Vishwaguru

ಶತ್ರುಗಳನ್ನು ಅರಿತೇ ಯುದ್ಧದ ಯೋಜನೆ ರೂಪಿಸಬೇಕು!

ಕಾಶ್ಮೀರ್ ಪ್ರಿನ್ಸೆಸ್ ಹೆಸರು ಕೇಳಿದ್ದೀರಾ? ಇದು ಯಾವುದೋ ರಾಣಿಯ ಕುರಿತಾದ್ದಲ್ಲ. ಭಾರತದ ವಿಮಾನವೊಂದರ ಹೆಸೆರು. 1955ರ ಏಪ್ರಿಲ್ 18ರಿಂದ 24ರವರೆಗೆ ಇಂಡೊನೇಷಿಯಾದ ಬಾಡುಂಗ್ನಲ್ಲಿ ಆಫ್ರೋ ಏಷ್ಯನ್ನ ಶೃಂಗಸಭೆ ಇತ್ತು. ಆಪ್ರಿಕಾ ಮತ್ತು ಏಷ್ಯಾದ ಅನೇಕ ಪ್ರಮುಖ ನಾಯಕರು ಅಲ್ಲಿಗೆ ಭಾಗವಹಿಸಬೇಕೆಂಬ ಅಪೇಕ್ಷೆ ಎಲ್ಲರದ್ದು. ಇದು ಶಕ್ತ ರಾಷ್ಟ್ರಗಳನ್ನು ಪಕ್ಕಕ್ಕಿಟ್ಟು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಮ್ಮನ್ನು ತಾವು ರೂಪಿಸಿಕೊಳ್ಳುತ್ತಿರುವ ಪ್ರಯತ್ನ. ಸಹಜವಾಗಿಯೇ ಭಾರತ ನಾಯಕನ ಸ್ಥಾನದಲ್ಲಿತ್ತು. ಆಗೆಲ್ಲಾ ಚೀನಾದ ಗತಿ ಹೇಗಿತ್ತೆಂದರೆ ಯಾವ ರಾಷ್ಟ್ರಗಳೂ ಅವರೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿರಲಿಲ್ಲ. ಹಾಂಗ್ಕಾಂಗಿನ ಪ್ರಭುತ್ವ ಹೊಂದಿದ್ದ ಬ್ರಿಟೀಷರೂ ಸಹ ಚೀನಾದ ಪ್ರಮುಖರೊಂದಿಗೆ ದೂರದೂರದಲ್ಲೇ ಇದ್ದರು. ಅಂತಹ ಹೊತ್ತಿನಲ್ಲಿ ಅಧ್ಯಕ್ಷ ಚವ್-ಎನ್-ಲಾಯ್ ಅನ್ನು ಜಾಗತಿಕ ವೇದಿಕೆಗಳಿಗೆ ಕರೆದೊಯ್ದು, ಪರಿಚಯಿಸಿ ಅವರ ಖ್ಯಾತಿ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದುದು ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರೂ. ಈ ಸಭೆಗೆ ಚೀನಾದವರೂ ಬರಬೇಕೆಂದು ಅವರದ್ದೇ ಹೆಚ್ಚು ಒತ್ತಾಯ. ಅಧ್ಯಕ್ಷ ಒಪ್ಪಿಕೊಂಡು ವಿಮಾನವೊಂದನ್ನು ಕಳಿಸಿಕೊಡುವಂತೆ ಭಾರತವನ್ನೇ ಕೇಳಿಕೊಂಡ. ಆಗ ಹಾಂಗ್ಕಾಂಗಿಗೆ ಹೋದ ವಿಮಾನ ಚೀನಾದ ಪ್ರಮುಖರನ್ನು ಹತ್ತಿಸಿಕೊಂಡು ಜಾಕಾರ್ತದತ್ತ ಪಯಣ ಬೆಳೆಸಿತು. ಉಡಾವಣೆಗೊಂಡ ಐದು ಗಂಟೆಗಳೊಳಗೆ ಭಾರೀ ಸ್ಫೋಟದ ಸದ್ದು ಕೇಳಿಬಂದು ವಿಮಾನ ಸಮುದ್ರಕ್ಕುರುಳಿತು. ಕೊನೆಯ ಕ್ಷಣದವರೆಗೂ ವಿಮಾನದ ಕ್ಯಾಪ್ಟನ್ ಮತ್ತು ಗಗನಸಖಿ ತೋರಿದ ಸಾಹಸ ಅನೇಕ ಬಾರಿ ಗೌರವಕ್ಕೆ ಪಾತ್ರವಾಯ್ತು. ಆದರೆ ಯಾರೂ ವಿಮಾನ ನಾಶಗೊಳ್ಳುವುದನ್ನು ತಡೆಯಲಾಗಲಿಲ್ಲ. ಒಂದಿಬ್ಬರನ್ನು ಬಿಟ್ಟರೆ ಈ ಅಪಘಾತದಲ್ಲಿ ಎಲ್ಲರೂ ತೀರಿಕೊಂಡರು. ವಾಸ್ತವವಾಗಿ, ಇದು ವಿಮಾನದೊಳಗಿನ ದೋಷವಾಗಿರಲಿಲ್ಲ. ಬದಲಿಗೆ, ಈ ವಿಮಾನದೊಳಗೆ ಪ್ರಯಾಣ ಮಾಡಬೇಕಾಗಿದ್ದ ಚವ್-ಎನ್-ಲಾಯ್ ಅನ್ನು ಹತ್ಯೆ ಮಾಡುವ ಪ್ರಯತ್ನವಾಗಿತ್ತು. ಇದರ ಸುಳಿವನ್ನು ಮೊದಲೇ ಪಡೆದುಕೊಂಡಿದ್ದ ಆತ ತಾನು ತಪ್ಪಿಸಿಕೊಂಡುಬಿಟ್ಟ. ಆಗ ಆತ ಈ ಕುರಿತಂತೆ ಪೂರ್ಣ ಮಾಹಿತಿ ಪಡೆಯಲು ಸಮೀಪಿಸಿದ್ದು ಭಾರತವನ್ನೇ. ಭಾರತದ ರಾ ಅಧಿಕಾರಿ ರಾಮೇಶ್ವರನಾಥ್ ಕಾವ್ ಇದರ ನೇತೃತ್ವ ವಹಿಸಿ ಹಾಂಗ್ಕಾಂಗಿಗೆ ಪಯಣ ಬೆಳೆಸಿದರು. ಚೀನಾ ಭಾರತದ ಸಹಕಾರ ಕೇಳಿದ್ದಾದರೂ ಏಕೆ ಗೊತ್ತೇ? ಸ್ವತಃ ಚೀನಾ ಪ್ರಯತ್ನಪಟ್ಟಿದ್ದರೂ ಅವರಿಗೆ ತನಿಖೆ ಸುಲಭವಾಗುತ್ತಿರಲಿಲ್ಲ. ಏಕೆಂದರೆ ಅವರಿಗೆ ಅನ್ಯರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವಿರಲಿ, ಸಂಬಂಧವೇ ಇರಲಿಲ್ಲ. ಆ ಹೊತ್ತಿನಲ್ಲಿ ಅವರ ಕೈಹಿಡಿದು ಒಂದೊಂದೇ ಹೆಜ್ಜೆಯನ್ನು ನಡೆಸಿದ್ದು ಭಾರತವೇ.

