2019ರ ಮಾರ್ಚ್ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುದಬಿಯಲ್ಲಿ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ ನಡೆಯಿತು. ಸ್ಪೆಷಲ್ ಒಲಿಂಪಿಕ್ಸ್ ಜಗತ್ತಿನಾದ್ಯಂತ ಇರುವ ವಿಶೇಷ ಮಕ್ಕಳಿಗೆ ಎಂದೇ ನಡೆಸುವ ಆಟದ ಸ್ಪರ್ಧೆ. ಈ ಬಾರಿ ನಡೆದ ಸ್ಪರ್ಧೆಯಲ್ಲಿ ಸುಮಾರು 7000 ಸ್ಪರ್ಧಿಗಳು ಜಗತ್ತಿನ ಸುಮಾರು 170 ದೇಶಗಳಿಂದ ಭಾಗವಹಿಸಿದ್ದರು!
ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ ಸ್ಪರ್ಧಿಗಳು 368 ಪದಕಗಳನ್ನು ಗೆದ್ದು ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಹೌದು. ಚುನಾವಣೆಯ ಸಮಯದಲ್ಲಿ ಕೆಲವೊಮ್ಮೆ ಮಾಧ್ಯಮಗಳೂ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ಮರೆತೇ ಬಿಡುತ್ತವೆ. 368 ರಲ್ಲಿ 85 ಚಿನ್ನದ ಪದಕ, 154 ಬೆಳ್ಳಿಯ ಪದಕ ಮತ್ತು 129 ಕಂಚಿನ ಪದಕವನ್ನು ಭಾರತದ ಕ್ರೀಡಾಪಟುಗಳು ತಮ್ಮದಾಗಿಸಿಕೊಂಡಿದ್ದಾರೆ. ಪವರ್ ಲಿಫ್ಟಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಗಾಲ್ಫ್, ಜೂಡೊ, ಅಥ್ಲೆಟಿಕ್ಸ್, ವಾಲಿಬಾಲ್, ಟೇಬಲ್ ಟೆನ್ನಿಸ್, ರೋಲರ್ ಸ್ಕೇಟಿಂಗ್, ಬ್ಯಾಸ್ಕೆಟ್ ಬಾಲ್, ಫುಟ್ ಬಾಲ್ ಮತ್ತು ಹ್ಯಾಂಡ್ ಬಾಲ್ ಹೀಗೆ ಭಿನ್ನ ಭಿನ್ನ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪವರ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ 20 ಚಿನ್ನ, 33 ಬೆಳ್ಳಿ ಮತ್ತು 43 ಕಂಚಿನ ಪದಕಗಳು ದೊರೆತಿವೆ. ರೋಲರ್ ಸ್ಕೇಟರ್ ನಲ್ಲಿ 23 ಚಿನ್ನ, 20 ಬೆಳ್ಳಿ ಮತ್ತು 16 ಕಂಚಿನ ಪದಕವನ್ನು ಭಾರತ ಪಡೆದಿದೆ. ಸೈಕ್ಲಿಂಗ್ ನಲ್ಲಿ ಭಾರತೀಯ ಕ್ರೀಡಾಪಟುಗಳು 11 ಚಿನ್ನ, 14 ಬೆಳ್ಳಿ ಮತ್ತು 20 ಕಂಚಿನ ಪದಕವನ್ನು ಗಳಿಸಿದ್ದಾರೆ. ವಿವಿಧ ಓಟದ ಸ್ಪರ್ಧೆಗಳಲ್ಲಿ 5 ಚಿನ್ನ, 24 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ!
ಭಾರತ ಒಂಭತ್ತನೇ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು. ಮೊದಲ ಬಾರಿಗೆ ಜುಡೊ ಮತ್ತು ಫುಟ್ಸಲ್ (ಸಾಕರ್ ರೀತಿಯ ಆಟ)ದಲ್ಲಿ ಭಾರತದ ಕ್ರೀಡಾ ಪಟುಗಳು ಭಾಗವಹಿಸಿದ್ದಷ್ಟೇ ಅಲ್ಲದೇ 3 ಚಿನ್ನ, 1 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನೂ ಬಾಚಿಕೊಂಡಿದ್ದಾರೆ!! ಈ ಆಟಗಳು ಕೇವಲ ಮನರಂಜನೆಯಾಗಷ್ಟೇ ಅಲ್ಲದೇ ಭಾವನಾತ್ಮವಾಗಿಯೂ ಇತ್ತು. ಪ್ರತಿ ಗೆಲವು, ಪ್ರತಿ ಸೋಲೂ ಕೂಡ ಸ್ಫೂರ್ತಿದಾಯಕವಾಗಿತ್ತು ಎಂಬುದು ಅದಕ್ಕೆ ಸಾಕ್ಷಿಯಾದ ಜನರ ಮಾತುಗಳು.
