Desi

ವಿದೇಶಿ ನೆಲದಲ್ಲಿ ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದ ಮೊದಲ ಮಹಿಳೆ!

ಅದು 1907ರ ಆಗಸ್ಟ್ 21ನೇ ತಾರೀಖು. ಜರ್ಮನಿಯ ಸ್ಟಟ್ ಗರ್ಟ್ ನಲ್ಲಿ ಇಂಟರ್ ನ್ಯಾಷನಲ್ ಸೊಷಿಯಲಿಸ್ಟ್ ಕಾನ್ಫರೆನ್ಸ್ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಭಾರತದ ಮಹಿಳೆಯೊಬ್ಬರು ಎದ್ದುನಿಂತು ‘ಇದು ಸ್ವತಂತ್ರ ಭಾರತದ ತ್ರಿವರ್ಣಧ್ವಜ. ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದರು. ಒಮ್ಮೆ ನೆರೆದಿದ್ದ ಬೇರೆ-ಬೇರೆ ರಾಷ್ಟ್ರಗಳ ಸದಸ್ಯರು ಚಕಿತಗೊಂಡರೂ ತಕ್ಷಣವೇ ಎದ್ದುನಿಂತು ಗೌರವ ಸಲ್ಲಿಸಿದರು. ಆ ಭಾರತೀಯ ಮಹಿಳೆ ಬೇರಾರೂ ಅಲ್ಲ, ಮೇಡಂ ಭಿಖಾಜಿ ಕಾಮಾ. ಶ್ಯಾಂಜಿ ಕೃಷ್ಣವರ್ಮ ಅವರೊಡಗೂಡಿ ವಿದೇಶಿ ನೆಲದಲ್ಲಿ ಭಾರತದ ಮೊದಲ ತ್ರಿವರ್ಣಧ್ವಜದ ಕಲ್ಪನೆಯನ್ನು ಹರಿಬಿಟ್ಟ ಶ್ರೇಯ ಮೇಡಂ ಕಾಮಾ ಅವರಿಗೆ ಸಲ್ಲುತ್ತದೆ.

ಭಾರತೀಯ ಮೂಲದ ಪಾರ್ಸಿ ಮಹಿಳಾಯಾದ ಮೇಡಮ್ ಕಾಮಾ ಅವರದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೆನಪಿಸಿಕೊಳ್ಳಲೇಬೇಕಾದ ಹೆಸರು. ಈಕೆ ಸೊರಾಬ್ಜಿ ಪಟೇಲ್-ಜೀಜಾಬಾಯಿ ಸೊರಾಬ್ಜಿಯವರ ಪುತ್ರಿಯಾಗಿ ಸೆಪ್ಟೆಂಬರ್ 24, 1861 ರಲ್ಲಿ ಮುಂಬೈಯಲ್ಲಿ ಜನಿಸಿದರು. ಈಕೆಯದು ಅಸಾಧಾರಣ ವ್ಯಕ್ತಿತ್ವ. ಬಾಲ್ಯದಿಂದಲೂ ಶಿಸ್ತಿನಿಂದ ಕೂಡಿದ ಜೀವನ. 1885ರಲ್ಲಿ ಕೆ.ಆರ್ ಕಾಮಾರೊಂದಿಗೆ ವಿವಾಹವಾಯಿತು. ತನ್ನ ಮತ್ತು ಪತಿಯ ನಡುವೆ ಭಿನ್ನಾಭಿಪ್ರಾಯವುಂಟಾಯಿತು. ನಂತರ ಈಕೆ ಹೆಚ್ಚಿನ ಸಮಯವನ್ನು ಕಳೆದದ್ದು ಸಮಾಜದ ಕೆಲಸ ಮಾಡುವಲ್ಲಿ.

