Entertainment

ಬಹುಕಾಲ ಕಾಡುವ ಮಹಾನಟಿ!

ಎಲ್ಲ ಬಗೆಯ ಕಿರಿಕಿರಿಗಳ ನಡುವೆ ಕಿವಿಗೆ ಇಂಪಾದ ಸಂಗೀತ, ಕಣ್ಣಿಗೆ ತಂಪು ಕೊಡುವ ದೃಶ್ಯಗಳು, ಸಜ್ಜನರ ಕಂಪೆನಿ ಇವೆಲ್ಲವೂ ಎಷ್ಟು ಮುದ ನೀಡುವುದೋ ಒಂದು ಅದ್ಭುತವಾಗಿ ಹೆಣೆಯಲ್ಪಟ್ಟ ಸಿನಿಮಾ ಕೂಡ ಅಷ್ಟೇ ಮುದ ನೀಡಬಲ್ಲುದು. ರಾಜಿ ಮತ್ತು ಪರಮಾಣು ಐತಿಹಾಸಿಕ ಸಂಗತಿಯನ್ನೇ ಎಳೆಯಾಗಿಟ್ಟುಕೊಂಡು ಮಾಡಿದ ಸಿನಿಮಾ ಆದರೆ ಕನ್ನಡದ ಗುಲ್ಟು ಈಗಿನ ಡಾಟಾ ವಾರ್ಗಳ ಆಧಾರದ ಅಪರೂಪದ ಸಿನಿಮಾ. ಇತ್ತೀಚೆಗೆ ತೆರೆ ಕಂಡಂತಹ ‘ಮಹಾನಟಿ’ ಸಾವಿತ್ರಿ ಎಂಬ ತೆಲುಗು ನಟಿಯ ಜೀವನಾಧಾರಿತ ಅಪರೂಪದ ಸಿನಿಮಾ. ಬಹಳ ಮಂದಿ ಈ ಸಿನಿಮಾ ನೋಡಿರೆಂದು ಪದೇ ಪದೇ ಹೇಳುವಾಗಲೂ ತಲೆ ಕೆಡಿಸಿಕೊಂಡಿರಲಿಲ್ಲ. ಒಂದಷ್ಟು ಸಿನಿಮಾ ನಿಮರ್ಾಪಕರೇ ಮಹಾನಟಿಯ ಕುರಿತಂತೆ ಒಳ್ಳೆಯ ಮಾತುಗಳನ್ನಾಡಿದಾಗ ನೋಡಲೇಬೇಕೆನ್ನಿಸಿತು.

ಸಿನಿಮಾ ಒಂದಕ್ಕೆ ವಿಭಿನ್ನ ಆಯಾಮಗಳಿರುತ್ತವೆ. ಬಹುತೇಕರಿಗೆ ಕಥೆಯ ಎಳೆಯೇ ಮುಖ್ಯ. ಇನ್ನೂ ಕೆಲವರು ಆ ಕಥೆಯನ್ನು ಪ್ರಸ್ತುತ ಪಡಿಸಿರುವ ವಿನೂತನ ಶೈಲಿಯ ಕುರಿತಂತೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಸ್ವಲ್ಪ ತಾಂತ್ರಿಕ ಜ್ಞಾನ ಇದ್ದವರು ಕಥೆಯನ್ನು ಗಮನಿಸುವುದೇ ಇಲ್ಲ. ಅವರು ಕಥೆಯ ಹಿಂದೆ ತಂತ್ರಜ್ಞರ ವಿಶೇಷ ಪ್ರಯತ್ನಗಳನ್ನು ಗುರುತಿಸುತ್ತಾ ಕುಳಿತಿರುತ್ತಾರೆ. ಸಾಮಾನ್ಯರಾದವರು ನಟ-ನಟಿಯರ ಹಿಂದೆ ಬೆನ್ನು ಬಿದ್ದು ತನ್ನಿಚ್ಛೆಯವರಿದ್ದರೆ ಸಂಗೀತ, ಸಾಹಿತ್ಯ, ನಟನೆ ಎಲ್ಲವನ್ನೂ ಪಕ್ಕಕ್ಕಿಟ್ಟು ಸಿನಿಮಾ ನೋಡಿಬಿಡುತ್ತಾರೆ. ಮಹಾನಟಿ ಈ ಎಲ್ಲ ದೃಷ್ಟಿಯಿಂದಲೂ ಒಂದು ವಿಶಿಷ್ಟವಾದ ಪ್ರಯತ್ನ. ನಿದರ್ೇಶಕ ನಾಗ್ ಅಶ್ವಿನ್ ನಟಿಯೊಬ್ಬಳ ಬದುಕಿನ ಮತ್ತೊಂದು ಮಗ್ಗುಲನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಸಾವಿತ್ರಿ ನಾಟಕದ ಕಲಾವಿದೆ, ನೃತ್ಯಗಾತರ್ಿ, ಸಿನಿಮಾ ನಟಿ, ಇವೆಲ್ಲಕ್ಕೂ ಮಿಗಿಲಾಗಿ ಮೈಯಲ್ಲಾ ಹೃದಯವಾಗಿದ್ದ ಜೀವ ಅದು. ಸಹಜವಾಗಿಯೇ ಖ್ಯಾತಿಯ ಉತ್ತುಂಗಕ್ಕೇರಿರುವ ನಟಿಯರೆಲ್ಲರ ಬದುಕು ಕೆಟ್ಟದಾಗಿಯೇ ಅಂತ್ಯ ಕಂಡಿರುತ್ತದೆ. ವೃತ್ತಿ ಜೀವನದ ಮತ್ತು ವೈಯಕ್ತಿಕ ಬದುಕಿನ ನಡುವೆ ಸಾಮರಸ್ಯ ಕಂಡುಕೊಳ್ಳುವಲ್ಲಿ ಅವರು ಸೋಲುತ್ತಾರೆ. ಸಾವಿತ್ರಿಯದ್ದೂ ಅದೇ ಕಥೆ. ಆದರೆ ನಿದರ್ೇಶಕ ನಾಗ್ ಇದಕ್ಕೊಂದು ಸೂಕ್ಷ್ಮ ಬಣ್ಣವನ್ನು ಕೊಟ್ಟು ಸಾವಿತ್ರಿಯ ಹೃದಯ ಬಡಿತವನ್ನು ಪ್ರತಿಯೊಬ್ಬ ಪ್ರೇಕ್ಷಕ ಕೇಳುವಂತೆ ಮಾಡಿಬಿಟ್ಟಿದ್ದಾರೆ.

ಸಾವಿತ್ರಿ ಹೋರಾಟಗಾತಿ. ಬಾಲ್ಯದಲ್ಲಿ ನೃತ್ಯ ನಿನ್ನಿಂದ ಸಾಧ್ಯವಿಲ್ಲ ಎಂದು ಗುರುಗಳೊಬ್ಬರು ಹೇಳಿದರೆಂಬ ಕಾರಣಕ್ಕೆ ಹಟ ಹಿಡಿದು ನೃತ್ಯವನ್ನು ಕಲಿತಳು. ನಟನೆ ಸಾಧ್ಯವಿಲ್ಲವೆಂದು ನಿದರ್ೇಶಕ ಮೂದಲಿಸಿದ್ದಕ್ಕೆ ಸವಾಲು ಸ್ವೀಕರಿಸಿಯೇ ನಟಿಯಾದಳು, ಮಹಾನಟಿಯೂ ಆದಳು. ಅವಳ ಬದುಕನ್ನು ಬದಲಾಯಿಸಿದ್ದು ದೇವದಾಸ್-ಪಾರ್ವತಿ ಕಾದಂಬರಿ. ಅದನ್ನು ಓದುತ್ತ ಓದುತ್ತಾ ಅದೇ ಸಿನಿಮಾಕ್ಕೆ ತನ್ನನ್ನು ಸಮಪರ್ಿಸಿಕೊಂಡ ಸಾವಿತ್ರಿ ಆ ತನ್ಮಯತೆಯ ಭರದಲ್ಲೇ ನಟ ಜೈಮಿನಿ ಗಣೇಶನ್ಗೆ ಎರಡನೆಯ ಹೆಂಡತಿಯಾಗಿಬಿಟ್ಟಳು. ಅದೊಂದು ಕೌತುಕಮಯವಾದ ಪ್ರೇಮ. ಆ ಪ್ರೇಮದ ರಂಗನ್ನು ಒಂದಿನಿತೂ ಕೆಡಿಸದೇ ಸಾವಿತ್ರಿ ಗಣೇಶನ್ಗೆ ಎರಡನೇ ಪತ್ನಿಯಾಗುವುದನ್ನು ಆಕೆಯ ಬದುಕಿನ ಅತ್ಯುನ್ನತ ಆದರ್ಶವಾಗಿ ನಿದರ್ೇಶಕ ತೋರಿಸಿರುವ ಪರಿಯೇ ಮನಮೋಹಕ. ಗಣೇಶನ್ ಮದುವೆಯಾಗಿರುವಂಥ ಸುದ್ದಿಯನ್ನು ಆಕೆಗೆ ಹೇಳುವ ದೃಶ್ಯವನ್ನು ಚಿತ್ರೀಕರಿಸಿರೋದು ಸಮುದ್ರವೊಂದರ ಅಲೆ ನಿಮರ್ಿತ ಸೇತುವೆಯ ಮೇಲೆ. ಅಬ್ಬರದ ಅಲೆಗಳು ಆಕೆಯ ಮನಸ್ಸೊಳಗಿನ ತುಮುಲವನ್ನೂ ಕೂಡ ಅಷ್ಟೇ ಸುಂದರವಾಗಿ ಚಿತ್ರಿಸುವಂತಿವೆ. ಸಾವಿತ್ರಿ ತನ್ನ ಮದುವೆಯಿಂದಾಗಿ ಆಪ್ತರನ್ನೆಲ್ಲಾ ಕಳೆದುಕೊಂಡು ಉಳಿಸಿಕೊಳ್ಳೋದು ಗಂಡನನ್ನು ಮಾತ್ರ. ಒಂದೊಂದೇ ಸಿನಿಮಾಗಳು ಈಕೆಯ ಕಾರಣದಿಂದಾಗಿಯೇ ಸೂಪರ್ ಹಿಟ್ ಆಗುತ್ತಾ ನಡೆದಂತೆ ಗಣೇಶನ್ ಒಳಗಿಂದೊಳಗೇ ಬೇಯಲಾರಂಭಿಸುತ್ತಾರೆ. ಬಹುಶಃ ಕಥೆಯ ಈ ಎಳೆ ಹೊಸತೇನಲ್ಲ. ಈ ಹಿಂದೆ ಬಂದಂತಹ ಅಮಿತ್ ಬಚ್ಚನ್-ಜಯಾ ಬಾಧುರಿಯ ಅಭಿಮಾನ್, ನಮ್ಮ ಕಾಲದ ಸಿನಿಮಾಗಳಾದ ಆಶಿಕಿ ಮತ್ತು ಆಶಿಕಿ-2 ಈ ರೀತಿಯ ಅನೇಕ ಸಿನಿಮಾಗಳಲ್ಲಿ ಹೆಚ್ಚು-ಕಡಿಮೆ ಇದೇ ಕಲ್ಪನೆಯಿದೆ. ಆದರೆ ಇಲ್ಲಿ ಸಾವಿತ್ರಿ ತನ್ನ ಗಂಡನೊಡನಿರುವ ದೇವದಾಸ್-ಪಾರ್ವತಿಯ ಪ್ರೇಮವನ್ನು ಉಳಿಸಿಕೊಳ್ಳಲಿಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸುತ್ತಾಳೆ. ಖ್ಯಾತಿಯ ತುದಿಯಲ್ಲೊಂತು ನಿಮರ್ಾಪಕರು ನಾಯಕ ನಟರ ದಿನಾಂಕಕ್ಕೋಸ್ಕರ ಕಾಯದೇ ಮೊದಲು ಸಾವಿತ್ರಿಯ ದಿನಾಂಕವನ್ನು ಪಡೆದುಕೊಂಡೇ ಆನಂತರ ಖ್ಯಾತ ನಟರ ದಿನಗಳನ್ನು ಹೊಂದಿಸಿಕೊಳ್ಳುತ್ತಿದ್ದರಂತೆ.

