Tech

ಫ್ಲಿಪ್ ಕಾರ್ಟ್ ಹುಟ್ಟಿದ ರೀತಿ, ಪ್ರತಿ ಯುವಕನಿಗೂ ಸ್ಫೂರ್ತಿ!

-ಅಭಿಲಾಷ್ ಸೋಮೇನಹಳ್ಳಿ

ಭಾರತದಲ್ಲಿಂದು 30 ಕೋಟಿಗೂ ಹೆಚ್ಚು ಜನ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಭಾರತೀಯರು ಈಗ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲ ಬಳಸುವ ಪ್ರತಿಯೊಬ್ಬ ಭಾರತೀಯನಿಗೂ ‘ಫ್ಲಿಪ್ ಕಾರ್ಟ್’ ಚಿರಪರಿಚಿತ. ಇದರ ಹಿಂದಿನ ಮಾಸ್ಟರ್ ಮೈಂಡ್ ಹಾಗೂ ಭಾರತದಲ್ಲಿ ಮೊಟ್ಟಮೊದಲನೆಯದಾಗಿ ಒಂದು ಇ-ಕಾಮರ್ಸ್ ವೆಬ್ಸೈಟ್ ತೆರೆದಂತಹ ವ್ಯಕ್ತಿ ‘ಸಚಿನ್ ಬನ್ಸಾಲ್’. ಕ್ರಿಕೆಟ್ನಲ್ಲಿ ಸಚಿನ್ ತೆಂಡಲ್ಕೂರ್ ಎಷ್ಟು ಚಿರಪರಿಚಿತರೋ, ವ್ಯವಹಾರ ಕ್ಷೇತ್ರದಲ್ಲಿ ಸಚಿನ್ ಬನ್ಸಾಲ್ ಅಷ್ಟೇ ಪರಿಚಿತರು.

ಪಂಜಾಬಿನ ಚಂಡೀಘಡದಲ್ಲಿ ಜನಿಸಿದ ಸಚಿನ್ ಬನ್ಸಾಲ್ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಡೆದಿದ್ದು ಭಾರತದ ಅತ್ಯಂತ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯಿಂದ. ಪದವಿ ಮುಗಿದ ನಂತರ ಅನೇಕ ಸಾಫ್ಟ್ ವೇರ್ ಕಂಪೆನಿಗಳು ಕೆಲಸಕ್ಕೆ ಲಕ್ಷಾಂತರ ರೂಪಾಯಿ ಆಫರ್ ಮಾಡಿದರೂ ಸಹ ಸಚಿನ್ ಆಯ್ದುಕೊಂಡದ್ದು ಅಮೇಜಾನ್.ಕಾಮ್ ನಲ್ಲಿ ಕೆಲಸ. ಅಮೇಜಾನ್ ಜಗತ್ತಿನ ಅತ್ಯಂತ ದೊಡ್ಡ ಇ-ಕಾಮರ್ಸ್ ವೆಬ್ ಸೈಟ್. ಅಮೇಜಾನ್ನಲ್ಲಿ ಸಚಿನ್ ರಿಗೆ ಜೊತೆಯಾದವರೇ ಬಿನ್ನಿ ಬನ್ಸಾಲ್. ಅದಾಗಲೇ ಸಚಿನ್ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ಬಿನ್ನಿ ಬನ್ಸಾಲ್ ಕೆಲಸ ಪ್ರಾರಂಭಿಸಿ ಕೇವಲ 7 ತಿಂಗಳಾಗಿತ್ತು. ಇ-ಕಾಮರ್ಸ್ ಕಂಪನಿಯ ವ್ಯವಹಾರವನ್ನು ಅರ್ಥಮಾಡಿಕೊಂಡು ಭಾರತದಲ್ಲೇಕೆ ಈ ತರಹದ ಕಂಪನಿಯೊಂದನ್ನು ಪ್ರಾರಂಭಿಸಬಾರದು ಎಂಬ ಆಲೋಚನೆ ಬಂದದ್ದೇ ತಡ, ಅಮೇಜಾನ್ನಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕಾಗಿ ಒಂದು ಇ-ಕಾಮರ್ಸ್ ವೆಬ್ ಸೈಟ್ ವಿನ್ಯಾಸಗೊಳಿಸಲು ಪ್ರಾರಂಭಿಸಿದರು. ಇವರಿಬ್ಬರ ಕನಸಿನ ಕೂಸೇ ‘ಫ್ಲಿಪ್ ಕಾರ್ಟ್’. ಇದು ಸಪ್ಟೆಂಬರ್ 2007 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು.