ಮಹಿಳೆಯರ ಪವರ್ ಲಿಫ್ಟಿಂಗ್ ನಲ್ಲಿ ಮಹಾರಾಷ್ಟ್ರದ 19 ವರ್ಷದ ಯುವತಿ ಮನಾಲಿ ಮನೋಜ್ ಶೆಲ್ಕೆ ಭಾಗವಹಿಸಿದ್ದರು. ಈಕೆ ಮೂರು ಬಾರಿಯೂ ಲಿಫ್ಟಿಂಗ್ ನಲ್ಲಿ ಸೋತ ನಂತರ ಆಕೆಯ ಕೋಚ್ ಧಾವಿಸಿ ನೆರೆದಿದ್ದ ಜನರಲ್ಲಿ ಸ್ಫೂರ್ತಿ ತುಂಬುವಂತೆ ಕೇಳಿಕೊಂಡದ್ದೇ ತಡ, ಮನಾಲಿ ಕೊನೆಯ ಬಾರಿ ಭಾರವನ್ನು ಎತ್ತಿ ತನ್ನ ಗುರಿಯನ್ನು ಸಾಧಿಸಿಯೇ ಬಿಟ್ಟರು. ಇವರು ಕಾಂಬೊದಲ್ಲಿ ಚಿನ್ನದ ಪದಕವನ್ನೂ ಮತ್ತು ಕಂಚಿನ ಪದಕವನ್ನೂ ಗಳಿಸಿದರು.
ಅಭಿಷೇಕ್ ಗೊಗೊಯ್ ಭಾರತದ ಗೌರವವನ್ನು ಎತ್ತರಕ್ಕೇರಿಸಿದ ಕ್ರೀಡಾಪಟುಗಳಲ್ಲೊಬ್ಬ. ಈತ ಹುಟ್ಟಿದ ಕೆಲವೇ ದಿನಗಳಲ್ಲಿ ಈತನಿಗೆ ಸೆರೆಬ್ರಲ್ ಪಾಲ್ಸಿ ಇದೆ ಎಂಬ ಸತ್ಯ ಅರಿವಾಯಿತು. ಆತನಿಗೆ ತನ್ನ ಕಾಲಿನ ಮೇಲೆ ಹೆಚ್ಚು ಹಿಡಿತವಿರುವುದು ಅರಿವಾಗುತ್ತಿದ್ದಂತೆ ಕ್ರಿಕೆಟ್ ಅನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ. ಇದೇ ಹೊತ್ತಿಗೆ ಮತ್ತೊಂದು ಆಘಾತ ಎದುರಾಯಿತು. ಅಭಿಷೇಕ್ ರ ತಂದೆ ತೀರಿಕೊಂಡರು. ತಾಯಿಯೊಡನೆ ಅಭಿಷೇಕ್ ಗುವಾಹಟಿಗೆ ಬಂದು ನೆಲೆಸಿದ. ಸ್ನೇಹಿತರೊಡನೆ ಸೈಕ್ಲಿಂಗ್ ಆಡಲು ಪ್ರಾರಂಭಿಸಿದ ಅಭಿಷೇಕ್ ನ ಸಾಮರ್ಥ್ಯವನ್ನು ಆತನ ಕ್ರಿಕೆಟ್ ಕೋಚ್ ಗುರುತಿಸಿ ಕ್ರಿಕೆಟ್ ಜೊತೆಗೆ ಸೈಕ್ಲಿಂಗ್ ತರಬೇತಿಯನ್ನೂ ಪ್ರಾರಂಭಿಸಿದರು. ರಾಂಚಿಯಲ್ಲಿ ನಡೆದಿದ್ದ ಸ್ಪೆಷಲ್ ಒಲಿಂಪಿಕ್ಸ್ ನಲ್ಲಿ ಸೈಕ್ಲಿಂಗ್ ನಲ್ಲಿ 19 ನಿಮಿಷ 21 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟಿ 10 ಕಿ.ಮೀ ದೂರವನ್ನು ಕ್ರಮಿಸಿದ ಜಗತ್ತಿನ 12ನೇ ಸೈಕ್ಲಿಂಗ್ ಪಟುವಾಗಿ ಹೊರಹೊಮ್ಮಿದ. ಈ ಬಾರಿ ಅಬುದಬಿಯಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಿದ್ದು ಗಾಯಗೊಂಡ ಹೊರತಾಗ್ಯೂ ಬೆಳ್ಳಿಯ ಪದಕ ಗಳಿಸಿ ಭಾರತದ ಗೌರವವನ್ನು ಎತ್ತರಕ್ಕೇರಿಸಿದ್ದಾನೆ!
ಮನಾಲಿ, ಅಭಿಷೇಕ್ ರಂತೆ ಪ್ರತಿ ಆಟಗಾರರದೂ ಅದ್ಭುತ, ಸ್ಫೂರ್ತಿದಾಯಕ ಕಥನವೇ. ವಿಶೇಷ ಮಕ್ಕಳ ಈ ಸ್ಪರ್ಧೆ ಹಿಂದೆಂದಿಗಿಂತಲೂ ಹೆಚ್ಚು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಈ ಗೌರವ ಸಲ್ಲಲೇಬೇಕು!!
