National

ಬದುಕಿನ ಉದ್ದೇಶ ಏನು? ಪ್ರಶ್ನೆ ಕೇಳಿಕೊಂಡಿದ್ದೇವಾ?

ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತ ಸ್ವಾಮಿ ವಿವೇಕಾನಂದರ ಮನದಲ್ಲಿ ಎಂತಹ ತಳಮಳವೆದ್ದಿರಬೇಕು. ಬಹುಶಃ ಭೋರ್ಗರೆದು ಬಂಡೆಗಳಿಗೆ ಬಡಿಯುತ್ತಿರುವ ಅಲೆಗಳಿಗಿಂತಲೂ ಜೋರಾದ ಆಲೋಚನೆಗಳ ಉಬ್ಬರವಿಳಿತ ಅವರ ಹೃದಯದಲ್ಲಿ ನಡೆದಿರಬಹುದು. ಜೀವನದ ಮಹತ್ವ ಘಟ್ಟದಲ್ಲಿ ತೆಗೆದುಕೊಳ್ಳಬೇಕಾದ ಬಲುದೊಡ್ಡ ನಿರ್ಣಯದ ಮುನ್ನ ಈ ರೀತಿಯ ತುಮುಲವೇರ್ಪಡುವುದು ಸಹಜ. ವಿವೇಕಾನಂದರಿಗಂತೂ ಅದು ಬಲುದೊಡ್ಡ ತಿರುವೇ ಆಗಿತ್ತು. ಗುರುದೇವ ರಾಮಕೃಷ್ಣರ ದೇಹತ್ಯಾಗದ ನಂತರ ಅವರ ಜವಾಬ್ದಾರಿ ನೂರುಪಟ್ಟು ಜಾಸ್ತಿಯಾಗಿತ್ತು. ಮನೆಯ ಸಮಸ್ಯೆಗಳಂತೂ ಹಿಮಾಲಯಕ್ಕಿಂತಲೂ ಎತ್ತರ. ತಂದೆಯನ್ನು ಕಳೆದುಕೊಂಡ ನಂತರ ಕಿತ್ತು ತಿನ್ನುತ್ತಿದ್ದ ಬಡತನ ಅಂತರಂಗವನ್ನೇ ಕಾಡುತ್ತಿತ್ತು. ಸನ್ಯಾಸಿಯಾದವ ಬಡತನವನ್ನು ಇಷ್ಟಪಟ್ಟು ಅಪ್ಪಿಕೊಂಡಿದ್ದಾನೆ ಸರಿ, ಆದರೆ ತಂದೆಯ ಕಾಲದಲ್ಲಿ ಆನಂದದಿಂದಿದ್ದ ತಾಯಿ ತನ್ನ ಕಾಲದಲ್ಲಿ ನೋವುಣ್ಣಬೇಕಾಯ್ತಲ್ಲ ಎಂಬ ದುಃಖ ಸನ್ಯಾಸಿಯನ್ನು ಬಾಧಿಸದಿರುತ್ತದೆಯೇನು? ಹೆತ್ತತಾಯಿಯ ನೋವು ಈ ಬಗೆಯದ್ದಾದರೆ, ಹೊತ್ತ ಮಾತೃಭೂಮಿಯ ದುಃಖ ಬೇರೆಯದ್ದೇ ಬಗೆಯದು. ಒಂದು ಕಾಲದಲ್ಲಿ ಜಗತ್ತನ್ನೇ ಆಳುತ್ತಿದ್ದ ಆಕೆ ಈಗ ಪರಕೀಯರ ದಾಸ್ಯದಲ್ಲಿ ಬದುಕು ಸವೆಸುತ್ತಿದ್ದಾಳೆ. ಸಿರಿವಂತಿಕೆಯ ಶೃಂಗದಲ್ಲಿದ್ದ ಆಕೆ ಈಗ ದಾರಿದ್ರ್ಯದ ಮಡುವಿನಲ್ಲಿದ್ದಾಳೆ. ಹೊಸ-ಹೊಸ ಭೂಖಂಡಗಳ ಸಂಶೋಧಿಸುತ್ತಾ ಜಗವ ಗೆಲ್ಲುವ ತವಕದಿಂದ ಹೊರಡುತ್ತಿದ್ದ ತರುಣ ಸಾಹಸಿಗಳ ತಾಯಿಯಾಗಿದ್ದ ಆಕೆ ಇಂದು ಹೇಡಿ ಜನರನ್ನು ಮಡಿಲೊಳಗಿಟ್ಟುಕೊಂಡು ಸಾಕುತ್ತಿದ್ದಾಳೆ. ಮಕ್ಕಳೀಗ ಅಸೂಯೆಯಿಂದ ಸ್ವಾರ್ಥಪರರಾಗಿ ತಾಯಿಯನ್ನೇ ಇರಿಯುತ್ತ ನಿಂತಿರುವ ದೃಶ್ಯ ಆಕೆಯನ್ನು ಬಾಧಿಸುತ್ತಿದೆ. ಓಹ್! ಹೆತ್ತತಾಯಿಂಗಿತಲೂ ಹೊತ್ತ ತಾಯಿಯ ಸಮಸ್ಯೆ ಬಲು ಗಂಭೀರ. ಚಿತ್ರಗಳು ಒಂದೊಂದಾಗಿ ಕಣ್ಣ ಮುಂದೆ ಹಾದು ಹೋಗುತ್ತಿರುವಂತೆ ಕಣ್ಣೀರು ಧಾರೆ-ಧಾರೆಯಾಗಿ ಹರಿದಿರಲು ಸಾಕು. ಸನ್ಯಾಸಿ ಈಗ ಗೊಂದಲದಲ್ಲಿ. ಹೆತ್ತ ತಾಯಿಗಾಗಿ ಬದುಕು ಮುಡಿಪಾಗಬೇಕೋ ಅಥವಾ ಹೊತ್ತವಳ ನೋವಿಗೆ ಪ್ರತಿಸ್ಪಂದಿಸಬೇಕೋ? ಕಾವಿ ಮೈಮೇಲಿರಲೋ ಅಥವಾ ತಾನು ಎಲ್ಲರಂತೆ ಬದುಕು ಸವೆಸಲೋ? ಗುರುದೇವನ ಆಣತಿಯನ್ನು ಶಿರಸಾವಹಿಸಿ ಪಾಲಿಸಲೋ ಅಥವಾ ಸಹಜವಾಗಿ ಇತರೆಲ್ಲರೂ ಹೇಳುವ ಈ ಬದುಕಿಗೆ ಮರಳಿಬಿಡಲೋ?


ಇದು ಅತ್ಯಂತ ಕಠಿಣ ಸಮಯ. ಈ ಹೊತ್ತಿನಲ್ಲಿ ಕೈಗೊಳ್ಳುವ ನಿರ್ಣಯ ಭವಿಷ್ಯವನ್ನೇ ನಿರ್ಧರಿಸಿಬಿಡುತ್ತದೆ. ಅದು ಮುಂದಿನ ಪೀಳಿಗೆಗೆ ದಿಕ್ಸೂಚಿಯೂ ಹೌದು. ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮೀಜಿ ಮೂರು ದಿನ ಕಳೆದಿದ್ದಿರಬಹುದು. ಗೊಂದಲ ಪರಿಹರಿಸಲು ಗುರುದೇವರೇ ಬರಬೇಕಿತ್ತು. ಇಷ್ಟಕ್ಕೂ ಗುರುವಿನ ಆಣತಿಯಿಲ್ಲದೇ ಒಂದು ಹೆಜ್ಜೆಯನ್ನೂ ಮುಂದಿಟ್ಟವರಲ್ಲ ಅವರು. ಈಗ ಗುರು ಶಿಷ್ಯನನ್ನು ಪರೀಕ್ಷಿಸುತ್ತಿದ್ದಾನೋ ಅಥವಾ ಶಿಷ್ಯನೇ ಗುರುವಿಗೆ ದಾರಿ ತೋರುವಂತೆ ಸವಾಲೊಡ್ಡುತ್ತಿದ್ದಾನೋ ಗೊತ್ತಾಗುತ್ತಿಲ್ಲ. ಇದ್ದಕ್ಕಿದ್ದಂತೆ ಪಶ್ಚಿಮದ ದಿಕ್ಕಿನಿಂದ ಗುರುದೇವ ರಾಮಕೃಷ್ಣರು ಕೈಬೀಸಿ ಕರೆದಂತಾಯ್ತು. ಎರಡು ಸಂವತ್ಸರಗಳ ಹಿಂದೆ ದೇಹತ್ಯಾಗ ಮಾಡಿದ್ದ ಗುರುದೇವರು ಈ ರೂಪದಲ್ಲಿ ಇಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದೆಂದು ವಿವೇಕಾನಂದರು ಆಲೋಚಿಸಿಯೂ ಇರಲಿಲ್ಲ. ಅವರಿಗೆ ಒಂದು ಕ್ಷಣ ನಾಚಿಕೆಯಾಗಿರಲಿಕ್ಕೂ ಸಾಕು. ಆರು ವರ್ಷಗಳ ಕಾಲದ ಗುರುದೇವರ ಸಾನಿಧ್ಯವನ್ನು ನೆನಪಿಸಿಕೊಂಡು ಅವರು ಕರಗಿಯೇ ಹೋದರು. ಅವರು ತೋರಿದ ಪ್ರೀತಿ, ರೂಪಿಸಿಕೊಟ್ಟ ಬದುಕು, ಇವೆಲ್ಲವನ್ನೂ ಬಿಡಬೇಕೆಂದು ಯೋಚಿಸಿದ್ದಾದರೂ ಹೇಗೆ? ‘ನರೇನ್, ಶಿಕ್ಷಣ ನೀಡುವನು’ ಎಂಬ ಅವರ ಮಾತು ಎಂದಾದರೂ ಸುಳ್ಳಾಗಲು ಸಾಧ್ಯವೇನು? ಎನ್ನೊಳಗೆ ಆ ಯೋಗ್ಯತೆಯನ್ನು ತುಂಬಿ ಅವರು ಶಿಲ್ಪವಾಗಿಸಿದ್ದಾರೆ. ಈಗ ಸಾಮಾನ್ಯ ಬದುಕಿಗೆ ಮರಳುವುದು ಸಾಧ್ಯವಾದೀತಾದರೂ ಹೇಗೆ? ನಿಶ್ಚಯ ರೂಪುಗೊಂಡಿತು. ಸ್ವಾಮಿ ವಿವಕಾನಂದರು ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಕೊಡಮಾಡುವ ಮತ್ತು ಭಾರತದ ದಾರಿದ್ರ್ಯವನ್ನು ನೀಗಿಸಲು ಬೇಕಾದ ಧನಸಂಗ್ರಹವನ್ನು ಪಶ್ಚಿಮದಲ್ಲಿ ಮಾಡುವ ಸಂಕಲ್ಪ ಕೈಗೊಂಡರು. ಆಮೇಲಿನದ್ದು ಇತಿಹಾಸ. ಆದರೆ ಒಂದಂತೂ ಸತ್ಯ. ಕನ್ಯಾಕುಮಾರಿಯ ಬಂಡೆ ವಿವೇಕಾನಂದರ ಪಾಲಿಗೆ ತಪಸ್ಸಿನ ಸ್ಥಳ, ನಿರ್ಣಯದ ಸ್ಥಳ, ಎಲ್ಲಕ್ಕಿಂತ ಹೆಚ್ಚು ಆತ್ಮಸ್ಥೈರ್ಯವನ್ನು ವೃದ್ಧಿಸಿದ ಕ್ಷೇತ್ರ. ಇನ್ನೂ ವಿಶೇಷವೆಂದರೆ ಅವರ ಬದುಕಿನ ಈ ದಿಕ್ಕು ಸ್ಪಷ್ಟವಾಗಿದ್ದು ಡಿಸೆಂಬರ್ 25ಕ್ಕೆ.


ಯಾವಾಗಲೂ ಹಾಗೆಯೇ. ಗುರಿ ನಿಚ್ಚಳಗೊಂಡೊಡನೆ ಅದಕ್ಕೆ ಪೂರಕವಾದ ದಾರಿಯೂ ತನ್ತಾನೇ ತೆರದುಕೊಳ್ಳುತ್ತದೆ. ಅಲ್ಲಿಯವರೆಗೂ ಸಾಮಾನ್ಯ ಪರಿವ್ರಾಜಕರಾಗಿ ತಿರುಗಾಡುತ್ತಿದ್ದ ವಿವೇಕಾನಂದರು ಈಗ ಸಮರ್ಥ ಗೆಳೆಯರನ್ನು ಪಡೆದುಕೊಂಡರು. ಸಾಕಷ್ಟು ಶಿಷ್ಯರು ದೊರಕಿದರು. ಪಶ್ಚಿಮದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದ ಕುರಿತಂತೆ ವಿವೇಕಾನಂದರಿಗೆ ಹೆಚ್ಚು-ಹೆಚ್ಚು ಮಾಹಿತಿಗಳು ದೊರಕಲಾರಂಭಿಸಿದವು. ಅದಕ್ಕಾಗಿ ಈ ಹೊಸ ಶಿಷ್ಯರೇ ಧನಸಂಗ್ರಹವನ್ನೂ ಆರಂಭಿಸಿದರು. ಈ ನಡುವೆಯೇ ಹೈದರಾಬಾದಿಗೆ ಹೋಗುವ ಅವಕಾಶ ದೊರೆತು ಸಾರ್ವಜನಿಕವಾಗಿ ಮಾತನಾಡುವ ತಯಾರಿಯನ್ನೂ ದೇವರು ಮಾಡಿಸಿದ. ಕೊನೆಗೆ ಸಾಮಾನ್ಯನಾಗಿ ಅಮೇರಿಕಾ ಸೇರಿಕೊಳ್ಳದೇ ಖೇತ್ರಿ ಮಹಾರಾಜರ ರಾಜಗುರುವಾಗಿ ಚಿಕಾಗೊಕ್ಕೆ ಹೋಗುವ ವ್ಯವಸ್ಥೆಯೂ ಆಯ್ತು. ಸ್ವಾಮೀಜಿಯೇ ಹೇಳುತ್ತಾರಲ್ಲ, ಬದುಕು ಎಂದರೆ ಸುತ್ತಲಿನ ಪರಿಸ್ಥಿತಿಗಳ ನಡುವೆ ನಡೆಯುವ ಕದನ ಅಂತ. ಈ ಕದನವನ್ನು ಮಾಡಲಾಗದೇ ಕೈಚೆಲ್ಲಿಬಿಟ್ಟರೆ ಅಂಥವನು ಇದ್ದು ಬಿದ್ದುಹೋಗುತ್ತಾನೆ. ಆದರೆ ಯಾರು ತುಳಿಯಲು ಯತ್ನಿಸುತ್ತಿರುವ ಈ ಪರಿಸ್ಥಿತಿಗಳೊಂದಿಗೆ ಜೂಜಾಡುತ್ತಾ ಗೆದ್ದು ದೃಢವಾಗಿ ನಿಲ್ಲುವನೋ ಅವನು ನಾಯಕನಾಗಿಬಿಡುತ್ತಾನೆ. ಕನ್ಯಾಕುಮಾರಿಯ ಆ ಬಂಡೆಯ ಮೇಲೆ ವಿವೇಕಾನಂದರು ಅಂಥದ್ದೇ ಒಂದು ಭರ್ಜರಿ ಹೋರಾಟ ಮಾಡಿದ್ದರು. ಮುಂದೆ ಇದನ್ನೇ ತಮ್ಮ ಧರ್ಮದ ಪರಿಕಲ್ಪನೆಯಲ್ಲಿ ಸೂಕ್ತವಾಗಿ ಕಟ್ಟಿಕೊಟ್ಟರೂ ಕೂಡ. ಸ್ವಾಮಿ ವಿವೇಕಾನಂದರು ಧರ್ಮದ ಆದರ್ಶವನ್ನು ಸ್ಪಷ್ಟ ದನಿಯಲ್ಲಿ ಹೇಳಿದ್ದರು, ‘ಯಾವ ಧರ್ಮ ಅನುಷ್ಠಾನಯೋಗ್ಯವಾಗಿಲ್ಲವೋ ಅದು ಧರ್ಮವೇ ಅಲ್ಲ’ ಎನ್ನುವುದು ಅವರ ಅಭಿಮತ. ಇಷ್ಟಕ್ಕೂ ನಾವು ಭೂಮಿಗೆ ಬಂದಿರುವುದಾದರೂ ಏತಕ್ಕೆ? ಈ ಪ್ರಶ್ನೆ ಕೇಳಿಕೊಳ್ಳಲೇಬೇಕಾದ್ದಲ್ಲವೇ? ಅನೇಕರಿಗೆ ಈ ಪ್ರಶ್ನೆ ಮನದಲ್ಲಿ ಮೂಡುವುದೇ ಇಲ್ಲ ಅಥವಾ ಉತ್ತರ ದಕ್ಕುವುದೇ ಇಲ್ಲ. ಮನೆಗೆ ಒಂದು ವಸ್ತುವನ್ನು ತರಬೇಕಾದರೆ ಅದು ಅಗತ್ಯವೋ ಇಲ್ಲವೋ ಎಂದು ಹತ್ತಾರು ಬಾರಿ ಚಚರ್ಿಸಿ, ಅಳೆದು ತೂಗಿ ತರುವ ನಾವು, ಭುವಿಯ ಮೇಲೆ ನಾವೇಕೆ ಬಂದಿದ್ದೇವೆ? ಎಂಬ ಪ್ರಶ್ನೆಯನ್ನು ಎಂದೂ ಕೇಳಿಕೊಂಡೇ ಇಲ್ಲ ಅಲ್ಲವೇ? ದಿನಕ್ಕೆ ಮೂರು ಬಾರಿ ಊಟ ಮಾಡುವುದು, ಒಂದಷ್ಟು ಅಧ್ಯಯನ ಮಾಡಿ ಕೆಲಸ ಗಿಟ್ಟಿಸಿ ಹಣದ ಗಳಿಕೆಗೋಸ್ಕರ ಎಡಬಿಡದೇ ಓಡುತ್ತಿರುವುದು. ಕೊನೆಗೊಂದು ಮದುವೆ, ಒಂದಷ್ಟು ಮಕ್ಕಳು; ಮುಂದೆ ಆ ಮಕ್ಕಳ ಓದು, ಅವರ ಮದುವೆ. ಒಟ್ಟಾರೆ ಬದುಕು ಇಷ್ಟೇನಾ? ವಿವೇಕಾನಂದರು ಈ ಪ್ರಶ್ನೆಯನ್ನು ಅನೇಕ ಬಾರಿ ತಮ್ಮ ಉಪನ್ಯಾಸಗಳಲ್ಲಿ ಚಚರ್ಿಸಿದ್ದಾರೆ. ಪಶ್ಚಿಮದಲ್ಲೂ, ಭಾರತದಲ್ಲೂ ಕೂಡ. ಅವರ ಉತ್ತರ ಸ್ವಾರಸ್ಯಕರವಾದ್ದು. ‘ನಾವು ಭುವಿಗೆ ಬಂದಿರುವುದೇ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು, ಜ್ಞಾನವನ್ನು ನಮ್ಮದಾಗಿಸಿಕೊಳ್ಳಲು. ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಲು ನಾವೇನು ಮಾಡಬೇಕು ಎಂಬ ಜ್ಞಾನವನ್ನು ಗಳಿಸಿಕೊಳ್ಳುವುದೇ ಭುವಿಗೆ ಬಂದಿರುವ ನಮ್ಮ ಉದ್ದೇಶ. ಅದೇ ನಮ್ಮ ಬದುಕು’ ಎನ್ನುವ ಸ್ವಾಮೀಜಿ ನಾಲ್ಕು ಪುರುಷಾರ್ಥಗಳ ಅಂತಿಮ ಹಂತದ ಕಲ್ಪನೆಯನ್ನು ನಮ್ಮೆದುರು ಬಿಚ್ಚಿಡುತ್ತಾರೆ. ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ವಿವರಣೆ ಕೊಡುತ್ತಾ ‘ಬೀಜವೊಂದರಿಂದ ಗಿಡ ಮೊಳಕೆಯೊಡೆದು ನೆಲವನ್ನು ಭೇದಿಸಿ, ಆಕಾಶಕ್ಕೆ ಮುಖ ಮಾಡಿ ಎದ್ದು ನಿಲ್ಲುವುದೇಕೆ? ಸೂರ್ಯ ಭೂಮಿಗೆ ಕೊಡುವ ಕೊಡುಗೆಯಾದರೂ ಏನು? ಎಲ್ಲವೂ ಮುಕ್ತಿಯ ಬಯಕೆಯೇ. ಪ್ರಕೃತಿ ನಮ್ಮನ್ನು ಮೇಲೇಳದಂತೆ ತುಳಿಯಲು ಯತ್ನಿಸುತ್ತಿರುವಾಗ ಆತ್ಮ ಮುಕ್ತಿಗಾಗಿ ಹೋರಾಟ ನಡೆಸುತ್ತದೆಯಲ್ಲ, ಅದೇ ನಿಜವಾದ ಬದುಕು’ ಎಂಬದು ಸ್ವಾಮೀಜಿಯವರ ವಿವರಣೆ. ನಮ್ಮಂತಹ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸ್ವಾಮೀಜಿ ದಾರಿ ತಪ್ಪಿರುವ ನಮ್ಮ ಬದುಕುಗಳನ್ನು ಹೇಗೆ ವಣರ್ಿಸುತ್ತಾರೆ ಗೊತ್ತಾ? ಪ್ರಕೃತಿಯನ್ನು ಎದುರಿಸಿ ನಿಲ್ಲುವ ಈ ಆತ್ಮದ ತುಡಿತವನ್ನು ಪ್ರಕೃತಿ ಆಮಿಷವೊಡ್ಡಿ ಸಮಾಧಾನಪಡಿಸುತ್ತದೆಯಂತೆ. ಒಂದಷ್ಟು ಸುಖವನ್ನು ಕೊಟ್ಟು ಮುಕ್ತಿಯ ಕುರಿತಂತೆ ಆಲೋಚಿಸದಂತೆಯೇ ಮಾಡಿಬಿಡುತ್ತದಂತೆ. ಬಹುಶಃ ನಾವು ಶಾಸ್ತ್ರಗಳಲ್ಲಿ ಕರೆಯುವ ಮಾಯೆಯ ಕಲ್ಪನೆ ಇದೇ ಇರಬೇಕೇನೋ. ನಾವು ಬಡತನದಿಂದ ಮೋಸ ಹೋಗುತ್ತೇವಂತೆ. ನನ್ನ ಬಳಿ ಹಣವಿಲ್ಲ, ಊಟಕ್ಕೆ ಗತಿಯಿಲ್ಲ ಎಂದು ಕೊರಗುತ್ತಲೇ ಇರುತ್ತೇವೆ. ಅದು ಪ್ರಕೃತಿ ಸ್ವಾತಂತ್ರ್ಯದ ಆಸೆಯಿಂದ ದೂರ ಮಾಡಲು ಬಳಸುವ ಒಂದು ಮಾರ್ಗ. ಇನ್ನೂ ಕೆಲವರಲ್ಲಿ ಅದೇ ಪ್ರಕೃತಿ ಹೆಚ್ಚು ಹಣವನ್ನು ಕೊಟ್ಟು ಸುಖ ಭೋಗಗಳಲ್ಲೇ ಮೈಮರೆಯುವಂತೆ ಮಾಡಿ ಆತ್ಮಮೋಕ್ಷದ ಕಲ್ಪನೆಯಿಂದ ದೂರಕ್ಕೆಳೆಯುತ್ತದೆ. ಕೆಲವರಲ್ಲಿ ಹೆಚ್ಚು ಅಧ್ಯಯನವೇ ಅವರನ್ನು ಕಟ್ಟಿ ಹಾಕಿದರೆ ಇನ್ನೂ ಕೆಲವರಲ್ಲಿ ಅಜ್ಞಾನದ ಮೂಲಕ ಪ್ರಕೃತಿ ಬಂಧನವನ್ನುಂಟುಮಾಡುತ್ತದೆ. ಆದರೆ ವಿವೇಕಾನಂದರ ಚಿಂತನೆಯ ಪ್ರಕಾರ ಆತ್ಮಕ್ಕೆ ಆಸೆ ಅನಂತವಾದ್ದು. ಅದನ್ನು ಅನಂತದಿಂದಲೇ ತೃಪ್ತಿಪಡಿಸಬಹುದೇ ಹೊರತು ಲೆಕ್ಕಕ್ಕೆ ನಿಲುಕಬಹುದಾದ ವಸ್ತುಗಳಿಂದಲ್ಲ’ ಅಂದರೆ ಆತ್ಮತೃಪ್ತಿ ಎನ್ನುವುದು ಅನಂತದ ದೊರಕುವಿಕೆಯಿಂದ ಮಾತ್ರವೇ ಹೊರತು ಮತ್ತ್ಯಾವ ಪ್ರಾಪಂಚಿಕ ಸುಖ-ಭೋಗಗಳಿಂದಲೂ ಅಲ್ಲ.