1896ರಲ್ಲಿ ಮುಂಬೈಗೆ ಪ್ಲೇಗು ಮಾರಿ ಕಾಲಿಟ್ಟಿತು. ಮೇಡಂ ಕಾಮಾ ತಡಮಾಡಲಿಲ್ಲ. ಪ್ಲೇಗು ಮಾರಿಗೆ ತುತ್ತಾದವರ ಸೇವೆ ಮಾಡಲು ಮುಂದಾದರು! ಆದರೆ, ಈ ಮಾರಿ ಸ್ವತಃ ಮೇಡಂ ಕಾಮಾರನ್ನೂ ಬಿಡಲಿಲ್ಲ. ಪ್ಲೇಗಿನಿಂದ ನರಳುತ್ತಿದ್ದ ಮೇಡಂ ಕಾಮಾರವರನ್ನು 1901ರಲ್ಲಿ ಚಿಕಿತ್ಸೆಗೆಂದು ಲಂಡನ್ ಗೆ ಕಳಿಸಲಾಯಿತು. ಲಂಡನ್ನಲ್ಲಿ ಆಕೆ ಶ್ಯಾಂಜೀ ಕೃಷ್ಣವರ್ಮ ಅವರನ್ನು ಭೇಟಿಯಾದರು. ಅವರೇ ಸ್ಥಾಪಿಸಿದ ಭಾರತ ಭವನಕ್ಕೆ ಸಹಾಯ ಹಸ್ತ ನೀಡಿದರು! ಶ್ಯಾಂಜೀ ಕೃಷ್ಣವರ್ಮರವರ ಮೂಲಕ ದಾದಾಭಾಯಿ ನವ್ರೋಜಿ, ಸಿಂಗ್ ರೇವಾಭಾಯ್ ರಾಣಾ, ಸಾವರ್ಕರ್, ಹೀಗೆ ಹಲವರ ಪರಿಚಯವಾಯಿತು. ಕುಂಟುತ್ತಾ ಸಾಗುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕೆಲಸಕ್ಕೆ ವೇಗ ದೊರೆತಂತಾಯಿತು.

ವರ್ಮ ಅವರ ಇಂಡಿಯನ್ ಹೋಂ ರೂಲ್ ಸೊಸೈಟಿಗೆ ಧನಸಹಾಯವನ್ನೂ ಮಾಡಿದರು ಮೇಡಂ ಕಾಮಾ. ಇದೇ ಸಂದರ್ಭದಲ್ಲಿ ಲಂಡನ್ನಲ್ಲಿ ಕ್ರಾಂತಿಬೀಜ ಮೊಳೆಯುತ್ತಿತ್ತು. ಇದರ ಸುಳಿವು ಸಿಕ್ಕ ಬ್ರಿಟೀಷರು ಎಚ್ಚೆತ್ತರು. ಕ್ರಾಂತಿಕಾರಿಗಳು ನಡೆಸುತ್ತಿದ್ದ ಪತ್ರಿಕೆಗೆ ಮುಟ್ಟುಗೋಲು ಹಾಕಿದರು. ತಮ್ಮ ವಿಚಾರಧಾರೆಯನ್ನು ಪ್ರಖರವಾಗಿ ಪ್ರಸ್ತುತ ಪಡಿಸಲು ಕ್ರಾಂತಿಕಾರಿಗಳಿಗೆ ಮುಖವಾಣಿಯೊಂದು ಬೇಕಿತ್ತು. ಹೀಗಾಗಿ ‘ವಂದೇ ಮಾತರಂ’ ಎಂಬ ಹೆಸರಿನಿಂದ ಶುರುವಾದ ಪತ್ರಿಕೆ ಮೇಡಂ ಕಾಮಾ ಅವರ ನೇತೃತ್ವದಲ್ಲಿ ಪ್ರಖರವಾಗಿ ಮುಂದುವರೆಯಿತು. ಎಷ್ಟೇ ಕಷ್ಟವಾದರೂ ಆಕೆ ಪತ್ರಿಕೆ ನಿರಂತರವಾಗಿ ನಡೆಯುವಂತೆ ನೋಡಿಕೊಂಡರು! ಆಕೆಯ ಈ ದಿಟ್ಟ ಹೆಜ್ಜೆಯನ್ನು ಗಮನಿಸಿದ ಸರ್ಕಾರ, ಮೇಡಂ ಕಾಮಾರವರು ಈ ಎಲ್ಲಾ ಚಟುವಟಿಕೆಗಳಿಂದ ಹಿನ್ನಡೆದರೆ ಮಾತ್ರ ಭಾರತಕ್ಕೆ ಮರಳುವ ಅವಕಾಶ ಕೊಡುವುದಾಗಿ ತಿಳಿಸಿತು. ಸ್ವಲ್ಪವೂ ಧೃತಿಗೆಡದೇ ಬ್ರಿಟೀಷರ ಈ ನಿಲುವನ್ನು ಕಾಲಕಸದಂತೆ ತಿರಸ್ಕರಿಸಿ ಅಲ್ಲಿಯೇ ಉಳಿದರು ಮೇಡಂ ಭಿಖಾಜಿ ಕಾಮಾ!

