State

ಹೃದಯದ ನುಡಿ ಕನ್ನಡ!

ಭಾಷೆ ಎನ್ನುವುದು ಅಭಿವ್ಯಕ್ತಿಯ ಮಾಧ್ಯಮ. ಗುಹೆಗಳ ಕಲ್ಲು ಗೋಡೆಗಳ ಮೇಲೆ ಮಾನವ ತನ್ನ ಅನಿಸಿಕೆಗಳನ್ನು ಕೆತ್ತುತ್ತಿದ್ದ ಕಾಲವಿತ್ತು. ಮುಂದೆ ಅದೇ ಕಲೆಯಾಗಿ ಪರಿವರ್ತನೆಗೊಂಡು ಅಲ್ಲೆಲ್ಲಾ ಬಣ್ಣಗಳ ಬಳಕೆಯನ್ನು ಆರಂಭಿಸಿದ. ಸನ್ನೆಗಳನ್ನು, ಸಂಕೇತಗಳನ್ನು ಬಳಸಿ, ತನ್ನ ಮನದಿಂಗಿತವನ್ನು ಅರುಹುವ ಪ್ರಯತ್ನವನ್ನೂ ಆತ ಮಾಡಿದ. ಆತನ ಕೂಗುವಿಕೆಯೂ ಯಾವುದೋ ಒಂದು ಬಗೆಯ ಸಂದೇಶವೇ ಆಗಿರುತ್ತಿತ್ತು. ಮಾನವನಲ್ಲದೇ ಇತರ ಪ್ರಾಣಿಗಳು ಈ ಕೂಗುವಿಕೆಯನ್ನು ಇಂದಿಗೂ ವ್ಯಾಪಕವಾಗಿ ಬಳಸಿಕೊಳ್ಳುತ್ತವೆ. ಹುಲಿ, ಸಿಂಹಗಳು ಬರುತ್ತಿದೆ ಎಂದು ಗೊತ್ತಾದೊಡನೆ ಕಾಡಿನಲ್ಲಿ ಮಂಗಗಳು ಅರಚುವ ರೀತಿಯೇ ಬೇರೆಯಾಗಿಬಿಡುತ್ತದೆ. ಉಳಿದೆಲ್ಲ ಪ್ರಾಣಿಗಳಿಗೆ ಇದು ಎಚ್ಚರಿಕೆಯ ಮುನ್ಸೂಚನೆ. ನಾವು ಹಾಗೆ ಬಗೆ-ಬಗೆಯ ಸದ್ದುಗಳ ಮೂಲಕ ನಮ್ಮ ಆಲೋಚನೆಯನ್ನು ವಿವರಿಸುತ್ತಿದ್ದೆವೇನೋ! ಆನಂತರವೇ ಭಾಷೆ ಸ್ವರೂಪವನ್ನು ಕಂಡುಕೊಂಡಿದ್ದು. ಕಾಲಕ್ರಮೇಣ ಅದು ವ್ಯಾಪಕಗೊಂಡು ಭಾಷೆಗೊಂದು ಚೌಕಟ್ಟು ಬಂತು. ಹೀಗೆಯೇ ಮಾತನಾಡಬೇಕೆಂಬ ವ್ಯಾಕರಣ ರೂಪುಗೊಂಡಿತು. ಸಂಸ್ಕೃತವಂತೂ ಭಾಷೆಯನ್ನೇ ದುಡಿಸಿಕೊಂಡು ಸಾಹಿತ್ಯಿಕ ಕಸರತ್ತು ಮಾಡಲು ಕಲಿಸಿತು. ಹಾಗಂತ ಇತರ ಭಾಷೆಗಳು ಹಿಂದುಳಿದವೆಂದೇನೂ ಅಲ್ಲ. ತಮ್ಮ-ತಮ್ಮ ವ್ಯಾಪ್ತಿಯಲ್ಲಿ ವಿಸ್ತಾರವಾಗಿಯೇ ಬೆಳೆದವು. ಈ ನಿಟ್ಟಿನಲ್ಲಿ ಕನ್ನಡದ ಪಾತ್ರವೂ ಅಪರೂಪದ್ದೇ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡಗಳ ಮೂಲಕ ತನ್ನನ್ನು ತಾನು ಪರಿಪೂರ್ಣ ಅನಾವರಣಗೊಳಿಸಿಕೊಂಡ ನಮ್ಮ ಭಾಷೆ ನಾಡಿನ ಜನ-ಮನದ ಭಾವನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸಬಲ್ಲ ಸ್ವರೂಪವನ್ನು ಕಾಲಕಾಲಕ್ಕೆ ಪಡೆದುಕೊಂಡಿತು. ಹಾಗಂತ ಬೀದರ್ನಿಂದ ಹಿಡಿದು ಚಾಮರಾಜನಗರದವರೆಗೆ ಏಕರೂಪತೆ ಇದೆ ಎಂದಲ್ಲ. ಸುಮಾರು 100 ಕಿ.ಮೀಗಳಿಗೆ ಸಾಂಸ್ಕೃತಿಕ ಬದಲಾವಣೆಗಳು ಕಂಡು ಬರುವಂತೆ ಅದಕ್ಕಿಂತಲೂ ಕಡಿಮೆ ಅಂತರದಲ್ಲಿ ಭಾಷೆಯ ಶೈಲಿಯೇ ಬದಲಾಗುವುದು ಕಂಡುಬರುತ್ತದೆ. ಅನೇಕ ಅಚ್ಚರಿಗಳನ್ನು ಈ ನಿಟ್ಟಿನಲ್ಲಿ ನಾವು ಗಮನಿಸಬಹುದು. ಕಾರವಾರದಿಂದ ಭಟ್ಕಳದವರೆಗೆ ವ್ಯಾಪಕವಾಗಿರುವ ಕೊಂಕಣಿ, ಅತ್ತ ಮಂಗಳೂರಿನಿಂದ ಉಡುಪಿ ದಾಟುವವರೆಗೆ ಹಬ್ಬಿರುವ ತುಳು. ಇವೆರಡೂ ಸೇರುವ ಜಾಗವಾದ ಕುಂದಾಪುರದಲ್ಲಿ ಕೊಂಕಣಿಯೂ ಇಲ್ಲ, ತುಳುವೂ ಇಲ್ಲ. ಅಲ್ಲಿರುವ ಕನ್ನಡ ಪೂರ್ಣ ಭಿನ್ನವೇ! ಬೆಂಗಳೂರಿನಲ್ಲಿ ಕುಳಿತು ನೋಡುವವನಿಗೆ ಕುಂದಾಪುರ ಕನ್ನಡ ಮತ್ತು ಶಿರಸಿಯ ಕನ್ನಡಗಳು ಒಂದೇ ಎನಿಸಬಹುದೇನೋ. ಆದರೆ ಹವ್ಯಕರೇ ಹೆಚ್ಚಾಗಿ ಮಾತನಾಡುವ ಅಲ್ಲಿನ ಕನ್ನಡವು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ. ಚಾಮರಾಜನಗರದವರು ಆಡುವ ಭಾಷೆ ಬೆಂಗಳೂರಿಗರಿಗೆ ಅರ್ಥವಾಗಿಬಿಡುವುದೆಂದೇನೂ ಇಲ್ಲ. ಹಾಗೆಯೇ ಬೀದರ್ನವರ ಭಾಷೆ ಹುಬ್ಬಳ್ಳಿಗರಿಗೆ ಪರಿಪೂರ್ಣವಾಗಿ ಅರ್ಥವಾಗಿಬಿಡಬಹುದು ಎಂದೂ ಇಲ್ಲ. ಹಾಗಂತ ಇವ್ಯಾವುವೂ ಕನ್ನಡವಲ್ಲ ಎನ್ನಲಾಗುವುದಿಲ್ಲ. ಎಲ್ಲವೂ ಕನ್ನಡದ ವಿಭಿನ್ನ ಸ್ವರೂಪಗಳೇ. ಯಾರನ್ನೂ ತುಚ್ಛವೆನ್ನಲಾಗುವುದಿಲ್ಲ, ಶ್ರೇಷ್ಠವೆಂದು ತಲೆಯ ಮೇಲೆ ಕೂರಿಸಿಕೊಳ್ಳಲೂ ಸಾಧ್ಯವಿಲ್ಲ. ಅವರವರ ಜಾಗದಲ್ಲಿ ಅವರವರ ಶೈಲಿಯ ಕನ್ನಡ ವಿಶೇಷವಷ್ಟೇ!


ಇಂತಹ ಅನೇಕ ವಿಚಾರಗಳ ಚಚರ್ೆಗೆಂದೇ ಶಿವಮೊಗ್ಗದಲ್ಲಿ ಎದೆ ಭಾಷೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ನಿಕಾಯದ ಪ್ರೊಫೆಸರ್ಗಳಾಗಿರುವ ಪಾಂಡುರಂಗ ಬಾಬು ಮತ್ತು ಮಾಧವ್ ಪೆರಾಜೆ ಯಾವುದೇ ಭಾಷೆಯನ್ನು ಮೇಲು-ಕೀಳು ಎಂದು ಗುರುತಿಸಲಾಗದು ಎಂಬುದಕ್ಕೆ ಭಾಷಾ ವಿಜ್ಞಾನದ ಆಧಾರದ ಮೇಲೆ ಅನೇಕ ಸಂಗತಿಗಳನ್ನು ಪ್ರಸ್ತುತಪಡಿಸಿದರು. ಈ ಹಿನ್ನೆಲೆಯಲ್ಲಿಯೇ ಭಿನ್ನ-ಭಿನ್ನ ಕನ್ನಡಗಳ ಶ್ರೇಷ್ಠತೆಯ ಗಲಾಟೆ ಬಿಡಿ, ಕನ್ನಡಕ್ಕಿಂತಲೂ ಸಂಸ್ಕೃತ ಶ್ರೇಷ್ಠವೇ ಎಂಬ ಪ್ರಶ್ನೆಯೂ ಉದ್ಭವಿಸಲಾರದು ಎಂದರು ಅವರು. ಕೆಲವೊಮ್ಮೆ ಅನ್ಯಭಾಷೆಯ ಪದಗಳನ್ನು ಕನ್ನಡಕ್ಕೆ ತರುವಾಗ ಆಗುವ ದೋಷಗಳನ್ನು ತೀವ್ರವಾಗಿ ಗಣಿಸಬೇಕಿಲ್ಲ ಎಂಬ ಅವರ ವಾದ ಅನೇಕರನ್ನು ಕೆರಳಿಸಿದಂತೆನಿಸಿದರೂ ವಿಚಾರಕ್ಕೆ ಹಚ್ಚಿದ್ದಂತೂ ಹೌದು. ಸಂಸ್ಕೃತದಿಂದ ಕನ್ನಡಕ್ಕೆ ಪದಗಳನ್ನು ತರುವಾಗ ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಅದು ಬದಲಾದರೆ ಜಗಳವಾಡುತ್ತಾ ಕೂಡಬೇಕಿಲ್ಲ ಎಂಬ ಮಾತು ಸತ್ಯಕ್ಕೆ ಹತ್ತಿರವೆಂದೆನಿಸುತ್ತಿತ್ತು.

ಶಿವಮೊಗ್ಗದ ಲೇಖಕ ಕಿರಣ್ ಹೆಗ್ಗದೆ ವ್ಯತಿರಿಕ್ತವಾದ ವಿಚಾರವನ್ನು ಮಂಡಿಸುತ್ತಾ ಹರಿಯುವ ಗಂಗೆ ಪಾತ್ರದುದ್ದಕ್ಕೂ ಎಲ್ಲರಿಗೂ ಪವಿತ್ರಳಾದರೂ ಮೂಲ ಗಂಗೋತ್ರಿ ಎನ್ನುವುದನ್ನು ಮರೆಯುವಂತಿಲ್ಲ. ಅಂತೆಯೇ ನಮ್ಮೆಲ್ಲ ಭಾಷೆಗಳು ಶ್ರೇಷ್ಠ ಹೌದಾದರೂ ಇದಕ್ಕೆಲ್ಲ ತಾಯಿ ಸಂಸ್ಕೃತವೇ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ವಾದ ಮಂಡಿಸಿದ್ದು ವಿಶೇಷವೆನಿಸಿತ್ತು. ಚಾಮರಾಜನಗರದ ಜಯಪ್ಪ, ಬೀದರ್ನ ಶಿವಲಿಂಗ ಹೇಡೆ ಮತ್ತು ಕುಂದಾಪುರದ ಮನು ಹಂದಾಡಿ ತಮ್ಮ-ತಮ್ಮ ಕನ್ನಡ ಭಾಷೆಗಳ ವೈವಿಧ್ಯವನ್ನು ಮನುಮುಟ್ಟುವಂತೆ ಬಣ್ಣಿಸಿದರು. ಇವೆಲ್ಲವನ್ನೂ ಸೂಕ್ಷ್ಮವಾಗಿ ಆಲಿಸುತ್ತಿದ್ದ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಈ ಭಾಷಾ ಶೈಲಿಯ ಕುರಿತಂತೆ ಭಾವುಕವಾದ ಅಂಶಗಳನ್ನು ಕಟ್ಟಿಕೊಡುತ್ತಾ ಕನ್ನಡಮಾತೆಯ ಕೈಗೆ ಧರಿಸಿದ ವಜ್ರದುಂಗುರದ ವಿಭಿನ್ನ ಹರಳುಗಳಿವು ಎಂದರು.