ಸ್ವಾಮಿ ವಿವೇಕಾನಂದರಿಗೆ ಇದು ಹೊಸದಾಗಿ ಜ್ಞಾನೋದಯವಾದ ಸಂಗತಿಯೇನೂ ಅಲ್ಲ. ಬ್ರಹ್ಮಸಮಾಜದ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಆಧುನಿಕ ವಿಜ್ಞಾನದ ಮೂಸೆಯಲ್ಲಿ ವೈಚಾರಿಕ ಗಟ್ಟಿತನವನ್ನು ಬೆಳೆಸಿಕೊಂಡಿದ್ದ ಅವರು ದೇವರನ್ನು ಹುಡುಕುತ್ತಾ ನಡೆದದ್ದು ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಒಮ್ಮೆ ರಾಮಕೃಷ್ಣರ ಸಂಪರ್ಕಕ್ಕೆ ಬಂದನಂತರ ಸಾಕ್ಷಾತ್ಕಾರ ಪಡೆದುಕೊಂಡವನ ಜೊತೆ ಇರುವುದು ನಿರಂತರ ಉಪನ್ಯಾಸಗಳನ್ನೇ ಮಾಡುವ, ಪ್ರಪಂಚದ ಜನರಿಂದ ಬುದ್ಧಿವಂತನೆನೆಸಿಕೊಳ್ಳುವವನ ಜೊತೆಗಿರುವುದಕ್ಕಿಂತ ಶ್ರೇಷ್ಠವಾದುದು. ಆಗೆಲ್ಲಾ ಅವರಿಗೆ ಹೆಚ್ಚೆಂದರೆ 20 ವರ್ಷವಾಗಿತ್ತು ಅಷ್ಟೇ! ಮುಂದೆ ರಾಮಕೃಷ್ಣರ ದೇಹತ್ಯಾಗದ ನಂತರ ತರುಣ ಸನ್ಯಾಸಿಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಆಧ್ಯಾತ್ಮಿಕ ಚಿಂತನೆಯನ್ನು ನಡೆಸುವಾಗ ತಾನು ಸಾಗುತ್ತಿರುವ ಹಾದಿ ಶ್ರೇಷ್ಠವಾದುದೆಂಬ ಖಾತ್ರಿ ಇದ್ದೇ ಇತ್ತು. ಇನ್ನು ಆನಂತರ ಪರಿವ್ರಾಜಕರಾಗಿ ದೇಶದೆಲ್ಲೆಡೆ ಅಲೆಯುವಾಗ ಸಿರಿವಂತರ ಮತ್ತು ದೀನ ದರಿದ್ರರ ಬದುಕನ್ನು ತಲನೆ ಮಾಡಿ ನೋಡಿದ ವಿವೇಕಾನಂದರಿಗೆ ಬದುಕಿನ ನಶ್ವರತೆ ಉಳಿದೆಲ್ಲರಿಗಿಂತಲೂ ಚೆನ್ನಾಗಿ ಅರಿವಾಗಿತ್ತು. ಹೀಗಾಗಿಯೇ ಅವರು ‘ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲಿದಿರಿ’ ಎಂದು ಹೇಳುವಾಗ ಅದು ತಾತ್ಕಾಲಿಕವಾದ ಗುರಿಯೊಂದನ್ನು ಮುಟ್ಟುವ ಘೋಷಣೆಯಾಗಿರಲಿಲ್ಲ. ಬದಲಿಗೆ, ಆತ್ಮದ ಅನಂತ ಇಚ್ಛೆಯನ್ನು