ಭಾರತ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶವೇನೋ ಸರಿ, ಆದರೆ ವಸ್ತುಗಳನ್ನು ಜನ ಆನ್ ಲೈನ್ ನಲ್ಲಿ ಕೊಂಡುಕೊಳ್ಳುತ್ತಾರೋ ಇಲ್ಲವೋ ಎನ್ನುವ ಭಯ ಇದ್ದೇ ಇತ್ತು. ಮೊದಲು ಕೆಲವು ಅಂತರರಾಷ್ಟ್ರೀಯ ಪ್ರಕಾಶಕರು ಮತ್ತು ವಿತರಕರ ಜೊತೆ ಒಪ್ಪಂದ ಮಾಡಿಕೊಂಡು ಕೇವಲ ಪುಸ್ತಕಗಳ ಮಾರಾಟವನ್ನು ಮಾತ್ರ ಪ್ರಾರಂಭಿಸಿದ್ದರು. ಆರಂಭದ ದಿನಗಳಲ್ಲಿ ಬಂದ ಆರ್ಡರ್ ಗಳನ್ನು ತಾವೇ ಖುದ್ದಾಗಿ ಸ್ಕೂಟರ್ ನಲ್ಲಿ ಮನೆಮನೆಗೆ ತಲುಪಿಸುತ್ತಿದ್ದರು. ಆಗಿನ್ನೂ ಬೇರೆಯವರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಟ್ಟಕ್ಕೆ ಇವರು ಬೆಳೆದಿರಲಿಲ್ಲ. ಕಸ್ಟಮರ್ ಸರ್ವೀಸ್ ನಲ್ಲಿ ಸಚಿನ್ ರದ್ದೇ ನಂಬರ್ ಇದ್ದ ಕಾರಣ, ‘ನನ್ನ ಆರ್ಡರ್ ಇನ್ನೂ ತಲುಪಿಲ್ಲ, ಆ ಪುಸ್ತಕ ಯಾವಾಗ ಬರುತ್ತೆ’ ಎಂದು ದಿನದ 24 ಗಂಟೆಯೂ ಫೋನ್ ಬರುತ್ತಿತ್ತು. ಕರೆ ಮಧ್ಯರಾತ್ರಿ, ಬೆಳಗಿನ ಜಾವದಲ್ಲಿ ಬಂದರೂ ಸಚಿನ್ ಅಷ್ಟೇ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಹಗಲೆಲ್ಲ ಕೆಲಸ, ರಾತ್ರಿಯಾದರೆ ಬೆಳಗಿನ ಜಾವದವರೆಗೂ ಕರೆಗಳನ್ನು ಸ್ವೀಕರಿಸುತ್ತಿದ್ದರು. ಐಐಟಿ ಪದವೀಧರನಾಗಿ ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ, ಎಸಿ ರೂಮಿನಲ್ಲಿ ಕುಳಿತು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಅವಕಾಶವಿರುವಾಗ, ಹೀಗೆ ಹಗಲಿರುಳು ಕಷ್ಟ ಪಡುವ ಅವಶ್ಯಕತೆಯೇನಿದೆಯೆಂದು ಎಂದು ಕ್ಷಣ ಆಲೋಚಿಸಿ ಇದರ ಕೈ ಬಿಟ್ಟಿದ್ದಿದ್ದರೆ ಇಂದು ಫ್ಲಿಪ್ ಕಾರ್ಟ್ ಇರುತ್ತಲೇ ಇರಲಿಲ್ಲ.
ಅವರಿಗಿದ್ದದ್ದು ಒಂದೇ ಗುರಿ. ಭಾರತೀಯರಿಗೆ ತಾವು ಕುಳಿತಲ್ಲಿಯೇ ಜಗತ್ತಿನ ಯಾವುದೇ ವಸ್ತುವನ್ನು ಕೊಂಡುಕೊಳ್ಳುವಂತೆ ಮಾಡಬೇಕು ಹಾಗೂ ಭಾರತೀಯ ಕಂಪನಿಯೊಂದು ಜಗತ್ತಿನಲ್ಲಿ ಸದ್ದು ಮಾಡಬೇಕು ಎಂದು.

