History

ಹತ್ತೊಂಭತ್ತೂ ತುಂಬದ ಈ ಪೋರನನ್ನು ಬ್ರಿಟೀಷರು ನೇಣಿಗೇರಿಸಿದ್ದರು!

ಅದು 1906ರ ಫೆಬ್ರವರಿಯ ದಿನಗಳು. ದೇಶದೆಲ್ಲೆಡೆ ಬ್ರಿಟೀಷರ ವಿರುದ್ಧ ಅಲ್ಲಲ್ಲಿ ಹೋರಾಟ ನಡೆಯುತ್ತಿದ್ದವಾದರೂ, ಬಂಗಾಳದಲ್ಲಿ ತುಸು ಹೆಚ್ಚೇ ನಡೆಯುತ್ತಿತ್ತು. ಬಂಗಾಳದ ಗಲ್ಲಿ-ಗಲ್ಲಿಯೂ ವಿಭಜನೆಯ ವಿರುದ್ಧ ದನಿ ಎತ್ತಿದ್ದವು. ಸರ್ಕಾರಿ ವಕೀಲರು, ಪ್ರಾಧ್ಯಾಪಕರು, ಶಿಕ್ಷಕರು ತಮ್ಮ ವೃತ್ತಿಗೆ ರಾಜಿನಾಮೆ ಇತ್ತಿದ್ದರು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿದ್ದರು. ಎಲ್ಲರದ್ದೂ ಲಾರ್ಡ್ ಕರ್ಜನ್‌ನ ಕನಸಿನ ಕೂಸು ಬಂಗಾಳ ವಿಭಜನೆಯ ವಿರುದ್ಧ ಹೋರಾಟ. ಈ ಸಮಯದಲ್ಲಿ ಆಂಗ್ಲ ಸರ್ಕಾರ ತಾವು ದೇಶೀಯರ ‘ಉದ್ಧಾರ’ಕ್ಕಾಗಿ ಮಾಡಿರುವ ‘ಸುಧಾರಣೆ’ಗಳನ್ನು ಜನರ ಮುಂದಿರಿಸುವ ಸಲುವಾಗಿ ಬಂಗಾಳದ ಮೇದಿನೀಪುರದಲ್ಲಿ ವಸ್ತು ಪ್ರದರ್ಶನವನ್ನು ಆಯೋಜಿಸಿತ್ತು. ವಸ್ತು ಪ್ರದರ್ಶನಕ್ಕೆ ಜನರೇನೋ ಕಿಕ್ಕಿರಿದು ಸೇರಿದ್ದರು. ಅಲ್ಲಿಯೇ 15 ವರ್ಷದ ಯುವಕನೊಬ್ಬ ಆಂಗ್ಲರಿಂದ ಬಹಿಷ್ಕೃತಗೊಂಡಿದ್ದ ‘ಸೋನಾರ್ ಬಾಂಗ್ಲಾ’ ಕರಪತ್ರದ ಪ್ರತಿಗಳನ್ನು ಕೈಯ್ಯಲ್ಲಿ ಹಿಡಿದು ‘ವಂದೇಮಾತರಂ’ ಎಂದು ಘೋಷಿಸುತ್ತಿದ್ದ! ಸೋನಾರ್ ಬಾಂಗ್ಲಾ ಆಂಗ್ಲರ ದುರಾಡಳಿತದ ಕುರಿತು ವಿವರವಾಗಿ ತಿಳಿಸುತ್ತಿದ್ದ ಕರಪತ್ರ. ಇದನ್ನು ಓದದ ಕ್ರಾಂತಿಕಾರಿ ಬಂಗಾಳದಲ್ಲಿರಲಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದನ್ನು ಓದಿದ ಯುವಕ ಕ್ರಾಂತಿಕಾರಿಯಾಗಿ ತಾಯಿ ಭಾರತಿಗೆ ಜೀವ ಅರ್ಪಿಸಲು ಸಿದ್ಧನಾಗಿಬಿಡುತ್ತಿದ್ದ. ಕರಪತ್ರವೊಂದಕ್ಕೆ ಹೆದರಿದ ಬ್ರಿಟೀಷರು ಅದನ್ನು ಮುದ್ರಿಸುವುದನ್ನು, ಹಂಚುವುದನ್ನು, ಕೊನೆಗೆ ಮನೆಯಲ್ಲಿಟ್ಟುಕೊಳ್ಳುವುದನ್ನೂ ಬಹಿಷ್ಕರಿಸಿದ್ದರು.

