National

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ ಆಗಲಿಲ್ಲ. ಗೋಮಾಂಸದ ನೆಪದಲ್ಲಿ ಅಖ್ಲಾಕ್ ತೀರಿಕೊಂಡಾಗ ದೇಶದ ಬುದ್ಧಿಜೀವಿಗಳೆಲ್ಲಾ ಅದನ್ನೊಂದು ಜಾಗತಿಕ ಸುದ್ದಿ ಮಾಡಿದ್ದರಲ್ಲ. ಈ ದೇವಸ್ಥಾನದಲ್ಲಿ ನಡೆದ ಕಗ್ಗೊಲೆಯನ್ನು ಮಾತ್ರ ಕಂಡರೂ ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಡೆದದ್ದಿಷ್ಟೇ. ದೇವಸ್ಥಾನದ ಪೂಜಾರಿಗೆ ಗೋವಿನ ಮೇಲೆ ಅಪಾರವಾದ ಪ್ರೀತಿ, ಭಕ್ತಿ ಕೂಡ. ಹೀಗಾಗಿಯೇ ಆತ ಗೋಕಳ್ಳರ ಕುರಿತಂತೆ ಪೊಲೀಸರಿಗೆ ವರದಿ ಮಾಡುತ್ತಲೇ ಇರುತ್ತಿದ್ದ. ಆತನ ಮಾಹಿತಿಯನ್ನನುಸರಿಸಿಯೇ ಗೋಕಳ್ಳರ ಬೆನ್ನು ಬೀಳುತ್ತಿದ್ದ ಪೊಲೀಸರು ಗೋವುಗಳನ್ನು ಉಳಿಸಿದ್ದಲ್ಲದೇ ಅನೇಕ ಬಾರಿ ಗೋಕಳ್ಳರನ್ನು ಜೈಲಿಗಟ್ಟಿದ್ದೂ ಇದೆ. ಅಕ್ಷರಶಃ ನ್ಯಾಯಯುತ ಮಾರ್ಗದಲ್ಲಿಯೇ ಪೂಜಾರಿಗಳು ಗೋರಕ್ಷಣೆ ಮಾಡುತ್ತಿದ್ದುದು. ಅವರೆಂದಿಗೂ ಬಂದೂಕು ಬಳಸಲಿಲ್ಲ, ಕತ್ತಿ ಉಪಯೋಗಿಸಲಿಲ್ಲ. ಗೋಕಳ್ಳರನ್ನು ಮುಖಾಮುಖಿ ಭೇಟಿಯಾಗಲೂ ಇಲ್ಲ. ಇದನ್ನು ಸಹಿಸದ ಕಳ್ಳರ ಗುಂಪು ವಾರದ ಹಿಂದೆ ಮಂದಿರಕ್ಕೆ ನುಗ್ಗಿ ಅರ್ಚಕರನ್ನು ಅವರ ಮಂಚಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಬಡಿದು ಕತ್ತನ್ನು ಸೀಳಿ ದೇಹದಲ್ಲೆಲ್ಲಾ ಕತ್ತಿಯಿಂದ ಗಾಯ ಮಾಡಿ ಕೊಂದಿದ್ದಾರೆ. ಇದು ಐಸಿಸ್ ಉಗ್ರಗಾಮಿಗಳು ನಡೆಸುವ ಮಾದರಿಯದ್ದೇ ಕೊಲೆ. ಹಾಗಂತ ಹೋಗುವಾಗ ಸುಮ್ಮನೆ ಹೋಗಲಿಲ್ಲ. ಹಣ ಸಂಗ್ರಹ ಮಾಡುವ ಹುಂಡಿಯನ್ನು ಒಡೆದಿದ್ದಾರೆ. ಒಂದಷ್ಟು ಅಮೂಲ್ಯ ವಸ್ತುಗಳನ್ನು ಕದ್ದೊಯ್ಯುವ ಯತ್ನ ಮಾಡಿದ್ದಾರೆ. ಒಟ್ಟಾರೆ ಇದನ್ನೊಂದು ದರೋಡೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಉತ್ತರ ಪ್ರದೇಶದ ಪೊಲೀಸರ ಚುರುಕಾದ ಕಾಯರ್ಾಚರಣೆಯಿಂದಾಗಿ ನದೀಂ, ಸಲ್ಮಾನ್, ಶಹಜಾದ್, ಜಬ್ಬಾರ್ ಮತ್ತು ಮಾಂಜು ಎಂಬ ಐವರು ಸಿಕ್ಕು ಬಿದ್ದಾಗಲೇ ಇದರ ಹಿಂದೆ ದೊಡ್ಡದೊಂದು ಮಾಫಿಯಾ ಅಡಗಿರುವ ಸುದ್ದಿ ಬಂದಿದ್ದು. ಪೊಲೀಸರು ಸರಿಯಾಗಿ ಬಾರಿಸಿದೊಡನೆ ಈ ಐವರೂ ಗೋಕಳ್ಳತನಕ್ಕೆ ಅಡ್ಡಿ ಬರುತ್ತಿದ್ದ ಈ ಅರ್ಚಕರ ವಿರುದ್ಧ ತಮ್ಮ ದ್ವೇಷವನ್ನು ಪರಿಪೂರ್ಣವಾಗಿ ಒಪ್ಪಿಕೊಂಡುಬಿಟ್ಟಿದ್ದಾರೆ.

ಈಗ ಮುಖ್ಯ ಪ್ರಶ್ನೆಗೆ ಬನ್ನಿ. ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ? ಈ ಪ್ರಶ್ನೆಗೆ ಅನೇಕ ಹೋರಾಟಗಾರರು ಇಂದು ಉತ್ತರಿಸಬೇಕಿದೆ. ಜೊತೆಗೆ ಲಿಂಚಿಂಗ್ ಎಂಬ ಪದವನ್ನು ಮುಂದಿಟ್ಟು ಹಿಂದುಗಳನ್ನು ಪ್ರಶ್ನಿಸುವ ಮುಸಲ್ಮಾನ ನಾಯಕರೂ ಉತ್ತರಿಸಬೇಕಿದೆ. ಇತ್ತೀಚೆಗೆ ಸೆಮಿನಾರ್ ಒಂದರಲ್ಲಿ ಮಾತನಾಡುತ್ತಾ ಪತ್ರಕರ್ತ ಬಿ.ಎಮ್ ಹನೀಫ್ ಹಿಂದೆಂದೊ ಮುಸಲ್ಮಾನರು ಮಾಡಿದ ತಪ್ಪಿಗೆ ನಾವು ಇಂದೇಕೆ ಉತ್ತರಿಸಬೇಕು ಎಂಬ ಪ್ರಶ್ನೆ ಕೇಳಿದ್ದರು. ಕೊನೆಯ ಪಕ್ಷ ಒಂದು ವಾರದ ಹಿಂದೆ ನಡೆದಿರುವ ಈ ಹತ್ಯೆಯ ಕುರಿತಂತೆಯಾದರೂ ಅವರು ಉತ್ತರಿಸಿದರೆ ಸಾಕಷ್ಟು ಆಗಬಹುದೇನೊ. ಇಷ್ಟಕ್ಕೂ ಲಿಂಚಿಂಗ್ ಭಾರತಕ್ಕೆ ಹೊಸದೇನೂ ಅಲ್ಲ. ಔರಂಗಜೇಬ ಮಹಾ ಲಿಂಚರ್. ಇತಿಹಾಸದಲ್ಲಿ ಕೊಲೆಗಡುಕನೆಂದೇ ಖ್ಯಾತಿ ಪಡೆದವ. ಅವನಿಂದ ಕೊಲೆಯಾಗಲ್ಪಡಲು ಹಿಂದುವಾದವನು ಯಾವುದೇ ತಪ್ಪು ಮಾಡಬೇಕು ಎಂದೂ ಇರಲಿಲ್ಲ. ಆತ ಹಿಂದುವಾಗಿರುವುದೇ ಅಪರಾಧವಾಗಿತ್ತು. ಇದು ಬರಿ ಔರಂಗಜೇಬನ್ನದ್ದಷ್ಟೇ ಕಥೆಯಲ್ಲ. ಇಲ್ಲಿ ಆಳಿದ ಬಹುತೇಕ ಮುಸಲ್ಮಾನ ರಾಜರು ಹಿಂದೂಗಳೊಂದಿಗೆ ಹೀಗೆಯೇ ನಡೆದುಕೊಂಡವರು. ಕ್ರಿಶ್ಚಿಯನ್ನರದ್ದೂ ಹಾಗೆಯೇ. ಗೋವಾದಲ್ಲಿ ನಡೆದ ಇನ್ಕ್ವಿಸಿಷನ್ನ ಕುರಿತಂತೆ ಯಾವೊಂದೂ ಚಚರ್ಿನಲ್ಲೂ ಪಾದ್ರಿಗಳು ಮಾತನಾಡುವುದಿಲ್ಲ. ಜನರ ಪಾಪಗಳನ್ನು ಸ್ವೀಕರಿಸಲೆಂದೇ ಬಂದ ಕ್ರಿಸ್ತ ಹಿಂದುಗಳ ಕೊಲೆಯ ಪಾಪವನ್ನು ಸ್ವೀಕರಿಸುತ್ತಾನಾ ಎಂಬುದು ಕೇಳಿಕೊಳ್ಳಲೇಬೇಕಾದ ಪ್ರಶ್ನೆ. ಇವೆಲ್ಲವನ್ನೂ ಇತಿಹಾಸ ಎಂದು ಕರೆಯುವುದಾದರೆ ಕಶ್ಮೀರದಲ್ಲಿ ಪಂಡಿತರನ್ನು ಬರ್ಬರವಾಗಿ ಕೊಂದು ಉಳಿದವರು ಆಸ್ತಿ-ಪಾಸ್ತಿ ಎಲ್ಲವನ್ನೂ ಬಿಟ್ಟು ಓಡಿಬರುವಂತೆ ಮಾಡಿದರಲ್ಲ, ಗೋಧ್ರಾದ ರೈಲಿನಲ್ಲಿ ಕರಸೇವಕರನ್ನು ಕೂಡಿ ಹಾಕಿ ಸುಟ್ಟುಬಿಟ್ಟರಲ್ಲ ಅದನ್ನು ಏನೆಂದು ಕರೆಯಬೇಕು ಹೇಳಿ. ತೀರಾ ಇತ್ತೀಚೆಗೆ ಮುಸಲ್ಮಾನ ಹುಡುಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯಲ್ಲಿ ದಲಿತ ಹುಡುಗ ಖೇತಾರಾಮ್ ಭೀಲ್ನನ್ನು ಅತ್ಯಂತ ಕೆಟ್ಟದಾಗಿ ಕೊಂದರಲ್ಲ. ಅಂದು ಈ ಲಿಂಚಿಂಗ್ನ ಕುರಿತಂತೆ ಯಾರು ಮಾತೇ ಆಡಲಿಲ್ಲ. ದೆಹಲಿಯಲ್ಲಿ ಮುಸ್ಲೀಂ ಹುಡುಗಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ ಆಕೆಯ ಮನೆಯವರು ಅಂಕಿತ್ ಸಕ್ಸೇನಾನನ್ನು ಬರ್ಬರವಾಗಿ ಕೊಂದಾಗ ಮುಖ್ಯವಾಹಿನಿಗಳು ತೀರಿಕೊಂಡವನ ಮತ್ತು ಕೊಂದವರ ಜಾತಿಗಳನ್ನು ಮರೆಮಾಚುವ ಪ್ರಯತ್ನ ಮಾಡಿದರಲ್ಲ. ಇದಕ್ಕೇನು ಉತ್ತರ? ಬಿಹಾರದಲ್ಲಿ ಹಿಂದೂ ಹುಡುಗನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಚಂಪಾರಣ್ ಜಿಲ್ಲೆಯ ನೂರ್ ಜಹಾಂ ಖತೂನ್ ಎಂಬ ಹುಡುಗಿಯನ್ನು ಆಕೆಯ ಮನೆಯವರೇ ಕೊಂದಿದ್ದು ಇನ್ನೂ ಹಸಿಯಾಗಿಯೇ ಇದೆಯಲ್ಲ. ಇದಕ್ಕೆಲ್ಲಾ ಯಾರು ಉತ್ತರಿಸುತ್ತಾರೆ.