ಸಿನಿಮಾ ನೋಡಿದ ಮೇಲೆ ಆಕೆಯ ಕುರಿತಂತೆ ಸಾಕಷ್ಟು ಓದಿದೆ. ಆಕೆಯ ನಟನಾ ಕೌಶಲ್ಯ ಪರಮಾದ್ಭುತವಾಗಿತ್ತಂತೆ. ನಿದರ್ೇಶಕ ಏನು ಬಯಸುತ್ತಾನೋ ಅದನ್ನು ಅಷ್ಟೇ ಚೆನ್ನಾಗಿ ಸಾಧ್ಯವಾದರೆ ಆತನಿಚ್ಛೆಗಿಂತಲೂ ಸುಂದರವಾಗಿ ಮಾಡುವ ತಾಕತ್ತು ಸಾವಿತ್ರಿಗಿತ್ತಂತೆ. ಇಡಿಯ ಸಿನಿಮಾ ಆರಂಭವಾಗೋದೇ ಇದೇ ರೀತಿಯ ಒಂದು ದೃಶ್ಯದ ಮೂಲಕ. ಸಾವಿತ್ರಿಯೊಳಗಿನ ಪ್ರೇಮ ಮತ್ತು ದುಃಖವನ್ನು ಒಂದೇ ದೃಶ್ಯದಲ್ಲಿ ತೋರಿಸಲು ಪ್ರಯುತ್ನ ಪಡುವ ನಿದರ್ೇಶಕ ಬಲಗಣ್ಣು ಪ್ರೇಮವನ್ನು ವ್ಯಕ್ತಪಡಿಸಿದರೆ ಎಡಗಣ್ಣು ಕಣ್ಣೀರು ಸುರಿಸಬೇಕು ಎನ್ನುತ್ತಾನೆ. ಆಗ ಸಾವಿತ್ರಿ ಕೇಳುವ ಪ್ರಶ್ನೆ ಏನು ಗೊತ್ತೇ ‘ಎಷ್ಟು ಹನಿ ಕಣ್ಣೀರು?’ ಅಂತ. ಸವಾಲೊಡ್ಡುತ್ತಾನೆ ನಿದರ್ೇಶಕ ‘ಎರಡೇ ಹನಿ ಕಣ್ಣೀರು. ಅದಕ್ಕಿಂತಲೂ ಒಂದು ಹನಿ ಹೆಚ್ಚಾದರೂ ಚಿತ್ರೀಕರಣ ನಿಲ್ಲಿಸಿಬಿಡೋಣ’ ಅಂತ. ಸಾವಿತ್ರಿ ಒಟ್ಟಾರೆ ಸೀನು ಮುಗಿಯುವಾಗ ಎಡಗಣ್ಣಿನಲ್ಲಿ ಮಾತ್ರ ಎರಡೇ ಹನಿ ಕಣ್ಣೀರು ಸುರಿಸಿ ದಂಗುಬಡಿಸಿಬಿಡುತ್ತಾಳೆ. ಈ ಘಟನೆ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಸಾವಿತ್ರಿ ಬದುಕಿದ್ದಾಗಲೇ ದಂತಕಥೆಯಾಗಿದ್ದಂತೂ ನಿಜ. ಮೇರು ನಟರೆಲ್ಲ ಆಕೆಯೆದುರಿಗೆ ಸಂಭಾಷಣೆಗೊಪ್ಪಿಸುವ ಮುನ್ನ ಸಾಕಷ್ಟು ತಯಾರಿ ನಡೆಸಿರುತ್ತಿದ್ದರಂತೆ. ತನಗೆ ಗೊತ್ತಿಲ್ಲದ ಭಾಷೆಯನ್ನು