ವೀರ ಚಿಕ್ಕ ಕಂಪಣನು ತನ್ನ ಸೇನೆಯನ್ನು ದಕ್ಷಿಣದ ಕಂಚಿಯ ಗಡಿಯ ಕಡೆಗೇ ಮುನ್ನಡೆಸತೊಡಗಿದ. ಸೇನಾಧಿಪತಿ ಗೋಪಣಾಯಕ ಬೆಂಗಾವಲಾಗಿ ನಿಂತ. ಸಾಂಬವರಾಯನಿಗೆ ವಿಜಯನಗರ ಸಾಮ್ರಾಜ್ಯದ ಉದಾತ್ತ ಧ್ಯೇಯೋದ್ದೇಶಗಳನ್ನೊಳಗೊಂಡ ಒಂದು ಪತ್ರವೂ ಕಂಪಣನ ಮೂಲಕ ಹೋಯ್ತು. ಆದರೆ ಕಂಚಿರಾಜನ ಮಂದಬುದ್ಧಿಗೆ ಆ ಪತ್ರದ ಆಶಯವೆಂದೂ ತಿಳಿಯಲಿಲ್ಲ. ಆತ ಯುದ್ಧಕ್ಕೆ ಮುಂದಾಗಿದ್ದರಿಂದ ಕಂಪಣನೂ ಅನಿವಾರ್ಯವಾಗಿ ದಂಡೋಪಾಯವನ್ನೇ ಕೈಗೆತ್ತಿಕೊಳ್ಳಬೇಕಾಯ್ತು.

ಪ್ರವಾಹದಂತೆ ನುಗ್ಗಿ ಬಂದ ವಿಜಯನಗರದ ಸೇನೆ ಕಂಚಿಯ ಗಡಿನಾಡುಗಳನ್ನು ವಶಪಡಿಸಿಕೊಳ್ಳುತ್ತಾ, ಕೊನೆಗೆ ಸಾಂಬವರಾಯನು ಅಡಗಿ ಕುಳಿತಿದ್ದ ‘ರಾಜಗಂಭೀರ’ ಕೋಟೆಯನ್ನು ವಶಪಡಿಸಿಕೊಂಡಿತು. ಬಂಧಿತನಾದ ಕಂಚಿಯ ದೊರೆ, ಕಂಪಣನೆದುರು ಕೈಕಟ್ಟಿ ನಿಲ್ಲಬೇಕಾಯ್ತು. ಚಿಕ್ಕ ಕಂಪಣ ರಾಜಕುಮಾರ, ಯುವಕ, ಪರಾಕ್ರಮಿ ಜೊತೆಗೆ ಮಹಾನ್ ಧ್ಯೇಯವಾದಿ. ಆದರೂ ಕ್ಷಮಾಶೀಲ. ಮತ್ತೊಮ್ಮೆ ಆತ ಮುಖತಃ ಕಂಚಿದೊರೆಗೆ ವಿಜಯನಗರ ಸಾಮ್ರಾಜ್ಯದ ಧ್ಯೇಯೋದ್ದೇಶಗಳನ್ನು ವಿವರಿಸತೊಡಗಿದ. ಆತನ ತರ್ಕಕ್ಕೆ ಕೊನೆಗೂ ತಲೆದೂಗಿದ ಸಾಂಬವರಾಯ ಸರಿ ದಾರಿಗೆ ಬಂದ. ಮಧುರೈ ಸುಲ್ತಾನನನ್ನು ಸೋಲಿಸಲು ಅಗತ್ಯವಾದ ಸೇನಾ ಸಹಕಾರವೂ ಕಂಪಣನಿಗೆ ಸಿಕ್ಕಿತ್ತು. ಅದು ಕಂಪಣನ ಮಹತ್ವಪೂರ್ಣ ರಾಜತಾಂತ್ರಿಕ ವಿಜಯವಾಗಿತ್ತು.