ಸ್ವಲ್ಪ ದಿನಗಳಲ್ಲಿಯೇ ಮೇಡಂ ಕಾಮಾ ಅವರ ನೇತೃತ್ವದಲ್ಲಿ ‘ಮದನ್ ತಲವಾರ್’ ಪತ್ರಿಕೆಯೂ ಆರಂಭಗೊಂಡಿತು. ಈಕೆ 1905ರ ವೇಳೆಗೆ ಪ್ಯಾರಿಸ್ ಗೆ ಬಂದು ನೆಲೆಸಿದರು. ಅಲ್ಲಿ ಸಿಂಗ್ ರೇವಾಭಾಯ್ ರಾಣೆರವರೊಡಗೂಡಿ ಪ್ಯಾರಿಸ್ ಇಂಡಿಯನ್ ಸೊಸೈಟಿಯನ್ನು ಪ್ರಾರಂಭಿಸಿದರು.  

ಅಕ್ಟೋಬರ್ 1914 ರಲ್ಲಿ ಮೇಡಂ ಕಾಮಾ ಮತ್ತು ರಾಣಾರನ್ನು ಬಂಧಿಸಲಾಯಿತು. ಬಿಡುಗಡೆಗೊಂಡ ನಂತರವೂ ವಾರದಲ್ಲಿ ಒಮ್ಮೆ ಠಾಣೆಗೆ ಬಂದು ಹಾಜರಾಗುವಂತೆ ಪ್ಯಾರಿಸ್ ಸರ್ಕಾರ ತಿಳಿಸಿತು. ಅವರ ಧಾರ್ಷ್ಟ್ಯಕ್ಕೆ ಮೇಡಂ ಕಾಮಾ ಜಗ್ಗಲಿಲ್ಲ. ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ನಂತರ 1935ರವರೆಗೆ ಫ್ರಾನ್ಸಿನಲ್ಲಿ ನೆಲೆಸಿದರು. ಭಾರತಕ್ಕೆ ಹಿಂದಿರುಗಲು ಅವಕಾಶ ನೀಡಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಹಾಕಿದರು. ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ, ಇನ್ನು ಆಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಧೈರ್ಯದ ಮೇಲೆ ಬ್ರಿಟಿಷರು ಒಪ್ಪಿಕೊಂಡರು. ಹೇಡಿ ಬ್ರಿಟಿಷರನ್ನು ಈ ಮಟ್ಟಿಗೆ ಹೆದರಿಸಿಟ್ಟಿದ್ದ ಮೇಡಂ ಕಾಮಾರ ಹೋರಾಟವನ್ನು ಪ್ರತಿಯೊಬ್ಬ ಭಾರತೀಯನೂ ಮರೆಯುವಂತಿಲ್ಲ.

1936 ಆಗಸ್ಟ್ ನಲ್ಲಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 74 ವರ್ಷದ ತುಂಬು ಜೀವನ ನಡೆಸಿದ ಮೇಡಂ ಕಾಮಾ ವಿದೇಶದಲ್ಲಿದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ!

-ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top