ಬಲು ಬೇಗ ಕಲಿತು ಅಷ್ಟೇ ಸರಳವಾಗಿ, ಲೀಲಾಜಾಲವಾಗಿ ಅದನ್ನು ಪ್ರೇಕ್ಷಕರ ಮುಂದೆ ಒಪ್ಪಿಸಬಲ್ಲಂಥ ಮೇರುನಟಿ ಆಕೆ. ಅವಳ ಜೀವನದ ಕೊನೆಯ ಘಟ್ಟ ಬಲುನೋವಿನದ್ದು. ಜೈಮಿನಿ ಗಣೇಶನ್ ಸಾವಿತ್ರಿಯು ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಒಂದಷ್ಟು ಕಿರಿಕಿರಿಗಳನ್ನು ಮಾಡಿಕೊಳ್ಳುತ್ತಾ ಕಿತ್ತಾಡುತ್ತಾ ಮತ್ತೊಬ್ಬ ನಟಿಯೊಂದಿಗೆ ಸಿಕ್ಕಿ ಹಾಕಿಕೊಂಡು ಬಿಡುತ್ತಾರೆ. ಅಲ್ಲಿಗೆ ಸಾವಿತ್ರಿಯ ಸಹನೆಯ ಕಟ್ಟೆ ಒಡೆದು ಹೋಗುತ್ತದೆ. ಹೆಣ್ಣು ಹಾಗೆಯೇ ಗಂಡನ ಕುಡಿತವನ್ನು, ಸುಳ್ಳುಬಾಕತನವನ್ನು ಕೊನೆಗೆ ಹೊಡೆತವನ್ನೂ ಸಹಿಸಿಕೊಂಡು ಬಿಡುತ್ತಾಳೆ. ತನ್ನ ಸ್ಥಾನದಲ್ಲಿ ಮತ್ತೊಬ್ಬಳು ಗಂಡನ ಪ್ರೀತಿಯನ್ನು ಹಂಚಿಕೊಳ್ಳುವುದನ್ನು ಮಾತ್ರ ಆಕೆ ಸಹಿಸಲಾರಳು. ಆದರೆ, ಇದೇ ಸಾವಿತ್ರಿ ಗಣೇಶನ್ಗೆ ಎರಡನೇ ಪತ್ನಿಯಾಗಿ ಬರುವಾಗ ಮೊದಲನೇ ಪತ್ನಿಯ ಅಸಹಾಯಕತೆ ಹೇಗಿದ್ದಿರಬಹುದೆಂಬುದನ್ನು ಆ ಹೊತ್ತಿನಲ್ಲಿ ನಿದರ್ೇಶಕ ಸ್ಮರಿಸಬಹುದಿತ್ತೇನೋ. ಕರ್ಮ ಮರಳಿ ಬಂದೇ ಬರುತ್ತದೆ ಎಂಬುದಕ್ಕೆ ಸಾವಿತ್ರಿಯ ಮೂರಾಬಟ್ಟೆಯಾದ ಬದುಕು ಉದಾಹೆರಣೆಯಾಗಿಬಿಡುತ್ತದೆ. ಪರಸ್ತ್ರೀಯೊಂದಿಗೆ ಗಂಡನನ್ನು ನೋಡಿದ ಮರುಕ್ಷಣ ಅವನಿಂದ ವಿಮುಖಳಾದ ಸಾವಿತ್ರಿ ಆನಂತರ ಎಂದಿಗೂ ಅವನ ಮುಖ ನೋಡುವುದಿಲ್ಲ. ಕುಡಿತಕ್ಕೆ ದಾಸಿಯಾಗುತ್ತಾಳೆ.

