National

ಸುಷಾಂತ್ ಬದುಕಿಗೆ ರೋಲ್ ಮಾಡೆಲ್, ಸಾವಿಗಲ್ಲ!

‘ಸುಷಾಂತ್ಸಿಂಗ್ ರಜ್ಪೂತ್ ಆತ್ಮಹತ್ಯೆ ಮಾಡಿಕೊಂಡನಂತೆ’ ಈ ಸುದ್ದಿ ಕಾಡ್ಗಿಚ್ಚಿಗಿಂತ ವೇಗವಾಗಿ ಹಬ್ಬಿತು. ಸುಷಾಂತ್ನ ಪರಿಚಯವಿಲ್ಲದಿದ್ದವರೂ ಕೂಡ ಫೇಸ್ಬುಕ್ನ ಪ್ರಭಾವಕ್ಕೆ ಒಳಗಾಗಿ ಒಂದುಕ್ಷಣ ನೊಂದುಕೊಂಡರು. ಇದ್ದಕ್ಕಿದ್ದಂತೆ ಟ್ವಿಟರ್ನಲ್ಲಿ ಸುಷಾಂತ್ನ ಪ್ರೊಫೈಲ್ ನೋಡಲು ಜನ ಮುಗಿಬಿದ್ದರು. ಆತ ನಟಿಸಿದ ಚಿಚೋರೆ ಚಲನಚಿತ್ರವನ್ನು ಬಹುತೇಕರು ಆತನ ಸಾವಿನ ನಂತರ ನೋಡಿದರು. ಉತ್ತಮ ನಟನಾಗಿದ್ದ ಎಂದು ಹೊಗಳಲಾರಂಭಿಸಿದರು. ಈ ಹೊಗಳಿಕೆ ಆತನಿಗೆ ಆರೆಂಟು ತಿಂಗಳ ಹಿಂದೆ ಸಿಕ್ಕಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲವೇನೋ!


ಇರಲಿ. ಎಂದಿನಂತೆ ಮಾಧ್ಯಮಗಳು ನಾ ಮುಂದು ತಾ ಮುಂದು ಎನ್ನುತ್ತಾ ಆತ್ಮಹತ್ಯೆಗೆ ತಮ್ಮದ್ದೇ ಆದ ವಿಶ್ಲೇಷಣೆಯನ್ನೂ ಕಾರಣಗಳನ್ನು ಕೊಡಲಾರಂಭಿಸಿದರು. ಆತನಿಗೆ ಮಾನಸಿಕ ಖಿನ್ನತೆ ಇದ್ದುದನ್ನು ವೈದ್ಯರೇನೋ ಎಂಬಂತೆ ಮಾತನಾಡಿದರು. ಕಂಪೆನಿಯ ಮಾಜಿ ಮ್ಯಾನೇಜರ್ ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಇದಕ್ಕೆ ಕಾರಣವಿರಬಹುದೆಂದು ಹೊಸ ಲಿಂಕೊಂದನ್ನು ಹುಡುಕಿ ತೆಗೆದರು. ಚಿರಂಜೀವಿ ಸಜರ್ಾ ಸತ್ತಾಗಲೂ ಹಾಗೇ ಮಾಡಿದ್ದವು ಮಾಧ್ಯಮಗಳು. ಪುಣ್ಯಕ್ಕೆ ಆತ ಹೃದಯಾಘಾತದಿಂದ ತೀರಿಕೊಂಡಿದ್ದ. ಅಕಸ್ಮಾತ್ ಆತನ ಸಾವಿಗೂ ಬೇರೊಂದು ಕಾರಣವಿದ್ದಿದ್ದರೆ ಮಾಧ್ಯಮದವರೆಲ್ಲಾ ಸೇರಿ ಅವರ ಪರಿವಾರದವರನ್ನು ಹರಾಜು ಹಾಕಿ ತಮ್ಮ ಜೇಬು ತುಂಬಿಸಿಕೊಂಡುಬಿಡುತ್ತಿದ್ದರು!