ಒಂದಂತೂ ಹೌದು. ಭಾಷೆಯನ್ನು ಮೇಲು-ಕೀಳು ಎಂದು ಗುರುತಿಸುವಂತೆ ಇಲ್ಲ. ಅವರವರ ಪಾಲಿಗೆ ಅವರವರ ಭಾಷೆ ಸಮರ್ಥ ಅಭಿವ್ಯಕ್ತಿಗೆ ಕಾರಣವಾಗಿದೆಯಾ ಎಂಬುದಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ನೋಡುವುದಾದರೆ ಪ್ರತಿಯೊಂದು ಭಾಷೆ ರೂಪುಗೊಂಡಿರುವ ರೀತಿ, ಅದರ ಹಿಂದಿರುವಂತಹ ವೈಜ್ಞಾನಿಕ ಸಂರಚನೆಗಳು, ಅದರಲ್ಲಿ ಜರುಗಿರುವ ಸಾಹಿತ್ಯ ಕೃಷಿ, ಇವೆಲ್ಲವನ್ನೂ ತುಲನೆ ಮಾಡಿ ನೋಡಲೇಬೇಕು. ನಮ್ಮೆಲ್ಲ ಭಾಷೆಗಳು ಕಾಲದ ಪರೀಕ್ಷೆಯಲ್ಲಿ ಗೆಲ್ಲುವುದು ಇವುಗಳಿಂದಲೇ. ಸಂಸ್ಕೃತ ಸಹಸ್ರಾರು ವರ್ಷಗಳಿಂದ ಉಳಿದು ಬಂದಿರುವುದು ಅದರ ವಿನ್ಯಾಸದ ಕಾರಣದಿಂದಲೇ ಮತ್ತು ಅದರಲ್ಲಿ ನಡೆದಿರುವಂತಹ ಸಾಹಿತ್ಯಿಕ ಕಸರತ್ತಿನಿಂದಲೇ. ಧಾತುಗಳನ್ನು ಆಧಾರವಾಗಿರಿಸಿಕೊಂಡು ಹುಟ್ಟುವ ಪದಗಳು, ಉಪಸರ್ಗಗಳ ಮೂಲಕ ಅದು ರೂಪಾಂತರಗೊಳ್ಳುವ ರೀತಿ, ವಾಕ್ಯ ಸಂರಚನಾ ಶೈಲಿ, ಅದರಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳು, ಇವೆಲ್ಲವೂ ಅದನ್ನು ವಿಶಿಷ್ಟವಾಗಿಸಿವೆ. ತನ್ಮೂಲಕ ಅದರ ನೆರಳಲ್ಲಿ ಬೆಳೆದಿರುವ ಭಾರತೀಯ ಭಾಷೆಗಳನ್ನು ಸಮೃದ್ಧಗೊಳಿಸಿವೆ. ಆ ದೃಷ್ಟಿಯಿಂದಲೇ ನಮ್ಮ ಭಾಷೆ, ನಮ್ಮ ಅಭಿವ್ಯಕ್ತಿ ಇವೆಲ್ಲವೂ ವಿಶಿಷ್ಟವೆನಿಸೋದು. ಎದೆ ಭಾಷೆಯಲ್ಲಿ ಇಂತಹ ಅನೇಕ ಚಚರ್ೆ ನಡೆಯಿತಲ್ಲದೇ ಶಿವಮೊಗ್ಗದ ಜನತೆಯೂ ಈ ಚಚರ್ೆಯಲ್ಲಿ ಉದ್ದಕ್ಕೂ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳುತ್ತಾ, ಸಲಹೆಗಳನ್ನು ನೀಡುತ್ತ ಚಚರ್ೆಯನ್ನು ರೋಚಕಗೊಳಿಸಿಬಿಟ್ಟರು. ರಾಜ್ಯೋತ್ಸವಕ್ಕೆ ಇದಕ್ಕಿಂತಲೂ ಒಳ್ಳೆಯ ಕೊಡುಗೆ ಮತ್ತೊಂದಿರಲಾರದು..

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top