International

ಹೊಸ ಶೀತಲ ಸಮರದ ಕೇಂದ್ರ ಟಿಬೆಟ್!

ಟಿಬೆಟ್ ಮತ್ತೆ ಜಗತ್ತಿನ ಕೇಂದ್ರವಾಗುವ ಲಕ್ಷಣ ಕಾಣುತ್ತಿದೆ. ನೆಹರೂ ಹಿಂದೂ-ಚೀನಿ ಭಾಯಿ ಭಾಯಿ ಜಪ ಮಾಡುತ್ತಿರುವಾಗಲೇ ಚೀನಾ ಟಿಬೆಟ್ ಅನ್ನು ನುಂಗಿಹಾಕಿತ್ತು. ನಾವು ಪ್ಯಾದೆಗಳಂತೆ ನೊಡುತ್ತಾ ಉಳಿದೆವು. ಟಿಬೆಟ್ ಪ್ರತ್ಯೇಕವಾಗಿರಲೆಂದು ವಿಶ್ವಸಂಸ್ಥೆಯಲ್ಲಿ ಗಲಾಟೆ ಎಬ್ಬಿಸಿದ್ದರೂ ಸಾಕಿತ್ತು. ಇಂದು ಚೀನಾ ನಮ್ಮ ತಂಟೆಗೆ ಬರುವ ಸ್ಥಿತಿಯಲ್ಲೇ ಇರುತ್ತಿರಲಿಲ್ಲ. ನಮ್ಮೊಡನೆ ಗೆಳೆತನದ ಮುಖವಾಡ ಹಾಕಿಕೊಂಡು ಚೀನಾ ಬಲುದೊಡ್ಡ ಭೂಭಾಗವನ್ನೇ ಆಪೋಷನ ತೆಗೆದುಕೊಂಡುಬಿಟ್ಟಿದ್ದು. ಇಂದು ಕಾಂಗ್ರೆಸ್ಸಿಗರು ಚೀನಾ ಪ್ಯಾಂಗಾಂಗ್ ಲೇಕಿನ ಗಸ್ತು ಸ್ಥಳಗಳನ್ನು ಆಕ್ರಮಿಸಿಕೊಂಡಿದೆ ಎಂದು ಕೂಗಾಡುತ್ತಿದ್ದಾರೆ; ಆದರೆ ಇವರದ್ದೇ ಅಧಿಕಾರಾವಧಿಯಲ್ಲಿ ನಾವು ಕೂಗಿದರೂ ಕೇಳದಷ್ಟು ದೂರದಲ್ಲಿದ್ದ ಚೀನಾ ಕುತ್ತಿಗೆಯ ಮೇಲೇ ಬಂದು ಕುಳಿತುಬಿಟ್ಟಿತು ಎಂಬುದನ್ನು ಮರೆತೇ ಬಿಡುತ್ತಾರೆ. ಸ್ಪಷ್ಟವಾದ ವಿದೇಶಾಂಗ ನೀತಿ ಮತ್ತು ದೂರದೃಷ್ಟಿಯಿಲ್ಲದವರು ನಾಯಕರಾದರೆ ರಾಷ್ಟ್ರವೊಂದರ ಸ್ಥಿತಿ ಏನಾಗಬಹುದೆಂಬುದಕ್ಕೆ ಇದು ಸಮರ್ಥ ಉದಾಹರಣೆ. ಒಂದೆಡೆ ಟಿಬೆಟ್ ನುಂಗಿಬಿಡಲು ಅವಕಾಶ ಮಾಡಿಕೊಟ್ಟ ನಾವೇ ಅತ್ತಲಿಂದ ಓಡಿಬಂದ ಲಾಮಾಗಳಿಗೆ ಆಶ್ರಯಕೊಟ್ಟು ಚೀನಾದ ವಿರೋಧವನ್ನು ಶಾಶ್ವತವಾಗಿ ಕಟ್ಟಿಕೊಂಡೆವು. ಚೀನಾದ ತಲೆಯ ಮೇಲೆ ಮೊಟಕಿ ಬುದ್ಧಿ ಹೇಳಬಹುದಾದ ಸ್ಥಾನದಲ್ಲಿದ್ದ ಭಾರತ ಚೀನಾದ ದಾಸನಂತೆ ವತರ್ಿಸಿದ್ದು ದುರದೃಷ್ಟಕರ. ಬಹುಶಃ ನೆಹರೂ ಆಪ್ತವಲಯದಲ್ಲಿದ್ದ ಎಡಪಂಥೀಯರ ಪ್ರಭಾವ ಇರಲಿಕ್ಕೂ ಸಾಕು!