ಕಂಚಿಯಲ್ಲಿಯೇ ಬೀಡುಬಿಟ್ಟ ಪ್ರಭು ಕಂಪಣನು, ಮಧುರೈಗೆ ತನ್ನ ಗೂಢಚಾರರನ್ನು ಬಿಟ್ಟು ಅಲ್ಲಿನ ಜನ ಜೀವನದ ವರದಿ ತರಿಸಿಕೊಳ್ಳಲಾರಂಭಿಸಿದ. ಪ್ರತಿದಿನ ಅಲ್ಲಿ ನಡೆಯುತ್ತಿದ್ದ ಮಹಮದೀಯರ ಹಾವಳಿಯ ಹೃದಯ ವಿದ್ರಾವಕ ವರದಿಗಳು ಕಂಪಣನಿಗೆ ತಲುಪತೊಡಗಿತು. ಕಂಪಣನ ಪತ್ನಿ ಗಂಗಾಂಬಿಕೆಯು ಅದನ್ನು ತನ್ನ ಕೃತಿ ‘ಮಧುರಾ ವಿಜಯಂ’ ವೀರಕಂಪಣ ಚರಿತಂ ನಲ್ಲಿ ದಾಖಲಿಸಿದ ರೀತಿ ನೋಡಿದರೆ ಅಂದಿನ ಪರಿಸ್ಥಿತಿಯ ಚಿತ್ರಣ ಸ್ವಲ್ಪವಾದರೂ ಸಿಗುತ್ತದೆ. ಆಕೆ ಬರೆಯುತ್ತಾಳೆ, ‘ಭೂಮಿ ಪರರ ಪಾಲಾಯ್ತು, ರಾಷ್ಟ್ರ ಹಾಳಾಯ್ತು, ಈ ಹಾಳೂರು ಸೇರಿಕೊಂಡ ಗೂಬೆಗಳ ಕಿರುಚಾಟವು ಕಿವಿ ನೋವು ತರುತ್ತಿದೆ. ಇದನ್ನು ಒಂದು ವೇಳೆ ಹೇಗಾದರೂ ಸಹಿಸಬಹುದು. ಆದರೆ ಇಲ್ಲಿನ ತಮ್ಮ ಗಿಳಿಗಳು ಯವನರ ಅರಮನೆಯಲ್ಲಿ ಸೆರೆಯಾಗಿ (ಪರ ಸಂಸ್ಕೃತಿಗೆ ಮಾರಿಕೊಂಡು) ಪಾರಸೀ ಭಾಷೆಯನ್ನೇ ಓದುತ್ತಿರುವುದು ಮಾತ್ರ ಅಂತಃಕರಣಕ್ಕೆ ಅಸಹ್ಯಕರವಾಗಿದೆ.’

ಹೌದು, ಅಂದಿನ ಪರಿಸ್ಥಿತಿಯು ಇದ್ದಿದ್ದೇ ಹಾಗೆ. ಜಗನ್ನಾಥ ಪಂಡಿತ ನಂದಾ ಘನ ವಿದ್ವಾಂಸನೂ ಸಹ ಔರಂಗಜೇಬನನ್ನು ಮೆಚ್ಚಿಸಲು ‘ದಿಲ್ಲೀಶ್ವರೋವಾ-ಜಗದೀಶ್ವರೋ ವಾ’ (ದಿಲ್ಲಿಯ ಸುಲ್ತಾನನಾರೋ ಅವನೇ ಜಗತ್ತಿನೊಡೆಯ) ಎಂದು ಹಾಡಿ ಹೊಗಳಿದ್ದ. ಅಕ್ಬರ್ ಕೊಟ್ಟ ಎಂಜಲು ರೊಟ್ಟಿ ತುಣುಕನ್ನು ಪ್ರಸಾದದಂತೆ ತಿನ್ನುತ್ತಿದ್ದ ಮಾನ್ ಸಿಂಗ್ ನಿಗೆ ರಾಣಾ ಪ್ರತಾಪ್ ದುರಹಂಕಾರಿಯಂತೆ ಕಾಣುತ್ತಿದ್ದ. ಗಂಗಾಂಬಿಕೆಯು ತನ್ನ ಮಧುರಾ ವಿಜಯದಲ್ಲಿ ವರ್ಣಿಸಿರುವುದು ಇಂತಹ ಸಂಗತಿಗಳನ್ನೇ.