ಮೇದಿನೀಪುರದಲ್ಲಿ ನಡೆಯುತ್ತಿದ್ದ ಆ ವಸ್ತುಪ್ರದರ್ಶನಕ್ಕೆ ಬ್ರಿಟೀಷರ ಸರ್ಪಗಾವಲು. ಅದರ ನಡುವೆಯೂ ಉತ್ಸಾಹದಿಂದ ವಂದೇಮಾತರಂ ಘೋಷಿಸುತ್ತಾ ಸೋನಾರ್ ಬಾಂಗ್ಲಾವನ್ನು ಹಂಚುತ್ತಿದ್ದ ಆ ಯುವಕ ಬೇರಾರು ಅಲ್ಲ, ಖುದಿರಾಂ ಬೋಸ್. ಡಿಸೆಂಬರ್ 3, 1889ರಂದು ಬಂಗಾಳದ ಮೇದಿನೀಪುರದಲ್ಲಿ ಹುಟ್ಟಿದ ಖುದಿರಾಂ ಬೋಸ್‌, ತಂದೆ ತ್ರೈಲೋಕ್ಯನಾಥ್ ಬೋಸ್‌ರು ನಾಡಜೋಲ್ ರಾಜರಿಗೆ ಸೇರಿದ ಪ್ರಾಂತ್ಯವೊಂದರಲ್ಲಿ ತಹಸೀಲ್ದಾರರಾಗಿದ್ದರು. ಖುದಿರಾಂನ ತಾಯಿ ಲಕ್ಷ್ಮಿದೇವಿ. ತಂದೆ-ತಾಯಿಯಿಬ್ಬರೂ ಖುದಿರಾಮನಿಗೆ ಆರು ವರ್ಷವಿರುವಾಗಲೇ ತೀರಿಕೊಂಡರು. ಖುದಿರಾಂ ಆನಂತರ ಬೆಳೆದದ್ದು ಅಕ್ಕ-ಭಾವನ ಜೊತೆಯಲ್ಲೇ. ಭಾವ ಅಮೃತಲಾಲ್‌ಗೆ ಖುದಿರಾಂ ಮೇಲೆ ಅಪಾರ ಪ್ರೀತಿ. ಅಮೃತಲಾಲರು ಕ್ರಾಂತಿಕಾರಿ ಸಂಘಟನೆ ಯುಗಾಂತರದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಸತ್ಯೇಂದ್ರನಾಥ ಬೋಸರ ಸ್ನೇಹಿತ. ಖುದಿರಾಂಗೆ ಶಿಕ್ಷಣದಲ್ಲಿ ಅಷ್ಟಾಗಿ ಆಸಕ್ತಿಯಿಲ್ಲದ ಕಾರಣ ಆತನನ್ನು ಅಮೃತಲಾಲರೇ ಸತ್ಯೇಂದ್ರನಾಥರ ಬಳಿಗೆ ಕರೆದುಕೊಂಡು ಹೋಗಿದ್ದರು. ಸತ್ಯೇಂದ್ರರು ಖುದಿರಾಮನಿಗೆ ರಾಷ್ಟ್ರೀಯತೆಯ ಪಾಠಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1903ರಲ್ಲಿ ಅಕ್ಕ ನಿವೇದಿತಾ ಬಂಗಾಳದಾದ್ಯಂತ ಸಂಚರಿಸುತ್ತಾ ರಾಷ್ಟ್ರೀಯತೆಯ ಜಾಗೃತಿ ಮೂಡಿಸುತ್ತಿದ್ದರು. ಮೇದಿನೀಪುರದಲ್ಲಿ ಯುಗಾಂತರದ ಚಟುವಟಿಕೆಗಳನ್ನು ಆರಂಭಿಸುವ ಸಲುವಾಗಿ ಯೋಗಿ ಅರವಿಂದರೊಂದಿಗೆ ಭೇಟಿನೀಡಿದ್ದ ಅಕ್ಕ ನಿವೇದಿತಾ ಸರಣಿ ಉಪನ್ಯಾಸಗಳನ್ನು ನೀಡಿದ್ದರು. ಈ ಉಪನ್ಯಾಸಗಳಿಗೆ ತಪ್ಪದೇ ಹಾಜರಾಗುತ್ತಿದ್ದ ಖುದಿರಾಂ ಸದ್ದಿಲ್ಲದೇ ಕ್ರಾಂತಿ ಪಾಳಯಕ್ಕೆ ಸೇರಿಕೊಂಡಿದ್ದ. ಗುಪ್ತಸಭೆ, ಸಣ್ಣ-ಪುಟ್ಟ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಖುದಿರಾಂ 1906ರಲ್ಲಿ ಸೋನಾರ್ ಬಾಂಗ್ಲಾ ಕರಪತ್ರವನ್ನು ಹಂಚಿ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಗಿದ್ದ. ಅಂದು ಆತನನ್ನು ಬಂಧಿಸಿದ ಆಂಗ್ಲಸರ್ಕಾರ, ಆತನ ವಿರುದ್ಧ ಸಾಕ್ಷ್ಯ ಸಿಗದೇ ಒಂದೇ ದಿನದಲ್ಲಿ ಬಿಟ್ಟುಕಳಿಸಿತ್ತು. ಖುದಿರಾಮನ ಈ ಸಾಹಸಮಯ ಕೆಲಸವನ್ನು ಗಮನಿಸುತ್ತಿದ್ದ ಯುಗಾಂತರದ ನಾಯಕರು ಎರಡೇ ವರ್ಷಗಳಲ್ಲಿ ಆತನಿಗೆ ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿದರು. ಕ್ರಾಂತಿಕಾರಿಗಳ ಜೀವನವನ್ನು ನರಕಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫೋರ್ಡ್‌ನ ಹತ್ಯೆ ಮಾಡುವುದು!

ಕಿಂಗ್ಸ್‌ಫೋರ್ಡ್ ಅಲಿಪುರದ ಮ್ಯಾಜಿಸ್ಟ್ರೇಟ್ ಆಗಿದ್ದ. ಯುಗಾಂತರದ ಸಂಪಾದಕರಾಗಿದ್ದ ಭೂಪೇಂದ್ರನಾಥ ದತ್ತರನ್ನು ಬಂಧಿಸಿದ್ದ. ಅಷ್ಟೇ ಅಲ್ಲ, ಯುಗಾಂತರ ಪತ್ರಿಕೆಯನ್ನು ಮುಟ್ಟುಗೋಲು ಹಾಕುವ ಪ್ರಯತ್ನಗಳನ್ನು ಮಾಡಿದ. ಬಂಗಾಳದಲ್ಲಿ ಕ್ರಿಯಾಶೀಲರಾಗಿದ್ದ ಕ್ರಾಂತಿಕಾರಿಗಳ ಜೀವನವನ್ನು ಕೊನೆಗೊಳಿಸಲು ಸದಾ ಹಾತೊರೆಯುತ್ತಿದ್ದ. ಬಂಗಾಳದ ಈ ಎಲ್ಲ ಕ್ರಾಂತಿ ಚಟುವಟಿಕೆಗಳ ಹಿಂದಿರುವ ಕಾಣದ ಕೈ ಅರವಿಂದರದ್ದೇ ಎಂದು ತಿಳಿದಿದ್ದ ಆತನಿಗೆ, ಅವರನ್ನು ಬಂಧಿಸುವಷ್ಟು ಸಾಕ್ಷ್ಯವಿರಲಿಲ್ಲ. ಅದಕ್ಕಾಗಿ ಹಗಲಿರುಳೂ ಒದ್ದಾಡುತ್ತಿದ್ದ ಆತ. ಕಿಂಗ್ಸ್‌ಫೋರ್ಡ್‌ನನ್ನು ಕೊಲ್ಲಲು ಈ ಹಿಂದೆಯೇ ಪ್ರಯತ್ನಪಡಲಾಗಿತ್ತು. ಹೇಮಚಂದ್ರ ಕಾನೂಂಗೊ ಎಂಬ ಕ್ರಾಂತಿಕಾರಿ ರಷ್ಯಾಗೆ ತೆರಳಿ ಬಾಂಬು ತಯಾರಿಕೆಯ ವಿಧಾನವನ್ನು ಕಲಿತುಬಂದಿದ್ದ. ಬಾಂಬನ್ನು ಕಿಂಗ್ಸ್‌ಫೋರ್ಡ್‌ನ ಮೇಲೆ ಪ್ರಯೋಗಿಸುವ ಯೋಜನೆ ಮಾಡಿದರು ಯುಗಾಂತರದ ಕ್ರಾಂತಿಕಾರಿಗಳು. ಪರೇಶ್ ಮೌಲಿಕ್ ಎಂಬ ಕ್ರಾಂತಿಕಾರಿ ಮುಂದೆ ಬಂದು ತಾನು ಈ ಕೆಲಸ ಮಾಡುವುದಾಗಿ ಒಪ್ಪಿಕೊಂಡ. ಸಾವಿರ ಪುಟಗಳಿಗೂ ದೊಡ್ಡ ಕಾನೂನು ಪುಸ್ತಕದಲ್ಲಿ ಹಾಳೆಗಳನ್ನು ಕತ್ತರಿಸಿ, ಬಾಂಬನ್ನು ಇರಿಸಲಾಗಿತ್ತು. ಅದನ್ನು ತೆರೆಯುತ್ತಿದ್ದಂತೆ ಬಾಂಬು ಸಿಡಿದು ಕಿಂಗ್ಸ್‌ಫೋರ್ಡ್ ಸತ್ತುಬೀಳುವಂತೆ ಯೋಜನೆ ರೂಪಿಸಲಾಯ್ತು. ಪರೇಶ್ ಮೌಲಿಕ್ ನ್ಯಾಯಾಲಯದ ಗುಮಾಸ್ತನಂತೆ ಬಂದು ಕಿಂಗ್ಸ್‌ಫೋರ್ಡ್‌ನ ಮನೆಯ ಕಾವಲುಗಾರನಿಗೆ ಬಾಂಬಿಟ್ಟ ಪುಸ್ತಕ ಕೊಟ್ಟು, ಮ್ಯಾಜಿಸ್ಟ್ರೇಟ್ ಸಾಹೇಬರಿಗೆ ತಲುಪಿಸುವಂತೆ ಕೇಳಿಕೊಂಡ. ಕಾವಲುಗಾರ ಅದನ್ನು ಕಿಂಗ್ಸ್‌ಫೋರ್ಡ್‌ನ ಮೇಜಿನ ಮೇಲಿಟ್ಟು ಬಂದಿದ್ದ. ಎಲ್ಲವೂ ಅಂದುಕೊಂಡಂತೆ ನಡೆಯಿತು. ಮಾರನೆಯ ದಿನ ಬೆಳಿಗ್ಗೆ ಕಿಂಗ್ಸ್‌ಫೋರ್ಡ್ ಬಾಂಬು ಸಿಡಿದು ಸತ್ತುಹೋಗಿದ್ದಾನೆ ಎಂಬ ಸುದ್ದಿಗಾಗಿ ಕಾಯುತ್ತಾ ಕುಳಿತಿದ್ದರು ಕ್ರಾಂತಿಕಾರಿಗಳು. ಆದರೆ, ಕಿಂಗ್ಸ್‌ಫೋರ್ಡ್‌ನ ಅದೃಷ್ಟ ಚೆನ್ನಾಗಿತ್ತು. ಆತ ಪುಸ್ತಕವನ್ನು ತೆಗೆಯಲೇ ಇಲ್ಲ, ಬಾಂಬು ಸಿಡಿಯಲೂ ಇಲ್ಲ. ಈ ಹೊತ್ತಿಗೆ ಲೆಫ್ಟಿನೆಂಟ್ ಗವರ್ನರ್ ಆಂಡ್ರೂ ಫ್ರೇಸರ್ನ ಮೇಲೆ ಮೂರು ಬಾರಿ ಹತ್ಯೆಯ ಪ್ರಯತ್ನಗಳು ನಡೆದು ವಿಫಲಗೊಂಡಿದ್ದವು. ಮೇಯರ್ ಮನ್ಸೂರ್ ತರ್ದವೇಲ್, ಬಿ.ಸಿ ಎಲೆನ್ ಮೇಲೂ ಹತ್ಯಾದಾಳಿಗಳು ನಡೆದವು. ಕಿಂಗ್ಸ್‌ಫೋರ್ಡ್ ಕ್ರಾಂತಿಕಾರಿಗಳ ಮುಂದಿನ ಗುರಿ ಎಂಬುದರ ಸುಳಿವು ಬ್ರಿಟೀಷರಿಗೆ ಸಿಕ್ಕಿತ್ತು. ವರ್ಗಾವಣೆಗೊಳ್ಳುವಂತೆ ಆತನನ್ನು ಮೇಲಿನ ಅಧಿಕಾರಿಗಳು ಒತ್ತಾಯಿಸುತ್ತಿದ್ದರಾದರೂ, ಕಿಂಗ್ಸ್‌ಫೋರ್ಡ್ ಕಲ್ಕತ್ತಾ ಬಿಟ್ಟು ತೆರಳಲು ಒಪ್ಪಿಕೊಂಡಿರಲಿಲ್ಲ. ಹಾಗಂತ ಆತನಿಗೆ ಪ್ರಾಣಭಯವಿರಲಿಲ್ಲವೆಂದು ಭಾವಿಸಿಬಿಡಬೇಡಿ. ಆತನ ‘ಗೌರವ-ಸ್ವಾಭಿಮಾನ’ಗಳಿಗೆ ಧಕ್ಕೆ ಬರಬಹುದೆಂದು ವರ್ಗಾವಣೆಗೊಳ್ಳಲು ನಿರಾಕರಿಸಿದ್ದ. ಒಬ್ಬರ ಮೇಲೊಬ್ಬರಂತೆ ಹತ್ಯಾ ಪ್ರಯತ್ನಗಳು ನಡೆಯುತ್ತಿದ್ದಂತೆ ಆತನಿಗೂ ಜೀವಭಯ ಹೆಚ್ಚಾಯಿತು. ಮುಜಫರ್‌ಪುರಕ್ಕೆ ವರ್ಗಾವಣೆಯಾಗಿಬಿಟ್ಟ!