ಚೀನಾದ ನೀತಿ ಬಲು ಸ್ಪಷ್ಟವಾಗಿತ್ತು. ಬ್ರಿಟೀಷರ ಕಾಲದಲ್ಲಿ ಟಿಬೆಟ್ನ ಮೇಲೆ ಸಾರ್ವಭೌಮಿಕ ಅಧಿಕಾರವನ್ನು ಪಡೆದುಕೊಂಡಿದ್ದ ತಾವು ಶಾಶ್ವತವಾಗಿ ಅದರ ಮೇಲೆ ಅಧಿಕಾರವನ್ನು ಸ್ಥಾಪಿಸಲೇಬೇಕೆಂದು ನಿಶ್ಚಯಿಸಿದ್ದರು. ಇದಕ್ಕೆ ತಕರಾರೆತ್ತಬಲ್ಲ ಭಾರತವನ್ನು ಸ್ನೇಹದಿಂದ, ಒಳಸಂಚುಗಳಿಂದ ಶಾಂತವಾಗಿಸಿ ಇಡಿಯ ಒಂದು ರಾಷ್ಟ್ರವನ್ನೇ ಆಪೋಷನ ತೆಗೆದುಕೊಂಡುಬಿಟ್ಟರು. ಟಿಬೆಟ್ನ ಸ್ವತಂತ್ರ ಅಸ್ತಿತ್ವಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿತ್ತು. ಮಾನಸ ಸರೋವರವನ್ನು ಒಳಗೊಂಡಂತೆ ಹಿಂದೂಗಳ ಅನೇಕ ತೀರ್ಥಕ್ಷೇತ್ರಗಳು ಟಿಬೆಟ್ನ ವ್ಯಾಪ್ತಿಯಲ್ಲೇ ಬರುವಂತವು. ಹೀಗಾಗಿಯೇ ಟಿಬೆಟ್ನ ಸಾಂಸ್ಕೃತಿಕ ಸ್ವರೂಪವನ್ನು ಧ್ವಂಸಗೊಳಿಸಲು ಅದನ್ನು ಹಿಂದುಗಳಿಂದ ಪ್ರತ್ಯೇಕಿಸುವ ಬುದ್ಧಿಸಂನ ಮೂಲ ನಂಬಿಕೆಗಳಿಗೂ ಕೊಳ್ಳಿ ಇಡುವ ಪ್ರಯತ್ನ ಆರಂಭವಾಯ್ತು. ಅದರಿಂದಾಗಿಯೇ ಮಾನಸ ಸರೋವರ ಯಾತ್ರಿಕರಿಗೆ ಕಿರುಕುಳ ಆರಂಭವಾಗಿದ್ದು. ಅತ್ತ ದಲೈಲಾಮಾರನ್ನು ಜಗತ್ತಿನಲ್ಲಿ ಯಾರೂ ಗೌರವಿಸಬಾರದು ಎಂಬ ಅಘೋಷಿತ ಆಜ್ಞೆ ಚೀನಾದಿಂದ ಹೊರಟಿತು. ಅಷ್ಟಕ್ಕೇ ನಿಲ್ಲಲಿಲ್ಲ. ಭವಿಷ್ಯದ ಲಾಮಾಗಳನ್ನು ಗುರುತಿಸುವ ಹೊಣೆಗಾರಿಕೆಯೂ ತನ್ನದ್ದೇ ಎಂದು ಕಮ್ಯುನಿಸ್ಟ್ ಪಾಟರ್ಿ ಘೋಷಿಸುವುದರೊಂದಿಗೆ ಉಯ್ಘುರ್ ಮುಸಲ್ಮಾನರಿಗಾದ ಗತಿಯೇ ಇವರಿಗೂ ಆಗಲಿರುವುದು ಖಾತ್ರಿಯಾಗಿತ್ತು. ಆದರೆ ದಲೈಲಾಮಾ ಹೊರಗಿದ್ದುದು ಮತ್ತು ಅವರಿಗೆ ಜಾಗತಿಕ ಮಟ್ಟದ ಗೌರವ ಸಿಗುತ್ತಿದ್ದುದೇ ಚೀನಾ ಸಕರ್ಾರಕ್ಕೆ ಸಹಿಸಲಾಗದ ವಿಷಯವಾಗಿತ್ತು.

ಆರಂಭದಲ್ಲಿ ಪೂರ್ಣ ಸ್ವಾತಂತ್ರ್ಯದ ಬೇಡಿಕೆಯೊಂದಿಗೆ ಹೋರಾಡುತಿದ್ದ ದಲೈಲಾಮಾ ಕಾಲಕ್ರಮದಲ್ಲಿ ಸ್ವಾಯತ್ತತೆಯ ಬೇಡಿಕೆಗೆ ಸೀಮಿತವಾಗಿದ್ದರು. ಆದರೂ ಚೀನಾ ಕರಗಿರಲಿಲ್ಲ. ಮುಂದಿನ ರಿಂಪೋಚೆ ಅಥವಾ ಧರ್ಮಗುರು ಯಾರೆಂದು ಲಾಮಾ ಗುರುತಿಸಿದ ಕುಟುಂಬವನ್ನು ಪೂರ್ಣಪ್ರಮಾಣ ನಾಶವೇ ಮಾಡಿದ ಚೀನಾ ತನಗೆ ಬೇಕಾದವರನ್ನೇ ರಿಂಪೋಚೆ ಎಂದು ಕರೆಯಲು ಹಿಂದೆ-ಮುಂದೆ ನೋಡಲಿಲ್ಲ. ನಿಜವಾದ ಸಮಸ್ಯೆ ದಲೈಲಾಮಾ ದೇಹತ್ಯಾಗದ ನಂತರ ಬರಲಿದೆ. ಟಿಬೆಟ್ನ ಧರ್ಮಗುರುಗಳ ಆಯ್ಕೆ ಬಲುವಿಶಿಷ್ಟವಾದ್ದು. ಬುದ್ಧಾನುಯಾಯಿಗಳು ಹಿಂದೂಗಳಂತೆ ಪುನರ್ಜನ್ಮವನ್ನು ನಂಬುವುದರಿಂದ ದಲೈಲಾಮಾ ಕೂಡ ಮರು ಅವತರಿತಗೊಳ್ಳುತ್ತಾರೆ ಎಂಬ ಶ್ರದ್ಧೆ ಅವರಿಗಿದೆ. ಪ್ರತಿ ಲಾಮಾಗಳು ತಾವು ತೀರಿಕೊಳ್ಳುವ ಮುನ್ನ ಸೂಕ್ಷ್ಮ ರೂಪದಲ್ಲಿ ಮತ್ತೆ ಜನ್ಮವೆತ್ತುವ ಜಾಗ, ಮನೆ, ಇತ್ಯಾದಿಗಳ ವಿವರವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗುತ್ತಾರೆ. ಇವುಗಳ ಆಧಾರದ ಮೇಲೆ ಹುಡುಕಾಟ ಆರಂಭವಾಗಿ ಲಾಮಾರನ್ನು ಗುರುತಿಸಿಕೊಳ್ಳಲಾಗುತ್ತದೆ. ದಲೈಲಾಮಾ ಕೂಡ ಅದನ್ನೇ ಮಾಡಲಿದ್ದಾರೆ. ಆದರೆ ಅದಾಗಲೇ ಚೀನಾ ಹಿಂದಿನ ಅನೇಕ ಸಾಮ್ರಾಜ್ಯಗಳ ಕಾಲದಲ್ಲಿ ರಾಜರುಗಳೇ ಧರ್ಮಗುರುಗಳನ್ನು ನೇಮಿಸುತ್ತಿದ್ದ ಉದಾಹರಣೆಗಳನ್ನು ಮುಂದಿಟ್ಟು ಈಗಲೂ ಅದು ತಮ್ಮದ್ದೇ ಅಧಿಕಾರ ಎಂದು ವಾದಿಸುತ್ತಿದೆ. ಅದಕ್ಕೆ ತಕ್ಕ ತಯಾರಿಯನ್ನು ಆರಂಭಿಸಿದೆ. ನಿಜವಾದ ಕದನ ಈ ಕಾರಣಕ್ಕೆ ನಡೆಯುತ್ತಿರೋದು. ತಮಗಾಗದವರನ್ನು, ತಮ್ಮ ವಿರುದ್ಧ ಮಾತನಾಡಿದವರನ್ನು ಕ್ಷಣಾರ್ಧದಲ್ಲೇ ಇಲ್ಲವಾಗಿಸುವ ಸಾಮಥ್ರ್ಯ ಹೊಂದಿರುವ ಚೀನಾಕ್ಕೆ ಲಾಮಾ ಗುರುತಿಸಿದ ಕುಟುಂಬವನ್ನು ಮಾಯ ಮಾಡುವುದು ಬಹಳ ಹೊತ್ತಲ್ಲ. ಆದರೆ ಪಾಪದ ಕೊಡ ಅಂತಾನೂ ಒಂದಿರುತ್ತಲ್ಲ, ಚೀನಾದ ಆ ಕೊಡ ತುಂಬಿದೆ ಎನಿಸುತ್ತಿದೆ!


