History

ಸಾಯುವಾಗಲೂ ಮುಷ್ಟಿಯಲ್ಲಿ ಭಾರತದ ಮಣ್ಣಿತ್ತು!

‘ಪ್ರಸ್ತುತ ಸಕರ್ಾರವನ್ನು ಬುಡಮೇಲು ಮಾಡುವುದರಿಂದ ಅವನಿಗೇನು ಲಾಭವೇ ಇರಲಿಲ್ಲ, ನಷ್ಟವೇ ಇತ್ತು. ಆದರೂ ತನ್ನ ದೇಶಬಾಂಧವರ ಹೀನ, ದಯನೀಯ ಸ್ಥಿತಿಯನ್ನು ಹೋಗಲಾಡಿಸಲು ಅದೇ ಸರಿಯಾದ ಮಾರ್ಗವೆಂದು ನಿಶ್ಚಯಿಸಿ ತನ್ನದೆಲ್ಲವನ್ನೂ ಆಜ್ಯವಾಗಿ ಸುರಿದ. ಮನೆ-ಮಠ ತೊರೆದ, ಬಂಧು-ಬಳಗವನ್ನು ದೂರಮಾಡಿದ. ನಮ್ಮಲ್ಲನೇಕರು ಅವನನ್ನು ಹೀಗಳೆಯುತ್ತಾರೆ. ಆದರೂ ಒಂದು ಆತ್ಮಘಾತಕ ಯೋಜನೆಗಾಗಿ ಹುಚ್ಚು ಆವೇಶದಿಂದ ತನ್ನ ಮತ್ತು ತನ್ನವರ ಭವಿಷ್ಯವನ್ನೇ ಆಹುತಿಯಾಗಿ ಸಮಪರ್ಿಸಿದ ಆತನನ್ನು ಕೃತಜ್ಞತಾ ಭಾವದಿಂದ ನೆನಪಿಸಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ.’ ಹಾಗೆಂದು ಮಹಾದೇವ ಗೋವಿಂದ ರಾನಡೆಯವರು ಪತ್ರಿಕೆಯೊಂದರಲ್ಲಿ ಗುಪ್ತನಾಮದಿಂದ ಬರೆದಿದ್ದರು. ಅವರು ಈ ರೀತಿ ಉಲ್ಲೇಖಿಸಿದ್ದು ಭಾರತದ ಆದ್ಯ ಕ್ರಾಂತಿಕಾರಿ ಎಂದು ಗುರುತಿಸಲ್ಪಡುವ ವಾಸುದೇವ ಬಲವಂತ ಫಡ್ಕೆಯ ಕುರಿತಂತೆ. ಸ್ವಾತಂತ್ರ್ಯ ಕಾಲಘಟ್ಟದ ಯಾವ ಮಹಾಪುರುಷನೂ ತನ್ನ ಬದುಕಿನ ಅವಧಿಯೊಳಗೆ ಮಹಾತ್ಮನೆನಿಸಿಕೊಳ್ಳಲಿಲ್ಲ. ತೀರಿಕೊಂಡ ಮೇಲೆಯೇ ಸಾರ್ವಜನಿಕವಾಗಿ ಗೌರವಕ್ಕೆ ಪಾತ್ರವಾಗಿದ್ದು. ಕೆಲವರು ಬದುಕಿದ್ದಾಗಲೇ ಗೌರವ ಪಡೆದುಕೊಂಡು ಆನಂತರ ಬೈಗುಳಗಳನ್ನು ಉಣ್ಣಬೇಕಾಯ್ತು. ಬಿಡಿ. ವಾಸುದೇವ ಬಲವಂತ ಫಡ್ಕೆ ಹುಟ್ಟಿ ಕಳೆದವಾರ 175 ವರ್ಷಗಳು ಸಂಪೂರ್ಣಗೊಂಡವು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಈ ಪುಣ್ಯಾತ್ಮನ 175ರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯೇ.