ಹೀಗೆಲ್ಲಾ ಪ್ರಶ್ನೆ ಕೇಳಿದೊಡನೆ ಒಂದಷ್ಟು ಬುದ್ಧಿಜೀವಿಗಳ ಚಡಪಡಿಕೆ ಆರಂಭವಾಗಿಬಿಡುತ್ತದೆ. ಅವರು ಸೆಲೆಕ್ಟೀವ್ ಹೋರಾಟಗಾರರು. ತಮಗೆ ಕಸಿವಿಸಿಯಾಗುವ ಪ್ರಶ್ನೆಗಳು ಬಂದೊಡನೆ ಉತ್ತರ ಭಾರತದಲ್ಲೆಲ್ಲೊ ನಡೆಯುವ ಸಾವಿಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತಂತೆ ಕಣ್ಣೀರಿಡೋಣ ಎಂದುಬಿಡುತ್ತಾರೆ. ಆದರೆ ಉತ್ತರ ಭಾರತದಲ್ಲಿ ಅಖ್ಲಾಕ್ನ ಸಾವು ಸಂಭವಿಸಿದಾಗ ಮಾತ್ರ ಬೀದಿಗೆ ಬಂದು ಕಣ್ಣೀರಿಡುವ ನಾಟಕವಾಡುತ್ತಾರೆ.

ಮತ್ತೊಬ್ಬರನ್ನು ಕೊಲ್ಲುವ ಮಾನಸಿಕತೆ ಎಲ್ಲ ಕಾಲದಲ್ಲೂ ಎಲ್ಲ ಪಂಥಗಳಲ್ಲೂ ಇದ್ದೇ ಇದೆ. ಆದರೆ ಒಬ್ಬರನ್ನು ವೈಭವೀಕರಿಸಿ ಮತ್ತೊಬ್ಬರನ್ನು ಬಚ್ಚಿಡುವ ಈ ಬುದ್ಧಿಜೀವಿಗಳಿದ್ದಾರಲ್ಲಾ ಇವರು ಸಮಾಜದೊಳಗಿನ ಕಂದಕವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಹಿಂದೂ ಮುಸಲ್ಮಾನರು ತಾವು ಒಬ್ಬರಿಂದ ಒಬ್ಬರು ದೂರವಿರಬೇಕಿಲ್ಲ. ಇವರಿಬ್ಬರ ನಡುವೆ ಸದಾ ದೂರವನ್ನು ಕಾಪಾಡಲು ಯತ್ನಿಸುವ ಈ ಢೋಂಗಿ ಜಾತ್ಯಾತೀತವಾದಿಗಳಿಂದ ನಿಸ್ಸಂಶಯವಾಗಿ ದೂರ ಕಾಪಾಡಿಕೊಳ್ಳಬೇಕಿದೆ.

ಕೊಡಗಿನ ಶುಂಠಿಕೊಪ್ಪದಲ್ಲಿ ಮೂರು ಗಂಜಿಕೇಂದ್ರಗಳು. ಒಂದನ್ನು ಸೇಂಟ್ ಮೇರೀಸ್ ಶಾಲೆ ನಡೆಸುತ್ತಿದೆ. ಮತ್ತೊಂದು ರಾಮಮಂದಿರದಲ್ಲಿ ಸೇವಾ ಭಾರತಿಯವರ ಕಡೆಯಿಂದ. ಮೂರನೆಯದು ಮದರಸಾದಲ್ಲಿ ಅಲ್ಲಿನ ಆಡಳಿತದವರ ಕಡೆಯಿಂದ. ವ್ಯವಸ್ಥೆ ಸಾಕಷ್ಟಿರುವುದರಿಂದ ಮೂರೂ ಕಡೆಯ ಜನರಿಗೆ ಮದರಸಾ ತಾನೇ ಅಡಿಗೆ ಮಾಡಿ ಕಳಿಸುತ್ತಿದೆ. ಮೂರೂ ಕಡೆಗಳಲ್ಲೂ ಎಲ್ಲ ಜಾತಿಯವರು ಆಶ್ರಯ ಪಡೆದಿದ್ದಾರೆ. ಇವೆಲ್ಲವೂ ಹೀಗೆ ನಡೆದಿರುವುದೇಕೆ ಗೊತ್ತೇನು? ಸಂಕಟ ಬಂದೆಡೆಯಲ್ಲಿ ಬುದ್ಧಿಜೀವಿಗಳಿರುವುದಿಲ್ಲ. ಮತ್ತು ಅವರಿಲ್ಲದೆಡೆ ಶಾಂತಿ ನೆಮ್ಮದಿ ಮತ್ತು ಸಹೋದರತೆ ತುಂಬಿ ತುಳುಕಾಡುತ್ತಿರುತ್ತದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top