ಇಂದು ಅನೇಕರು ಸುಷಾಂತ್ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದು ಕೋಪದಿಂದಲೋ ಸಹಾನುಭೂತಿಯಿಂದಲೋ ಉದ್ದುದ್ದದ ಲೇಖನಗಳನ್ನು ಬರೆಯುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ತಕ್ಷಣದ ಕಾರಣಗಳನ್ನೆದುರಿಸುವ ತಾಕತ್ತು ನಮ್ಮೊಳಗೂ ಇಲ್ಲ ಮತ್ತು ಹೀಗೆ ಕೆಲವರ ಸಾವಿಗೆ ನಾವೂ ಕಾರಣವಾಗಿಬಿಡುತ್ತೇವೆ ಎನ್ನುವುದನ್ನು ಮರೆತಿರುತ್ತೇವೆ. ನಾವು ಹೇಗೆ ಕಾರಣ ಎಂದು ಅಚ್ಚರಿಯಾಯ್ತೇನು? ಹಾಗೇ ಸುಮ್ಮನೆ ಆಲೋಚಿಸಿ. ತೀರಿಕೊಂಡ ಸುಷಾಂತ್ ತನ್ನ ಮ್ಯಾನೇಜರ್ನೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದು ಅದು ಮುರಿದುಬಿದ್ದುದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಸುಳ್ಳಾಗಿ ಪ್ರಕಟವಾಗಿದ್ದರೂ ನಾವು ಅದನ್ನು ಚಪ್ಪರಿಸಿಕೊಂಡು ಓದಿರುತ್ತಿದ್ದೆವು. ನಮ್ಮ ನಮ್ಮ ವಾಟ್ಸಪ್ ಗ್ರೂಪುಗಳಲ್ಲಿ ಆ ಸುದ್ದಿಯನ್ನು ಹಂಚಿಕೊಂಡು ಒಮ್ಮೆ ಸುಷಾಂತ್ನನ್ನು ಕೆಟ್ಟದ್ದಾಗಿ ನೋಡಿ ಆತ ಬದುಕುವುದೇ ತಪ್ಪೆನಿಸುವಂತೆ ಮಾಡಿಬಿಡುತ್ತಿದ್ದೆವು. ಸುಷಾಂತನಿಗಷ್ಟೇ ಅಲ್ಲ, ನಾಲ್ಕೈದು ಲಕ್ಷ ಸಾಲ ಮಾಡಿ ತೀರಿಸಲಾಗದೇ ಬದುಕಿನೊಂದಿಗೆ ಗುದ್ದಾಡುತ್ತಿರುವ ವ್ಯಕ್ತಿಯೊಬ್ಬನನ್ನು ಹಂಗಿಸುತ್ತೇವೆ, ಭಂಗಿಸುತ್ತೇವೆ, ಕೊನೆಗೆ ಆತ ಬದುಕಿರುವುದಕ್ಕೇ ನಾಲಾಯಕ್ಕು ಎಂದೂ ಹೇಳಿಬಿಡುತ್ತೇವೆ. ನಮ್ಮ ಈ ಬೈಗುಳಗಳನ್ನು ತಾಳಿಕೊಳ್ಳಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡುಬಿಟ್ಟರೆ ಎದುರಿಸುವ ತಾಕತ್ತಿಲ್ಲದ ಹೇಡಿ ಎಂದು ಜರಿಯುತ್ತೇವೆ. ಅನೇಕ ಬಾರಿ ನಮ್ಮ ಈ ಮಾತಾಳಿತನವೇ ಅನೇಕರ ಸಾವಿಗೆ ಕಾರಣವಾಗುತ್ತದೆ. ಅದರಲ್ಲೂ ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಾವಿಗೆ ಕಾರಣರಾಗುವವರಿಗಂತೂ ನರಕಕ್ಕಿಂತಲೂ ಕೆಟ್ಟ ಪ್ರಪಾತಕ್ಕೆ ತಳ್ಳಬೇಕು!