ಆಗೆಲ್ಲಾ ಭಾರತ ಜಗದ ಕಣ್ಮಣಿ. ಆಗತಾನೇ ಸ್ವಾತಂತ್ರ್ಯ ಪಡೆದು ಯುದ್ಧವನ್ನೆದುರಿಸಿ ಜಗತ್ತಿನ ಕಂಗಳಲ್ಲಿ ಮಹಾತ್ಮ ತೋರಿದ ಹಾದಿಯಲ್ಲಿ ನಡೆಯುತ್ತಿರುವ ಶ್ರೇಷ್ಠ ರಾಷ್ಟ್ರವೆಂಬ ಗೌರವ ಪಡೆದಿತ್ತು. ಹೀಗಾಗಿ ನಮ್ಮ ಮಾತಿಗಿರಬಹುದಾದ ಬೆಲೆಯನ್ನು ಚೆನ್ನಾಗಿಯೇ ಬಳಸಿಕೊಂಡ ಚೀನಾ ಹಂತ-ಹಂತವಾಗಿ ಬೆಳೆಯಿತು. ನಾವು ಕುಸಿಯುತ್ತಲೇ ಹೋದೆವು. ಒಂದು ಹಂತದಲ್ಲಂತೂ ಚವ್-ಎನ್-ಲಾಯ್ ತನ್ನ ಮನೋಗತವನ್ನು ಈಡೇರಿಸಿಕೊಳ್ಳಲು ನೆಹರೂವನ್ನೇ ಟೀಕಿಸಲಾರಂಭಿಸಿದ. ಆತನಷ್ಟು ದುರಹಂಕಾರಿಯನ್ನು ನೋಡೇ ಇಲ್ಲ ಎಂದೂ ಹೇಳಿಬಿಟ್ಟ. ಆಗಬೇಕಾದ್ದೇ ಬಿಡಿ. ಭಾರತಕ್ಕೆ ಸಿಗಬೇಕಾದ ಅನೇಕ ಪ್ರಮುಖ ಅವಕಾಶಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟದ್ದಕೆ ಇದಕ್ಕಿಂತಲೂ ತಕ್ಕ ಶಾಸ್ತಿ ಮತ್ತೊಂದಿರಲಿಲ್ಲ. ಮುಂದೆ ಇದೇ ಚೀನಾ ಭಾರತದ ಮೇಲೆ ಆಕ್ರಮಣವನ್ನು ಮಾಡಿ ನೆಹರೂ ಸಾವನ್ನು ಕಹಿಯಾಗಿಸಿಬಿಟ್ಟಿತು.

ಜಗತ್ತಿನ ಸಂಬಂಧಗಳಿಗಾಗಿ ನಮ್ಮ ಕೈಬೆರಳು ಹಿಡಿಯಲು ತಡಕಾಡುತ್ತಿದ್ದ ಚೀನಾ ಇಂದು ಜಗತ್ತನ್ನೇ ಆಳುವ ಮಟ್ಟಕ್ಕೆ ಬೆಳೆದದ್ದನ್ನು ಸೂಕ್ಷ್ಮವಾಗಿ ಅವಲೋಕಿಸಲೇಬೇಕು. ಅವರು ಸಾಗಿದ ಹಾದಿಯನ್ನು ನಾವು ಸವೆಸಬೇಕಿಲ್ಲ ನಿಜ. ಆದರೆ ಅವರು ನಮ್ಮನ್ನು ಹೇಗೆ ಅಡ್ಡಗಟ್ಟಬಲ್ಲರು ಎಂಬುದರ ಅಧ್ಯಯನವಾಗದೇ ಹೋದರೆ ಅವರನ್ನೆದುರಿಸುವುದು ಸುಲಭವಲ್ಲ. ವಾಸ್ತವವಾಗಿ ಚೀನಾ ತನ್ನ ರಾಷ್ಟ್ರದ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಅದಕ್ಕೆ ತಕ್ಕಂತೆ ಹೆಜ್ಜೆ ಇಟ್ಟಿತು. ಸದಾ ಹೋರಾಟಗಳಲ್ಲೇ ತೊಡಗಿರುತ್ತಿದ್ದ ಜನರನ್ನು ತಹಬಂದಿಗೆ ತಂದಿತು. ಯಾವ ಹೋರಾಟದ ಕಾರಣದಿಂದಾಗಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿತೋ ಅದೇ ಪಕ್ಷ ಜನರ ಹೋರಾಟದ ಮನೋಭಾವನೆಯನ್ನೇ ಮಟ್ಟಹಾಕಿ ರಾಷ್ಟ್ರಕ್ಕಾಗಿ ಬಾಯ್ಮುಚ್ಚಿಕೊಂಡು ದುಡಿಯುವ ಅಭ್ಯಾಸ ಮಾಡಿಸಿತು. ಈ ರೀತಿಯ ಮನೋಭಾವ ಸಿದ್ಧಿಸುವವರೆಗೂ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳಲೂ ಇಲ್ಲ. ಒಮ್ಮೆ ಜನ ಗೋಣು ಬಗ್ಗಿಸಿ ದುಡಿಯುವುದನ್ನು ಕಲಿತ ಮೇಲೆ ಜಗತ್ತಿನ ಮಾರುಕಟ್ಟೆಗೆ ಮುಕ್ತವಾದ ಚೀನಾ ತನ್ನನ್ನು ತಾನು ಜಗತ್ತಿಗೆ ಅನಿವಾರ್ಯಗೊಳಿಸಿಕೊಳ್ಳುವ ಪ್ರಯತ್ನ ಮಾಡಿತು. ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ತಯಾರಿಸಿಕೊಡುವ ಜನರು ತಮ್ಮ ಬಳಿಯೇ ಇದ್ದಾರೆ ಎಂಬುದೇ ಅದರ ಮಾರುಕಟ್ಟೆಯ ತಂತ್ರವಾಯ್ತು. ಒಂದೆರಡು ದಶಕಗಳ ಹಿಂದೆ ಚೀನಾದೊಂದಿಗೆ ಸ್ಪಧರ್ೆ ಸಾಧ್ಯವೇ ಇಲ್ಲವೆಂದು ನಾವೆಲ್ಲಾ ಹೆಳುತ್ತಿದ್ದುದಾದರೂ ಏಕೆ ಗೊತ್ತೇ? ಅಲ್ಲಿ ಅತ್ಯಂತ ಕಡಿಮೆ ಬೆಲೆಗೆ ಕಾಮರ್ಿಕರು ಸಿಗುತ್ತಾರೆ ಅಂತ. ಈಗಿನ ಸ್ಥಿತಿ ಹಾಗೇನೂ ಇಲ್ಲ. ಅಲ್ಲಿನ ಕಾಮರ್ಿಕರ ಸಂಬಳ ಅಕ್ಕಪಕ್ಕದ ರಾಷ್ಟ್ರಗಳಿಗಿಂತ ಹೆಚ್ಚೇ ಆಗಿದೆ. ಆದರೆ ದುಡಿಮೆಯ ಶೈಲಿ ನಮ್ಮೆಲ್ಲರಿಗಿಂತಲೂ ವಿಭಿನ್ನ ಅಷ್ಟೇ. ಎಂಟು ಗಂಟೆ ಕೆಲಸ ಮಾಡಿದ ಅಲ್ಲಿನ ಕಾಮರ್ಿಕ 16 ಗಂಟೆಯಷ್ಟು ಉತ್ಪಾದಕಾ ಸಾಮಥ್ರ್ಯವನ್ನು ತೋರಿದರೆ ನಮ್ಮಲ್ಲಿ ಎಂಟು ದಿನ ದುಡಿದರೆ 8 ಗಂಟೆಯಷ್ಟು ಉತ್ಪಾದನಾ ಸಾಮಥ್ರ್ಯ ತೋರುತ್ತಾರೆ ಎಂದು ಆಡಿಕೊಳ್ಳುತ್ತಾರೆ. ಪರಿಸ್ಥಿತಿ ತೀರಾ ಅಷ್ಟು ಕೆಟ್ಟದ್ದಿಲ್ಲದಿದ್ದರೂ ಚೀನಾದೊಂದಿಗೆ ಸ್ಪಧರ್ಿಸುವಂತೆಯೇ ಇಲ್ಲ. ಪ್ರತಿಭಟನೆಗಳನ್ನು ಜಗತ್ತಿನ ಎಲ್ಲ ಕಡೆಗಳಲ್ಲೂ ಮಾಡಿಸುವ ಸಾಮಥ್ರ್ಯ ಪಡೆದಿರುವ ಚೀನಾ ತನ್ನ ದೇಶದಲ್ಲಿ ಮಾತ್ರ ಯಾರೂ ಮಿಸುಕಾಡಲು ಬಿಡುವುದೇ ಇಲ್ಲ. ಈ ಕುರಿತಂತೆ ಜಗತ್ತು ಪ್ರಶ್ನೆ ಮಾಡಿದಾಗಲೆಲ್ಲ ಸಮಸ್ಯೆಗೆ ಪರಿಹಾರವನ್ನು ಮುಂದೂಡುತ್ತಾ ಹೋದದ್ದಲ್ಲದೇ ತನ್ನ ದೇಶದ ಈ ಸಂಗತಿಗಳು ಜಗತ್ತಿಗೆ ಸಿಗದಂತೆ ಅದನ್ನು ಕರಿಪರದೆಯ ಹಿಂದೆ ತಳ್ಳಿಬಿಟ್ಟಿತು. ಮಾಧ್ಯಮಗಳ ಮೇಲೆ ಈ ಪರಿಯ ಅಂಕುಶ ಕಟ್ಟರ್ ಮುಸಲ್ಮಾನ ರಾಷ್ಟ್ರಗಳಲ್ಲೂ ಇಲ್ಲ. ಭಾರತದಲ್ಲಿ ದಿನ ಬೆಳಗಾದರೆ ಅರಚಾಡುವ ಅಮ್ನೆಸ್ಟಿ ಚೀನಾದ ಕುರಿತಂತೆ ಸೊಲ್ಲೆತ್ತಿದ್ದನ್ನು ಕಂಡವರೇ ಇಲ್ಲ. ಉದ್ದಿಮೆದಾರರಿಂದ ಚಲಾಯಿಸಲ್ಪಡುತ್ತಿರುವ ಶಕ್ತರಾಷ್ಟ್ರಗಳಿಗೂ ಅಷ್ಟೇ ಬೇಕು; ತಾವು ಹೂಡಿದ ಹಣಕ್ಕೆ ಪ್ರತಿಯಾಗಿ ಬಾಯ್ಮುಚ್ಚಿಕೊಂಡು ಗೋಣು ಬಗ್ಗಿಸಿ ದುಡಿಯುವ ನೌಕರರು. ತನ್ನ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಟ್ಟು ಚೀನಾ ಅದನ್ನು ಒದಗಿಸುತ್ತಿದ್ದುದರಿಂದ ಈ ರಾಷ್ಟ್ರಗಳೂ ಸುಮ್ಮನಾಗಬೇಕಾಯ್ತು.

ಆದರೆ ಚೀನಾ ಸುಮ್ಮನಾಗಲಿಲ್ಲ. ನಿಧಾನವಾಗಿ ಅದು ತನ್ನ ಬಾಹುಗಳನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಾರಂಭಿಸಿತು. ಅಮೇರಿಕಾ, ಯುರೊಪು, ಆಸ್ಟ್ರೇಲಿಯಾಗಳಲ್ಲೆಲ್ಲಾ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ತನ್ನ ಪೀಠವನ್ನು ತೆರೆಯಿತು, ಕೆಲವೊಮ್ಮೆ ಪ್ರಾಧ್ಯಾಪಕರನ್ನು ಖರೀದಿ ಮಾಡಿತು ಮತ್ತೂ ಕೆಲವೊಮ್ಮೆ ಸದ್ದಿಲ್ಲದೇ ತನ್ನ ವಿದ್ಯಾಥರ್ಿಗಳನ್ನು ಈ ವಿಶ್ವವಿದ್ಯಾಲಯಗಳ ಪ್ರಮುಖ ಸ್ಥಳಗಳಲ್ಲಿ ಅಧ್ಯಯನಕ್ಕೆ ಕೂರಿಸಿತು. ಅಲ್ಲಿನ ಸೆಮಿನಾರುಗಳಲ್ಲಿ ಚೀನಾದ ಪರ ಚಚರ್ೆ ನಡೆಯಲು ಇದಕ್ಕಿಂತ ಮತ್ತೇನು ಆಗಬೇಕಿತ್ತು ಹೇಳಿ!? ಈ ಚಚರ್ೆಗಳು ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಕಟವಾಗುವಂತೆ ಹಣ ವ್ಯಯಿಸಲೂ ಅದು ಹಿಂದೆ-ಮುಂದೆ ನೋಡಲಿಲ್ಲ. ಕೆಲವು ಅಮೇರಿಕಾ ಪತ್ರಿಕೆಗಳಂತೂ ಚೀನಾ ರೂಪಿಸಿಕೊಟ್ಟ ಸುದ್ದಿಗಳನ್ನೇ ಜಾಹಿರಾತಾಗಿಯೇ ಪ್ರಕಟಿಸುತ್ತಿತ್ತು. ಆದರೆ ಓದುಗರಿಗೆ ಜಾಹಿರಾತು ಎಂದು ಗೊತ್ತಾಗುತ್ತಿರಲಿಲ್ಲ ಅಷ್ಟೇ. ಅಮೇರಿಕಾ, ಯುರೋಪಿನಲ್ಲಿ ಅದಕ್ಕೆ ಸ್ವಲ್ಪ ಕಷ್ಟವಾಗಿರಬಹದು. ಭಾರತದಲ್ಲಿ ಮಾತ್ರ ಅದಕ್ಕೆ ದಕ್ಕಿದ್ದು ರಾಜಮಾರ್ಗವೇ. ಇಲ್ಲಿನ ಬುದ್ಧಿಜೀವಿಗಳು ತಮ್ಮನ್ನು ತಾವು ಮಾರಿಕೊಳ್ಳಲು ಕಾಯುತ್ತಲೇ ಇದ್ದರು. ಅದರಲ್ಲೂ ಹಿಂದುತ್ವದ ವಿರೋಧದ ಅಮಲೇರಿಸಿಕೊಂಡಿದ್ದ ಕೆಲವರಂತೂ ಚೀನಾ ಕೇಳಿದ್ದಕ್ಕಿಂತ ಹೆಚ್ಚಿನ ಸೇವೆಯನ್ನೇ ಮಾಡಿದರು. ಸಹಜವಾಗಿಯೇ ಭ್ರಷ್ಟ ಆಳುವ ಪಕ್ಷಗಳು ಚೀನಾ ಕೇಳುವ ಮುನ್ನವೇ ಚೀನಾದ ಸಹಕಾರಕ್ಕೆ ನಿಂತುಬಿಟ್ಟವು. ಹೀಗಾಗಿಯೇ ಭಾರತ ವಿರೋಧಿಯಾದ ವಿಶ್ವವಿದ್ಯಾಲಯಗಳು, ಪ್ರೊಫೆಸರುಗಳು ಅಗತ್ಯ ಮೀರಿ ಬೆಳೆದರು. ಇವೆಲ್ಲ ಗೊತ್ತಾಗಿದ್ದು ಟ್ರಂಪ್ ಅವಧಿಯಲ್ಲಿ. ತನ್ನ ಹುದ್ದೆ ತ್ಯಾಗ ಮಾಡುವ ಮುನ್ನ ಈ ಕುರಿತಂತೆ ಆತ ಅನೇಕ ವಿಚಾರಣೆಗಳನ್ನು ನಡೆಸಿ ಜಗತ್ತಿನ ಕಣ್ಣು ತೆರೆಸಿಬಿಟ್ಟಿದ್ದ. ಆಗ ಒಂದಷ್ಟು ದಿನ ಚೀನಾ ಪರವಾದ ಅಬ್ಬರದ ಪ್ರಚಾರಗಳು ನಿಂತೇ ಹೋಗಿದ್ದವು. ಈಗ ನ್ಯೂಯಾಕರ್್ ಟೈಮ್ಸ್ನಿಂದ ಹಿಡಿದು ಎನ್ಡಿಟಿವಿಯವರೆಗೆ ಪ್ರತಿಯೊಬ್ಬರೂ ಮತ್ತೆ ಬರೆಯಲು ಆರಂಭಿಸಿದ್ದಾರೆ. ಇರಲಿ. ಚೀನಾ ಬರಿ ಲೇಖನಗಳ ಮೂಲಕವಷ್ಟೇ ತನ್ನ ಪ್ರಭಾವವನ್ನು ಸ್ಥಾಪಿಸಲಿಲ್ಲ. ಬದಲಿಗೆ ಕೆಲವು ಹಿಂದುಳಿದ ಬಡರಾಷ್ಟ್ರಗಳಿಗೆ ಸಾಲಕೊಟ್ಟು ಅವರನ್ನು ತೀರಿಸಲಾಗದ ಸುಳಿಯಲ್ಲಿ ಸಿಲುಕಿಸಿತು. ಹೀಗೆ ಚೀನಾದ ದುಶ್ಚಕ್ರಕ್ಕೆ ಸಿಲುಕಿದ ಸಣ್ಣಪುಟ್ಟ ರಾಷ್ಟ್ರಗಳು ಜಾಗತಿಕ ಚಚರ್ೆಯಲ್ಲಿ ಚೀನಾವನ್ನು ವಿರೋಧಿಸುವ ಸಾಮಥ್ರ್ಯ ಕಳಕೊಂಡುಬಿಟ್ಟವು. ಚೀನಾ ತಾಳಕ್ಕೆ ಕುಣಿಯುವ ಕೈಗೊಂಬೆಗಳಾಗಿಬಿಟ್ಟವು. ಆಫ್ರಿಕನ್ ರಾಷ್ಟ್ರಗಳು ಬಿಡಿ, ನಮ್ಮ ಕಾಲ್ಬುಡದಲ್ಲಿರುವ ನಮ್ಮೊಂದಿಗೆ ಘನಿಷ್ಠ ಸಂಬಂಧ ಹೊಂದಿರುವ ಶ್ರೀಲಂಕಾ ಚೀನಾದ ಪ್ರಭಾವಕ್ಕೆ ಹೇಗೆ ಒಳಗಾಗಿತ್ತೆಂದರೆ ಅದರಿಂದ ಬಿಡುಗಡೆ ಪಡೆಯಲು ಸಾಕಷ್ಟು ಹೆಣಗಾಡಿತು ಕೂಡ. ಈಗಲೂ ಜಗತ್ತಿನ ಅನೇಕ ರಾಷ್ಟ್ರಗಳು ಚೀನಾದ ಈ ವಿಷಚಕ್ರದಿಂದ ಹೊರಬರಲಾಗದೇ ತಮ್ಮ ರಾಷ್ಟ್ರದ ಬಹುತೇಕ ಆಯಕಟ್ಟಿನ ಜಾಗಗಳನ್ನು ಅಡವಿಟ್ಟುಬಿಟ್ಟಿವೆ. ಚೀನಾ ಈ ರೀತಿ ಜಗತ್ತಿನಲ್ಲಿ ದೈತ್ಯಾಕಾರವಾಗಿ ಬೆಳೆದು ನಿಲ್ಲುವಾಗಲೂ ಸುಮ್ಮನಿಲ್ಲ. ಏಷ್ಯಾಖಂಡದಲ್ಲಿ ಎದುರಿಸಿ ಬೆಳೆಯಬಹುದಾದ ರಾಷ್ಟ್ರಗಳನ್ನು ಭಿನ್ನ-ಭಿನ್ನ ರೂಪದಲ್ಲಿ ಬೆದರಿಸುತ್ತಲೇ ಕುಳಿತಿದೆ. ಜಪಾನಿನೊಂದಿಗೆ ಅದರ ಕಾದಾಟದ ಶೈಲಿಯೇ ಬೇರೆ, ಭಾರತದೊಂದಿಗೇ ಬೇರೆ. ಸುತ್ತಮುತ್ತಲಿನ ರಾಷ್ಟ್ರಗಳನ್ನು ನಮ್ಮಿಂದ ದೂರವಾಗಿಸಿ ಗಡಿಯಲ್ಲಿ ಬೆದರಿಕೆ ತಂತ್ರವನ್ನು ಹೂಡಿ, ನಮ್ಮನ್ನು ಅಸ್ಥಿರಗೊಳಿಸುವ ಸಂಚು ನಡೆಸುತ್ತಲೇ ಬಂದಿದೆ. ನೆಹರೂ ಕಾಲಕ್ಕೆ ಒಮ್ಮೆ ಮಂಡಿಯೂರಿದ್ದೆವಲ್ಲ ಅದನ್ನೇ ಬಳಸಿಕೊಂಡು ಈಗಲೂ ಹೆದರಿಸುತ್ತವೆ. ಚೀನಾ ಶಕ್ತರಾಷ್ಟ್ರ ನಿಜ, ಹಾಗಂತ ಭಾರತವೇನು ಕೈಲಾಗದ ಹೇಡಿಯಲ್ಲ. ಮೊನ್ನೆ ತಾನೇ ಪ್ಯಾಂಗಾಂಗ್ಸೊನಲ್ಲಿ ಚೀನಾ ತನ್ನ ಪಡೆಯನ್ನು ಮರಳಿ ಕರೆದುಕೊಂಡಿದ್ದು ಜಾಗತಿಕ ಅಚ್ಚರಿಗೆ ಕಾರಣವಾಗಿದೆ. ಅದು ಸುಲಭವಾಗಿ ಹೋಗಿದ್ದೇನಲ್ಲ. ಕಳೆದ ಆಗಸ್ಟ್ನಲ್ಲಿ ಈ ಭಾಗದಲ್ಲಿ ಚೀನಾ ತನ್ನ ಪಡೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬುದು ಗೊತ್ತಾದೊಡನೆ ಭಾರತ ಚೀನಾದ ಅರಿವಿಗೂ ಬಾರದಂತೆ ಚಿಶೂಲ್ ಕಣಿವೆಯ ಕೈಲಾಶ್ ಪರ್ವತಶ್ರೇಣಿಯ ಎತ್ತರದ ಭಾಗಗಳನ್ನು ಆಕ್ರಮಿಸಿ ಕುಳಿತುಕೊಂಡುಬಿಟ್ಟಿತು. ಇದು ಚೀನಾದ ಚಲನ-ವಲನಗಳ ಮೇಲೆ ಗಮನವಿಡಲು ಭಾರತಕ್ಕೆ ಸಾಕಷ್ಟು ಸಹಕಾರಿ ಕೂಡ ಆಗಿತ್ತು. ಅಲ್ಲಿಂದಾಚೆಗೆ ಚೀನಾದ ಮಾತಿನ ವರಸೆಯೇ ಬದಲಾಯ್ತು. ಜೊತೆಗೆ ಚೀನಾದ ಆಕ್ರಮಕ ನೀತಿಗೆ ಭಾರತ ಈ ಬಾರಿ ಪ್ರತಿಕ್ರಿಯಿಸಿದ ಶೈಲಿಯೂ ಭಿನ್ನವೇ ಆಗಿತ್ತು. ಚೈನೀಸ್ ಆಪ್ಗಳ ನಿಷೇಧ, ಇನ್ನಷ್ಟು ರಫೇಲ್ಗಳ ಸೇರ್ಪಡೆ, ತೇಜಸ್ಗಳ ಸೇರ್ಪಡೆಗೆ ಅನುಮತಿ, ಹೊವಿಡ್ಜರ್ಗಳನ್ನು ಮುಂಚೂಣಿಯಲ್ಲಿ ಸ್ಥಾಪಿಸಿದ್ದು, ನಿರಂತರವಾಗಿ ಸೇನಾ ತುಕಡಿಗಳನ್ನು ಗಡಿಭಾಗದಲ್ಲಿ ಜಮಾವಣೆಗೊಳಿಸುತ್ತಲೇ ನಡೆದಿದ್ದು ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಸ್ವತಃ ಪ್ರಧಾನಮಂತ್ರಿಯೇ ಗಡಿಯಲ್ಲಿ ನಿಂತು ಮಾತನಾಡಿದ್ದು. ಚೀನಾ ಇದ್ಯಾವುದನ್ನೂ ಊಹಿಸಿರಲಿಲ್ಲ. ಗಾಲ್ವಾನ್ ಕದನದ ಎಂಟು ತಿಂಗಳ ನಂತರ ನಾಲ್ಕು ಜನ ತೀರಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಯ್ತಲ್ಲ ಅದು ಚೀನಾದ ಮುಖಕ್ಕೆ ಮಂಗಳಾರತಿ!


ಕೆಲವು ಕ್ಷೇತ್ರಗಳಲ್ಲಿ ಚೀನಾ ನಮಗಿಂತಲೂ ಗಟ್ಟಿಯಾಗಿರಬಹುದು, ಆದರೆ ನಾವು ಬಲಶಾಲಿಯಾಗಿರುವ ಕೆಲವು ಕ್ಷೇತ್ರಗಳಿವೆ ಎನ್ನುವುದನ್ನು ಮರೆಯದಿರೋಣ. ಇದು ಹೊಸನಾಡು ಕಟ್ಟುವ ಕಾಲ. ಕರೋನಾ ಅನೇಕ ಅವಕಾಶಗಳನ್ನು ತೆರೆದಿಟ್ಟಿದೆ. ಸೂಕ್ತವಾಗಿ ಬಳಸಿಕೊಳ್ಳೋಣ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top