ಕೆಲವೊಮ್ಮೆ ಕ್ರಾಂತಿಕಾರಿಗಳ ಬದುಕನ್ನು ನೋಡುವಾಗ ಅಚ್ಚರಿ ಎನಿಸುತ್ತದೆ. ಅವರಿಗೆ ತಮ್ಮ ವೈಯಕ್ತಿಕವಾದ ಭವಿಷ್ಯದ ಕುರಿತಂತೆ ಇನಿತೂ ಕಾಳಜಿ ಇರಲಿಲ್ಲ. ಸದಾ ವಿಸ್ತಾರವಾದ ರಾಷ್ಟ್ರದ ಸಾರ್ವಭೌಮತೆಯ ಕುರಿತಂತೆಯೇ ಚಿಂತಿಸುತ್ತಾ ಅದಕ್ಕಾಗಿ ತಾನು ಮಾಡಬೇಕಾದ ತ್ಯಾಗಗಳ ಕುರಿತಂತೆ ಆಲೋಚಿಸುತ್ತಾ ಮೈಮರೆತುಬಿಡುತ್ತಿದ್ದರು. ಅಷ್ಟೇ ಅಲ್ಲ, ಸೂಕ್ತ ಸಮಯ ಬಂದಾಗ ಅತ್ಯಂತ ಕಠಿಣವಾದ ಬಂದೂಕಿನ ಹಾದಿಯನ್ನು ತಮ್ಮದಾಗಿಸಿಕೊಂಡು ಹೆಜ್ಜೆಯಿಡುತ್ತಾ ಬ್ರಿಟೀಷರ ಗುಂಡಿಗೆ ಬಲಿಯಾಗುತ್ತಿದ್ದರು. ಅಥವಾ ನೇಣುಗಂಬದೆದುರು ನಿಂತು ಉರುಳನ್ನು ಚುಂಬಿಸಿ ಕೊರಳಿಗೆ ಧರಿಸಿಕೊಂಡುಬಿಡುತ್ತಿದ್ದರು. ಈ ತ್ಯಾಗ, ಬಲಿದಾನಗಳಿಗೆ ಸಮಾಜದಿಂದ ಗೌರವವಾದರೂ ದೊರೆಯುತ್ತಿತ್ತೇನು? ಖಂಡಿತ ಇಲ್ಲ. ಬ್ರಿಟೀಷರನ್ನು ಭಾರತ ಬಿಟ್ಟು ಓಡಿಸುವುದು ಸಾಧ್ಯವೇ ಇಲ್ಲ ಎಂದು ನಿಶ್ಚಯ ಮಾಡಿಕೊಂಡುಬಿಟ್ಟಿದ್ದ ಅನೇಕ ಮಂದಿ ಈ ವ್ಯರ್ಥ ಪ್ರಯತ್ನಗಳನ್ನು ಮೂದಲಿಸುತ್ತಿದ್ದರು. ಆಳುವ ನಾಯಕರ ಕಡೆಗಣ್ಣ ನೋಟಕ್ಕಾದರೂ ಪಾತ್ರರಾದರೆ ಸಾಕು ಎಂದು ಎಂಜಲು ಸುರಿಸುತ್ತಾ ಈ ಬಲಿದಾನಿಗಳ ವಿರುದ್ಧವೇ ಕೆಲಸ ಮಾಡುತ್ತಿದ್ದರು. ಇಂಥದ್ದರ ನಡುವೆಯೂ ಏಕಪ್ರಕಾರವಾಗಿ ಮುನ್ನುಗ್ಗುವ ಕ್ರಾಂತಿಕಾರಿಗಳ ಛಾತಿ ನಿಜಕ್ಕೂ ಅಪರೂಪದ್ದು. ಫಡ್ಕೆಯದ್ದು ಅಂತಹ ರೋಚಕ ಕಥನವೇ. ತಾತನಿಂದ ದೇಶಪ್ರೇಮದ ಸುಧೆಯನ್ನು ಕುಡಿದ ವಾಸುದೇವ ಶಾಲೆಯಿಂದ ದೂರವುಳಿಯಲು ಹೆಚ್ಚು ಬಯಸುತ್ತಿದ್ದ. ಆದರೆ ಆತನಿಗೆ ನಿಜವಾಗಿಯೂ ಶಾಲೆಯ ಮೇಲೆ ಪ್ರೀತಿ ಉಂಟಾಗುವ ವೇಳೆಗೆ ತಂದೆಗೆ ಸಾಕು ಸಾಕಾಗಿತ್ತು. ಮಗನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುವ ಪ್ರಯತ್ನ ಆರಂಭಿಸಿದರು. ಈ ವೇಳೆಗಾಗಲೇ ಓದುವ ಹಂಬಲವನ್ನು ತೀವ್ರಗೊಳಿಸಿಕೊಂಡಿದ್ದ ವಾಸುದೇವ ಮನೆಬಿಟ್ಟು ಓಡಿಹೋದ. ಓದುತ್ತಲೇ ಕೆಲಸ ಮಾಡಲಾರಂಭಿಸಿದ. ಬ್ರಿಟೀಷರ ಮಿಲಿಟರಿ ಕಛೇರಿಯಲ್ಲಿ ಕಾರಕೂನನಾಗಿ ಕೆಲಸ ನಿರ್ವಹಿಸುತ್ತಿದ್ದ ಅವನ ಬದುಕು ಭರ್ಜರಿ ತಿರುವು ಪಡೆದುಕೊಂಡಿದ್ದು ಆ ಒಂದು ಘಟನೆಯಿಂದಾಗಿ. ಮರಣ ಶಯ್ಯೆಯಲ್ಲಿದ್ದ ತಾಯಿಯನ್ನು ನೋಡಲು ಮೇಲಧಿಕಾರಿಗಳು ರಜೆ ಕೊಡಲಿಲ್ಲ. ಕೆಲವು ದಿನ ಕಾದು ಆನಂತರ ರಜಾಚೀಟಿಯನ್ನು ಅಧಿಕಾರಿಯ ಮೇಜಿನ ಮೇಲೆಸೆದು ಹೋಗಿಬಿಟ್ಟ ವಾಸುದೇವ. ಸ್ವಲ್ಪ ತಡವಾಗಿತ್ತು. ತಾಯಿ ಆಗತಾನೇ ದೇಹತ್ಯಾಗ ಮಾಡಿದ್ದರು. ಆಕೆಯ ವಾಷರ್ಿಕ ತಿಥಿಯ ಪರಿಸ್ಥಿತಿಯೂ ಹೀಗೇ ಆಯ್ತು. ಆಗಲೂ ರಜಾಚೀಟಿಯನ್ನು ಎಸೆದೇ ಅವನು ಬಂದಿದ್ದ. ಈ ಒಂದು ಘಟನೆ ಅವನಿಗೆ ಸಾಕಾಯ್ತು. ತನ್ನ ತಾಯಿ ಮತ್ತು ಭಾರತಾಂಬೆಯನ್ನು ಸಮೀಕರಿಸಿ ನೋಡಿದ. ತಾಯಿಯನ್ನು ಕಳೆದುಕೊಂಡಿದ್ದೇನೆ ತಾಯಿ ಭಾರತಿಯನ್ನು ಕಳೆದುಕೊಳ್ಳಲಾರೆ ಎಂದು ನಿಶ್ಚಯಿಸಿದ. ಅದಾಗಲೇ ಮದುವೆಯಾಗಿ ಒಂದು ಮಗುವಿತ್ತು. ಸದಾ ಈ ಚಿಂತನೆಯಲ್ಲೇ ಮೈ ಮರೆತಿರುತ್ತಿದ್ದ ವಾಸುದೇವ ಸಂಸಾರವನ್ನು ಸಂಭಾಳಿಸಿಕೊಳ್ಳುವುದರಲ್ಲಿ ಸೋತನೆಂದೇ ಹೇಳಬೇಕು. ಈ ಬಗೆಯ ಮಂದಿ ಊರಿಗೆ ಉಪಕಾರಿಯಾಗಿರುವುದು ಹೊಸತೇನೂ ಅಲ್ಲ. ಮನೆಯ ಪಾಲಿಗೆ ಮಾರಿಯಾಗಿರುವುದು ಅಷ್ಟೇ ಸತ್ಯ. ತ್ಯಾಗ ಮತ್ತು ಬಲಿದಾನಗಳ ಹಾದಿಯ ಮೇಲೆ ನಡೆಯುವ ವ್ಯಕ್ತಿ ಮೊದಲು ಕೊಡಲಿ ಏಟು