ಹ್ಞಾಂ! ಆತನ ವರ್ಗಾವಣೆಯಾಯಿತೆಂದು ಕ್ರಾಂತಿಕಾರಿಗಳು ಕಿಂಗ್ಸ್‌ಫೋರ್ಡ್‌ನನ್ನು ಕೊಲ್ಲುವ ಯೋಜನೆಯನ್ನು ಬಿಟ್ಟುಬಿಡಲಿಲ್ಲ. ಮುಜಫರ್‌ಪುರಕ್ಕೇ ಹೋಗಿ ಕೊಲ್ಲುವ ಸಾಹಸದ ಯೋಜನೆ ಮಾಡಿದರು ಯುಗಾಂತರದ ಕ್ರಾಂತಿಕಾರಿಗಳು. ಈ ಮಹತ್ಕಾರ್ಯಕ್ಕೆ ಅವರು ಆರಿಸಿಕೊಂಡಿದ್ದು 18 ವರ್ಷದ ಯುವಕ ಖುದಿರಾಂ ಬೋಸ್‌ನನ್ನು. ಖುದಿರಾಂ ಬೋ‌ಸ್‌ನೊಡನೆ ಪ್ರಫುಲ್ಲಚಾಕಿ ಎಂಬ ಮತ್ತೊಬ್ಬ ಯುವಕನನ್ನು ಈ ಯೋಜನೆಯಲ್ಲಿ ಸೇರಿಸಲಾಯ್ತು. ಇಬ್ಬರೂ ಮರುಕ್ಷಣವೇ ಮುಜಫರ್‌ಪುರಕ್ಕೆ ಹೊರಟರು. ಪ್ರಫುಲ್ಲಚಾಕಿ ದಿನೇಶ್‌ಚಂದ್ರ ರೇ ಆದ, ಖುದಿರಾಂ ಹರೇನ್ ಸರ್ಕಾರ್ ಆದ. ದಿನೇಶ್ ಮತ್ತು ಹರೇನ್ ಇಬ್ಬರೂ ಮೂರು ವಾರಗಳ ಕಾಲ ಕಿಂಗ್ಸ್‌ಫೋರ್ಡ್‌ನ ಚಲನ-ವಲನಗಳನ್ನು ಹತ್ತಿರದಿಂದ ಗಮನಿಸಿದರು. ಪ್ರತಿನಿತ್ಯ ಆತ ಯುರೋಪಿಯನ್ ಕ್ಲಬ್‌ಗೆ ಹೋಗುವ ಸಮಯ, ಆತ ಹಿಂದಿರುಗುವ ಸಮಯ, ಹೀಗೆ ಕ್ಷಣಕ್ಷಣದ ಓಡಾಟವನ್ನೂ ಗಮನಿಸಿದರು. ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲಾ ತಯಾರಿಯಾಯ್ತು.

ಅದು ಏಪ್ರಿಲ್ 30, 1908. ಖುದಿರಾಂ ಮತ್ತು ಪ್ರಫುಲ್ಲಚಾಕಿ ಯುರೋಪಿಯನ್ ಕ್ಲಬ್ ಹೊರಗಿರುವ ಮರವನ್ನೇರಿ ಕುಳಿತರು. ಎಂದಿನಂತೆ ಯುರೋಪಿಯನ್ ಕ್ಲಬ್‌ನಿಂದ ಕಿಂಗ್ಸ್‌ಫೋರ್ಡ್‌ನ ಕುದುರೆಗಾಡಿ ಸರಿಯಾಗಿ 8.30ಕ್ಕೆ ಹೊರಬಿತ್ತು. ಖುದಿರಾಂ ತನ್ನ ಕೈಯ್ಯಲ್ಲಿ ಹಿಡಿದ ಬಾಂಬನ್ನು ಕುದುರೆಗಾಡಿಯ ಮೇಲೆ ಎಸೆದುಬಿಟ್ಟ. ದೊಡ್ಡ ಸದ್ದು. ಗಾಡಿಯಲ್ಲಿರುವವರು ಬದುಕಿರುವುದು ಅನುಮಾನ ಎಂದು ಸಮಾಧಾನದ ನಿಟ್ಟುಸಿರುಬಿಟ್ಟ ಇಬ್ಬರೂ ಹಿಂದಿರುಗಿ ನೋಡದೇ ಓಡಲು ಮುಂದಾದರು. ಆದರೆ ಅಲ್ಲಿ ನಡೆದದ್ದೇ ಬೇರೆ. ಕಿಂಗ್ಸ್‌ಫೋರ್ಡ್ ಬದುಕಿಬಿಟ್ಟ. ಆತ ಖುದಿರಾಂ ಬಾಂಬು ಎಸೆದ ಗಾಡಿಯಲ್ಲಿ ಅಂದು ಇರಲೇ ಇಲ್ಲ. ಪಾಪಿ ಚಿರಾಯು ಅನ್ನುತ್ತಾರಲ್ಲ! ಆತನ ಬದಲು ಆ ಗಾಡಿಯಲ್ಲಿ ಕೆನಡಿಯವರ ಪತ್ನಿ ಮತ್ತು ಮಗಳಿದ್ದರು. ಇತ್ತ ಖುದಿರಾಂ ಸುಮಾರು 25 ಮೈಲುಗಳಷ್ಟು ದೂರವನ್ನು ರಾತ್ರಿಯಿಡೀ ಕಾಲ್ನಡಿಗೆಯಲ್ಲೇ ಕ್ರಮಿಸಿ ವೈನಿ ಎನ್ನುವ ರೈಲುನಿಲ್ದಾಣ ತಲುಪಿದ. ದಣಿವಾರಿಸಿಕೊಳ್ಳಲು ಅಲ್ಲಿಯೇ ಇದ್ದ ಅಂಗಡಿಯಲ್ಲಿ ನೀರನ್ನು ಕುಡಿಯಲು ಮುಂದಾದ. ಆಗಲೇ ಆತನಿಗೆ ಅರಿವಾದದ್ದು ತಾವು ಕೊಂದದ್ದು ಕಿಂಗ್ಸ್‌ಫೋರ್ಡ್‌ನನ್ನು ಅಲ್ಲ, ಬದಲಿಗೆ ಕೆನಡಿ ಮಹಿಳೆಯರನ್ನು ಎಂದು! ಬೇಸರಗೊಳ್ಳುವ ಹೊತ್ತಿಗೆ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಅನುಮಾನದ ವಾಸನೆ ಬಡಿಯಿತು. ಖುದಿರಾಮನನ್ನು ಒಂದೆರಡು ಪ್ರಶ್ನೆ ಕೇಳಿದ ಅವರು, ಆತನನ್ನು ಬಂಧಿಸಿಯೇಬಿಟ್ಟರು. ಪ್ರಫುಲ್ಲ ಚಾಕಿ ಕೂಡ ರಾತ್ರಿಯಿಡೀ ನಡೆದು ಸಮಷ್ಟಿಪುರ ರೈಲುನಿಲ್ದಾಣ ತಲುಪಿದ. ಈತನ ಮೇಲೆ ಅನುಮಾನವುಂಟಾಗಿ ಪೊಲೀಸರು ಸುತ್ತುವರಿದರು. ಏನೂ ಮಾಡಲು ತೋಚದೇ ಪ್ರಫುಲ್ಲ ಗುಂಡು ಹೊಡೆದುಕೊಂಡು ತನ್ನ ಪ್ರಾಣವನ್ನು ಅರ್ಪಿಸಿ, ಅಜರಾಮರನಾದ.

ಖುದಿರಾಮನನ್ನು ಮುಜಫರ್‌ಪುರಕ್ಕೆ ಕರೆದೊಯ್ಯಲಾಯ್ತು. ಎರಡು ತಿಂಗಳ ಕಾಲ ವಿಚಾರಣೆಯ ನಾಟಕ ಮಾಡಲಾಯ್ತು. ಆಗಸ್ಟ್ 11, 1908ರಂದು ಖುದಿರಾಮನನ್ನು ಬ್ರಿಟೀಷ್ ಸರ್ಕಾರ ನೇಣಿಗೇರಿಸಿತು. ಆಗಿನ್ನೂ ಖುದಿರಾಮನಿಗೆ 18 ವರ್ಷ, 8 ತಿಂಗಳು! ನಾವು ತ್ಯಾಗದ ಪರಿಕಲ್ಪನೆಯನ್ನೂ ಅರ್ಥೈಸಿಕೊಳ್ಳಲು ತೊಳಲಾಡುತ್ತಿರುವ ವಯಸ್ಸಿಗೆ ಖುದಿರಾಂ ಮಾತೃಭೂಮಿಗಾಗಿ ತನ್ನನ್ನೇ ತಾನು ಅರ್ಪಿಸಿಕೊಂಡಿದ್ದ!

-ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top