ಉಡುಪಿಯ ಶಾಸಕ ರಘುಪತಿಭಟ್ಟರ ಪತ್ನಿಯ ದಾರುಣ ಕಥೆ ನೆನಪಿರಲೇಬೇಕಲ್ಲ. ಮನೆಬಿಟ್ಟು ದೆಹಲಿಯ ಹೊಟೆಲ್ನಲ್ಲಿದ್ದ ಆಕೆಯ ಕುರಿತಂತೆ ಕನ್ನಡದ ಚಾನೆಲ್ಗಳು ಮನಸ್ಸಿಗೆ ಬಂದಂತೆ ಮಾತನಾಡಿದುದರ ಪರಿಣಾಮವಾಗಿ ಟೀವಿಯನ್ನು ನೋಡುತ್ತಲೇ ಹೊಟೆಲ್ನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಸಮರ್ಥ ಅಧಿಕಾರಿ ಡಿಕೆ ರವಿಯವರ ಸಾವಿನ ನಂತರ ನಮ್ಮ ಪತ್ರಿಕೆಗಳು ಪ್ರಕಟ ಪಡಿಸಿದ ವರದಿಗಳು ವಾಕರಿಕೆ ತರುವಂತಿದ್ದವು. ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳುವಾಗ ಹೊರಹಾಕಲಾಗದ ಸತ್ಯಗಳು ಅದೆಷ್ಟು ಒಳಗೇ ಹುದುಗಿದ್ದವೋ ದೇವರೇ ಬಲ್ಲ. ಆದರೆ ಮಾಧ್ಯಮಗಳು ಮಾತ್ರ ಸಾವಿಗೆ ಕಾರಣಗಳನ್ನು ಹುಡುಕುವಲ್ಲಿ ಸಂಭ್ರಮಿಸಿಬಿಟ್ಟವು. ಆತನೇನಾದರೂ ಬದುಕನ್ನೆದುರಿಸಬೇಕೆಂದು ಹಠಹಿಡಿದು ಬದುಕಿದ್ದರೆ ಇವರೆಲ್ಲ ಸೇರಿ ಹಠಹಿಡಿದೇ ಸಾಯಿಸುತ್ತಿದ್ದರು. ಸಾವು ಸಾಯುವವನಿಗೆ ಅಂತ್ಯವೆನಿಸುತ್ತದೆ. ಎಲ್ಲ ಬಗೆಯ ಜಂಜಡಗಳಿಂದ ಮುಕ್ತವಾಗಬೇಕೆಂಬ ದೃಷ್ಟಿಯಿಂದಲೇ ಆತ ಸಾವನ್ನಪ್ಪಿಕೊಳ್ಳೋದು. ಆದರೆ ನಾವು ನೀವೆಲ್ಲ ಸೇರಿ ಸತ್ತವನನ್ನೇ ಹಿಡಿದುಕೊಂಡು ಬದುಕಿದವರನ್ನು ಜಾಲಾಡಲಾರಂಭಿಸುತ್ತೇವೆ. ಅಲ್ಲಿಗೆ ಉಳಿದುಕೊಂಡವರ ಬದುಕು ಮೂಕರ್ಾಸಿಗೆ ಹರಾಜು!


ನಾವು ಚೌಕಟ್ಟನ್ನು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಬೇಕಿದೆ. ಅನಗತ್ಯವಾಗಿ ಮತ್ತೊಬ್ಬರ ಬದುಕಿನೊಳಗೆ ಮೂಗು ತೂರಿಸುವ ಯಾವ ಅಧಿಕಾರವೂ ನಮಗಿಲ್ಲ. ಯಾರೊಬ್ಬರ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರವನ್ನು ನಮಗ್ಯಾರೂ ಕೊಟ್ಟಿಲ್ಲ. ಸಾರ್ವಜನಿಕ ಬದುಕನ್ನು ಆರಿಸಿಕೊಂಡವರನ್ನು ನಾವು ಪ್ರಶ್ನಿಸಬಹುದು ನಿಜ, ಹಾಗಂತ ಅಲ್ಲಿ ಬಳಸುವ ಭಾಷೆಯ ಮೇಲೆ ಹಿಡಿತವಿಲ್ಲದಿದ್ದರೆ ನಾವು ಯಾರ್ಯಾರ ಸಾವಿಗೆ ಕಾರಣವಾಗುತ್ತೇವೋ ದೇವರೇ ಬಲ್ಲ. ಅದರಲ್ಲೂ ಫೇಸ್ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬನಿಗೂ ಬರವಣಿಗೆಯ ಅಧಿಕಾರವನ್ನು ಕೊಟ್ಟುಬಿಟ್ಟಿರುವುದರಿಂದ ಯಾರು ಯಾವಾಗ ಏನನ್ನು ಬೇಕಿದ್ದರೂ ಬರೆಯಬಹುದು ಎಂಬ ಅಘೋಷಿತ ನಿಯಮ ಜಾರಿಯಾಗಿಬಿಟ್ಟಿದೆ. ಫೇಕ್ಅಕೌಂಟುಗಳನ್ನು ಬಳಸಿ ಬರೆಯುವವರು ಒಂದುಕಡೆಯಾದರೆ ಭಾರತದ ನ್ಯಾಯವ್ಯವಸ್ಥೆಯ ಕೈಗೆ ಸಿಗದೇ ದೂರದ ರಾಷ್ಟ್ರದಲ್ಲಿ ಕುಳಿತುಕೊಂಡು ಮನಸ್ಸಿಗೆ ಬಂದಂತೆ ಗೀಚುವವರು ಮತ್ತೊಂದು ಕಡೆ. ತೀರಿಕೊಂಡ ನಂತರ ಹುಟ್ಟುವ ಅನುಕಂಪ ಬದುಕಿದ್ದಾಗಲೇ ಇರುವುದಾದರೆ ಅನೇಕರ ಬದುಕು ಸುಂದರವಾಗಿಬಿಡುತ್ತದೆ. ಕಣ್ಣೀರು ಹಾಕುವವನಿಗೆ ಬೇಕಿರುವುದು ಒಂದು ಹೆಗಲು ಮಾತ್ರ. ಸಾಧ್ಯವಾದರೆ ಹೆಗಲಾಗಲು ಪ್ರಯತ್ನಿಸೋಣ. ಆಗಲಿಲ್ಲವೆಂದರೆ ಕಣ್ಣೀರು ಹಾಕುವವನನ್ನು ಆಡಿಕೊಳ್ಳುವುದಂತೂ ಬೇಡ. ಸುಷಾಂತ್ನದ್ದು ಹೀಗೇ ಆಗಿದೆ. ಆತ್ಮಹತ್ಯೆಯ ಮನೋಭಾವವನ್ನು ಖಂಡಿಸಿ ಬರೆಯುವ ಧಾವಂತದಲ್ಲಿ ಸುಷಾಂತ್ನ ಕುರಿತಂತೆಯೇ ಕೆಟ್ಟದ್ದಾಗಿ ಮಾತನಾಡುತ್ತಿರುವವರನ್ನು ಕಂಡಾಗ ದುಃಖವೆನಿಸುತ್ತದೆ. ಇತ್ತೀಚೆಗೆ ಮಿತ್ರರೊಬ್ಬರು ಜೀವಕ್ಕೆ ದೇಹ ಸಾಕೆನಿಸಿದಾಗ ಅದು ಕೊನೆಗಾಣಿಸುವುದನ್ನು ಆತ್ಮಹತ್ಯೆ ಎನ್ನಬಹುದು ಎಂದು ರಮಣರು ಹೇಳಿದ್ದನ್ನು ಉಲ್ಲೇಖಿಸುತ್ತಿದ್ದರು. ಸುಷಾಂತ್ ಇತರರ ನೋವಿಗೆ ಮರಗುವ ವ್ಯಕ್ತಿಯಾಗಿದ್ದರು ಎಂಬುದನ್ನು ಓದುತ್ತಿದ್ದಾಗ ಆತನ ಜೀವಕ್ಕದೇನು ಸಂಕಟವಿತ್ತೋ ಎಂದು ಒಮ್ಮೆ ಅನಿಸಿದ್ದು ಸುಳ್ಳಲ್ಲ. ಸಾವನ್ನು ಸಂಭ್ರಮಿಸುವುದು, ತೀರಿಕೊಂಡಾಗ ಜರಿಯುವುದು ಎರಡೂ ಒಳಿತಲ್ಲ. ಏನೇ ಇರಲಿ. ಸುಷಾಂತ್ ಬದುಕಿನಲ್ಲಿ ನಮಗೆ ಖಂಡಿತ ಮಾರ್ಗದಶರ್ಿ, ಸಾವಿನಲ್ಲಿ ಅಲ್ಲ. ಆತನಿಗೆ ಸದ್ಗತಿ ಸಿಗಲಿ ಎಂದಷ್ಟೇ ಪ್ರಾಥರ್ಿಸೋಣ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top