ಇಂದು ಫ್ಲಿಪ್ ಕಾರ್ಟ್ ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಜಗತ್ತಿನ ಅತ್ಯುತ್ತಮ ಕಂಪನಿಗಳು ತಮ್ಮ ಪ್ರಾಡಕ್ಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವಾಗ ಅದನ್ನು ಫ್ಲಿಪ್ ಕಾರ್ಟ್ ನಲ್ಲಿಯೇ ಬಿಡುಗಡೆ ಮಾಡಬೇಕೆಂದು ಭಾರತೀಯ ಕಂಪನಿಯ ಮುಂದೆ ಕೈಜೋಡಿಸಿ ನಿಂತಿರುತ್ತವೆ.
ಕೇವಲ 4 ಲಕ್ಷ ರೂ ಬಂಡವಾಳದಿಂದ ಪ್ರಾರಂಭವಾದ ಫ್ಲಿಪ್ ಕಾರ್ಟ್ ನ ಇಂದಿನ ವಾರ್ಷಿಕ ವಹಿವಾಟು 200 ಬಿಲಿಯನ್, ಎಂದರೆ 20 ಸಾವಿರ ಕೋಟಿ!!

ಅಷ್ಟೇ ಅಲ್ಲದೇ, myntra.com, letsbuy.com, phone pe ಹಾಗೂ ಇನ್ನಿತರ ಕಂಪನಿಗಳನ್ನು ತನ್ನದಾಗಿಸಿಕೊಂಡು ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ.
ಒಂದು ಸಣ್ಣ ಪುಸ್ತಕ ವ್ಯಾಪಾರದ ವೆಬ್‌ಸೈಟ್ ಪ್ರಾರಂಭವಾದ 11 ವರ್ಷಗಳಲ್ಲಿ ಇಡೀ ಭಾರತದ ಅತೀ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿ ಹೊರಹೊಮ್ಮಿದೆ. ಸಚಿನ್ ಮತ್ತು ಬಿನ್ನಿ ಬನ್ಸಾಲ್ ರ ದೃಢಸಂಕಲ್ಪ, ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ ಈ ಮಹತ್ತರ ಸಾಧನೆಗೆ ಕಾರಣ.
ಫ್ಲಿಪ್ ಕಾರ್ಟ್ ಹುಟ್ಟಿದ ರೀತಿ, ಪ್ರತಿ ಯುವಕನಿಗೂ ಸ್ಫೂರ್ತಿಯೇ ಸರಿ!

(ಲೇಖಕರು ಇಥಿಯೋಪಿಯಾದಲ್ಲಿ ನೆಲೆಸಿದ್ದು, ಭಾರತದ ಕುರಿತಂತೆ, ಇಲ್ಲಿನ ರಾಜಕೀಯದ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಅಂಕಣದ ಮೂಲಕ ತಿಳಿಸುತ್ತಿದ್ದಾರೆ.)

1 Comment

1 Comment

Leave a Reply

Your email address will not be published. Required fields are marked *

Most Popular

To Top