ಪೂರೈಸುವ ಶಕ್ತಿ, ಸಾಮಥ್ರ್ಯಗಳನ್ನು ಗಳಿಸಬೇಕೆಂಬ ಆದೇಶವೇ ಆಗಿತ್ತು. ಆದೇಶ ಕೊಟ್ಟ ವಿವೇಕಾನಂದರು ತಮ್ಮ ಕೆಲಸ ಮುಗಿಯಿತೆಂದು ಕೈತೊಳೆದುಕೊಂಡುಬಿಡಲಿಲ್ಲ, ಬದಲಿಗೆ ಮುಟ್ಟಬೇಕಾಗಿರುವ ಗುರಿಯೆಡೆಗೆ ಸಾಗಬೇಕಾಗಿರುವ ದಾರಿಯನ್ನೂ ಸ್ಪಷ್ಟವಾಗಿ ಗುರುತಿಸಿಕೊಟ್ಟರು. ಆ ದೃಷ್ಟಿಯಿಂದ ನಮ್ಮ ಕಾಲದ ಈ ಋಷಿ ಕೊಟ್ಟ ಮಾರ್ಗದರ್ಶನವನ್ನು ತರುಣೋಪನಿಷತ್ತು ಎಂದೇ ಕರೆಯಬಹುದು.

ವಿವೇಕಾನಂದರಂತಹ ಶ್ರೇಷ್ಠ ಸನ್ಯಾಸಿಗಳನ್ನು ಹೊಂದಿದಮೇಲೆಯೂ ಭಾರತೀಯ ತರುಣರು ಇನ್ನೂ ದಿಕ್ಕು ಕಾಣದೇ ಅಂಡಲೆಯುತ್ತಿದ್ದರೆ ಅದು ದೌಭರ್ಾಗ್ಯವೇ ಸರಿ. ತನ್ನ ಪರಂಪರೆಯ ಬಗ್ಗೆ, ಸಂಸ್ಕೃತಿ, ಸಭ್ಯತೆಗಳ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಈ ಸನ್ಯಾಸಿ ಜಗತ್ತಿನ ವೇದಿಕೆಯ ಮೇಲೆ ನಿಂತಾಗ ಅದೇ ಸ್ವಾಭಿಮಾನದಿಂದ ಕಂಗೊಳಿಸುತ್ತಿದ್ದರು. ನಮಗಿಂದು ಆ ವಿಚಾರಧಾರೆ ಆವರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಅವರಿಗೊಮ್ಮೆ ನಾವು ತೆರೆದುಕೊಂಡರೆ ಗುರಿಯಷ್ಟೇ ಅಲ್ಲ, ಸಾಗಬೇಕಾಗಿರುವ ಮಾರ್ಗವೂ ನಿಚ್ಚಳವಾದೀತು. ಸ್ವಾಮೀಜಿ ತಮ್ಮ ಹಾದಿಯನ್ನು ನಿಚ್ಚಳಗೊಳಿಸಿಕೊಂಡಿದ್ದು ಕನ್ಯಾಕುಮಾರಿಯ ಬಂಡೆಯಮೇಲೆಯೇ. ನಮಗೂ ವಿವೇಕಾನಂದರು ಮಾರ್ಗವನ್ನು ನಿರ್ಧರಿಸಿಕೊಡಲೆಂದು ಶ್ರದ್ಧೆಯಿಂದ ಪ್ರಾಥರ್ಿಸಿಕೊಳ್ಳೋಣ. ಹೊಸಭಾರತ ನಿಮರ್ಿಸೋಣ!

 

Click to comment

Leave a Reply

Your email address will not be published. Required fields are marked *

Most Popular

To Top