ಕೊಡುವುದು ಪರಿವಾರದ ಸಂಬಂಧಗಳಿಗೇ. ಮೊದಲ ಹೆಂಡತಿಯನ್ನು ಕಳೆದುಕೊಂಡ ನಂತರ ಮಗುವಿನ ಆರೈಕೆಗೆಂದು ಎರಡನೇ ಮದುವೆಯಾಗಬೇಕಾಗಿ ಬಂತು. ಪರಮಸಾಧ್ವಿಯಂತಿದ್ದ ಆಕೆ ಎಂದಿಗೂ, ಯಾವುದಕ್ಕೂ ವಾಸುದೇವನನ್ನು ಪೀಡಿಸಿದವಳೇ ಅಲ್ಲ. ಎಂದಾದರೊಮ್ಮೆ ಸಂಸಾರದತ್ತ ಮುಖ ತಿರುಗಿ ಕುಳಿತ ವಾಸುದೇವನಿಗೆ ತನ್ನ ಪತ್ನಿಗೆ ತಾನು ಮಾಡಿದ ದ್ರೋಹದ ಕುರಿತಂತೆ ಅರಿವಾಗಿ ಕಣ್ಣೀರು ಬರುತ್ತಿತ್ತಂತೆ. ಆದರೇನು? ಹಿಡಿದ ಆದರ್ಶದ ಮಾರ್ಗ ಬಲುದೊಡ್ಡದ್ದಲ್ಲವೇ! ಆತ ಎಲ್ಲವನ್ನೂ ಪಕ್ಕಕ್ಕೆ ಸರಿಸಿ ದಾಪುಗಾಲಿಟ್ಟು ನಡೆದ. ರಾಮೋಶಿಗಳ ಪಡೆಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ. ಕಾಡಿನಲ್ಲಿರುತ್ತಿದ್ದ ಈ ರಾಮೋಶಿಗಳನ್ನು ಬ್ರಿಟೀಷರು ದರೋಡೆಕೋರರೆಂಬ ಗುಂಪಿಗೆ ಸೇರಿಸಿಬಿಟ್ಟಿದ್ದರು. ರಾಮೋಶಿಗಳ ಬದುಕು ಅಸಹನೀಯವಾಗಿಬಿಟ್ಟಿತ್ತು. ಇದನ್ನೇ ಮುಂದಿಟ್ಟುಕೊಂಡು ಅವರನ್ನು ಸಂಘಟಿಸಿದ ವಾಸುದೇವ ನೇತೃತ್ವವಹಿಸಿ ಹಳ್ಳಿ-ಹಳ್ಳಿಗಳಲ್ಲಿ ಬ್ರಿಟೀಷರ ಪರವಾಗಿದ್ದ ಜಮೀನ್ದಾರರ ಲೂಟಿ ಮಾಡಲಾರಂಭಿಸಿದ. ಅನೇಕ ಬಾರಿ ಸಿರಿವಂತರನ್ನು ಲೂಟಿ ಮಾಡುವಾಗ ‘ಸ್ವಾತಂತ್ರ್ಯಾನಂತರ ನಿಮ್ಮ ಹಣವನ್ನೆಲ್ಲ ಮರಳಿ ಕೊಟ್ಟುಬಿಡುವೆ’ ಎಂದು ಹೇಳಿ ಬರುತ್ತಿದ್ದನಂತೆ ಆತ. ದಿನೇ ದಿನೇ ಬ್ರಿಟೀಷರ ಕಿವಿಗೆ ಅಪ್ಪಳಿಸುತ್ತಿದ್ದ ಈ ದರೋಡೆಯ ಸುದ್ದಿಗಳು ನಿದ್ದೆ ಹಾರಿಸಿದ್ದವು. ದರೋಡೆ ಮಾಡುತ್ತಿರುವುದು ರಾಮೋಶಿಗಳೆಂಬುದು ಎಲ್ಲರಿಗೂ ಗೊತ್ತಿತ್ತು. ಅದರ ನೇತೃತ್ವ ವಹಿಸಿದವರು ಯಾರೆಂಬುದು ಮಾತ್ರ ಯಾರಿಗೂ ಅರಿವಿರಲಿಲ್ಲ.

