Adhyatma

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ನಾವು ಬ್ರಾಹ್ಮೀ ಮುಹೂರ್ತವೊಂದರ ಬಗ್ಗೆ ಬಹುವಾಗಿ ಚರ್ಚಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನಿನ ಸಮಯವದು. ಮನು ತನ್ನ ಸ್ಮøತಿಗ್ರಂಥದಲ್ಲಿ ಸ್ಪಷ್ಟಪಡಿಸುತ್ತಾನೆ, “ನಕ್ಷತ್ರಗಳು ಕಾಣುತ್ತಿರುವಾಗಲೇಎದ್ದು ಸೂರ್ಯ ನಮನಗೈಯುವುದು ಉತ್ತಮ. ನಕ್ಷತ್ರಗಳು ಅಸ್ತಮಿಸಿ ಸ್ವಲ್ಪವಷ್ಟೆ ಬೆಳಕು ಕಾಣುವಾಗಿನ ಉಪಾಸನೆ ಮಧ್ಯಮ. ಇನ್ನು ಸೂರ್ಯೋದಯವಾದ ಮೇಲೆ ಎದ್ದುಆತನಿಗೆಅಭಿವಂದಿಸುವುದುಅಧಮ”.
ಬ್ರಾಹ್ಮೀ ಮುಹೂರ್ತಅಂತರ್ಮುಖಿಯಾಗಿ ಬ್ರಹ್ಮನನ್ನುಅರಿಯಲುಅತ್ಯಂತ ಸೂಕ್ತ ಸಮಯ. ಇದನ್ನೇ ಉಷಃ ಕಾಲ ಅಂತಲೂಕರೆಯುತ್ತಾರೆ. ಉಷೆ ಸೂರ್ಯನ ಪತ್ನಿಯಂತೆ. ಸೂರ್ಯ ಬೆಳಗ್ಗೆ ಎದ್ದುಆಕೆಯನ್ನೇ ಹಿಂಬಾಲಿಸಿ ಬರುತ್ತಾನಂತೆ! ಹಾಗಂತ ಪುರಾಣಗಳು ಬಣ್ಣಿಸುತ್ತವೆ. ಇಷ್ಟಕ್ಕೂ ರಾತ್ರಿ ಕಳೆದು ಹಗಲಾಗುವಾಗ ಮತ್ತು ಹಗಲು ಮುಗಿದು ರಾತ್ರಿ ಆರಂಭವಾಗುವಾಗಿನ ಈ ಸಂಧಿ ಕಾಲವನ್ನು ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂ ಜಗತ್ತಿನಲ್ಲಿ ಯಾರಿಗೂ ಇರಲಿಲ್ಲ. ಭಾರತ ಈ ಸಂಧ್ಯಾಕಾಲಗಳನ್ನು ಗುರುತಿಸಿ ಉಪಾಸನೆಗೆ ಅವನ್ನು ಸೂಕ್ತ ಸಮಯವೆಂದು ನಿರ್ಧಾರ ಮಾಡಿತು. ಈ ಹೊತ್ತಿನಲ್ಲಿಯೇ ಸಾವಿರಾರು ಜನ ನದಿ ದಂಡೆಯಲ್ಲಿ ನಿಂತು ಸೂರ್ಯನಿಗೆ ಅಘ್ರ್ಯ ನೀಡುತ್ತಿದ್ದುದಲ್ಲದೇ ಗಾಯತ್ರೀ ಮಂತ್ರೋಪಾಸನೆಯನ್ನೂ ಮಾಡುತ್ತಿದ್ದರು. ಸೂರ್ಯನ ಬೆಳಕಿನಲ್ಲಿರುವ ಶಖ್ತಿಯ ಅರಿವು ಅವರಿಗೆ ಖಂಡಿತವಾಗಿಯೂ ಇತ್ತು. ಬೆಳಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿದರೆ ಇಡಿಯ ದಿನಕ್ಕೆ ಬೇಕಾದ ಶಕ್ತಿ ಸಂಗ್ರಹವಾಗುವುದರ ಕುರಿತು ಅವರು ತಿಳಿದೇ ಇದ್ದರು.