ಕಂಪಣನ ಮನಸ್ಸು ಬುದ್ಧಿಗಳೆಲ್ಲಾ ಈಗ ಮಧುರೈ ಕಡೆಗೆ ನೆಟ್ಟಿತ್ತು. ತನ್ನ ಸೇನೆಯನ್ನು ಇಬ್ಭಾಗವಾಗಿಸಿದ ಕಂಪಣ ಒಂದರ ನೇತೃತ್ವವನ್ನು ಸ್ವತಃ ತಾನೇ ವಹಿಸಿದ. ಇನ್ನೊಂದಕ್ಕೆ ಸೇನಾಧಿಪತಿ ಗೋಪಣಾರ್ಯ ಮುಂದಾಳಾದ. ಕಂಚಿಯ ದೊರೆಯ ಸೈನ್ಯವೂ ಸೇರಿಕೊಂಡಿತು. ಹೀಗೆ ಮೂರು ಪ್ರತ್ಯೇಕ ವಿಭಾಗಗಳ ಮೂಲಕ ಮಧುರೈಯನ್ನು ಮೂರೂ ಕಡೆಗಳಿಂದ ಮುತ್ತಿಗೆ ಹಾಕಲಾಯ್ತು. ಕೋಟೆ, ಕೊತ್ತಲ-ನದಿ-ಕೆರೆ ದೇಗುಲಗಳೆಲ್ಲಾ ಒಂದೊಂದಾಗಿ ವಿದೇಶೀ ಆಕ್ರಮಣದಿಂದ ಮುಕ್ತವಾಗಲಾರಂಭವಾಯ್ತು. ಜನರು ನಿರಾಳವಾಗಿ ಸ್ವಸಂಸ್ಕೃತಿಯ ಉಸಿರಾಡಲಾರಂಭಿಸಿದರು.

ಮಲ್ಲಿಕಾಫರನು ದಕ್ಷಿಣದ ಮೇಲೆ ದಂಡೆತ್ತಿ ಬಂದಾಗ ತಪ್ಪದೇ ಮಾಡಿದ್ದ ಆತನ ಪವಿತ್ರ ಕಾರ್ಯ ‘ಬುತ್ ಶಿಕನ್’. ಅಂದರೆ ವಿಗ್ರಹ ಭಂಜನೆ. ಆತ ಶ್ರೀರಂಗಂ ಮೇಲೆ ದಾಳಿ ನಡೆಸಿದಾಗ ಅಲ್ಲಿನ ರಂಗನಾಥನ ವಿಗ್ರಹ ರಕ್ಷಿಸಿಕೊಳ್ಳಲು ಅದನ್ನು ರಹಸ್ಯವಾಗಿ ತಿರುಪತಿಗೆ ಸಾಗಿಸಲಾಗಿತ್ತು. ಈಗ ಗೋಪಣಾರ್ಯನು ಶ್ರೀರಂಗದ ಮಲ್ಲಿಕಾಫರನ ಪ್ರತಿನಿಧಿಯಾಗಿದ್ದ ಮುಸಲ್ಮಾನ ಸರದಾರನನ್ನು ಸೋಲಿಸಿ ಓಡಿಸಿಬಿಟ್ಟ. ತಿರುಪತಿಯಲ್ಲಿದ್ದ ರಂಗನಾಥಸ್ವಾಮಿಯ ವಿಗ್ರಹ ಮತ್ತೊಮ್ಮೆ ಶ್ರೀರಂಗಂನಲ್ಲಿ ವೈಭವಯುತವಾಗಿ ಪ್ರತಿಷ್ಠಾಪಿಸಲ್ಪಟ್ಟಿತು.