ಇವಿಷ್ಟನ್ನೂ ಓದಿದ ನಂತರ ವಾಸುದೇವ ಬಲವಂತ ಫಡ್ಕೆ ದಾರಿತಪ್ಪಿದ ದೇಶಭಕ್ತನೆಂದು ಭಾವಿಸಿಬಿಡಬೇಡಿ. ಆತ ಬೌದ್ಧಿಕವಾಗಿಯೂ ಸಾಕಷ್ಟು ಚುರುಕಾಗಿದ್ದ. ಸಿದ್ಧಾಂತಗಳ ಮೇಲೆ ಚಚರ್ೆ ಮಾಡಬಲ್ಲಷ್ಟು ಸಾಮಥ್ರ್ಯವನ್ನು ಬೆಳೆಸಿಕೊಂಡಿದ್ದ. ಸಾರ್ವಜನಿಕ ಕಾಕಾ ಎಂದೇ ಖ್ಯಾತರಾದ ಗಣೇಶ್ ವಾಸುದೇವ ಜೋಷಿ ಮತ್ತು ಗೋವಿಂದ ರಾನಡೆಯವರ ಗರಡಿಯಲ್ಲಿ ಪಳಗಿದವ ಆತ. ಪತ್ರಿಕಾ ವರದಿಗಳನ್ನು, ಬ್ರಿಟೀಷರ ನೀತಿಗಳನ್ನು, ನಮ್ಮ ದೌರ್ಬಲ್ಯವನ್ನು, ಹೋರಾಟದ ಹಾದಿಯನ್ನು ವಿವರವಾಗಿ ಚಚರ್ಿಸುತ್ತಿದ್ದ ವಾಸುದೇವ ರಾಷ್ಟ್ರದ ಮುಕ್ತಿಯ ಹಂಬಲವನ್ನು ತೀವ್ರವಾಗಿಯೇ ಬೆಳೆಸಿಕೊಂಡಿದ್ದ. ಮಿಲಿಟರಿ ಕಛೇರಿಯಲ್ಲೇ ಕೆಲಸಕ್ಕಿದ್ದುದರಿಂದ ಪೋಲಿಸರ ಚಲನ-ವಲನಗಳು, ಗೂಢಚಾರರು ತರುತ್ತಿದ್ದ ಮಾಹಿತಿಗಳು ಅವನಿಗೆ ಮೊದಲೇ ಗೊತ್ತಾಗುತ್ತಿತ್ತು. ಹೀಗಾಗಿ ಯೋಜನೆಗಳನ್ನು ರೂಪಿಸುವುದೂ ಅವನಿಗೆ ಸಲೀಸಾಗಿತ್ತು. ಬ್ರಿಟೀಷರ ಕಣ್ಣಳತೆಯ ದೂರದಲ್ಲೇ ಇದ್ದು ಅವರ ಕಣ್ಣುಕೀಳುವ ಸಂಚು ರೂಪಿಸಿದ್ದ ಫಡ್ಕೆಯ ಸಾಮಥ್ರ್ಯ ಎಷ್ಟಿದ್ದಿರಬೇಕು ಒಮ್ಮೆ ಆಲೋಚಿಸಿ ನೋಡಿ. ಬ್ರಿಟೀಷರ ನಿದ್ದೆ ಫಡ್ಕೆಯ ಕಾರಣಕ್ಕೆ ಹಾರಿಹೋಗಿತ್ತು. ಹಾಗೆ ನೋಡಿದರೆ, ಭಾರತದಲ್ಲಿ ಬ್ರಿಟೀಷರು ನೆಮ್ಮದಿಯ ನಿದ್ದೆ ಮಾಡಿದ್ದು ಕಡಿಮೆಯೇ. 1857ರ ಸಂಗ್ರಾಮದ ನೆನಪು ಅವರನ್ನು ಉದ್ದಕ್ಕೂ ಕಾಡುತ್ತಿತ್ತು. ಈ ಬಾರಿ ಅದು ಮತ್ತೆ ಆಸ್ಫೋಟಿಸಿದರೆ ಬದುಕು ಕಷ್ಟ ಎಂಬುದೂ ಗೊತ್ತಿತ್ತು. ರಾಮೋಶಿಗಳ ಈ ಹೋರಾಟ ಬರಿಯ ದರೋಡೆಯಾಗಿರದೇ ಅದರ ಹಿಂದೆ ಸಮರ್ಥವಾದ ಉದ್ದೇಶವೊಂದನ್ನು ಅವರು ಗುರುತು ಹಚ್ಚಿದ್ದರು. ಹೀಗಾಗಿಯೇ ನಾಯಕನನ್ನು ಹಿಡಿಯುವ ತೀವ್ರ ಪ್ರಯತ್ನ ಆರಂಭವಾಯ್ತು. ಸಿಕ್ಕಿಬಿದ್ದ ರಾಮೋಶಿಯೊಬ್ಬ ಬಾಯ್ಬಿಟ್ಟ. ತಮಗೆ ಪ್ರೇರಣೆಕೊಟ್ಟು ನೇತೃತ್ವ ವಹಿಸಿರುವ ನಾಯಕ ಮಿಲಿಟರಿ ಕಛೇರಿಯಲ್ಲೇ ಕೆಲಸ ಮಾಡುತ್ತಿದ್ದಾನೆ ಎಂದುಬಿಟ್ಟ. ಹುಡುಕಾಟ ನಡೆಸಿದಾಗ ಅದು ಫಡ್ಕೆಯೇ ಎಂಬುದು ಅರಿವಾಯ್ತು. ಆದರೆ ಫಡ್ಕೆ ಆ ವೇಳೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದ. ಈಗವನು ಮತ್ತೆ ಮರಳುವಂತೆಯೂ ಇರಲಿಲ್ಲ. ತನ್ನ ಪತ್ನಿ ಮತ್ತು ಮಗುವನ್ನು ತವರು ಮನೆಗೆ ಕಳಿಸಿ ನಿಶ್ಚಿಂತನಾಗಿಬಿಟ್ಟ. ಕಾಡುಜನ ರಾಮೋಶಿಗಳೇ ಅವನಿಗೆ ಆಶ್ರಯ ಮತ್ತು ಅನ್ನ ಕೊಡುವವರಾಗಿಬಿಟ್ಟರು. ಈಗ ಕಾರ್ಯ ಚಟುವಟಿಕೆ ತೀವ್ರವಾಗಿ ಸಾಗಲಾರಂಭಿಸಿತು. ಬ್ರಿಟೀಷರಿಗೂ ಎಷ್ಟರಮಟ್ಟಿಗೆ ಕಿರಿಕಿರಿಯಾಯ್ತೆಂದರೆ ಗವರ್ನರ್ ರಿಚಡರ್್ ಟೆಂಪಲ್ ಫಡ್ಕೆಯ ಸುಳಿವು ಕೊಟ್ಟವರಿಗೆ ಸಾವಿರ ರೂಪಾಯಿ ಬಹುಮಾನ ಘೋಷಿಸಿದ. ಮರುದಿನವಾಗುವುದರಲ್ಲೇ ಈ ಘೋಷಣಾ ಭಿತ್ತಿಪತ್ರಗಳ ಬದಿಯಲ್ಲೇ ರಿಚಡರ್್ ಟೆಂಪಲ್ ತಲೆತಂದುಕೊಟ್ಟವರಿಗೆ ನಾಲ್ಕುಸಾವಿರ ಬಹುಮಾನ ಎನ್ನುವ ಫಡ್ಕೆಯ ಸಹಿಯಿದ್ದ ಭಿತ್ತಿಪತ್ರಗಳು ರಾರಾಜಿಸಿದವು. ಬ್ರಿಟೀಷರ ಮುಖದಲ್ಲಿ ಆತಂಕದ ರೇಖೆಗಳು ಕಾಣಲಾರಂಭಿಸಿದವು. ಇದು ಪುಣೆಯ ಜನರಲ್ಲಿ ಉತ್ಸಾಹವನ್ನು ತಂದಿತು. ಯಾರಿಂದಲೂ ಸೋಲಿಸಲ್ಪಡದವರು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬ್ರಿಟೀಷರು ವಾಸುದೇವ ಬಲವಂತ ಫಡ್ಕೆಯನ್ನು ಕಂಡು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ ಎಂಬ ಸುದ್ದಿ ಯಾರಿಗೆ ತಾನೇ ಖುಷಿ ಕೊಡುವುದಿಲ್ಲ ಹೇಳಿ? ಅವರು ಒಳಗೊಳಗೇ ಫಡ್ಕೆಯನ್ನು ಆರಾಧಿಸಲಾರಂಭಿಸಿದರು. ಅವಕಾಶ ಸಿಕ್ಕರೆ ಒಮ್ಮೆ ಆತನ ದರ್ಶನ ಮಾಡಬೇಕೆಂಬ ಬಯಕೆ ಹೆಚ್ಚು-ಕಡಿಮೆ ಪ್ರತಿಯೊಬ್ಬರಲ್ಲೂ ಇತ್ತು.