ಆಧುನಿಕ ವಿಜ್ಞಾನದ ಪ್ರಕಾರ ನಮ್ಮ ನಿದ್ದೆ ಮತ್ತು ಎಚ್ಚರದ ಚಕ್ರ ಜಾಗೃತವಾಗಿರೋದೇ ಸೂರ್ಯನಿಂದ. ಸೂರ್ಯನ ಕಿರಣಗಳು ನಮ್ಮ ಮಿದುಳಿನ ಬೆಳಕನ್ನು ಗ್ರಹಿಸುವ ನರದ(ಆಪ್ಟಿಕ್ ನರ್ವ್)ಮೇಲೆ ಬಿದ್ದೊಡನೆ ಮಿದುಳು ನಿದ್ದೆತರುವ ಮೆಲಟೋನಿನ್ ಹಾರ್ಮೋನು ಸ್ರವಿಸುವುದನ್ನು ನಿಲ್ಲಿಸಿಬಿಡುತ್ತದೆ. ಅದರೊಟ್ಟಿಗೇ ಸೆರಿಟೋನಿನ್ ಎಂಬ ದ್ರವ ಹೆಚ್ಚು ಸ್ರವಿಸಲಾರಂಭಿಸಿ ಜಾಗೃತಾವಸ್ಥೆಯಲ್ಲಿ ನಮ್ಮನ್ನುಇಡುವುದಲ್ಲದೆ, ಸಂತೋಷವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮವರು ಮುಂಜಾವಿನ ಸೂರ್ಯನೆದುರು ಕುಳಿತಿರುತ್ತಿದ್ದುದು. ಸುಮ್ಮನೆ ಕುಳಿತಿರುವುದು ಬೇಡವೆಂದೇ ಧರ್ಮದ ಚೌಕಟ್ಟು ಜೋಡಿಸಿ ಸೂರ್ಯಶಕ್ತಿಯನ್ನು ಪ್ರಚೋದಕ ಶಕ್ತಿಯಾಗಿಸುವ ಉಪಾಯ ತೋರಿಸಿಕೊಟ್ಟಿದ್ದು.

ನಾವು ಬಹಳ ದೂರ ಬಂದಿದ್ದೇವೆ. ರಾತ್ರಿಯ ಕಣ್ಣುಕೋರೈಸುವ ಬೆಳಕು ನಮ್ಮ ಬೆಳಕನ್ನು ಗ್ರಹಿಸುವ ನರಗಳಲ್ಲಿ ಗೊಂದಲವೆಬ್ಬಿಸಿಬಿಡುತ್ತದೆ. ಅದಕ್ಕೆ ಯಾವುದು ಬೆಳಗು –ರಾತ್ರಿ ಎಂಬುದರ ಅರಿವಾಗದೇ ದೇಹದೊಳಗಿನ ಗಡಿಯಾರ ಏರುಪೇರಾಗಿಬಿಡುತ್ತದೆ. ಜೀವಕೋಶಗಳು ಬಲುಬೇಗ ಸ್ವಾಸ್ಥ್ಯ ಕಳೆದುಕೊಂಡುಬಿಡುತ್ತವೆ. ಹೀಗಾಗಿಯೇ ನಾವು ಸದಾರೋಗಿಷ್ಠರು. ಅದಕ್ಕೆಂದೇ ವೈದ್ಯರು ಬೆಳಗಾಗೆದ್ದು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಅಂತ ಹೇಳಿದ್ದು. ದೇಹ ಜರ್ಝರಿತವಾದ ಮೇಲೆ ವೈದ್ಯರ ಮಾತು ಕೇಳಲು ಹಿಂದೆ ಮುಂದೆ ನೋಡದ ನಾವು, ಬಾಲ್ಯದಲ್ಲಿಯೇ ಋಷಿಗಳ ಮಾತು ಪಾಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅಲ್ಲವೇ?