ಕಂಪಣನು ಮಧುರೈ ಸುಲ್ತಾನನಿಗೆ ಕೊಟ್ಟ ಕೊನೆಯ ಹೊಡೆತ ನಿರ್ಣಾಯಕವಾಗಿತ್ತು. ಮಧುರೈನ ಮುಖ್ಯ ಕೋಟೆಯನ್ನು ಮೂರೂ ಕಡೆಗಳಿಂದ ಮುತ್ತಿದ ವಿಜಯನಗರದ ಸೇನೆಯು ಕೋಟೆಯ ದ್ವಾರವನ್ನು ತೆರೆಯುವಲ್ಲಿ ಯಶಸ್ವಿಯಾಯ್ತು. ಕಂಪಣನನ್ನು ನೇರವಾಗಿ ಎದುರಿಸಲೇಬೇಕಾದ ಅನಿವಾರ್ಯತೆಗೆ ಮಧುರೈ ಸುಲ್ತಾನ ಸಿಲುಕಿದ. ಕಂಪಣನಿಗೆ ಮಧುರೈ ಸುಲ್ತಾನನಿಗೆ ನಡೆದ ಕತ್ತಿ ವರಸೆಯ ಆ ದ್ವಂದ್ವಯುದ್ಧವು ಸ್ವಾತಂತ್ರ್ಯ ಮತ್ತು ಆಕ್ರಮಕ ನೀತಿಯ ನಡುವಿನ ಯುದ್ಧದಂತಿತ್ತು. ಧ್ಯೇಯನಿಷ್ಠೆ ಮತ್ತು ಭೋಗವಾದದ ನಡುವಿನ ಕಲಹದಂತಿತ್ತು. ಧರ್ಮಾಧರ್ಮದ ನಡುವಿನ ಸಂಘರ್ಷದಂತಿತ್ತು. ಆದರೆ ಕೊನೆಗೆ ಜಯಿಸಿದ್ದು, ಸ್ವಾತಂತ್ರ್ಯವೇ, ಧ್ಯೇಯನಿಷ್ಠೆಯೇ, ಧರ್ಮವೇ. ಸಮರಧುರಂಧರ ಕಂಪಣನ ಖಡ್ಗ ಪ್ರಹಾರಕ್ಕೆ ಭೋಗಧುರಂಧರ ಮಧುರೈ ಸುಲ್ತಾನನ ಶರೀರ ನಾಶವಾಯ್ತು. ಆ ಮಧುರೈ ಸುಲ್ತಾನನ ಆಡಳಿತದಿಂದ ಮುಕ್ತವಾಗಿ ಹಿಂದುತ್ವದ ಛತ್ರಛಾಯೆಯಡಿಗೆ ಬಂದಿತು. ಹಿಂದೂ ಸಂಸ್ಕೃತಿಯ ನಾಶಕ್ಕೆ ಮುಂದಾಗಿದ್ದ ಸುಲ್ತಾನ ಶಾಹಿಯು 1361 ರಲ್ಲಿ ಮಧುರೈನಿಂದ ನಾಮಾವಶೇಷವಾಗಿ ಹೋಯ್ತು. ಗಂಗಾಂಬಿಕೆ ತನ್ನ ಪಾಲಿನ ಕರ್ತವ್ಯವನ್ನು ‘ಮಧುರಾ ವಿಜಯಂ’ ಕೃತಿಯ ಮೂಲಕ ಸಮರ್ಥವಾಗಿ ನೆರವೇರಿಸಿದಳು. ಕಂಪಣ ಗಂಗಾಂಬಿಕೆಯರು ತಂದೆಗೆ ತಕ್ಕ ಮಗ-ಸೊಸೆಯರಾದರು.

Click to comment

Leave a Reply

Your email address will not be published. Required fields are marked *

Most Popular

To Top