ಅದಾಗಲೇ ಅಮೇರಿಕಾದ ಸಂಸತ್ತು ಟಿಬೆಟ್ನ ಪರವಾದ ಒಂದಷ್ಟು ನಿರ್ಣಯಗಳಿಗೆ ಸಹಿ ಹಾಕಿದೆ. ಅದು ಸಹಜವಾಗಿಯೇ ಚೀನಾದ ಕಣ್ಣು ಕೆಂಪಗೆ ಮಾಡಿದೆ. ಟಿಬೆಟ್ ಮತ್ತೆ ಮುನ್ನೆಲೆಗೆ ಬಂದು ಅದರ ಕುರಿತಂತೆ ಚಚರ್ೆ ಆರಂಭವಾದರೆ ಚೀನಾಕ್ಕೆ ಅದು ನುಂಗಲಾರದ ತುತ್ತು. ಬದಲಾಗುತ್ತಿರುವ ಆಥರ್ಿಕ ದೃಷ್ಟಿಕೋನಗಳಲ್ಲಿ ಟಿಬೆಟ್ನ ಪ್ರಶ್ನೆ ಚೀನಾವನ್ನು ಭೂತವಾಗಿ ಕಾಡಬಹುದು ಮತ್ತು ಚೀನಾವನ್ನು ಮಣಿಸಲು ಶೀತಲ ಸಮರದ ಕೇಂದ್ರವಾಗಿ ಜಗತ್ತಿನ ಪಾಲಿಗೆ ಟಿಬೆಟ್ ದಕ್ಕಬಹುದು. ನೆಹರೂ ಕಾಲದಲ್ಲಿ ಆದ ಮಹಾಪ್ರಮಾದವೊಂದಕ್ಕೆ ನರೇಂದ್ರಮೋದಿಯವರ ಕಾಲದಲ್ಲಿ ಉತ್ತರ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಈ ದೃಷ್ಟಿಯಿಂದ ಭಾರತ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳ ಕಾಲ ತಾತ್ಕಾಲಿಕ ಸದಸ್ಯತ್ವವನ್ನು ಪಡೆದುಕೊಂಡಿರುವ ಭಾರತ ನಿಸ್ಸಂಶಯವಾಗಿ ಚೀನಾದ ಪಾಲಿಗೆ ಮಗ್ಗುಲ ಮುಳ್ಳು. ಆಗಾಗ ವಿಶ್ವಸಂಸ್ಥೆಯ ಪ್ರಮುಖ ಸಭೆಗಳಲ್ಲಿ ಚೀನಾ ವಿರೋಧೀ ಅಲೆಯಂತೂ ಇನ್ನು ಏಳಲಿದೆ. ಚೀನಾ ಕೂಡ ಕಡಿಮೆಯದ್ದಲ್ಲ. ಕಣ್ಣಗಲಿಸಿ ಕೆಂಪಗೆ ಮಾಡಿಕೊಂಡು ಭಾರತವನ್ನು ಹೆದರಿಸುವ ಪ್ರಯತ್ನ ಮಾಡಿಯೇ ಮಾಡುತ್ತದೆ. ಹೀಗೆ ಭಾರತವನ್ನು ಹೆದರಿಸಲು ಅದಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬೇಕಿಲ್ಲ, ಗಡಿಯಲ್ಲಿ ಸೈನಿಕರ ಅಗತ್ಯವಿಲ್ಲ, ಎಂಜಲು ಕಾಸಿಗೆ ನಾಲಿಗೆ ಚಾಚುವ ಒಂದಷ್ಟು ಬುದ್ಧಿಜೀವಿಗಳು ಕಾಯುತ್ತಲೇ ಇದ್ದಾರಲ್ಲಾ, ಅಂಥವರೇ ಸಾಕು. ಅವರು ಅಗತ್ಯಬಿದ್ದರೆ ಕಾಮರ್ಿಕರನ್ನು ಮುಷ್ಕರಕ್ಕೆ ಎಳೆದೊಯ್ಯಬಲ್ಲರು, ರೈತರನ್ನು ಪ್ರತಿಭಟಿಸುವಂತೆ ಮಾಡಬಲ್ಲರು. ಕೊನೆಗೆ ವಿಶ್ವವಿದ್ಯಾಲಯಗಳು ಕೆಲವು ದಿನಗಳ ಕಾಲ ಮುಚ್ಚಿಹೋಗುವಂತೆ ನೋಡಿಕೊಳ್ಳಬಲ್ಲರು! ಚೀನಾಕ್ಕೆ ಒಂದು ಟಿಬೆಟ್, ಒಬ್ಬ ದಲೈಲಾಮಾ ಸಮಸ್ಯೆಯಾದರೆ, ನಮಗೆ ಭಾರತದೊಳಗೆ ಅನೇಕ ಚೀನಾಗಳು, ಅನೇಕ ಷಿಜಿನ್ಪಿಂಗ್ಗಳು ಇರಿಯಲು ಸಿದ್ಧವಾಗಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಷ್ಟೇ. ನಾವೆಲ್ಲರೂ ಮೈಯ್ಯೆಲ್ಲಾ ಕಣ್ಣಾಗಿಸಿಕೊಂಡು ದುಡಿಯಬೇಕು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top