ವಿಜ್ಞಾನದ ಅಮಲಿನಲ್ಲಿರುವ ಅಮೆರಿಕನ್ನರಿಗೂ ಇದರ ಅರಿವಾಗಿದೆ. ಸೂರ್ಯ ಕಾಣದ ಚಳಿಗಾಲದ ಹೊತ್ತಲ್ಲಿ ಅಮೆರಿಕದ ಶೇಕಡಾ 10ರಷ್ಟು ಜನ ಮಿದುಳಿನಲ್ಲಿ ಆಗುವ ರಾಸಾಯನಿಕಗಳ ಬದಲಾವಣೆಯಿಂದ ತೊಂದರೆಗೊಳಗಾಗುತ್ತಾರೆ. ಕೆಲಸ ಮಾಡಲಾಗದೆ ತೊಳಲಾಡುತ್ತಾರೆ. ಆಗೆಲ್ಲ ಸಊರ್ಯನಂತೆ ಭಾಸವಾಗುವ ದೊಡ್ಡ ದೊಡ್ಡ ಬಲ್ಬುಗಳನ್ನು ಅವರ ಎದುರಿಗಿಟ್ಟು ಸೆರಿಟೊನಿನ್ ಸ್ರವಿಸುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಈ ಪ್ರಯೋಗ ಕೈಕೊಟ್ಟು ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ಹುಚ್ಚರೂ ಆಗಿಬಿಡುತ್ತಾರೆ!

ಸೂರ್ಯನನ್ನು ನಮ್ಮವರು ಗತಿಶೀಲ ಎಂದದ್ದು ಅದಕ್ಕೇ. ಆತತಾನಷ್ಟೆ ಚಲಿಸುವುದಿಲ್ಲ; ಎಲ್ಲರೊಳಗೂ ತಾನೇ ಹೊಕ್ಕು ಚಲಿಸುವಂತೆ ಮಾಡುತ್ತಾನೆ. ಬೆಳಗಾಗುವುದರೊಂದಿಗೆ ಉತ್ಸಾಹ ಮೂಡುವುದು ಇದರಿಂದಲೇ. ಸಂಜೆಯಾಗುತ್ತ ದಣಿದ ದೇಹ ಮಲಗಿಕೊಳ್ಳಲು ಕಾತರಿಸುವುದು ಇದಕ್ಕೇ. ದೇಹದಣಿಯಲು ಕೆಲಸ ಮಾಡಲೇಬೇಕೆಂದಿಲ್ಲ, ಸೂರ್ಯ ಅಸ್ತಮಿಸಿದರೆ ಸಾಕು! ಹೀಗಿದೆ ಸೂರ್ಯ ಮತ್ತು ನಮ್ಮದೇಹದ ಸಂಬಂಧ.

ಹೌದು.‘ಆರೋಗ್ಯ ಮತ್ತು ಸೂರ್ಯ’ ಈ ಕುರಿತಂತೆ ಯಾರಿಗೂ ಅನುಮಾನವೇ ಇಲ್ಲ. ಆದರೆ ಭಾರತೀಯರು ಒಂದು ಹೆಜ್ಜೆ ಮುಂದೆ ಹೋಗಿ, ಅವನನ್ನು ಬುದ್ಧಿಶಕ್ತಿಯ ಪ್ರಚೋದಕ ಎಂತಲೂ ಭಾವಿಸಿ ಆರಾಧಿಸುತ್ತಾರೆ. ಒಟ್ಟಾರೆ ಗಾಯತ್ರಿ ಮಂತ್ರದ ಅರ್ಥವೇ ಧೀಶಕ್ತಿಯನ್ನು ಪ್ರಚೋದಿಸುವುದು ಅಂತ. ಭಗವದ್ಗೀತೆಯ ನಾಲ್ಕನೆ ಅಧ್ಯಾಯ ಶುರುವಾಗುವುದೇ ಕೃಷ್ಣನ ಅಚ್ಚರಿಯ ಮಾತುಗಳಿಂದ, “ನಾನು ಅವಿನಾಶಿಯಾದ ಈ ಯೋಗವನ್ನು ಕಲ್ಪದ ಆದಿಯಲ್ಲಿ ಸೂರ್ಯನಿಗೆ ಹೇಳಿದೆ. ಸೂರ್ಯ ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದ”–ಎಂದು ಮುಂದುವರೆಯುತ್ತದೆ. ತೈತ್ತಿರೀಯ ಬ್ರಾಹ್ಮಣವೂ“ಸೂರ್ಯ ಮುಂಜಾನೆ ಋಗ್ವೇದದೊಂದಿಗೆ ಉದಯಿಸಿದರೆ, ಯಜುರ್ವೇದದೊಂದಿಗೆ ಮಧ್ಯೆ ನಿಂತಿರುತ್ತಾನೆ. ಅಸ್ತಂಗತನಾಗುವ ವೇಳೆಗೆ ಸಾಮವೇದದಿಂದ ಪರಿಪುಷ್ಟವಾಗಿರುತ್ತಾನೆ” ಎಂದು ಅಭಿಪ್ರಾಯಪಡುತ್ತದೆ. ಶ್ರೇಷ್ಠ ಋಷಿ ಯಾಜ್ಞವಲ್ಕ್ಯರಂತೂ ಸೂರ್ಯನ ಶಿಷ್ಯರೇ! ಆಕತೆಯೇ ಸ್ವಾರಸ್ಯಕರ. ವೈಶಂಪಾಯನರ ಶಿಷ್ಯರಾಗಿದ್ದ ಯಾಜ್ಞ್ಯವಲ್ಕ್ಯರು ಸಣ್ಣ ವಿಚಾರವೊಂದಕ್ಕೆ ಗುರುಗಳೊಂದಿಗೆ ಜಿದ್ದಿಗೆ ಬಿದ್ದರು. ಕೋಪದಿಂದ ಗುರುಗಳು ತಾವುಕೊಟ್ಟ ವಿದ್ಯೆ ಮರಳಿ ಕೊಡಲು ಆಗ್ರಹಿಸಿದರು. ಯಾಜ್ಞವಲ್ಕ್ಯರೇನೂ ಕಡಿಮೆ ಸಾಧ್ಯತೆಯವರಲ್ಲ. ಅಲ್ಲಿಯೇ ಇದ್ದ ತಿತ್ತಿರಿಯೇ ಮೊದಲಾದ ಋಷಿಗಳೆದುರಿಗೆ ಇಷ್ಟೂ ದಿನ ಕಲಿತಿದ್ದನ್ನು ಹಾಗು ಹಾಗೆಯೇ ಒಪ್ಪಿಸಿಯೂಬಿಟ್ಟರು. ಹೀಗೆ ಪಡೆದುಕೊಂಡಿದ್ದನ್ನು ಆ ಋಷಿಗಳು ಮುಂದಿನ ಪೀಳಿಗೆಗೆ ಮುಟ್ಟಿಸಿದರು.ಅದು ಕೃಷ್ಣ ಯಜುರ್ವೇದವೆನಿಸಿತು. ಇತ್ತ ಯಾಜ್ಞವಲ್ಕ್ಯರು ಸೂರ್ಯನನ್ನೆ ಆರಾಧಿಸಿ ತಪಗೈದು ಒಲಿಸಿಕೊಂಡರು. ಅವರ ಜ್ಞಾನದ್ವಾರಗಳು ತೆರೆದುಕೊಂಡವು.

ನಾರಾಯಣ ಪ್ರಣೀತವಾದ ಯಜುರ್ವೇದ ಅವರೆದುರಿಗೆ ಅನಾವರಣಗೊಂಡಿತು. ಅದು ಶುಕ್ಲಯಜುರ್ವೇದವಾಯ್ತು. ಹಾಗೆಂದು ವೇದಕಥೆಗಳು ಹೇಳುತ್ತವೆ.ಸೂರ್ಯನಿಗೆ ನಮ್ಮ ಬುದ್ಧಿಯನ್ನು ಪ್ರಚೋದಿಸುವ ಶಕ್ತಿ ಇದೆಯೇ? ಈ ಪ್ರಶ್ನೆ ಕಾಡುವಂಥದ್ದೇ. ಇದನ್ನರಿಯಲು ಸ್ವಲ್ಪ ಮೆದುಳಿನ ಸಂರಚನೆ ತಿಳಿಯಬೇಕಾದ್ದು ಅನಿವಾರ್ಯ. ನಮ್ಮ ಮೆದುಳನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು. ಮುಂಭಾಗ, ಮಧ್ಯಭಾಗ ಮತ್ತು ಹಿಂಭಾಗ. ಮೆದುಳಿನ ಹಿಂಭಾಗ ಬೆನ್ನ ಹುರಿಗೆ ಹೊಂದಿಕೊಂಡಂತೆ ಇದೆ. ಇದು ಎಲ್ಲ ಕಶೇರುಕ (ಬೆನ್ನ ಹುರಿಇರುವ ಪ್ರಾಣಿ)ಗಳಲ್ಲಿ ಇರುವಂಥದ್ದು. ನಾವು ತಲೆ ಹಾಕುವ ಅಗತ್ಯವೇ ಇಲ್ಲದ ಉಸಿರಾಟ, ಹೃದಯ ಬಡಿತದಂಥ ಕೆಲಸವನ್ನೆಲ್ಲ ಇದೇ ಮಾಡಿಸುತ್ತದೆ. ಇದಕ್ಕೆ ಸೇರಿಕೊಂಡ ಮೇಲ್ಭಾಗವೇ ಮೆದುಳಿನ ಮಧ್ಯಭಾಗ. ಇದು ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ನಡೆಸುತ್ತದೆ. ನೊಣ ಬಂದೊಡನೆ ಕಣ್ಮುಚ್ಚುತ್ತೇವಲ್ಲ, ಹಗ್ಗ ಕಂಡೊಡನೆ ಹಾವೆಂದು ಸರಕ್ಕನೆ ಹಿಂದೆ ಸರಿದುಬಿಡುತ್ತೇವಲ್ಲ, ಅಷ್ಟು ವೇಗದ ಪ್ರತಿಕ್ರಿಯೆ ಮೆದುಳಿನ ಮದ್ಯಭಾಗದಕೊಡುಗೆ. ಇನ್ನು, ಮಾನವ ಮೆದುಳಿನ ಅತ್ಯಂತ ಮುಂದುವರೆದ ಭಾಗವೇ ಮೆದುಳಿನ ಮುಂಭಾಗ. ಮೆದುಳು ಅಂತ ನಾವು ನೋಡೋದು ಇದೇ ಭಾಗವನ್ನೆ. ಈ ಭಾಗ ಕ್ರಿಯಾಶೀಲವಾಗಿದ್ದಷ್ಟೂ ನಮ್ಮ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಯೋಜನೆ ರೂಪಿಸುವ ಕ್ಷಮತೆ ಬಲಿಯುತ್ತದೆ. ಕಲ್ಪನೆಯ ಶಕ್ತಿ, ಆಲೋಚನಾ ಶಕ್ತಿ ಹೆಚ್ಚುವುದಕ್ಕೂ ಮೆದುಳಿನ ಈ ಭಾಗದ ಕೊಡುಗೆಯೇ ದೊಡ್ಡದು! ಮೆದುಳಿನ ಈ ಭಾಗ ಜೀವಂತಿಕೆಯಿಂದ ಕೂಡಿದ್ದಷ್ಟೂ ಮನುಷ್ಯ ಹೆಚ್ಚು ಕಲೆಗಾರನಾಗುತ್ತಾನೆ, ವಿಜ್ಞಾನಿಯಾಗುತ್ತಾನೆ, ಋಷಿಯೂ ಆಗುತ್ತಾನೆ! ಇದರ ಸಾಮರ್ಥ್ಯ ಕಡಿಮೆಯಾದಂತೆಲ್ಲ ಆತ ಪಶುವಿನಂತಾಗುತ್ತಾನೆ. ಕೋಪ – ದರ್ಪಗಳು ಹೆಚ್ಚಾಗುತ್ತವೆ. ಹಾಗಂತ ಹೇಳಿರೋದು, ಪುರಾಣಕಾರರಲ್ಲ, ಸ್ಮೃತಿಕಾರರೂ ಅಲ್ಲ, ಅಮೆರಿಕಾದ ನರರೋಗಅಧ್ಯಯನ ಸಂಸ್ಥೆಯ ವಿಜ್ಞಾನಿಗಳು!