ಜೊತೆಗಾರರೆಲ್ಲ ಮನಸೋ ಇಚ್ಛೆ ಲೂಟಿ ಮಾಡುತ್ತಾರೆ. ಆಕೆಯ ಮನೆಯ ಮೇಲೆ ತೆರಿಗೆ ದಾಳಿಯಾಗಿ ಆಕೆ ಉತ್ತರಿಸಲಾರದ ಹಂತ ತಲುಪುತ್ತಾಳೆ. ಕೊನೆಗೆ ಎಲ್ಲವನ್ನು ಕಳೆದುಕೊಂಡು ಪುಟ್ಟದೊಂದು ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸಲು ಬರುತ್ತಾಳೆ ಸಾವಿತ್ರಿ.

ಬದುಕು ಹಾಗೆಯೇ. ಯಾವುದರ ಹಿಂದೆ ಓಡುತ್ತೇವೋ ಅದು ದಕ್ಕಲಾರದು. ದಕ್ಕಿದ್ದು ತೃಪ್ತಿ ಕೊಡಲಾರದು. ಕೀತರ್ಿಯ ಹಿಂದೆ ಓಡಿದರೆ ಕೀತರ್ಿ ಸಿಗುವುದು ಹೌದು. ಆದರದು ಕಳೆದು ಹೋದಾಗ ಎಲ್ಲಕ್ಕಿಂತಲೂ ಹೆಚ್ಚು ದುಃಖವಾಗುವುದು. ಹಣವಂತು ಎಷ್ಟು ದಿನವಿದ್ದು ಹೇಗೆ ಕಳೆದು ಹೋಗುವುದೋ ಅರಿವಿಗೇ ಬರುವುದಿಲ್ಲ. ಪ್ರೀತಿ-ಪ್ರೇಮವೂ ಹಾಗೆಯೇ. ಅವು ಪವಿತ್ರ ಬಾಂಧವ್ಯ ಸರಿ. ಆದರೆ ಅದು ಹಣ ಮತ್ತು ಖ್ಯಾತಿಯ ನಡುವೆ ಎಂದು ತನ್ನ ಪ್ರಭೆಯನ್ನು ಕಳೆದುಕೊಂಡುಬಿಡುವುದೋ ಹೇಳಲಾಗುವುದಿಲ್ಲ. ಅನೇಕ ತಾತ್ವಿಕ ವಿಚಾರಗಳನ್ನು ಸಾವಿತ್ರಿ ತನ್ನ ಬದುಕಿನ ಮೂಲಕ ನಮ್ಮೆದುರು ಅನಾವರಣ ಮಾಡಿಕೊಡುತ್ತಾಳೆ. ಕೀತರ್ಿ ಸುರೇಶ್ ಸಾವಿತ್ರಿಯ ಪಾತ್ರದಲ್ಲಿ ಮನ ಮುಟ್ಟಿಬಿಡುತ್ತಾರೆ. ಜೀವನಾಧಾರಿತ ಒಂದು ಚಿತ್ರವನ್ನು ಮಾಡುವುದು ಸಲೀಸಾದ ಸಂಗತಿಯಲ್ಲ. ಅದಕ್ಕೆ ಅಧಿಕಾರಯುತವಾದ ಸಾಹಿತ್ಯ, ಭಾಷೆ, ಅಂದಿನ ಕಾಲಘಟ್ಟದ ಕಲ್ಪನೆ ಇವೆಲ್ಲವೂ ಬಹುಮುಖ್ಯ. ಅದರಲ್ಲೂ ವ್ಯಕ್ತಿಯನ್ನು ನೋಡಿದ್ದರೆ ಅವರ ಬದುಕನ್ನು ಚಿತ್ರಕ್ಕಿಳಿಸುವುದು ತ್ರಾಸದಾಯಕ. ನಿದರ್ೇಶಕ ನಾಗ್ ಅಶ್ವಿನ್ ಬಲು ದೊಡ್ಡ ಸಾಹಸವನ್ನು ಮಾಡಿದ್ದಾರೆ.

ಹಿಂದೆ ಬಿದ್ದು ಈ ಚಿತ್ರ ನೋಡಬೇಕೆಂದೇನಿಲ್ಲ. ಎಂದಾದರೂ ಒಮ್ಮೆ ಸಾಗುತ್ತಿರುವ ದಾರಿ ಕಿರಿಕಿರಿ ಎನಿಸುತ್ತಿದೆ ಎಂದಾಗ ಸುಮ್ಮನೆ ಹಾಗೆ ಸಾವಿತ್ರಿಯ ಬದುಕಿನ ಮೇಲೆ ಕಣ್ಣಾಡಿಸಿಬಿಡಿ. ಕಣ ಕಣದಲ್ಲೂ ಪ್ರತಿಭೆಯಿದ್ದು ಹೃದಯದ ತುಂಬ ದಯೆ ಕಾರುಣ್ಯಗಳೇ ತುಂಬಿದ್ದು, ತಿಜೋರಿಯ ತುಂಬ ಹಣವಿದ್ದು, ಎಲ್ಲೆಡೆ ಅಜೀರ್ಣವಾಗುವಷ್ಟು ಖ್ಯಾತಿಯಿದ್ದು, ಬೇಕಾದವರೆಲ್ಲ ಜೊತೆಗಿದ್ದೂ ಬದುಕೊಂದು ಹೇಗೆ ಹಾಳಾಗಿಬಿಡಬಹುದೆಂಬುದಕ್ಕೆ ಆಕೆ ಉದಾಹರಣೆಯಾಗಿ ನಿಂತುಬಿಡುತ್ತಾಳೆ. ಬದುಕಿನ ನಶ್ವರತೆಯನ್ನು ತಾನು ಬದುಕಿದ ರೀತಿಯಲ್ಲೇ ತೋರಿಸಿ ಹೋಗುತ್ತಾಳೆ. ಒಟ್ಟಾರೆ ಮಹಾನಟಿ ಖಂಡಿತ ಕಾಡುತ್ತಾಳೆ.

Click to comment

Leave a Reply

Your email address will not be published. Required fields are marked *

Most Popular

To Top