ಫಡ್ಕೆ ಈಗ ಬ್ರಿಟೀಷರಿಗೆ ಮಮರ್ಾಘಾತ ಕೊಡುವ ಹೊತ್ತು. ಆತ ಬ್ರಿಟೀಷರ ಕಛೇರಿಗೆ ಬೆಂಕಿ ಹಚ್ಚುವ ಯೋಜನೆ ರೂಪಿಸಿದ, ಚಾಕಚಕ್ಯತೆಯಿಂದ ಅದನ್ನು ಸಾಧಿಸಿಕೊಂಡೂಬಿಟ್ಟ. ಕಛೇರಿಯೊಳಗಿನ ಗ್ರಂಥಾಲಯದ ಮೂಲಕ ಹಾದುಹೋಗುವ ಯೋಜನೆ ಅವನದ್ದು. ಅದಕ್ಕಾಗಿ ಪಕ್ಕದಲ್ಲೇ ಇದ್ದ ಪುಸ್ತಕದಂಗಡಿಯ ಮಾಲೀಕರ ಮಗನ ಸಂಪರ್ಕ ಬೆಳೆಸಿ ಕಾರ್ಯ ಸಾಧಿಸಿಕೊಂಡ ಫಡ್ಕೆ ಬ್ರಿಟೀಷ್ ಕಛೇರಿ ಉರಿದುಹೋಗುವಂತೆ ಮಾಡಿ ಜನರ ಹೃದಯದಲ್ಲಿ ಸ್ವಾತಂತ್ರ್ಯ ಜ್ವಾಲೆ ಮತ್ತೆ ಜಾಗೃತಗೊಳಿಸಿದ. ಗಾಬರಿಗೊಂಡ ಪೊಲೀಸರು ಬೆಂಕಿಯ ಮೂಲ ಹುಡುಕಿಕೊಂಡು ಬಂದಾಗ ಅದು ಪುಸ್ತಕದಂಗಡಿಗೆ ಬಂದು ನಿಂತಿತ್ತು. ವಾಸುದೇವ ತನ್ನ ಮಗನ ಗೆಳೆತನ ಬೆಳೆಸಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದರಿವಾದಾಗ ಆತನಿಗೆ ಬೇಸರವಾಗಲಿಲ್ಲ. ಬದಲಿಗೆ ಈ ಕೃತ್ಯಕ್ಕೆ ತನ್ನ ಮಗನನ್ನು ಆರಿಸಿಕೊಂಡ ಎಂದು ಸಂತುಷ್ಟನಾದ. ಯಾವ ಕಾರಣಕ್ಕೂ ಫಡ್ಕೆಯ ವಿರುದ್ಧ ಸಾಕ್ಷಿ ಹೇಳದೆ ‘ಪುಸ್ತಕದಂಗಡಿಯ ಲೆಕ್ಕಾಚಾರಗಳು ಏರುಪೇರಾಗಿತ್ತು. ಅದನ್ನು ಮರೆಮಾಚಲೆಂದು ಕಡತಗಳಿಗೆ ನಾನೇ ಬೆಂಕಿ ಇಟ್ಟೆ. ಹೀಗಾಗುವುದೆಂಬ ಅರಿವಿರಲಿಲ್ಲ’ ಎಂದು ತಾನೇ ಶಿಕ್ಷೆ ಅನುಭವಿಸಿದ. ಆದರೆ ಪ್ರತಿಯೊಬ್ಬ ಬ್ರಿಟೀಷ್ ಅಧಿಕಾರಿಗೂ ಇದು ಹೀಗೆ ನಡೆದದ್ದಲ್ಲವೆಂದು ಗೊತ್ತೇ ಇತ್ತು. ಡೇನಿಯಲ್ ಎಂಬ ಅಧಿಕಾರಿಯನ್ನು ವಿಶೇಷವಾಗಿ ಆಹ್ವಾನಿಸಲಾಯ್ತು. ಆತ ತೋಳದಂತೆ ಫಡ್ಕೆಯ ಹಿಂದೆ ಮುಗಿಬಿದ್ದ. ಅವನಿಂದ ತಪ್ಪಿಸಿಕೊಳ್ಳುತ್ತಾ ರಾಷ್ಟ್ರಕೈಂಕರ್ಯವನ್ನು ಬಿಡದೇ ನಡೆಸುತ್ತಿದ್ದ ಫಡ್ಕೆ ಒಂದು ಹಂತದಲ್ಲಿ ಆಪ್ತರನ್ನೆಲ್ಲ ಕಳಕೊಂಡು ಭೀಮಾತೀರದ ಗಾಣಗಾಪುರದಲ್ಲಿ ವೇಷ ಮರೆಸಿಕೊಂಡು ಕಾಲಯಾಪನೆ ಮಾಡುತ್ತಿದ್ದ. ಇಲ್ಲಿಯೂ ಸೇನೆಯೊಂದನ್ನು ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡುವ ಯೋಜನೆ ರೂಪಿಸುತ್ತಿರುವಾಗಲೇ ಡೇನಿಯಲ್ಗೆ ವಾಸುದೇವನ ವಾಸನೆ ಬಡಿಯಿತು. ಅವನನ್ನು ಅಟ್ಟಿಸಿಕೊಂಡು ಬಂದ. ತೀವ್ರಜ್ವರದಿಂದ ಬಳಲುತ್ತಿದ್ದರೂ ಭೀಮೆಯನ್ನು ದಾಟಿ ಗೆಳೆಯನೊಬ್ಬನ ಭರವಸೆಯ ಮೇರೆಗೆ ಮಂದಿರವೊಂದರಲ್ಲಿ ನಿದ್ರೆಗೆ ಜಾರಿದ. ಆಗ ಅದೇ ಗೆಳೆಯನ ಮೋಸದ ಕಾರಣದಿಂದ ಡೇನಿಯಲ್ನ ವಶವಾದವ ವಾಸುದೇವ! ಮಲಗಿದ ಸಿಂಹವನ್ನು ಹಿಡಿದು ಬ್ರಿಟೀಷರು ಮೆರೆದಾಡಿದರು. ಸಿಂಹದಂತೆಯೇ ಬೋನಿನೊಳಗೆ ಕೂಡಿಹಾಕಿಕೊಂಡು ಅವನನ್ನು ಎಳಕೊಂಡು ಬಂದರು. ಜನ ಅವನ ದರ್ಶನಭಾಗ್ಯಕ್ಕೆ ಕಾತರದಿಂದ ಕಾಯುತ್ತಿದ್ದರು. ವಾಸುದೇವನಿಗೆ ನೇಣುಶಿಕ್ಷೆ ಘೋಷಣೆಯಾಯಿತು. ಎಂದಿನಂತೆ ಸಾರ್ವಜನಿಕ ಕಾಕಾ ವಾಸುದೇವನ ಪರವಾಗಿ ವಾದಕ್ಕೆಂದು ಎದ್ದುನಿಂತು ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದರು. ದೂರದ ಏಡನ್ನಿನಲ್ಲಿ ಈ ಶಿಕ್ಷೆಯನ್ನು ಅನುಭವಿಸುತ್ತಾ ಅತ್ಯಂತ ಕೆಟ್ಟ ಪರಿಸರದಲ್ಲಿ ಬದುಕು ಸವೆಸುತ್ತಾ ಅಲ್ಲಿಂದಲೂ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿ ನಾಲ್ಕು ವರ್ಷಗಳ ನಂತರ ಅನಾರೋಗ್ಯ ಪೀಡಿತನಾಗಿ ಪ್ರಾಣಬಿಟ್ಟ!

ಈ ದೇಶದ ಬಹುತೇಕರಿಗೆ ವಾಸುದೇವ ಗೊತ್ತೇ ಇಲ್ಲ. 1857ರ ಸಂಗ್ರಾಮದ ನಂತರ ಬ್ರಿಟೀಷರ ವಿರುದ್ಧ ಸೊಲ್ಲೆತ್ತಲು ಅಂಜುತ್ತಿದ್ದ ಭಾರತೀಯರಿಗೆ ಹೊಸ ವಿಶ್ವಾಸ ತುಂಬಿದವ ಫಡ್ಕೆ. ಜೈಲಿನಲ್ಲಿ ಐಷಾರಾಮಿ ಬದುಕು ಸವೆಸಿದವರನ್ನು ಇಂದು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆದು ಆರಾಧಿಸುತ್ತೇವೆ. ಸಾಯುವ ಕೊನೆ ಕ್ಷಣದಲ್ಲೂ ಮುಷ್ಟಿಯಲ್ಲಿ ಭಾರತದ ಮೃತ್ತಿಕೆಯನ್ನೇ ಹಿಡಕೊಂಡಿದ್ದ ವಾಸುದೇವ ಬಲವಂತ ಫಡ್ಕೆಯಂಥವರು ಸ್ಮೃತಿಪಟಲದಿಂದ ದೂರವಾಗಿಬಿಡುತ್ತಾರೆ.


ಹುತಾತ್ಮರನ್ನು ಮರೆತ ರಾಷ್ಟ್ರಕ್ಕೆ ಭವಿಷ್ಯವಿಲ್ಲ! ಫಡ್ಕೆಯ ನೆನಪು ನಮ್ಮ ಜವಾಬ್ದಾರಿ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top