ಇದರ ಪರಿಪೂರ್ಣ ಜ್ಞಾನದಿಂದಾಗಿಯೇ ನಮ್ಮವರು ಮೆದುಳಿನ ಭಾಗಕ್ಕೆ ಶಕ್ತಿ ತುಂಬಲೆಂದು ಸೂರ್ಯನಿಗೆ ನಮಸ್ಕರಿಸುವ ಪದ್ಧತಿ ಅಭಿವೃದ್ಧಿಪಡಿಸಿದರು. ಸೂರ್ಯ ಶಕ್ತಿಯ ಕ್ರೋಢೀಕರಣಕ್ಕೆ ಛಂದಸ್ಸುಗಳು ಹುಟ್ಟಿಕೊಂಡವು. ಮಂತ್ರಗಳ ರಚನೆಯಾಯ್ತು. ಸೂರ್ಯ ರಶ್ಮಿಗಳನ್ನು ವಿದ್ಯುತ್ ಆಗಿ ಪರಿವರ್ತಿಸಲು ಮಾಳಿಗೆಯ ಮೇಲೆ ಫೋಟೋವೋಲ್ಟಾಯಿಕ್ ಸೆಲ್‍ಗಳ ಪ್ಯಾನೆಲ್‍ ಜೋಡಿಸುವುದಿಲ್ಲವೆ? ಮಂತ್ರಗಳೂ ಅದೇ ಕೆಲಸವನ್ನು ದೇಹದೊಳಗೆ ಮಾಡುತ್ತವೆ, ಬೌದ್ಧಿಕ ಶಕ್ತಿಯನ್ನು ಪ್ರಚೋದಿಸುತ್ತವೆ. ಮಂತ್ರಗಳು – ಛಂದಸ್ಸುಗಳು ನರಗಳ ಮೇಲೆ ಬೀರುವ ಪ್ರಭಾವಗಳ ಅಧ್ಯಯನಕ್ಕೆ ಸೂಕ್ತ ಯಂತ್ರಗಳನ್ನು ಕಂಡುಹಿಡಿದರೆ, ಈ ಸತ್ಯ ಅನಾವರಣಗೊಳ್ಳಬಹುದು. ಅದನ್ನು ಅರ್ಥೈಸಿಕೊಳ್ಲಬಲ್ಲಷ್ಟು ವಿಜ್ಞಾನವೇ ಬೆಳೆಸಿಲ್ಲದಿರುವಾಗ ಅರೆಬರೆಜ್ಞಾನದಿಂದ ಮಂತ್ರದೊಳಗೆ ಶಕ್ತಿಯಿಲ್ಲವೆನ್ನುವುದು ಸರಿಯಾ?

ಗಾಯತ್ರಿ ಮಂತ್ರವನ್ನು ಕಂಡವರು ವಿಶ್ವಾಮಿತ್ರರಂತೆ. ತಪಸ್ಸಿಗೆ ಕುಳಿತು ಮೇನಕೆಯಿಂದಾಗಿ ವ್ರತ ಭಂಗವಾಗಿ ಮತ್ತೆ ಹಠದಿಂದ ಬ್ರಹ್ಮಬಲ ಸಆಕ್ಷಾತ್ಕರಿಸಿಕೊಂಡ ವಿಶ್ವಾಮಿತ್ರರು ವಸಿಷ್ಠರ ಪಾದಗಳಿಗೆ ಎರಗಿದಾಗ ಹೊರಬಂದ ಶ್ರೇಷ್ಠ ಮಂತ್ರವಂತೆ ಇದು. ಸಂಧ್ಯಾ ಕಾಲದಲ್ಲಿ ಇದನ್ನು ಉಚ್ಚರಿಸುವಾಗ ಮೆದುಳಿನ ಮುಂಭಾಗದ ಮೇಲೆ ವಿಶೇಷ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ನಮ್ಮವರು
ಒಪ್ಪಿದ್ದರು, ಸಿದ್ಧಪಡಿಸಿಕೊಂಡಿದ್ದರು. ಆಧುನಿಕ ವಿಜ್ಞಾನ ಇದನ್ನೇ ಬೇರೆ ಬೇರೆ ಮಾರ್ಗಗಳಿಂದ ಸಾಧಿಸಿಕೊಳ್ಳಲು ಯತ್ನಿಸುತ್ತಿದೆ. 1910ರಲ್ಲಿ ಲಂಡನ್ನಿನ ಕೆಲವು ವಿಜ್ಞಾನಿಗಳು ತಲೆಯ ಹೊರಭಾಗಕ್ಕೆ ಕೊಟ್ಟ ವಿದ್ಯುತ್ ಶಾಕ್‍ನಿಂದ ನರಗಳು ಪ್ರಭಾವಕ್ಕೆ ಒಳಗಾಗುವುದನ್ನು ಗುರುತಿಸಿದರು. 1985ರಲ್ಲಿ ಇನ್ನಷ್ಟು ವಿಜ್ಞಾನಿಗಳು ಪ್ರಯೋಗ ಮಾಡಿ ನೇರ ವಿದ್ಯುತ್ ಬಳಕೆಯ ಬದಲು ಕಾಂತೀಯ ವಿದ್ಯುತ್(ಎಲೆಕ್ಟ್ರೋ ಮ್ಯಾಗ್ನೆಟ್) ಅನ್ನು ಬಳಸಿ ಬೇಕಾದ ನರಗಳನ್ನು ಚುರುಕುಗೊಳಿಸುವ ಪದ್ಧತಿ ಹುಡುಕಿದರು. ಇದನ್ನೇ ಇಂದು ವೈದ್ಯಕೀಯ ವಿಭಾಗದಲ್ಲಿ ಟ್ರಾನ್ಸ್‍ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ ಅನ್ನೋದು. ಮಾನಸಿಕ ಖಿನ್ನತೆ, ಸ್ಕಿಜೋಫ್ರೇನಿಯಾದಂತಹ ರೋಗಗಳಿಗೆ ಸೂಕ್ತ ಪರಿಹಾರ ಇದೆಂದು ವೈದ್ಯರು ಹೇಳುತ್ತಾರೆ. ಪ್ರಯೋಗದಲ್ಲಿ ಸ್ವಲ್ಪ ಎಡವಟ್ಟಾದರೂ ವ್ಯಕ್ತಿ ಮೂರ್ಛೆ ಹೋಗುವ ಅಥವಾ ಮೆದುಳು ಸ್ವಾಧೀನ ಕಳೆದುಕೊಳ್ಳುವ ಸಥಿತಿಗೂ ತಲುಪಬಹುದೆಂದು ಎಚ್ಚರಿಕೆಯನ್ನೂ ಕೊಡುತ್ತಾರೆ.

