ಟೇಬಲ್ ಟೆನಿಸ್ ನಲ್ಲಿ 10 ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕವನ್ನು ಪಡೆದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಶೇಕಡಾ 97 ಪ್ರತಿಶತ ಅಂಕವನ್ನು ಗಳಿಸಿರುವ 17 ರ ಈ ಹುಡುಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಟೇಬಲ್ ಟೆನಿಸ್ ಪಟು!
ಈಕೆ ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ಅತ್ಯದ್ಭುತ ಸಾಧನೆ ಮಾಡುತ್ತಿರುವುದು ಇದೇ ಮೊದಲಲ್ಲ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ 98 ಪ್ರತಿಶತ ಅಂಕ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಕೇವಲ ಒಂದು ದಿನ ಕಾಲೇಜಿಗೆ ಹಾಜರಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ 9 ನೇ ರ್ಯಾಂಕ್ ಪಡೆದಿರುವ ಈಕೆ ಬೆಂಗಳೂರಿನ ಅರ್ಚನಾ ಕಾಮತ್! ಬಾಲ್ಯದಿಂದಲೂ ಸ್ವಾಮಿ ವಿವೇಕಾನಂದರನ್ನು ತನ್ನ ಆದರ್ಶವಾಗಿ ಹೊಂದಿರುವ ಈಕೆ ಸ್ವಾಮೀಜಿಯ ಜನ್ಮದಿನವನ್ನೇ ತನ್ನ ಜನ್ಮ ದಿನವೆಂದು ಆಚರಿಸಿಕೊಳ್ಳುತ್ತಾರೆ.
ಇವರು 2017-18 ರಲ್ಲಿ 7 ರಾಷ್ಟ್ರೀಯ ಮತ್ತು 14 ಅಂತರರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಭಾಗವಹಿಸಿ 23 ಪದಕಗಳನ್ನು ಗೆದ್ದು ಭಾರತದ ಧ್ವಜವನ್ನು ಎತ್ತಿಹಿಡಿದಿದ್ದಾರೆ. ಸದಾ ಟೂರ್ನಮೆಂಟ್ ಗಳಲ್ಲಿ ಬ್ಯುಸಿಯಾಗಿರುವ ಈಕೆ ಸಮಯ ಸಿಕ್ಕಾಗೆಲ್ಲಾ ಓದುತ್ತಾರೆ. ಬೆಳಗ್ಗಿನ ಸಮಯವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟು ಉಳಿದ ಸಮಯದಲ್ಲಿ ಟೇಬಲ್ ಟೆನಿಸ್ ಅಭ್ಯಾಸ ಮಾಡುತ್ತಾರೆ. ‘ನಾನು ದೇಶದ ಸೇನಾನಿಯಾಗಲು ಬಯಸುತ್ತೇನೆ. ನಮ್ಮ ಪ್ರಾಣವನ್ನು ತ್ಯಾಗಮಾಡದೇಯೇ ದೇಶಕ್ಕಾಗಿ ಹೋರಾಡುವ ಅಪರೂಪದ ಅವಕಾಶವನ್ನು ಕ್ರೀಡೆ ಒದಗಿಸುತ್ತದೆ. ನಾನು ಆ ವ್ಯಕ್ತಿಯಾಗಬೇಕು. ನಮ್ಮ ರಾಷ್ಟ್ರಗೀತೆ ನುಡಿಸುತ್ತಾ ರಾಷ್ಟ್ರಧ್ವಜ ಮೇಲೇರುವುದನ್ನು ನೋಡೋದು ಹೆಮ್ಮೆ’ ಎನ್ನುತ್ತಾರೆ ಅರ್ಚನಾ ಕಾಮತ್!
ವರ್ಲ್ಡ್ ಜುನಿಯರ್ ಸರ್ಕಿಟ್ ನ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತೀಯಳೆಂಬ ಹೆಮ್ಮೆ ಈಕೆಯದು. ಈಕೆ 2013 ರಲ್ಲಿ ಸಬ್ ಜುನಿಯರ್ ಗರ್ಲ್ಸ್, ಜುನಿಯರ್ ಗರ್ಲ್ಸ್, ಯುಥ್ ಗರ್ಲ್ಸ್ ಮತ್ತು ಮಹಿಳಾ ಸಿಂಗಲ್ಸ್ ಈ ನಾಲ್ಕೂ ವಯೋಮಿತಿಯಲ್ಲಿ ಕರ್ನಾಟಕದ ನಂಬರ್ ಒನ್ ಟೇಬಲ್ ಟೆನಿಸ್ ಪ್ಲೇಯರ್ ಕೂಡ ಆಗಿದ್ದವರು. ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ 12 ನೇ ಸ್ಥಾನದಲ್ಲಿದ್ದಾರೆ.
ಮೂರನೇ ಯುಥ್ ಒಲಿಂಪಿಕ್ಸ್ ಗೆ ಅರ್ಹತೆಯನ್ನು ಗಳಿಸಿರುವ ಅರ್ಚನಾ ಅವರು 2018 ರ ಅಕ್ಟೋಬರ್ 6 ರಿಂದ ಅರ್ಜೆಂಟಿನಾದಲ್ಲಿ ನಡೆಯಲಿರುವ ಯುಥ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ಅದ್ಭುತ ಸಾಧನೆ ತೋರುತ್ತಿರುವ ಅರ್ಚನಾ ನಿಜಕ್ಕೂ ಯುಥ್ ಐಕಾನ್.