ಈಗ ಸಊರ್ಯನತ್ತ ಮರಳಿ ಬನ್ನಿ. ವಿದ್ಯುತ್ತನ್ನು ಕೊಟ್ಟು ನರಗಳನ್ನು ಉದ್ದೀಪಿಸುವ ಪ್ರಯತ್ನ ಇಂದು ವಿಜ್ಞಾನಿಗಳು ಮಾಡುತ್ತಿದ್ದಾರೆ; ವಿದ್ಯುತ್ತಿನ ಮೂಲಸ್ರೋತವಾದ ಸೂರ್ಯನೆದುರಿಗೆ ನಿಂತು ನರಗಳನ್ನು ಪ್ರದೀಪ್ತಗೊಳಿಸುವ ಶ್ರೇಷ್ಠ ಪದ್ಧತಿಯನ್ನು ನಮ್ಮವರು ಅಂದೇ ವಿಕಾಸಗೊಳಿಸಿದ್ದರು. ನಮ್ಮ ಉಪಾಸನೆ ಪರಿಸರಕ್ಕೆ ಅದೆಷ್ಟು ಪೂರಕವೆಂದರೆ, ಅಲ್ಲಿ ದುಷ್ಪರಿಣಾಮಗಳಾಗುವ ಹೆದರಿಕೆಯೇ ಇಲ್ಲ!
ಅಂದಹಾಗೆ ಗೀತೆಯಲ್ಲಿ ಶ್ರೀಕೃಷ್ಣ ತಾನು ವೈಶ್ವಾನರನಾಗಿ ಜಠರದಲ್ಲಿ ಕುಳಿತಿರುತ್ತೇನೆ ಅಂದಿರೋದನ್ನು ಕೇಳಿದ್ದೀರಲ್ಲಾ! ವೈದ್ಯಕೀಯ ಜಗತ್ತು ಹೊಟ್ಟೆಯನ್ನು ಸೆಕೆಂಡ್ ಬ್ರೈನ್ (ಎರಡನೇ ಮೆದುಳು) ಎನ್ನುತ್ತವೆ. ಮೆದುಳಿನಲ್ಲಿ ಉ0ಟಾಗುವ ಎಲ್ಲ ಬಗೆಯ ರಾಸಯನಿಕ ಪ್ರಕ್ರಿಯೆಗಳು ಹೊಟ್ಟೆಯಲ್ಲಾಗುತ್ತವೆ0ನ್ದರ್ಥ . ಅದ್ದಕ್ಕೆ ಹೊಟ್ಟೆ ಸರಿಯಾಗಿದ್ದರೆ ಆರೋಗ್ಯ ಎ0ದು ಹೇಳಿ ನಮ್ಮವರು ಅದರ ರಕ್ಷಣೆಗೂ ಅಷ್ಟೆ ಗಮನ ಕೊಟ್ಟಿದ್ದರು.

ಭಾರತದ ವಿಶ್ವಗುರುತ್ವದ ಹಿಂದಿನ ಶಕ್ತಿಯೇ ಅದು. ನಾವು ಪ್ರಕೃತಿಯ ರಹಸ್ಯಗಳನ್ನು ಭೇದಿಸಿದರೆ, ಜಗತ್ತಿನ ಜನರೆಲ್ಲ ಸುತ್ತಣ ಪ್ರಕೃತಿ ನಮ್ಮ ಅಡಿಯಾಳೆಂಬಂತೆ ಶೋಷಿಸಿ ಪ್ರಭುತ್ವ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ. ಭಾರತ ಪ್ರಕೃತಿಯನ್ನು ಪ್ರೀತಿಸಿ ಅದನ್ನು ಒಲಿಸಿಕೊಂಡೇ ಬದುಕು ನಡೆಸುವುದನ್ನು ಹೇಳಿಕೊಟ್ಟಿದೆ. ಹೀಗಾಗಿಯೇ ಇಲ್ಲಿ ದೇಹದಿಂದ ಹಿಡಿದು ವಿಶ್ವದವರೆಗೆ ಒಂದು ಸೂಕ್ಷ್ಮವಾದ ಅನುಬಂಧವಿದೆ. ದೇಹದ ಪ್ರತಿಯೊಂದು ಜೀವಕೋಶವೂ ವಿಶ್ವದ ಮಹತ್ತಿನೊಂದಿಗೆ ಯಾರಿಗೂ ಕೇಳದ ಸೂಕ್ಷ್ಮ ಭಾಷೆಯಲ್ಲಿ ಸಂವಾದಿಸುತ್ತ ಇರುತ್ತದೆ. ಈ ಸೂಕ್ಷ್ಮ ಸಂವಾದದಿಂದಾಗಿಯೇ ಪ್ರಕೃತಿಯೂ ತನ್ನನ್ನು ತಾನು ಅನಾವರಣಗೊಳಿಸಿಕೊಳ್ಳೋದು. ಅದಕ್ಕೇ ಇಲ್ಲಿ ಯಾವ ಋಷಿಯೂ ಮಂತ್ರವನ್ನು‘ಕಂಡುಹಿಡಿದ’ಅನ್ನುವುದಿಲ್ಲ. ಬದಲಿಗೆ ದರ್ಶನ ಮಾಡಿಕೊಂಡ ಎನ್ನಲಾಗುತ್ತದೆ. ಪ್ರಕೃತಿಯ ಸತ್ಯ ಅವನೆದುರಿಗೆ ಗೋಚರವಾದ ರೀತಿ ಅದು. ಇದರಿಂದಾಗಿಯೇ ಸಾವಿರಾರು ವರ್ಷಗಳ ಹಿಂದೆ ಅವರು ಹೇಳಿರುವುದನ್ನು ಇಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸುವುದಷ್ಟೆ ನಮ್ಮ ಕೆಲಸ. ಅಷ್ಟೇ ಅಲ್ಲ, ಅವರು ಹಾಕಿಕೊಟ್ಟ ರಾಜಮಾರ್ಗದಿಂದ ದೂರ ಸರಿದಷ್ಟೂ ಅದೆಷ್ಟು ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದೇವೆಂಬ ಅರಿವೂ ನಮಗಾಗುತ್ತದೆ. ಪ್ರಪಂಚ ಮಾರ್ಗ ಸಾಕು, ಮುಕ್ತಿಯ ಯೋಗ ಮಾರ್ಗ ಬೇಕೆಂದು ಜಗತ್ತಿಗೆ ಅನ್ನಿಸಿರೋದೂ ಅದ್ಕಕಾಗಿಯೇ.

Click to comment

Leave a Reply

Your email address will not be published. Required fields are marked *

Most Popular

To Top